ಭಾರತ-ನೇಪಾಳ ತೈಲ ಪೈಪ್​ಲೈನ್​ಗೆ ಚಾಲನೆ: ವಿಡಿಯೋ ಕಾನ್ಪರೆನ್ಸ್ ಮೂಲಕ ಮೋದಿ-ಒಲಿ ಅವರಿಂದ ಉದ್ಘಾಟನೆ

ನವದೆಹಲಿ: ಭಾರತ ಮತ್ತು ನೇಪಾಳದ ಗಡಿಯಂಚಚಿನ ಮೋತಿಹಾರಿ- ಆಮ್ಲೆಖಗಂಜ್ ತೈಲ ಸಾಗಣೆ ಕೊಳವೆ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ನೇಪಾಳ ಅಧ್ಯಕ್ಷ ಕೆ.ಪಿ. ಶರ್ಮಾ ಒಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಮಂಗಳವಾರ ಚಾಲನೆ ನೀಡಿದ್ದಾರೆ.

ಈ ಯೋಜನೆ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧದ ಸಂಕೇತ. ವಾರ್ಷಿಕ 20 ಲಕ್ಷ ಟನ್​ನಷ್ಟು ಇಂಧನ ಸರಬರಾಜು ಮಾಡುವ ಸಾಮರ್ಥ್ಯವನ್ನು ಈ ಪೈಪ್​ಲೈನ್ ಹೊಂದಿದೆ ಎಂದು ಪ್ರಧಾನಿ ಕಾರ್ಯಾಲಯ ಟ್ವೀಟ್ ಮಾಡಿದೆ. ನೇಪಾಳ ಗಡಿಯಲ್ಲಿ ಪೈಪ್​ಲೈನ್​ಗೆ ಎಲ್ಲ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಸೇನೆಯ ಮೂಲಕ ಕಣ್ಗಾವಲು ವಹಿಸಲಾಗಿದೆ ಎಂದು ನೇಪಾಳ ಸರ್ಕಾರ ತಿಳಿಸಿದೆ.

ಯೋಜನೆ ಹಿನ್ನೆಲೆ: 1973ರಿಂದಲೂ ಭಾರತದಿಂದ ಟ್ಯಾಂಕರ್ ಮೂಲಕ ನೇಪಾಳಕ್ಕೆ ಇಂಧನ ಸರಬರಾಜು ಮಾಡಲಾಗುತ್ತಿತ್ತು. 1996ರಲ್ಲಿ ಮೋತಿಹಾರಿ-ಆಮ್ಲೆಖಗಂಜ್ ಪೈಪ್​ಲೈನ್ ಯೋಜನೆಯ ಪ್ರಸ್ತಾವನೆ ಮಾಡಲಾಯಿತು. ನಂತರ ಧೂಳು ಹಿಡಿದಿದ್ದ ಯೋಜನೆಗೆ 2014ರಲ್ಲಿ ಕಾಠ್ಮಂಡುವಿಗೆ ತೆರಳಿದ್ದ ಪ್ರಧಾನಿ ಮೋದಿ ಮರು ಜೀವ ನೀಡಿದರು. 2015ರ ಆಗಸ್ಟ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, 2015ರಲ್ಲಿ ನೇಪಾಳದಲ್ಲಿ ಉಂಟಾದ ಭಾರೀ ಭೂಕಂಪದಿಂದಾಗಿ ಕಾಮಗಾರಿ ವಿಳಂಬವಾಯಿತು.

69 ಕಿಲೋಮೀಟರ್ ಉದ್ದದ ಮಾರ್ಗ

ಈ ಕೊಳವೆ ಮಾರ್ಗವು -ಠಿ;350 ಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗಿದ್ದು, 69 ಕಿ.ಮೀ. ಉದ್ದವಿದೆ. ಇದು ದಕ್ಷಿಣ ಏಷ್ಯಾದ ಮೊದಲ ಗಡಿಯಾಚೆಗೆ ಸಂಪರ್ಕ ಕಲ್ಪಿಸುವ ಪೆಟ್ರೋಲಿಯಂ ಪೈಪ್​ಲೈನ್ ಎಂಬ ಶ್ರೇಯಕ್ಕೂ ಪಾತ್ರವಾಗಿದೆ. ಈ ಮಾರ್ಗದ ಮೂಲಕ ಬಿಹಾರದ ಮೋತಿಹಾರಿಯಿಂದ ನೇಪಾಳದ ಆಮ್ಲೆಖಗಂಜ್ಗೆ ಡೀಸೆಲ್ ಸರಬರಾಜು ಆಗಲಿದೆ. ಇದರಿಂದ ರಸ್ತೆ ಮೂಲಕ ತೈಲ ಸಾಗಣೆಗೆ ವ್ಯಯವಾಗುತ್ತಿದ್ದ ವಾರ್ಷಿಕ -ಠಿ;14 ಸಾವಿರ ಕೋಟಿ ಉಳಿತಾಯವಾಗಲಿದೆ. ಅಲ್ಲದೇ ಇದರಿಂದಾಗಿ ಇಂಧನ ಕಳ್ಳತನವನ್ನೂ ತಡೆಯಬಹುದಾಗಿದೆೆ.

ನೇಪಾಳದ 2 ನಗರ ಮರುನಿರ್ವಣ

ಭೂಕಂಪನದಿಂದಾಗಿ ತೀವ್ರ ಹಾನಿಗೊಳಗಾದ ನೇಪಾಳದ 2 ಪ್ರಮುಖ ನಗರಗಳ ಪುನರ್ ನಿರ್ಮಾಣ ಕಾರ್ಯದಲ್ಲಿ ಭಾರತ ಕೈ ಜೋಡಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. 2015ರ ಭೀಕರ ಭೂಕಂಪನದಿಂದ ನಲುಗಿರುವ ನೇಪಾಳದ ಗೂರ್ಖಾ ಮತ್ತು ನುವಾಕೋಟ್ ನಗರಗಳ ಮರು ನಿರ್ಮಾಣ ಕಾರ್ಯದಲ್ಲಿ ಭಾರತ ಹೆಗಲು ನೀಡಲಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *