More

    ಭಾರತ ಇನ್ನಷ್ಟು ಸ್ಮಾರ್ಟ್: ಮೊಬೈಲ್ ಫೋನ್ ರಫ್ತು ದುಪ್ಪಟ್ಟು

    ಕಳೆದ ಹಣಕಾಸು ವರ್ಷದಲ್ಲಿ ಭಾರತದ ಸ್ಮಾರ್ಟ್​ಫೋನ್ ರಫ್ತು ಮೊತ್ತ ದಾಖಲೆಯ 91 ಸಾವಿರ ಕೋಟಿ ರೂಪಾಯಿ ದಾಟಿದೆ. ಜಗತ್ತಿನ ಎರಡನೇ ಅತಿದೊಡ್ಡ ಮೊಬೈಲ್​ಫೋನ್ ಮಾರುಕಟ್ಟೆಯಾಗಿದ್ದ ಭಾರತವು ಈಗ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಮೂಲಕ ಉತ್ಪಾದನೆಯಲ್ಲೂ ಜಾಗತಿಕವಾಗಿ ಎರಡನೇ ಸ್ಥಾನಕ್ಕೇರಿದೆ. ಈ ಮೂಲಕ ಮುಂಚೂಣಿಯಲ್ಲಿರುವ ಚೀನಾಗೆ ತೀವ್ರ ಪೈಪೋಟಿ ನೀಡುತ್ತಿದೆ.

    ಭಾರತದಿಂದ ರಫ್ತಾಗುವ ಸ್ಮಾರ್ಟ್​ಫೋನ್ ಪ್ರಮಾಣ ಒಂದೇ ವರ್ಷದಲ್ಲಿ ದ್ವಿಗುಣಗೊಂಡಿದೆ. ಇದೇ ಮಾರ್ಚ್​ನಲ್ಲಿ ಕೊನೆಗೊಂಡ ಹಣಕಾಸು (2022-23) ವರ್ಷದಲ್ಲಿ ಭಾರತದಿಂದ ರಫ್ತು ಮಾಡಲಾದ ಸ್ಮಾರ್ಟ್​ಫೋನ್​ಗಳ ಒಟ್ಟು ಮೊತ್ತವು 11.2 ಶತಕೋಟಿ ಡಾಲರ್ (91,883 ಕೋಟಿ ರೂಪಾಯಿ) ತಲುಪಿದೆ. ಸ್ಮಾರ್ಟ್​ಫೋನ್ ಸೇರಿದಂತೆ ಒಟ್ಟಾರೆ ಎಲೆಕ್ಟ್ರಾನಿಕ್ಸ್ ಸರಕುಗಳ ರಫ್ತು ಕೂಡ ಶೇಕಡಾ 58ರಷ್ಟು ವೃದ್ಧಿಯಾಗಿ 1,85,000 ಕೋಟಿ ರೂಪಾಯಿಗಳಿಗೆ ತಲುಪಿದೆ. 2021-22ನೇ ಹಣಕಾಸು ವರ್ಷದಲ್ಲಿ 45 ಸಾವಿರ ಕೋಟಿ ರೂಪಾಯಿ ಮೊತ್ತದ ಸ್ಮಾರ್ಟ್​ಫೋನ್​ಗಳನ್ನು ರಫ್ತು ಮಾಡಲಾಗಿತ್ತು.

    ಇದನ್ನೂ ಓದಿ: ಏಪ್ರಿಲ್​ 30ರಂದು ಬೆಂಗಳೂರು-ಮೈಸೂರು ಹೆದ್ದಾರಿ ಬಂದ್​: ಬದಲಿ ಮಾರ್ಗ ಹೀಗಿದೆ….

    ಕೇವಲ ಎರಡು ವರ್ಷಗಳ ಹಿಂದೆ ಭಾರತದ ಮೊಬೈಲ್​ಫೋನ್ ಮಾರುಕಟ್ಟೆಯ ಮೂರನೇ ಎರಡರಷ್ಟು ಭಾಗದಷ್ಟು ಪಾಲನ್ನು ಹೊಂದಿದ್ದ ಚೀನಾದ ಸ್ಮಾರ್ಟ್​ಫೋನ್ ತಯಾರಕ ಕಂಪನಿಗಳು ರಫ್ತಿಗೆ ಮಾತ್ರ ಕೊಡುಗೆ ನೀಡಿದ್ದು ನಗಣ್ಯವೇ ಆಗಿತ್ತು. ಆದರೆ, 2022-23ರ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿದ್ದ 9-10 ಶತಕೋಟಿ ಡಾಲರ್​ನಷ್ಟು ರಫ್ತು ಗುರಿಯನ್ನು ಮೀರಿ ಸಾಧನೆ ಮಾಡಲಾಗಿದೆ. ಈ ರಫ್ತು ಸಾಧನೆಯಲ್ಲಿ ಬಹುದೊಡ್ಡ ಕೊಡುಗೆ ನೀಡಿರುವುದು ಆಪಲ್ ಕಂಪನಿ. ಒಟ್ಟು ರಫ್ತಿನ ಅರ್ಧದಷ್ಟು ಭಾಗವು ಈ ಸಂಸ್ಥೆಯೊಂದರಿಂದಲೇ ಬಂದಿದ್ದು, 5.5 ಶತಕೋಟಿ ಡಾಲರ್ (ಅಂದಾಜು 45 ಸಾವಿರ ಕೋಟಿ ರೂಪಾಯಿ) ಮೊತ್ತದ ಐಫೋನ್​ಗಳನ್ನು ಭಾರತದಿಂದ ರಫ್ತು ಮಾಡಿದೆ. ಭಾರತದಲ್ಲಿ ಆಪಲ್​ನ ಐಫೋನ್​ಗಳನ್ನು ಫಾಕ್ಸ್​ಕಾನ್ ಟೆಕ್ನಾಲಜಿ ಗ್ರೂಪ್, ವಿಸ್ಟ್ರಾನ್ ಗ್ರೂಪ್ ಮತ್ತು ಪೆಗಟ್ರಾನ್ ಕಾರ್ಪ್ ಸಂಸ್ಥೆಗಳು ತಯಾರಿಸುತ್ತವೆ. ಇದರ ನಂತರದ ಸ್ಥಾನ ದಕ್ಷಿಣ ಕೊರಿಯಾದ ಸ್ಯಾಮ್ಂಗ್ ಎಲೆಕ್ಟ್ರಾನಿಕ್ಸ್​ನದ್ದಾಗಿದೆ. ಈ ಸಂಸ್ಥೆ 4 ಶತಕೋಟಿ ಡಾಲರ್ (ಅಂದಾಜು 33 ಸಾವಿರ ಕೋಟಿ ರೂಪಾಯಿ) ಮೊತ್ತದ ಫೋನ್​ಗಳನ್ನು ರಫ್ತು ಮಾಡಿ ರಫ್ತಿನಲ್ಲಿ ಶೇ. 40 ಪಾಲು ಪಡೆದಿದೆ.

    ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್​ಫೋನ್ ಮಾರುಕಟ್ಟೆಯಾದ ಭಾರತ ಈಗ ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್​ಫೋನ್ ಉತ್ಪಾದಕ ರಾಷ್ಟ್ರವೂ ಆಗಿದೆ. ಜಗತ್ತಿನಲ್ಲಿ ಎಲೆಕ್ಟ್ರಾನಿಕ್ಸ್ ಸರಕುಗಳ ಪ್ರಮುಖ ಉತ್ಪಾದಕ ದೇಶವಾಗಲು ಮತ್ತು ಚೀನಾಕ್ಕೆ ಸಮರ್ಥ ಪರ್ಯಾಯವಾಗಲು ಭಾರತ ರೂಪಿಸಿರುವ ಕಾರ್ಯಯೋಜನೆ ಯಶಸ್ಸು ಗಳಿಸುವ ನಿಟ್ಟಿನಲ್ಲಿ ಈ ರಫ್ತು ಸಾಧನೆ ಮಹತ್ವದ ಹೆಜ್ಜೆಯಾಗಿದೆ.

    ಮೂರು ವರ್ಷಗಳಲ್ಲಿ ನಾಲ್ಕು ಪಟ್ಟು ಗುರಿ

    2025-26ರ ವೇಳೆಗೆ 300 ಶತಕೋಟಿ ಡಾಲರ್ (24,61,139 ಕೋಟಿ ರೂಪಾಯಿ) ಮೌಲ್ಯದ ಎಲೆಕ್ಟ್ರಾನಿಕ್ಸ್ ಸಾಮಗ್ರಿ ಉತ್ಪಾದನೆ ಗುರಿಯನ್ನು ಸರ್ಕಾರ ಹೊಂದಿದೆ. ಅಲ್ಲದೆ, 120 ಶತಕೋಟಿ ಡಾಲರ್ (9,84,455 ಕೋಟಿ ರೂಪಾಯಿ) ಮೊತ್ತದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ರಫ್ತು ಮಾಡುವ ಉದ್ದೇಶ ಹೊಂದಲಾಗಿದೆ. ಈ ಪೈಕಿ ಮೊಬೈಲ್​ಫೋನ್ ರಫ್ತಿನಿಂದಲೇ 4,10,190 ಕೋಟಿ ರೂಪಾಯಿ ಗಳಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಅಂದರೆ, ಈಗಿನ ನಾಲ್ಕು ಪಟ್ಟು ಹೆಚ್ಚು ರಫ್ತು ಗುರಿ ಸಾಧಿಸಲು ಉದ್ದೇಶಿಸಲಾಗಿದೆ.

    ಚೀನಾ ಬದಲು ಭಾರತಕ್ಕೆ ಆದ್ಯತೆ

    ವಿಶ್ವದಲ್ಲಿ ಅತಿಹೆಚ್ಚು ಐಫೋನ್​ಗಳನ್ನು ತಯಾರಿಸುವ ಸಂಸ್ಥೆ ಫಾಕ್ಸ್​ಕಾನ್ ಕಳೆದ ವರ್ಷ ಭಾರತದಲ್ಲಿ ಐಫೋನ್ 14 ಉತ್ಪಾದನೆ ಪ್ರಾರಂಭಿಸುವ ಮೂಲಕ ಆಪಲ್ ಫೋನ್​ನ ಉನ್ನತ ಮಾದರಿಯ ಜೋಡಣೆ ಕಾರ್ಯ ಭಾರತದಲ್ಲಿ ಶುರುವಾಯಿತು. ಚೀನಾದ ಆಚೆಗೆ ತನ್ನ ಪೂರೈಕೆ ಸರಪಳಿ ಜಾಲ ವಿಸ್ತರಿಸುವ ಆಪಲ್​ನ ಆಕ್ರಮಣಕಾರಿ ಕಾರ್ಯತಂತ್ರದ ಭಾಗವಾಗಿ ಭಾರತದಲ್ಲಿ ಉತ್ಪಾದನೆಗೆ ಒತ್ತು ನೀಡಲಾಗಿದೆ. ಚೀನಾದಲ್ಲಿ ಕೋವಿಡ್ ನಿರ್ಬಂಧಗಳು ಮತ್ತು ಇತರ ಕಾರಣಗಳಿಂದಾಗಿ ಉತ್ಪಾದನೆ ಹಾಗೂ ಪೂರೈಕೆಗೆ ತೊಂದರೆಯಾಗುವ ಆತಂಕ ಸೃಷ್ಟಿಯಾಯಿತು. ಕಳೆದ ವರ್ಷ ಚೀನಾದ ಝೆಂಗ್​ರkೌನಲ್ಲಿರುವ ಫಾಕ್ಸ್​ಕಾನ್ ಮುಖ್ಯ ‘ಐಫೋನ್ ಸಿಟಿ’ ಸಂಕಿರಣದಲ್ಲಿ ತಲೆದೋರಿದ ಗೊಂದಲ ಆಪಲ್​ನ ಪೂರೈಕೆ ಸರಪಳಿಯಲ್ಲಿ ಭಾರಿ ಸಮಸ್ಯೆಗಳಿಗೆ ಕಾರಣವಾಯಿತು. ಇದರಿಂದ ಉತ್ಪಾದನೆ ಕೂಡ ಕಡಿತವಾಯಿತು. ಇದೇ ಸಮಯದಲ್ಲಿ, ಸ್ಥಳೀಯವಾಗಿ ಮೊಬೈಲ್​ಫೋನ್​ಗಳ ಉತ್ಪಾದನೆ ಹೆಚ್ಚಿಸಲು ಭಾರತವು ಹಲವಾರು ಪೋ›ತ್ಸಾಹಗಳನ್ನು ಘೋಷಿತು. ಇದು ಆಪಲ್ ಮತ್ತು ಅದರ ಗುತ್ತಿಗೆ ತಯಾರಕರನ್ನು ಸೆಳೆಯಿತು. ಒಂದೇ ರಾಷ್ಟ್ರದ ಮೇಲೆ ಹೆಚ್ಚು ಅವಲಂಬಿಸುವ ಅಪಾಯ ನಿವಾರಿಸುವ ನಿಟ್ಟಿನಲ್ಲಿ ಭಾರತದಲ್ಲಿ ಉತ್ಪಾದನೆ ವಿಸ್ತರಿಸಲು ಆಪಲ್ ಕ್ರಮ ಕೈಗೊಂಡಿತು. ಜೆಪಿ ಮೋರ್ಗಾನ್​ನ ವಿಶ್ಲೇಷಕರ ಪ್ರಕಾರ, 2025ರ ವೇಳೆಗೆ ಎಲ್ಲಾ ಮಾದರಿಯ ಐಫೋನ್​ಗಳ ಪೈಕಿ ಶೇ. 25ರಷ್ಟನ್ನು ಭಾರತದಲ್ಲಿ ಉತ್ಪಾದಿಸಲು ಯೋಜಿಸಲಾಗಿದೆ.

    ಇದನ್ನೂ ಓದಿ: ಮಾಜಿ ಸಿಎಂ ಸಿದ್ದು ತವರಲ್ಲಿ ಬಿಜೆಪಿ ಪ್ರಚಾರ ರಥದ ಮೇಲೆ ಕಲ್ಲು ತೂರಾಟ: ಕಾರ್ಯಕರ್ತನ ಮೇಲೆ ಹಲ್ಲೆ

    ಅಗ್ರಸ್ಥಾನಕ್ಕೇರಿದ ಸ್ಯಾಮ್ಂಗ್

    ಭಾರತದ ದೇಶೀಯ ಮಾರುಕಟ್ಟೆಯಲ್ಲಿ ಹಿಂದೆ ಚೀನೀ ಕಂಪನಿಗಳ ಫೋನ್ ಹೆಚ್ಚು ಮಾರಾಟವಾಗುತ್ತಿದ್ದವು. ಈಗ ಸ್ಯಾಮ್ಂಗ್ ಕಂಪನಿ ಅಗ್ರಸ್ಥಾನಕ್ಕೇರಿದೆ. 2022-23ನೇ ಹಣಕಾಸು ವರ್ಷದ ಮೂರನೇ ತ್ರೖೆಮಾಸಿಕದಲ್ಲಿ (2022ರ ಅಕ್ಟೋಬರ್​ನಿಂದ 2022ರ ಡಿಸೆಂಬರ್ ಅವಧಿಯಲ್ಲಿ) ಸ್ಯಾಮ್ಂಗ್ ಈ ಸಾಧನೆ ಮಾಡಿದೆ. ಕಂಪನಿಯು 2022ರ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ 67 ಲಕ್ಷ ಮೊಬೈಲ್​ಫೋನ್ ಮಾರಾಟ ಮಾಡಿ ಶೇ. 21 ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ. ಚೀನಾದ ವಿವೋ 64 ಲಕ್ಷ ಫೋನ್​ಗಳನ್ನು ಮಾರಾಟ ಮಾಡಿ ಎರಡನೇ ಸ್ಥಾನದಲ್ಲಿದೆ. ಈ ಹಿಂದಿನ 20 ತ್ರೖೆಮಾಸಿಕಗಳಲ್ಲಿ ಮುಂಚೂಣಿ ಸ್ಥಾನದಲ್ಲಿದ್ದ ಕ್ಸಿಯೊಮಿ, 55 ಲಕ್ಷ ಫೋನ್​ಗಳನ್ನು ಮಾರಾಟ ಮಾಡಿ ಕುಸಿತ ಕಂಡಿದೆ. ಒಪ್ಪೊ 57 ಲಕ್ಷ ಹಾಗೂ ರಿಯಲ್​ವಿುೕ 27 ಲಕ್ಷ ಫೋನ್ ಮಾರಾಟ ಮಾಡಿವೆ.

    ಎಲ್ಲೆಲ್ಲಿ ಎಕ್ಸ್​ಪೋರ್ಟ್?

    ಭಾರತವು ಪ್ರಸ್ತುತ ಮೊಬೈಲ್​ಫೋನ್​ಗಳನ್ನು ರಫ್ತು ಮಾಡುವ ಪ್ರಮುಖ ಐದು ದೇಶಗಳೆಂದರೆ- ಯುಎಇ, ಅಮೆರಿಕ, ನೆದರ್​ಲೆಂಡ್, ಬ್ರಿಟನ್ ಮತ್ತು ಇಟಲಿ. ಚೀನಾದಿಂದ ಸ್ಮಾರ್ಟ್​ಫೋನ್ ಉತ್ಪಾದನೆ ಹಾಗೂ ಪೂರೈಕೆ ಸರಪಳಿಯ ವಲಸೆಯ ದೊಡ್ಡ ಫಲಾನುಭವಿಗಳು ಭಾರತ ಮತ್ತು ವಿಯೆಟ್ನಾಂ ಆಗಿವೆ.

    ಸಂಖ್ಯೆ ತಗ್ಗಿದರೂ ರಫ್ತು ಮೊತ್ತ ಅಧಿಕ

    2022-23 ಹಣಕಾಸು ವರ್ಷದ ನಾಲ್ಕನೇ ತ್ರೖೆಮಾಸಿಕದಲ್ಲಿ (ಜನವರಿಯಿಂದ ಮಾರ್ಚ್​ವರೆಗೆ) ಭಾರತದಿಂದ ರಫ್ತಾದ ಮೊಬೈಲ್​ಫೋನ್​ಗಳ ಸಂಖ್ಯೆ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 3.1 ಕೋಟಿಯಷ್ಟು ಕಡಿಮೆ (ಶೇ. 19ರಷ್ಟು ಕುಸಿತ) ಇದೆ. 30 ಸಾವಿರ ರೂಪಾಯಿಗಿಂತ ಕಡಿಮೆ ಇರುವ ಫೋನ್​ಗಳ ರಫ್ತು ಸಂಖ್ಯೆ ಕಡಿಮೆಯಾಗಿದೆ. ಆದರೆ, ಹೆಚ್ಚು ಬೆಲೆ ಇರುವ ಸ್ಮಾರ್ಟ್ ಫೋನ್​ಗಳ ರಫ್ತು ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 45 ಸಾವಿರ ರೂಪಾಯಿಗಿಂತ ಹೆಚ್ಚು ಬೆಲೆಬಾಳುವ ಸ್ಯಾಮ್ಂಗ್ ಫೋನ್​ಗಳ ರಫ್ತು ಶೇ. 247ರಷ್ಟು ಹಾಗೂ ಆಪಲ್ ಫೋನ್​ಗಳ ರಫ್ತು ಶೇ. 50ರಷ್ಟು ಅಧಿಕವಾಗಿದೆ. 2021-22ನೇ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ರಫ್ತು ಮಾಡಲಾದ ಒಟ್ಟು ಫೋನ್​ಗಳ ಸಂಖ್ಯೆ 2022-23ರಲ್ಲಿ ಕಡಿಮೆ ಇದ್ದರೂ ಹೆಚ್ಚು ಬೆಲೆ ಇರುವ ಫೋನ್​ಗಳು ಅಧಿಕ ಸಂಖ್ಯೆಯಲ್ಲಿ ರಫ್ತಾಗಿವೆ. ಹೀಗಾಗಿ, ಒಟ್ಟಾರೆ ರಫ್ತು ಮೊತ್ತದಲ್ಲಿ ಹೆಚ್ಚಳವಾಗಿದೆ.

    * ಭಾರತ ಈಗ ವಿಶ್ವದ ಎರಡನೇ ಅತಿ ದೊಡ್ಡ ಮೊಬೈಲ್ ಫೋನ್ ತಯಾರಕ ರಾಷ್ಟ್ರವಾಗಿದೆ.

    * ಮೊಬೈಲ್​ಫೋನ್ ರಫ್ತು ಈಗ ಒಟ್ಟಾರೆ ಎಲೆಕ್ಟ್ರಾನಿಕ್ಸ್ ಸರಕುಗಳ ರಫ್ತಿನ ಶೇಕಡಾ 46ರಷ್ಟಿದೆ.

    * ಭಾರತದಲ್ಲಿ ಮಾರಾಟವಾಗುವ ಶೇಕಡಾ 97ಕ್ಕಿಂತ ಹೆಚ್ಚು ಸ್ಮಾರ್ಟ್​ಫೋನ್​ಗಳನ್ನು ಈಗ ಸ್ಥಳೀಯವಾಗಿ ಉತ್ಪಾದಿಸಲಾಗುತ್ತಿದೆ.

    * ಭಾರತದಲ್ಲಿ ಪ್ರಸ್ತುತ ಐಫೋನ್ 12, 13, 14 ಮತ್ತು 14 ಪ್ಲಸ್ ತಯಾರಾಗುತ್ತವೆ.

    * ಜಾಗತಿಕವಾಗಿ ಒಟ್ಟಾರೆ ಐಫೋನ್ ಉತ್ಪಾದನೆಗಳ ಪೈಕಿ ಭಾರತದಲ್ಲಿ ಸದ್ಯ ಶೇ. 10-15ರಷ್ಟು ಉತ್ಪಾದನೆ.

    * 2027ರ ವೇಳೆಗೆ ಆಪಲ್ ಸ್ಮಾರ್ಟ್​ಫೋನ್​ಗಳ ಪೈಕಿ ಶೇ.45-50ರಷ್ಟು ಭಾರತದಲ್ಲಿಯೇ ತಯಾರಾಗುವ ಸಾಧ್ಯತೆ.

    ಹೆದ್ದಾರಿ ಮಧ್ಯೆ ಬೃಹತ್ ಹೋರ್ಡಿಂಗ್; ಸಾರ್ವಜನಿಕರ ಸುರಕ್ಷತೆಯನ್ನು ಮರೆತ ಬಿಬಿಎಂಪಿ

    ಕರೆನ್ಸಿ ಟ್ರೇಡಿಂಗ್ ನಡೆಸುವುದಾಗಿ ನಂಬಿಸಿ 31 ಕೋಟಿಗೂ ಅಧಿಕ ಹಣ ವಂಚನೆ: ಇಬ್ಬರ ಬಂಧನ

    ಕಾಂಗ್ರೆಸ್​ನಿಂದ 5ನೇ ಗ್ಯಾರಂಟಿ ಘೋಷಣೆ: ಎಲ್ಲ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts