ಅಗ್ರಸ್ಥಾನ ಕಾಯ್ದುಕೊಂಡ ಭಾರತ, ಕೊಹ್ಲಿ

ದುಬೈ: ಆಸೀಸ್ ನೆಲದಲ್ಲಿ ಮೊಟ್ಟಮೊದಲ ಟೆಸ್ಟ್ ಸರಣಿ ಗೆಲುವಿನ ಗೌರವ ಸಂಪಾದಿಸಿದ ಭಾರತ ತಂಡ ಹಾಗೂ ತಂಡವನ್ನು ಮುನ್ನಡೆಸಿದ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಭಾರತ 116 ಅಂಕದೊಂದಿಗೆ ಅಗ್ರಸ್ಥಾನ ಕಾಪಾಡಿಕೊಂಡಿದ್ದರೆ, ವಿರಾಟ್ ಕೊಹ್ಲಿ 922 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. 2ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್​ನ ಕೇನ್ ವಿಲಿಯಮ್ಸನ್​ರಿಂದ (897 ಅಂಕ) 25 ಅಂಕಗಳ ಮುನ್ನಡೆಯಲ್ಲಿ ಕೊಹ್ಲಿ ಇದ್ದಾರೆ. ಚೇತೇಶ್ವರ ಪೂಜಾರ 3ನೇ ಸ್ಥಾನದಲ್ಲಿ ಮುಂದುವರಿದಿದ್ದರೆ, ಯುವ ವಿಕೆಟ್ಕೀಪರ್ ಬ್ಯಾಟ್ಸ್​ಮನ್ ರಿಷಭ್ ಪಂತ್ ಕೂಡ 17ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಅಶ್ವಿನ್ 5 ಹಾಗೂ ಜಡೇಜಾ 9ನೇ ಸ್ಥಾನದಲ್ಲಿದ್ದಾರೆ. ಬುಮ್ರಾ 711 ಅಂಕದೊಂದಿಗೆ 15ನೇ ಸ್ಥಾನಕ್ಕೇರಿದ್ದಾರೆ. -ಪಿಟಿಐ

ವಿರಾಟ್ ಬಳಗ 80ರ ದಶಕದ ವಿಂಡೀಸ್ ಟೀಮ್​ಗೆ ಹೋಲಿಕೆ!

ನವದೆಹಲಿ: ಭಾರತ ತಂಡದ ಆಟವನ್ನು ತೀರಾ ಹತ್ತಿರದಿಂದ ಕಂಡಿರುವ ಆಸ್ಟ್ರೇಲಿಯಾದ ಮಾಜಿ ಆಟಗಾರ ಹಾಗೂ ಖ್ಯಾತ ಕ್ರಿಕೆಟ್ ವಿಶ್ಲೇಷಕ ಡೀನ್ ಜೋನ್ಸ್, ಪ್ರಸ್ತುತ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡವನ್ನು 1980ರ ದಶಕದ ವಿಶ್ವ ಕ್ರಿಕೆಟ್​ನ ಸರ್ವಶ್ರೇಷ್ಠ ಟೀಮ್ ವೆಸ್ಟ್ ಇಂಡೀಸ್​ನ ಜತೆ ಹೋಲಿಕೆ ಮಾಡಿದ್ದಾರೆ. ‘ಆಸ್ಟ್ರೇಲಿಯಾ ನೆಲಕ್ಕೆ ಈವರೆಗೂ ಭಾರತ ತಂಡದ ಮಾಡಿದ ಅತಿಶ್ರೇಷ್ಠ ಪ್ರವಾಸ ಇದು. ಪರ್ತ್ ಟೆಸ್ಟ್​ನ

ಹೊರತಾಗಿ ಎಲ್ಲ ಪಂದ್ಯಗಳಲ್ಲೂ ತಂಡದ ಎಲ್ಲ ಆಟಗಾರರು ಕಾಣಿಕೆ ನೀಡಿದ್ದಾರೆ’ ಎಂದು ಪತ್ರಿಕೆಗೆ ಬರೆದಿರುವ ಅಂಕಣದಲ್ಲಿ ಬರೆದಿದ್ದಾರೆ. 80 ಹಾಗೂ 90ರ ದಶಕದ ವೆಸ್ಟ್ ಇಂಡೀಸ್ ತಂಡಕ್ಕೂ ಪ್ರಸ್ತುತ ಭಾರತ ತಂಡಕ್ಕೂ ಯಾವ ಭಿನ್ನತೆಯೂ ಇಲ್ಲ. ಪ್ರತಿ ಆಟಗಾರರೂ ತಂಡಕ್ಕೆ ಕೊಡುಗೆ ನೀಡುತ್ತಿದ್ದಾರೆ. ಯಾವ ದೇಶದಲ್ಲಾದರೂ, ತಂಡ ಗೆಲ್ಲುತ್ತದೆ ಎನ್ನುವ ಗೌರವವನ್ನು ಕಾಪಾಡಿಕೊಂಡು ಹೋಗಬೇಕಿದೆ. ಅಂದಿನ ವಿಂಡೀಸ್ ತಂಡವನ್ನು ಕಂಡಾಗ ಎಲ್ಲರಿಗೂ ಭಯವೆನಿಸುತ್ತಿತ್ತು. ಪ್ರಸ್ತುತ ಭಾರತ ತಂಡವನ್ನು ಕಂಡರೂ ಹಾಗೆ ಅನಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೊಹ್ಲಿ ಸದ್ಯದ ವಿಶ್ವದ ಶ್ರೇಷ್ಠ ಏಕದಿನ ಆಟಗಾರ. ಆದರೆ, ಕೊಹ್ಲಿ ಕ್ರೀಸ್​ಗೆ ಇಳಿಯುವ ಮುನ್ನ ರೋಹಿತ್ ಶರ್ಮ ಹಾಗೂ ಶಿಖರ್ ಧವನ್​ರಂಥ ಬಹಳ ಉತ್ತಮ ಆರಂಭಿಕರು ಮೇಲಿನ ಕ್ರಮಾಂಕದಲ್ಲಿ ಆಡುತ್ತಾರೆ. ಅವರ ಬಗ್ಗೆಯೂ ಗಮನ ನೀಡಬೇಕಿದೆ.

| ರಾಸ್ ಟೇಲರ್, ನ್ಯೂಜಿಲೆಂಡ್ ಬ್ಯಾಟ್ಸ್​ಮನ್