ಕೊಹ್ಲಿ ನಾಯಕತ್ವದಲ್ಲಿ ಇಂಥ ಸೋಲಾಗಿರಲೇ ಇಲ್ಲ!

ಲಂಡನ್​: ಇಂಗ್ಲೆಂಡ್​ ವಿರುದ್ಧ ಐದು ಪಂದ್ಯಗಳ ಟೆಸ್ಟ್​ ಸರಣಿ ಆಡುತ್ತಿರುವ ಭಾರತ ಲಾರ್ಡ್ಸ್​ ಮೈದಾನದಲ್ಲಿ ನಡೆದ 2ನೇ ಟೆಸ್ಟ್​ನಲ್ಲಿ ಇನಿಂಗ್ಸ್ ಹಾಗೂ 159 ರನ್​ಗಳ ದೊಡ್ಡ ಮೊತ್ತದ ಸೋಲು ಕಂಡಿದೆ.

ಆದರೆ, ಇಲ್ಲಿ ಗಮನಿಸಬೇಕಾದ ಎರಡು ಸಂಗತಿಗಳಿವೆ. ಭಾರತ 2014 ರಿಂದೀಚೆಗೆ ಇದೇ ಮೊದಲ ಬಾರಿಗೆ ಇನ್ನಿಂಗ್ಸ್​ ಸೋಲು ಅನುಭವಿಸಿದೆ. ಅಷ್ಟೇ ಅಲ್ಲ, ವಿರಾಟ್​ ಕೊಹ್ಲಿ ನಾಯಕತ್ವದಲ್ಲಿ ಎದುರಾದ ಮೊಟ್ಟ ಮೊದಲ ಇನ್ನಿಂಗ್​ ಸೋಲು ಎಂಬ ಅಪಖ್ಯಾತಿಯೂ ಈ ಸೋಲಿನಿಂದ ಭಾರತಕ್ಕೆ ದಕ್ಕಿದೆ.

2014ರಲ್ಲಿ ಇದೇ ಇಂಗ್ಲೆಂಡ್​ ವಿರುದ್ಧ, ಇದೇ ಲಾರ್ಡ್ಸ್​ ಮೈದಾನದಲ್ಲಿ ಭಾರತ ಇನ್ನಿಂಗ್ಸ್​ ಮತ್ತು 244 ರನ್​ಗಳ ಭಾರಿ ಮುಖಭಂಗ ಅನುಭವಿಸಿತ್ತು. ಅದಾದ ನಂತರ ಈಗ ಮತ್ತೊಮ್ಮೆ ಇಂಗ್ಲೆಂಡ್​ ವಿರುದ್ಧ, ಲಾರ್ಡ್ಸ್​ನಲ್ಲೇ ಭಾರತಕ್ಕೆ ಇನ್ನಿಂಗ್ಸ್​ ಸೋಲುಂಟಾಗಿದೆ.
2014ರಲ್ಲಿ ಧೋನಿ ಅವರಿಂದ ಟೆಸ್ಟ್​ ನಾಯಕತ್ವ ವಹಿಸಿಕೊಂಡ ವಿರಾಟ್​ ಕೊಹ್ಲಿ 37 ಟೆಸ್ಟ್​ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಈ ಪೈಕಿ 21ರಲ್ಲಿ ಗೆದ್ದು ಯಶಸ್ವಿ ನಾಯಕ ಎನಿಸಿಕೊಂಡಿರುವ ಕೊಹ್ಲಿ ಅವರ ಮುಂದಾಳತ್ವದಲ್ಲಿ ಇಂಥ ಸೋಲು ಸಂಭವಿಸಿರಲೇ ಇಲ್ಲ. ಅವರ ನಾಯಕತ್ವದಲ್ಲಿ ಇದೇ ಮೊದಲ ಬಾರಿಗೆ ಇನ್ನಿಂಗ್ಸ್​ ಸೋಲಾಗಿದ್ದು, ಅವರ ಕ್ರಿಕೆಟ್​ ಬದುಕಿನಲ್ಲಿ ಈ ಸೋಲು ಕಪ್ಪು ಚುಕ್ಕೆಯಾಗಿ ಉಳಿಯುವುದರಲ್ಲಿ ಅನುಮಾನವೇನಿಲ್ಲ.

ಈ ಸೋಲಿನ ಬಗ್ಗೆ ಮಾತನಾಡಿರುವ ವಿರಾಟ್​ ಕೊಹ್ಲಿ, “ಈ ಪಂದ್ಯದ ಬಗ್ಗೆ ಹೆಮ್ಮೆ ಪಡಲು ನಮಗೆ ಕಾರಣಗಳೇ ಇಲ್ಲ. ಕಳೆದ ಐದು ಟೆಸ್ಟ್​ ಪಂದ್ಯಗಳಲ್ಲೇ ನಾವು ಅತ್ಯಂತ ಹೀನಾಯವಾಗಿ ಆಟವಾಡಿದ್ದೇವೆ. ಈ ಸರಣಿಯಲ್ಲಿ ನಾವು ಆಡಿದ ರೀತಿ ನೋಡಿದರೆ ಸೋಲಲು ನಾವು ಅರ್ಹರಾಗಿದ್ದೆವು,” ಎಂದು ಅತ್ಯಂತ ಬೇಸರ ವ್ಯಕ್ತಪಡಿಸಿದ್ದಾರೆ.