ಇಂದು ಭಾರತ-ವಿಂಡೀಸ್ ಮೊದಲ ಏಕದಿನ

ಗುವಾಹಟಿ: ಕಳೆದ ಒಂದು ವರ್ಷಗಳಿಂದ ಟೀಮ್ ಇಂಡಿಯಾ ಹಲವು ನಿಗದಿತ ಓವರ್​ಗಳ ಸರಣಿ ಆಡಿದರೂ ಮಧ್ಯಮ ಕ್ರಮಾಂಕದ ಬ್ಯಾಟಿಂಗ್, ಅದರಲ್ಲೂ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್​ಮನ್ ಸಮಸ್ಯೆ ಇನ್ನೂ ಪರಿಹಾರಗೊಂಡಿಲ್ಲ. ಮುಂದಿನ ಏಕದಿನ ವಿಶ್ವಕಪ್ ದೃಷ್ಟಿಯಲ್ಲಿ ಅತ್ಯುತ್ತಮ ಪ್ಲೇಯಿಂಗ್ ಇಲೆವೆನ್​ಅನ್ನು ಸಿದ್ಧಪಡಿಸುವ ಯೋಜನೆಯೊಂದಿಗೆ ವಿರಾಟ್ ಕೊಹ್ಲಿ ಸಾರಥ್ಯದ ಟೀಮ್ ಇಂಡಿಯಾ ಭಾನುವಾರದಿಂದ ಪ್ರವಾಸಿ ವೆಸ್ಟ್​ಇಂಡೀಸ್ ತಂಡದ ವಿರುದ್ಧ 5 ಪಂದ್ಯಗಳ ಏಕದಿನ ಸರಣಿ ಆರಂಭಿಸಲಿದೆ. ಟೆಸ್ಟ್​ನಂತೆ ಏಕದಿನಕ್ಕೂ ಒಂದು ದಿನ ಮುಂಚಿತವಾಗಿಯೆ 12 ಸದಸ್ಯರ ತಂಡವನ್ನು ಪ್ರಕಟಿಸಿರುವ ಭಾರತ ಸತತ 8ನೇ ದ್ವಿಪಕ್ಷೀಯ ಸರಣಿ ಗೆಲ್ಲುವ ಗುರಿಯಲ್ಲಿದೆ. ಇದರೊಂದಿಗೆ ಟೀಮ್ ಮ್ಯಾನೇಜ್​ವೆುಂಟ್ ಧೋನಿ, ಸ್ಥಾನಕ್ಕೆ ಎಡಗೈ ಸ್ಪೋಟಕ ಬ್ಯಾಟ್ಸ್​ಮನ್ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್​ರನ್ನು ಸಜ್ಜುಗೊಳಿಸುತ್ತಿರುವುದರಿಂದ ಈ ಅಂಶ ಕೂಡ ಸರಣಿಯ ಹೈಲೈಟ್ ಆಗಿರಲಿದೆ. ಇನ್ನು ವೆಸ್ಟ್ ಇಂಡೀಸ್ ತಂಡ ನಾಲ್ಕು ವರ್ಷಗಳಿಂದ ವಿದೇಶಗಳಲ್ಲಾಗಲಿ ಅಥವಾ ತವರಿನಲ್ಲಾಗಲಿ ದ್ವಿಪಕ್ಷೀಯ ಸರಣಿ ಗೆದ್ದಿಲ್ಲ. ಏಕದಿನ ಕ್ರಿಕೆಟ್ ಕಲೆಯನ್ನೆ ಮರೆತಂತೆ ಆಡುತ್ತಿರುವ ವೆಸ್ಟ್​ಇಂಡೀಸ್ ತಂಡ ಈಗಿರುವ ಹೊಸ ಆಟಗಾರರನ್ನು ಸೇರಿಸಿ ವಿಶ್ವಕಪ್​ಗೆ ಸಜ್ಜಾಗಬೇಕಾದ ಒತ್ತಡದಲ್ಲಿದೆ. ಅದಲ್ಲದೆ, ಮೊದಲ ಎರಡು ಪಂದ್ಯಗಳಿಗೆ ಕೋಚ್ ಸ್ಟುವರ್ಟ್ ಲಾರ ಸೇವೆ ವಿಂಡೀಸ್​ಗೆ ಲಭ್ಯವಿಲ್ಲ.

ಭಾರತ

ಭಾರತ ಈಗಾಗಲೆ ಪ್ರಕಟಿಸಿರುವ 12 ಸದಸ್ಯರ ಬಳಗದಲ್ಲಿ ಕನ್ನಡಿಗರಾದ ಕೆಎಲ್ ರಾಹುಲ್ ಮತ್ತು ಮನೀಷ್ ಪಾಂಡೆ ಸ್ಥಾನ ಪಡೆದಿಲ್ಲ. ಏಷ್ಯಾಕಪ್ ವಿಶ್ರಾಂತಿಯ ನಂತರ ವಿರಾಟ್ ಕೊಹ್ಲಿ ಪುನರಾಗಮನ ಕಂಡರೆ, ಬಹುತೇಕ ಏಷ್ಯಾಕಪ್​ನಲ್ಲಿ ಕಣಕ್ಕಿಳಿದಿದ್ದ ಬಳಗವೆ ಆಡಲಿದೆ. ಬ್ಯಾಟಿಂಗ್​ನಲ್ಲಿ ಮಂಕಾಗಿರುವ ಶ್ರೇಷ್ಠ ವಿಕೆಟ್ ಕೀಪರ್ ಎಂಎಸ್ ಧೋನಿಗೆ ಮುಂದಿನ ಆಸೀಸ್ ಪ್ರವಾಸ, ವಿಶ್ವಕಪ್ ದೃಷ್ಟಿಯಿಂದ ಇದು ಮಹತ್ವದ ಸರಣಿಯಾಗಿದೆ. ಇದಕ್ಕಾಗಿ ಅವರಿಗೆ ಮೀಸಲು ವಿಕೆಟ್ ಕೀಪರ್ ಆಗಿ ಪಂತ್​ಗೆ ಅವಕಾಶ ನೀಡಲಾಗಿದೆ. ಹೀಗಾಗಿ ಧೋನಿ ಕೀಪಿಂಗ್ ಮಾಡಿದರೂ ಪಂತ್ ಬ್ಯಾಟ್ಸ್​ಮನ್ ಆಗಿ ಏಕದಿನ ಪದಾರ್ಪಣೆ ಮಾಡಬಹುದು. ಕೊಹ್ಲಿ ಮರಳಿದ್ದರಿಂದ ಕೆಎಲ್ ರಾಹುಲ್​ರನ್ನು ಹೊರಗಿಡಲಾಗಿದೆ. ಏಷ್ಯಾಕಪ್​ನ ಲೀಗ್ ಹಂತದಲ್ಲಿ ಗಮನಸೆಳೆದು ಫೈನಲ್​ನಲ್ಲಿ ವಿಫಲವಾಗಿದ್ದ ಅಂಬಟಿ ರಾಯುಡುಗೆ ಕೊಹ್ಲಿ ಕೃಪಾಕಟಾಕ್ಷ ಸಿಕ್ಕಿದೆ. ಅಂಬಟಿ ರಾಯುಡುಗೆ ತಾನು 4ನೇ ಕ್ರಮಾಂಕಕ್ಕೆ ಪೂರ್ಣ ಅರ್ಹ ಎನಿಸಿಕೊಳ್ಳಲು ಇದು ಅವರಿಗೆ ಕೊನೇ ಅವಕಾಶ. ಅವರು ವೈಫಲ್ಯಗೊಂಡರೆ ಆ ಸ್ಥಾನಕ್ಕೆ ಮನೀಷ್ ಪಾಂಡೆ ರೇಸ್​ನಲ್ಲಿದ್ದಾರೆ.

ಸಂಭಾವ್ಯ ತಂಡ: ಧವನ್, ರೋಹಿತ್, ವಿರಾಟ್ ಕೊಹ್ಲಿ (ನಾಯಕ), ಅಂಬಟಿ ರಾಯುಡು, ರಿಷಭ್ ಪಂತ್ , ಎಂಎಸ್ ಧೋನಿ (ವಿ.ಕೀ.), ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್/ ಖಲೀಲ್ ಅಹ್ಮದ್, ಮೊಹಮದ್ ಶಮಿ, ಉಮೇಶ್ ಯಾದವ್.

ವೆಸ್ಟ್​ಇಂಡೀಸ್

ಟೆಸ್ಟ್ ಸರಣಿಯನ್ನು ಸೋತ ವಿಂಡೀಸ್ ತಂಡದಲ್ಲಿ ಪ್ರಭಾವಿ ಆಟವಾಡಿದ್ದು ಬೆರಳೆಣಿಕೆಯ ಆಟಗಾರರಷ್ಟೆ. 2014ರಲ್ಲಿ ಕೊನೇ ಬಾರಿ ದ್ವಿಪಕ್ಷೀಯ ಸರಣಿ ಗೆದ್ದಿರುವ ವಿಂಡೀಸ್​ನ ನಿಗದಿತ ಓವರ್​ಗಳ ಕ್ರಿಕೆಟ್ ಸ್ಥಿತಿಯೂ ಹೀನಾಯವಾಗಿದೆ. ತವರಿನಲ್ಲೆ ಆಡಿದ್ದ ಕೊನೇ ದ್ವಿಪಕ್ಷೀಯ ಸರಣಿಯಲ್ಲಿ ಬಾಂಗ್ಲಾ ಎದುರು ಸೋತಿದ್ದ ವಿಂಡೀಸ್ ಇಲ್ಲಿ ಹೊಸತನದೊಂದಿಗೆ ಕಣಕ್ಕಿಳಿಯಲಿದೆ. ಕೊನೇ ಕ್ಷಣದಲ್ಲಿ ತಂಡದಿಂದ ಹೊರಗುಳಿದ ಎವಿನ್ ಲೆವಿಸ್​ರ ಅಲಭ್ಯತೆಯಲ್ಲಿ ಬಾಂಗ್ಲಾ ಸರಣಿಯಲ್ಲಿ 207 ರನ್ ಸಿಡಿಸಿ ಗಮನಸೆಳೆದಿದ್ದ ಶಿಮ್ರೋನ್ ಹೆಟ್ಮೆಯರ್, ಶೈ ಹೋಪ್, ಮರ್ಲಾನ್ ಸಾಮ್ಯುಯೆಲ್ಸ್ ಮತ್ತು ಆಲ್ರೌಂಡರ್ ಹೋಲ್ಡರ್ ತಂಡದ ಪ್ರಮುಖ ಬಲ.

ಸಂಭಾವ್ಯ ತಂಡ: ಶೈ ಹೋಪ್, ಸಾಮ್ಯುಯೆಲ್ಸ್, ರೋವ್​ವುನ್ ಪೊವೆಲ್, ಸುನೀಲ್ ಆಂಬ್ರಿಸ್, ಕೈರಾನ್ ಪೊವೆಲ್, ಶಿಮ್ರೊನ್ ಹೆಟ್ಮೆಯರ್, ದೇವೇಂದ್ರ ಬಿಶೂ, ಕೇಮರ್ ರೂಚ್, ಒಬೆಡ್ ಮೆಕ್​ಕಾಯ್, ಆಶ್ಲೆ ನರ್ಸ್.

4ನೇ ಕ್ರಮಾಂಕಕ್ಕೆ ಮಾತ್ರ ಸೂಕ್ತ ಬ್ಯಾಟ್ಸ್​ಮನ್​ನ ಪರಿಶೀಲನೆಯಲ್ಲಿದ್ದೇವೆ. ಅಂಬಟಿ ರಾಯುಡು ಏಷ್ಯಾಕಪ್​ನಲ್ಲಿ ಉತ್ತಮವಾಗಿ ಆಡಿ ಬಂದಿದ್ದು, ವಿಶ್ವಕಪ್ ವೇಳೆಗೆ ಅವರು ಈ ಸ್ಥಾನವನ್ನು ಭದ್ರ ಮಾಡಿಕೊಳ್ಳಬಹುದು. ಹೆಚ್ಚು ಕಮ್ಮಿ ಮಧ್ಯಮ ಕ್ರಮಾಂಕದ ಸಮಸ್ಯೆ ಪರಿಹಾರಗೊಂಡಂತಿದೆ. ಹೀಗಾಗಿ ಅವರು ಈ ಸ್ಥಾನವನ್ನು ಪೂರ್ಣವಾಗಿ ತುಂಬಬಲ್ಲರೆಂಬ ನಂಬಿಕೆ ಇರಿಸಿದ್ದೇವೆ. ಉತ್ತಮ ಲೈನ್ ಆಂಡ್ ಲೆಂತ್ ಮತ್ತು ಎರಡೂ ದಿಕ್ಕಿನಲ್ಲೂ ಸ್ವಿಂಗ್ ಮಾಡಬಲ್ಲ ಎಡಗೈ ವೇಗಿ ಖಲೀಲ್ ಅಹ್ಮದ್​ಬೌಲಿಂಗ್ ವಿಭಾಗಕ್ಕೆ ವಿಭಿನ್ನತೆ ನೀಡಲಿದ್ದಾರೆ.

| ವಿರಾಟ್ ಕೊಹ್ಲಿ, ಟೀಮ್ ಇಂಡಿಯಾ ನಾಯಕ