ಭಾರತ ಪ್ರಬಲ, ಆಸೀಸ್ ವಿಲವಿಲ!

ಸಿಡ್ನಿ: ಆಸ್ಟ್ರೇಲಿಯಾ ತಂಡವನ್ನು ಅವರದೇ ನೆಲದಲ್ಲಿ ಸೋಲಿಸುವುದು ಅಷ್ಟು ಸುಲಭದ ಮಾತಲ್ಲ. ಆದರೆ ಈ ಬಾರಿ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ಆತಿಥೇಯರ ಮೇಲೆ ಸವಾರಿ ಮುಂದುವರಿಸಿದ್ದು, ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸೀಸ್ ತಂಡಕ್ಕೆ ಫಾಲೋಆನ್ ಹೇರುವತ್ತ ಮುನ್ನಡೆದಿದೆ. ಬ್ಯಾಟಿಂಗ್ ಸ್ನೇಹಿ ಪಿಚ್​ನಲ್ಲಿ ಮೊದಲೆರಡು ದಿನ ನಿರರ್ಗಳವಾಗಿ ರನ್ ಸುರಿಮಳೆಗರೆದಿದ್ದ ಭಾರತ, ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ (71ಕ್ಕೆ 3) ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ (62ಕ್ಕೆ2) ಜೋಡಿಯ ಶಿಸ್ತು ಹಾಗೂ ಸಂಯಮದ ದಾಳಿಯೊಂದಿಗೆ ಬೌಲಿಂಗ್​ನಲ್ಲೂ ಹಿಡಿತ ಸಾಧಿಸಿದೆ. ಸರಣಿಯಲ್ಲಿ ಈಗಾಗಲೆ 2-1 ಮುನ್ನಡೆಯಲ್ಲಿರುವ ಭಾರತ, ಆಸೀಸ್ ನೆಲದಲ್ಲಿ ಸುಮಾರು 71 ವರ್ಷಗಳಿಂದ ಕಾಯುತ್ತಿರುವ ಚೊಚ್ಚಲ ಟೆಸ್ಟ್ ಸರಣಿ ಗೆಲುವಿಗೆ ವೇದಿಕೆ ಸಜ್ಜುಗೊಳಿಸಲಾರಂಭಿಸಿದೆ.

ಶನಿವಾರ ವಿಕೆಟ್ ನಷ್ಟವಿಲ್ಲದೆ 24 ರನ್​ಗಳಿಂದ 3ನೇ ದಿನದಾಟ ಮುಂದುವರಿಸಿದ ಆಸೀಸ್, ಮಂದ ಬೆಳಕು ಮತ್ತು ಮಳೆಯಿಂದಾಗಿ ದಿನದಾಟ ಬೇಗನೆ ಸ್ಥಗಿತಗೊಂಡಾಗ 236 ರನ್​ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. 386 ರನ್​ಗಳ ಹಿನ್ನಡೆಯಲ್ಲಿರುವ ಟಿಮ್ ಪೇನ್ ಪಡೆ, ಫಾಲೋಆನ್​ನಿಂದ ಪಾರಾಗಲು ಇನ್ನೂ 187 ರನ್ ಗಳಿಸಬೇಕಿದೆ. ಕಳೆದ ಪಂದ್ಯದಲ್ಲಿ ಆಸೀಸ್ ಮಾನ ಉಳಿಸಿದ್ದ ಪ್ಯಾಟ್ ಕಮ್ಮಿನ್ಸ್ (25 ರನ್, 41 ಎಸೆತ, 6 ಬೌಂಡರಿ) ಹಾಗೂ ಪೀಟರ್ ಹ್ಯಾಂಡ್ಸ್​ಕೊಂಬ್ (28 ರನ್, 91 ಎಸೆತ, 3 ಬೌಂಡರಿ) ಜೋಡಿ ಮುರಿಯದ 7ನೇ ವಿಕೆಟ್​ಗೆ 38 ರನ್ ಸೇರಿಸಿ ಕ್ರೀಸಿನಲ್ಲಿದೆ. -ಏಜೆನ್ಸೀಸ್

ಕುಲದೀಪ್-ಜಡೇಜಾ ಸ್ಪಿನ್ ಕಡಿವಾಣ

ಸಾಂಪ್ರದಾಯಿಕವಾಗಿ ಸ್ಪಿನ್ ಸ್ನೇಹಿ ಪಿಚ್ ಆಗಿರುವ ಸಿಡ್ನಿಯಲ್ಲಿ ಆಸೀಸ್, ನಾಥನ್ ಲ್ಯಾನ್-ಲಬುಶೇನ್ ಸ್ಪಿನ್ ಜೋಡಿಯಿಂದ ಲಾಭ ಗಳಿಸಿಕೊಳ್ಳಲು ವಿಫಲಗೊಂಡರೂ, ಕುಲದೀಪ್ ಹಾಗೂ ಜಡೇಜಾ ಅಚ್ಚರಿಯ ಮ್ಯಾಜಿಕ್ ನಡೆಸಿದರು. ಕಳೆದ ಪಂದ್ಯದ ಸ್ಟಾರ್ ಜಸ್​ಪ್ರೀತ್ ಬುಮ್ರಾ ವಿಕೆಟ್ ರಹಿತ ಬೌಲಿಂಗ್ ಹೊರತುಪಡಿಸಿ ವೇಗಿ ಮೊಹಮಮ್ ಶಮಿ ಕೂಡ 1 ವಿಕೆಟ್ ಕಬಳಿಸಿ ಸ್ಪಿನ್ ಜೋಡಿಯ ಆತ್ಮವಿಶ್ವಾಸ ಹೆಚ್ಚಿಸಿದರು. 3ನೇ ದಿನವೂ ಪಿಚ್ ಸತ್ವ ಬ್ಯಾಟಿಂಗ್ ಸ್ನೇಹಿಯಾಗಿಯೇ ಉಳಿದುಕೊಂಡಿದ್ದರಿಂದ ಕುಲದೀಪ್-ಜಡ್ಡೂ ಜೋಡಿ ಫುಲ್​ಟಾಸ್, ಗೂಗ್ಲಿಯಂಥ ಪ್ರಯೋಗ ಮಾಡಿ ಯಶ ಕಂಡಿತು. ಆಕ್ರಮಣಕಾರಿ ಆಟಕ್ಕೆ ಮುಂದಾದ ಖವಾಜರನ್ನು ಕುಲದೀಪ್ ಪೆವಿಲಿಯನ್​ಗೆ ಅಟ್ಟಿದರು. ನಿರಾಳವಾಗಿ ರನ್ ಗಳಿಸುತ್ತಿದ್ದ ಮಾರ್ಕಸ್ ಆಫ್​ಸ್ಟಂಪ್ ಹೊರಹೋಗುತ್ತಿದ್ದ ಜಡೇಜಾರ ಎಸೆತವನ್ನು ಮುಟ್ಟಲು ಹೋಗಿ ಬೌಲ್ಡ್ ಆದರು. ಶಾನ್ ಮಾರ್ಷ್(8) ಸ್ಲಿಪ್​ನಲ್ಲಿ ರಹಾನೆಗೆ ಕ್ಯಾಚ್ ನೀಡಿದರೆ, ಲಬುಶೇನ್ ಶಾರ್ಟ್ ಮಿಡ್​ವಿಕೆಟ್​ನಲ್ಲಿದ್ದ ರಹಾನೆ ಹಿಡಿದ ಅದ್ಭುತ ಕ್ಯಾಚ್​ಗೆ ನಿರ್ಗಮಿಸಿದರು. ನಂತರ ಕುಲದೀಪ್ ಎಡಗೈ ಬ್ಯಾಟ್ಸ್​ಮನ್ ಟ್ರಾವಿಸ್ ಹೆಡ್​ರನ್ನು(20) ರಿಟರ್ನ್ ಕ್ಯಾಚ್ ಮತ್ತು ಟಿಮ್ ಪೇನ್​ರನ್ನು(5) ಗೂಗ್ಲಿ ಎಸೆತದಲ್ಲಿ ಬೌಲ್ಡ್ ಮಾಡಿದರು.

ನೆಟ್ಸ್​ನಲ್ಲಿ ಭಾರತಕ್ಕೆ ಪಾಕ್ ವೇಗಿಗಳ ನೆರವು!

ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಆಸ್ಟ್ರೇಲಿಯಾದ ಮೂವರು ವೇಗಿಗಳಾದ ಸ್ಟಾರ್ಕ್, ಕಮ್ಮಿನ್ಸ್ ಮತ್ತು ಹ್ಯಾಸಲ್​ವುಡ್​ರನ್ನು ಸಮರ್ಥವಾಗಿ ಎದುರಿಸಿ ಬೃಹತ್ ಮೊತ್ತ ಪೇರಿಸಲು ಪಾಕಿಸ್ತಾನದ ಬೌಲರ್​ಗಳ ಕಾಣಿಕೆಯೂ ಇದೆ. ಪಾಕ್​ನ ಮೂವರು ಯುವ ವೇಗಿಗಳು ನೆಟ್ಸ್ ನಲ್ಲಿ ಭಾರತೀಯ ಬ್ಯಾಟ್ಸ್​ಮನ್​ಗಳಿಗೆ ಬೌಲಿಂಗ್ ಮಾಡಿ ನೆರವಾಗಿದ್ದಾರೆ. ಪಿಎಸ್​ಎಲ್​ನಲ್ಲಿ ಆಡುವ ಸಲ್ಮಾನ್ ಇರ್ಶಾದ್, ಹ್ಯಾರಿಸ್ ರೌಫ್ ಮತ್ತು ಅಬ್ಬಾಸ್ ಬಲೂಚ್, ನಾಯಕ ಕೊಹ್ಲಿ ಸೇರಿದಂತೆ ಪ್ರಮುಖ ಬ್ಯಾಟ್ಸ್​ಮನ್​ಗಳಿಗೆ ಬೌಲಿಂಗ್ ನಡೆಸಿದರು.

ಹ್ಯಾರಿಸ್ ಅರ್ಧಶತಕದ ಪ್ರತಿರೋಧ

ಆಸೀಸ್ ಅಗ್ರ ಬ್ಯಾಟ್ಸ್​ಮನ್​ಗಳ ಪೈಕಿ ಭಾರತೀಯ ಬೌಲರ್​ಗಳನ್ನು ಅಲ್ಪಮಟ್ಟಿಗೆ ಕಾಡಿದ್ದು ಮಾರ್ಕಸ್ ಹ್ಯಾರಿಸ್(79) ಮಾತ್ರ. ಹೆಚ್ಚು ಎಸೆತಗಳನ್ನು ವ್ಯರ್ಥಗೊಳಿಸದೆ ಮಾರ್ಕಸ್ ಹ್ಯಾರಿಸ್ ಎಸೆತಕ್ಕೊಂದರಂತೆ ರನ್ ಗಳಿಸತೊಡಗಿದರು. ಆರಂಭಿಕ ಉಸ್ಮಾನ್ ಖವಾಜ ಜತೆ ಮೊದಲ ವಿಕೆಟ್​ಗೆ ಅಮೂಲ್ಯ 72 ರನ್ ಜತೆಯಾಟವಾಡಿ ಭಾರತಕ್ಕೆ ತಿರುಗೇಟು ನೀಡುವ ಸೂಚನೆ ಕೊಟ್ಟರು. ಖವಾಜ ಔಟಾದ ಬಳಿಕ ಮಾರ್ನಸ್ ಲಬುಶೇನ್(38) ರಕ್ಷಣಾತ್ಮಕ ಆಟದಿಂದ ಹ್ಯಾರಿಸ್ 2ನೇ ವಿಕೆಟ್​ಗೆ 56 ರನ್​ಗಳ ಮಹತ್ವದ ಜತೆಯಾಟವಾಡಿದರು. ಇದರೊಂದಿಗೆ ಭೋಜನ ವಿರಾಮಕ್ಕೂ ಮುನ್ನವೇ ಹ್ಯಾರಿಸ್ ಸರಣಿಯ 2ನೇ ಅರ್ಧಶತಕ ದಾಖಲಿಸಿದರು. ಹ್ಯಾರಿಸ್ ಔಟಾದ ನಂತರ ಆಸೀಸ್ ಬ್ಯಾಟ್ಸ್​ಮನ್​ಗಳ ಪ್ರತಿರೋಧ ಮುಂದುವರಿಯಲಿಲ್ಲ.

ಹಾಲಿ ಟೆಸ್ಟ್ ಸರಣಿ ಆರಂಭದಲ್ಲಿ ಕೆಲವು ಸಂಶಯಾಸ್ಪದ ಕ್ಯಾಚ್​ಗಳಿಂದ ಸುದ್ದಿಯಾಗಿತ್ತು. ಆದರೆ ಕನ್ನಡಿಗ ಕೆಎಲ್ ರಾಹುಲ್ ತಾನು ಹಿಡಿದ ಅನುಮಾನಾಸ್ಪದ ಕ್ಯಾಚ್ ಒಂದನ್ನು ಫೀಲ್ಡ್ ಅಂಪೈರ್ ಗೊಂದಲಕ್ಕೊಳಗಾಗುವ ಮುನ್ನವೇ ‘ಅದು ಔಟ್ ಅಲ್ಲ’ವೆಂದು ಸ್ವತಃ ತಿಳಿಸಿ ಮೆಚ್ಚುಗೆಗೆ ಪಾತ್ರರಾದರು. 3ನೇ ದಿನ ಮೊದಲ ಅವಧಿಯಲ್ಲಿ ಜಡೇಜಾ ಓವರ್​ನಲ್ಲಿ ಮಾರ್ಕಸ್ ಹ್ಯಾರಿಸ್ ಮುನ್ನುಗ್ಗಿ ಬಾರಿಸಿದ ಚೆಂಡನ್ನು ರಾಹುಲ್ ಮಿಡ್ ಆನ್​ನಲ್ಲಿ ಡೈವ್ ಮಾಡಿ ಹಿಡಿದರು. ಆದರೆ ಅದು ಕೂದಲೆಳೆಯ ಅಂತರದಲ್ಲಿ ನೆಲಕ್ಕೆ ತಾಗಿದ್ದರಿಂದ ಸ್ವತಃ ರಾಹುಲ್ ‘ಔಟ್ ಇಲ್ಲ’ ಎಂದರು. ಇದಕ್ಕೆ ಅಂಪೈರ್ ಇಯಾನ್ ಗೌಲ್ಡ್ ಕೂಡ ರಾಹುಲ್​ರ ಪ್ರಾಮಾಣಿಕತೆಯನ್ನು ಮೆಚ್ಚಿ ತಂಬ್ಸ್ ಅಪ್ ಮಾಡಿದರು.

ಭಾರತಕ್ಕೆ ಮೆಕ್​ಗ್ರಾತ್ ಗೌರವ

ಗ್ಲೆನ್ ಮೆಕ್​ಗ್ರಾತ್ ಫೌಂಡೇಷನ್​ಗೆ ದತ್ತಿನಿಧಿ ಸಂಗ್ರಹಕ್ಕಾಗಿ ಭಾರತ-ಆಸ್ಟ್ರೇಲಿಯಾ ಆಟಗಾರರೆಲ್ಲರೂ ತಮ್ಮ ಸಹಿ ಇರುವ ಪಿಂಕ್ ಕ್ಯಾಪ್ ಅನ್ನು ಶನಿವಾರ ವಿತರಿಸಿದರು. ಮೆಕ್​ಗ್ರಾತ್ ಅವರ ದಿವಂಗತ ಪತ್ನಿ ಜೇನ್ ಮೆಕ್​ಗ್ರಾತ್ ಅವರ ಸ್ಮರಣಾರ್ಥವಾಗಿ ಈ ವಿಶೇಷ ಕಾರ್ಯಕ್ರಮದಲ್ಲಿ ಉಭಯ ತಂಡಗಳು ಪಾಲ್ಗೊಂಡವು. 3ನೇ ದಿನದಿಂದ 5ನೇ ಹಾಗೂ ಅಂತಿಮ ದಿನದವರೆಗೆ ಟಿಕೆಟ್​ನಿಂದ ಸಂಗ್ರಹವಾಗುವ ಹಣವನ್ನು ಮೆಕ್​ಗ್ರಾತ್ ಫೌಂಡೇಷನ್​ಗೆ ಅರ್ಪಿಸಲಿದೆ. 2008ರಲ್ಲಿ ಮೆಕ್​ಗ್ರಾತ್ ಪತ್ನಿ ಜೇನ್ ಸ್ತನದ ಕ್ಯಾನ್ಸರ್​ನಿಂದ ಸಾವನ್ನಪ್ಪಿದ ನಂತರ ಈ ಜಾಗೃತಿ ಆರಂಭಗೊಂಡಿದೆ.