ದೇಶಕ್ಕೆ ಸಿಕ್ಕಿದ್ದಾರೆ ಪ್ರಜಾಪ್ರಭುತ್ವ ಕಟ್ಟುವ ನಾಯಕ

ಚಿಕ್ಕಮಗಳೂರು: ಪ್ರಜಾಪ್ರಭುತ್ವ ಕಟ್ಟುವ ನಾಯಕ ನರೇಂದ್ರ ಮೋದಿ ದೇಶಕ್ಕೆ ಸಿಕ್ಕಿದ್ದು, ಭಾರತ ಅಂದರೆ ಏನು ಎಂಬುದನ್ನು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದರು.

ಭಾರತೀಯ ಜಾಗೃತ ಪ್ರತಿಷ್ಠಾನ ಗುರುವಾರ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿಯ ನಾಲ್ಕು ವರ್ಷದ ಸಾಧನೆ ಕುರಿತ ಸಾಧನೆ-ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತ ಸರ್ವಶಕ್ತಿ ಕೇಂದ್ರ ಹಾಗೂ ವಿಶ್ವ ಗುರು ಆಗಲು ಒಂದೊಂದು ಹೆಜ್ಜೆ ಇಡುತ್ತಿದೆ. ಸಹೋದರತ್ವದ ನೆಲೆಯಲ್ಲಿ ಜಗತ್ತಿನ ನಾನಾ ದೇಶಗಳೊಡನೆ ಬಾಂಧವ್ಯ ಬೆಸೆಯುತ್ತಿರುವ ಮೋದಿ ಅವರು, ಬಲಿಷ್ಠ ರಾಷ್ಟ್ರಗಳೊಡನೆ ತಂತ್ರಜ್ಞಾನ, ಆರ್ಥಿಕ ಕ್ಷೇತ್ರದಲ್ಲಿ ಭಾರತವನ್ನು ಶಕ್ತಿಯುತ ಮಾಡುತ್ತಿದ್ದಾರೆ ಎಂದರು.

ಕೇಂದ್ರ ಸರ್ಕಾರ ಜನರ ಬದುಕಿನ ಮಟ್ಟ ಸುಧಾರಣೆ ಕಡೆ ಯೋಜನೆ ರೂಪಿಸುತ್ತಿದೆ. ದೇಶದಲ್ಲಿ ಅತಿಯಾಗಿ ಹಿಂದುಳಿದ 135 ಜಿಲ್ಲೆ ಆಯ್ಕೆ ಮಾಡಿ ಅವುಗಳ ಅಭಿವೃದ್ಧಿಗೆ ವಿಶೇಷ ಅಧಿಕಾರಿ, ಸಂಸದರನ್ನು ನಿಯೋಜಿಸಲಾಗಿದೆ. ಹಿಂದುಳಿದ ಜಿಲ್ಲೆಗಳು ಮುಂದುವರಿದರೆ ಭಾರತ ಅಭಿವೃದ್ಧಿಯಾಗುತ್ತದೆ ಎಂದರು.

ಭಾರತದ ರಾಜಕೀಯ, ರಾಜಕಾರಣ ಎರಡಕ್ಕೂ ನರೇಂದ್ರ ಮೋದಿ ಅವರು ದೊಡ್ಡ ಮರ್ಯಾದೆ ತಂದು ಕೊಟ್ಟಿದ್ದಾರೆ. ಈ ಮೊದಲು ಶಾಲಾ ಕಾಲೇಜುಗಳಲ್ಲಿ ರಾಜಕಾರಣಿ ಆಗುತ್ತೀರ ಎಂದು ಪ್ರಶ್ನಿಸಿದರೆ ವಿದ್ಯಾರ್ಥಿಗಳು ಕೈ ಎತ್ತುತ್ತಿರಲಿಲ್ಲ. ಈಗ ಬಹಳಷ್ಟು ಯುವಕರು ಮೋದಿಯಂತಹ ರಾಜಕಾರಣಿಯಾಗಬೇಕೆಂದು ಮುಂದೆ ಬರುತ್ತಿದ್ದಾರೆ.

| ಬಿ.ಎಲ್. ಸಂತೋಷ್, ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ

 

ಲೋಕ್​ಪಾಲ್​ಗೆ ಖರ್ಗೆ ಅಡ್ಡಿ

ಲೋಕಪಾಲ್ ರಚನಾ ಸಮಿತಿಗೆ ನಿರಂತರ ಗೈರಾಗುತ್ತಿರುವ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅಡ್ಡಿಯಾಗಿದ್ದಾರೆ ಎಂದು ಬಿ.ಎಲ್.ಸಂತೋಷ್ ಹೇಳಿದರು. ಸಂವಾದಕರೊಬ್ಬರ ಪ್ರಶ್ನೆಗೆ ಉತ್ತರಿಸಿ, ಪ್ರತಿಪಕ್ಷ ಸ್ಥಾನ ಕೊಡದ ಹೊರತು ಲೋಕಪಾಲ್ ಸಮಿತಿ ಸಭೆಗೆ ಹಾಜರಾಗುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ಪ್ರತಿಪಕ್ಷ ಸ್ಥಾನ ದಕ್ಕುವಷ್ಟು ಸ್ಥಾನ ಕಾಂಗ್ರೆಸ್ ಪಡೆದಿಲ್ಲ. ಪ್ರತಿಪಕ್ಷ ಸ್ಥಾನಕ್ಕೂ ಹಾಗೂ ಲೋಕಪಾಲ್ ರಚನಾ ಸಮಿತಿ ಸಭೆ ಹಾಜರಾಗದೆ ಇರುವುದಕ್ಕೆ ಕಾರಣ ಏನೆಂಬುದನ್ನು ಖರ್ಗೆ ಅವರೇ ಹೇಳಬೇಕು ಎಂದರು. ಲೋಕಪಾಲ್ ಸಮಿತಿಯಲ್ಲಿ ಪ್ರಧಾನ ಮಂತ್ರಿ, ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಹಾಗೂ ಪ್ರತಿಪಕ್ಷದ ಸದಸ್ಯರೊಬ್ಬರು ಸೇರಿ ಲೋಕಪಾಲ್ ರಚನೆ ಮಾಡಬೇಕು ಎಂದರು.