‘ವಸುದೈವ ಕುಟುಂಬಕಂ’ ತತ್ತ್ವಪಸರಿಸಿದಾಗ ಭಾರತ ವಿಶ್ವಗುರು

ರಾಣೆಬೆನ್ನೂರ: ವಿಶ್ವಗುರು ಭಾರತದ ಪರಿಕಲ್ಪನೆಗೆ ಇಂದಿನ ವಿದ್ಯಾರ್ಥಿ ಸಮುದಾಯ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಅಧ್ಯಯನಕ್ಕೆ ಮುಂದಾಗಬೇಕು ಎಂದು ರಾಮಕೃಷ್ಣ ಆಶ್ರಮದ ಶ್ರೀ ಪ್ರಕಾಶಾನಂದಜಿ ಸ್ವಾಮೀಜಿ ಹೇಳಿದರು.

ನಗರದ ಬಿಎಜೆಎಸ್​ಎಸ್ ಸಮೂಹ ಸಂಸ್ಥೆಯ ಮಹಾವಿದ್ಯಾಲಯದ ಗಾಯತ್ರಿ ಸಭಾಭವನದಲ್ಲಿ ಶನಿವಾರ ಸ್ವಾಮಿ ವಿವೇಕಾನಂದರ ಜಯಂತಿ, ರಾಷ್ಟ್ರೀಯ ಯುವ ದಿನಾಚರಣೆ ನಿಮಿತ್ತ ‘ವಿಜಯವಾಣಿ’, ‘ದಿಗ್ವಿಜಯ 24*7 ನ್ಯೂಸ್ ಚಾನಲ್’ ವತಿಯಿಂದ ಏರ್ಪಡಿಸಿದ್ದ ‘ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿವೇಕಾನಂದರು ಸನ್ಯಾಸಿ ಮಾತ್ರವಲ್ಲ, ಭಾರತದ ಸನಾತನ ಹಿಂದು ಧರ್ಮದ ಶ್ರೇಷ್ಠ ಪರಿಕಲ್ಪನೆಯನ್ನು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಪ್ರಬಲವಾಗಿ ಅನುಷ್ಠಾನ ಮಾಡಿದ ತತ್ವಜ್ಞಾನಿ. ಹಿಂದು ಎಂಬುದು ಧರ್ಮವಲ್ಲ, ಮನುಕುಲ ಬದುಕಬೇಕಾದ ಜೀವನ ಪದ್ಧತಿ. ಹಿಂದು ಸಂಸ್ಕೃತಿಯನ್ನು ಅನುಸರಿಸುವುದು ಮನುಜಕುಲ ತನ್ನ ಕಲ್ಯಾಣವನ್ನು ತಾನೇ ಕಂಡುಕೊಳ್ಳುವ ಮಾರ್ಗವಾಗಿದೆ. ಜಗತ್ತಿನ ಎಲ್ಲ ರಾಷ್ಟ್ರಗಳು ಒಂದೇ ಕುಟುಂಬ ಎಂದು ಪ್ರತಿಪಾದಿಸಿದ ‘ವಸುದೈವ ಕುಟುಂಬಕಂ’ ಎಂಬ ತತ್ವವನ್ನು ಪಸರಿಸಿದರೆ ವಿಶ್ವ ಕಲ್ಯಾಣ ಬಯಸುವ ಭಾರತ ವಿಶ್ವಗುರುವಾಗಿ ಜಗತ್ತಿನ ಸಾರಥ್ಯ ವಹಿಸಿಕೊಳ್ಳಲಿದೆ. ಇದು ತರುಣರಿಂದ ಮಾತ್ರ ಸಾಧ್ಯ ಎಂಬುದು ವಿವೇಕಾನಂದರ ಅಭಿಪ್ರಾಯವಾಗಿತ್ತು ಎಂದು ತಿಳಿಸಿದರು.

ಬ್ರಿಟಿಷರು ತಂದಿರುವ ಮೆಕಾಲೆ ಶಿಕ್ಷಣ ಪದ್ಧತಿ ಬದಲಾಗಬೇಕು. ಸಂಸ್ಕೃತ ರಾಷ್ಟ್ರೀಯ ಭಾಷೆಯಾಗಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಪರಿಕಲ್ಪನೆಯಾಗಿತ್ತು. ಸಂಸ್ಕೃತದಿಂದ ಜ್ಞಾನದ ಎಲ್ಲ ಆಯಾಮಗಳು ಅನಾವರಣಗೊಳ್ಳುತ್ತವೆ. ವಿದ್ಯಾರ್ಥಿಗಳಿಗೆ ನೀಡುವ ಶಿಕ್ಷಣ ದೇಶದ ಬಗ್ಗೆ ಬದ್ಧತೆ, ಸಮಾಜಪ್ರಜ್ಞೆ ಮೂಡಿಸುವಂತಿರಬೇಕು. ಇಂದಿನ ದಿನದಲ್ಲಿ ವಿದ್ಯಾರ್ಹತೆ ಇಲ್ಲದೆ ಆದ ಮಂತ್ರಿಗಳಿಗಿಂತ ಐಎಎಸ್, ಕೆಎಎಸ್ ಅಧಿಕಾರಿಗಳೇ ಹೆಚ್ಚು ಭ್ರಷ್ಟರಾಗುತ್ತಿದ್ದಾರೆ. ಯುವಜನರಿಂದ ಇದನ್ನು ಬದಲಾಯಿಸಲು ಸಾಧ್ಯವಿದೆ. ಇಂಥ ಕಾರ್ಯಕ್ರಮ ಹಮ್ಮಿಕೊಂಡು ಹಕ್ಕುಗಳಿಗಾಗಿ ಹೋರಾಡುವ ಯುವಜನಾಂಗಕ್ಕೆ ತಮ್ಮ ಕರ್ತವ್ಯವನ್ನು ತಿಳಿಸಿಕೊಡುತ್ತಿರುವ ‘ವಿಜಯವಾಣಿ’ ಬಳಗ ಏರ್ಪಡಿಸುವ ಈ ಸಂವಾದ ಕಾರ್ಯಕ್ರಮ ಶ್ಲಾಘನೀಯ ಎಂದರು.

ವಿದ್ಯಾರ್ಥಿ ಮುಖಂಡ ಯು.ಎಸ್. ಚಿನ್ಮಯ ಮಾತನಾಡಿ, ದೇಶದ ಸಂಸ್ಕೃತಿ, ಪರಂಪರೆಯನ್ನು ಅಂದು ವಿವೇಕಾನಂದರು ವಿಶ್ವಕ್ಕೆ ಪರಿಚಯಿಸಿದ್ದರು. ಆದರೆ, ಇಂದಿನ ವಿದ್ಯಾರ್ಥಿಗಳು ಕಾಲೇಜ್ ಕ್ಯಾಂಪಸ್​ಗಳಲ್ಲೇ ಗಾಂಜಾ, ಡ್ರಗ್ಸ್​ನಂತಹ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ದೇಶದ ಏಳ್ಗೆಗೆ ಮಾರಕವಾಗಿದೆ. ಸಿನಿಮಾ ನಟ, ನಟಿಯರನ್ನು ಮಾದರಿಯಾಗಿ ತೆಗೆದುಕೊಳ್ಳುವ ಬದಲು ವಿವೇಕಾನಂದರು, ಸೀತಾಮಾತೆ, ಸೈನಿಕರು, ಸಹೋದರಿ ನಿವೇದಿತಾ ಅಂಥವರನ್ನು ರೋಲ್ ಮಾಡೆಲ್ ಆಗಿ ತೆಗೆದುಕೊಂಡರೆ ಯುವಜನರ ಬದುಕು ಹಸನಾಗುತ್ತದೆ ಎಂದರು.

ಭಾರತ ವಿಶ್ವಕ್ಕೆ ಸಂತರು, ಶಿವ-ಶರಣರನ್ನು ನೀಡಿದೆ ಹೊರತು ಭಯೋತ್ಪಾದಕರು, ದೇಶದ್ರೋಹಿಗಳನ್ನಲ್ಲ. ವಿವೇಕಾನಂದರು ‘ದುಡ್ಡಿನ ಹಿಂದೆ ಓಡಬೇಡಿ, ಗುರಿ ಹಿಂದೆ ಓಡಿ’. ‘ನೂರು ಜನ ತರುಣರನ್ನು ಕೊಟ್ಟರೆ ನಾನು ದೇಶವನ್ನೇ ಬದಲಾಯಿಸುತ್ತೇನೆ’ ಎಂದು ಹೇಳಿದ್ದರು. ಇಂದು ಲಕ್ಷಾಂತರ ಯುವಕರಿದ್ದರೂ ದೇಶದ ಬದಲಾವಣೆ ಅಸಾಧ್ಯ ಎನ್ನುವ ಸ್ಥಿತಿಯಿದೆ. ಇದನ್ನು ಪ್ರತಿಯೊಬ್ಬರೂ ಅರಿತು ಬಲಿಷ್ಠ ರಾಷ್ಟ್ರ ನಿರ್ವಣಕ್ಕೆ ಕಂಕಣಬದ್ಧರಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿಎಜೆಎಸ್​ಎಸ್ ಸಮೂಹ ಸಂಸ್ಥೆ ಆಡಳಿತಾಧಿಕಾರಿ ಡಾ. ಆರ್.ಎಂ. ಕುಬೇರಪ್ಪ ಮಾತನಾಡಿ, ದೇಶದ ಅಭಿವೃದ್ಧಿಗೆ ಸ್ವಾಮಿ ವಿವೇಕಾನಂದರ ಆದರ್ಶಗಳು ಪ್ರತಿಯೊಬ್ಬರಿಗೂ ಪ್ರೇರಣೆ. ರಾಷ್ಟ್ರಾಭಿಮಾನ, ಭಾರತೀಯ ಸಂಸ್ಕೃತಿ, ಪರಂಪರೆಯನ್ನು ರೂಢಿಸಿಕೊಳ್ಳಬೇಕು. ‘ವಿಜಯವಾಣಿ’, ‘ದಿಗ್ವಿಜಯ 24*7 ನ್ಯೂಸ್ ಚಾನಲ್’ ನಿಂದ ನಡೆಯುತ್ತಿರುವ ಇಂಥ ಕಾರ್ಯಕ್ರಮ ರಾಷ್ಟ್ರವಾಪ್ತಿ ನಡೆಯಬೇಕು ಎಂದರು.

ವಿಆರ್​ಎಲ್ ಸಂಸ್ಥೆಯ ರಾಣೆಬೆನ್ನೂರನ ವ್ಯವಸ್ಥಾಪಕ ರಮೇಶ ಕಲಾಲ, ನಗರಸಭೆ ಸದಸ್ಯೆ ಪ್ರಭಾವತಿ ತಿಳವಳ್ಳಿ, ಬಿಎಜೆಎಸ್​ಎಸ್ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಎ. ತಾಂಬೆ, ಬಿ.ಇಡಿ ಕಾಲೇಜ್ ಪ್ರಾಚಾರ್ಯ ಎಂ.ಎಂ. ಮೃತ್ಯುಂಜಯ, ಉಪನ್ಯಾಸಕರು, ನೂರಾರು ವಿದ್ಯಾರ್ಥಿಗಳು ಇದ್ದರು.

ದಿಗ್ವಿಜಯ 24*7 ನ್ಯೂಸ್ ಚಾನಲ್ ವರದಿಗಾರ ಕುಮಾರಯ್ಯ ಚಿಕ್ಕಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ದತ್ತಾ ಸೊರಬ ಸ್ವಾಗತಿಸಿದರು. ಕಿರಣ ಅಕ್ಕಿಆಲೂರ ನಿರೂಪಿಸಿದರು. ಕರಿಯಪ್ಪ ಅರಳಿಕಟ್ಟಿ ವಂದಿಸಿದರು.