ಉದ್ಯಮಸ್ನೇಹಿಯತ್ತ ಭಾರತ ಹೆಜ್ಜೆ

ನವದೆಹಲಿ: ಜಾಗತಿಕ ಉದ್ಯಮ ಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 77ನೇ ಸ್ಥಾನಕ್ಕೆ ಜಿಗಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 23 ಹಾಗೂ ಎನ್​ಡಿಎ ಸರ್ಕಾರದ ಅವಧಿಯಲ್ಲಿ 75 ಸ್ಥಾನ ಮೇಲೇರಿದಂತಾಗಿದೆ.

ವಿಶ್ವದ 190 ದೇಶಗಳ ಆರ್ಥಿಕ ವ್ಯವಸ್ಥೆ ಆಧರಿಸಿ ವಿಶ್ವ ಬ್ಯಾಂಕ್ ಈ ರ‍್ಯಾಂಕಿಂಗ್ ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆಡಳಿತಕ್ಕೆ ಬಂದಾಗ ಭಾರತವು 142ನೇ ರ‌್ಯಾಂಕ್ ನಲ್ಲಿತ್ತು. 2016ರಲ್ಲಿ 130, 2017ರಲ್ಲಿ 100ನೇ ಸ್ಥಾನಕ್ಕೆ ಭಾರತ ಏರಿತ್ತು ಉದ್ಯಮಸ್ನೇಹಿ ಸೂಚ್ಯಂಕದಲ್ಲಿಯೂ 100ಕ್ಕೆ 53.97 ಅಂಕದಿಂದ 67.23 ಅಂಕಕ್ಕೆ ಏರಿಕೆಯಾಗಿದೆ. ಹಿಂದಿನ ರ‍್ಯಾಂಕಿಂಗ್​​ಗೆ ಹೋಲಿಸಿದರೆ ಸುಮಾರು 7 ಸೂಚ್ಯಂಕ ವೃದ್ಧಿಯಾಗಿದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ. ದಕ್ಷಿಣ ಏಷ್ಯಾದಲ್ಲಿ ಭಾರತ ಮೊದಲ ಸ್ಥಾನ ಹೊಂದಿದ್ದರೆ, ಬ್ರಿಕ್ಸ್ ದೇಶಗಳಲ್ಲಿ 3ನೇ ಸ್ಥಾನ ಹೊಂದಿದೆ. ವಿದ್ಯುತ್ ಸಂಪರ್ಕ, ಸಾಲ ಹಂಚಿಕೆ, ಅಲ್ಪಸಂಖ್ಯಾತ ಹೂಡಿಕೆದಾರರ ರಕ್ಷಣೆ ವಿಚಾರದಲ್ಲಿ ವಿಶ್ವದ ಟಾಪ್-25ರ ಪಟ್ಟಿಯಲ್ಲಿ ಭಾರತ ಕಾಣಿಸಿಕೊಂಡಿದೆ. ಉದ್ಯಮ ಸ್ನೇಹಿ ವಾತಾವರಣ ನಿರ್ವಣದಲ್ಲಿ ಅತ್ಯಂತ ವೇಗವಾಗಿ ಸಾಗಿರುವ ರಾಷ್ಟ್ರಗಳ ಟಾಪ್-10 ಪಟ್ಟಿಯಲ್ಲಿ ಭಾರತವೂ ಇದೆ.

ನಾವು ಅಧಿಕಾರಕ್ಕೆ ಬಂದಾಗ ಟಾಪ್-50 ಒಳಗೆ ಬರುವ ಗುರಿಯನ್ನು ಪ್ರಧಾನಿ ನಿಗದಿಗೊಳಿಸಿದ್ದರು. ಎಲ್ಲ ರಾಜ್ಯಗಳ ಸಹಕಾರದಿಂದ ಈಗ 77ನೇ ಸ್ಥಾನಕ್ಕೆ ಬಂದಿದ್ದೇವೆ.

| ಅರುಣ್ ಜೇಟ್ಲಿ, ಕೇಂದ್ರ ಹಣಕಾಸು ಸಚಿವ