ಸವಾಲಿಲ್ಲದೆ ಸರಣಿ ಗೆದ್ದ ಟೀಮ್ ಇಂಡಿಯಾ

ತಿರುವನಂತಪುರ: ಮೊದಲ ಮೂರು ಏಕದಿನ ಪಂದ್ಯಗಳಲ್ಲಿ ಉತ್ಸಾಹಿ ನಿರ್ವಹಣೆ ತೋರಿದ್ದ ವೆಸ್ಟ್ ಇಂಡೀಸ್, ತನ್ನ ಬ್ಯಾಟಿಂಗ್ ವಿಭಾಗದ ಮೂಲಕವೇ ಸರಣಿಯನ್ನು ಸಮಬಲ ಮಾಡಿಕೊಳ್ಳುವ ಅವಕಾಶ ಹೊಂದಿತ್ತು. ಬ್ಯಾಟಿಂಗ್ ಸ್ನೇಹಿ ಬ್ರಬೋರ್ನ್ ಪಿಚ್​ನಲ್ಲಿ ನಡೆದ 4ನೇ ಏಕದಿನದಲ್ಲಿ 153 ರನ್​ಗೆ ಆಲೌಟ್ ಆಗಿದ್ದ ಪ್ರವಾಸಿ ತಂಡ, ಸವಾಲಿನ ತಿರುವನಂತಪುರ ಪಿಚ್​ನಲ್ಲಿ ಇನ್ನಷ್ಟು ಕೆಟ್ಟ ಬ್ಯಾಟಿಂಗ್ ನಡೆಸಿ ಕೇವಲ 104 ರನ್​ಗೆ ಆಲೌಟ್ ಆಯಿತು. ಈ ಐದನೇ ಏಕದಿನ ಅಹರ್ನಿಶಿ ಪಂದ್ಯದಲ್ಲಿ ಫ್ಲಡ್​ಲೈಟ್ ಬೆಳಕು ಚೆಲ್ಲುವ ಮುನ್ನವೇ ವಿರಾಟ್ ಕೊಹ್ಲಿ ಪಡೆ 9 ವಿಕೆಟ್​ಗಳಿಂದ ಗೆದ್ದು, ಸರಣಿಯನ್ನು 3-1 ಅಂತರದಿಂದ ಜಯಿಸಿತು. ಸರಣಿಯ 2ನೇ ಪಂದ್ಯ ಟೈ ಆಗಿತ್ತು.ಗುರುವಾರ ಗ್ರೀನ್​ಫೀಲ್ಡ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್, ಭಾರತ ವಿರುದ್ಧ ಈವರೆಗಿನ ತನ್ನ ಕನಿಷ್ಠ ಮೊತ್ತ ದಾಖಲಿಸಿತು. ಚೇಸಿಂಗ್ ಮಾಡಿದ ಭಾರತ ಮೊದಲ ಓವರ್​ನಲ್ಲಿಯೇ ಆರಂಭಿಕ ಶಿಖರ್ ಧವನ್ ವಿಕೆಟ್ ಕಳೆದುಕೊಂಡರೂ, ಆ ಬಳಿಕ ರೋಹಿತ್ ಶರ್ಮ (63*ರನ್, 53 ಎಸೆತ, 5 ಬೌಂಡರಿ, 4 ಸಿಕ್ಸರ್) ಬಾರಿಸಿದ ಅರ್ಧಶತಕ ಹಾಗೂ ನಾಯಕ ವಿರಾಟ್ ಕೊಹ್ಲಿ (33*ರನ್, 29 ಎಸೆತ, 6 ಬೌಂಡರಿ) ಎಚ್ಚರಿಕೆ ಆಟದ ನೆರವಿನಿಂದ 14.5 ಓವರ್​ಗಳಲ್ಲೇ 1 ವಿಕೆಟ್​ಗೆ 105 ರನ್ ಬಾರಿಸಿ ಗೆಲುವು ಕಂಡಿತು. ಇದು ಭಾರತಕ್ಕೆ ತವರಿನಲ್ಲಿ ಸತತ 6ನೇ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಸತತ 8ನೇ ದ್ವಿಪಕ್ಷೀಯ ಏಕದಿನ ಸರಣಿ ಗೆಲುವೆನಿಸಿದೆ. 2007ರಿಂದ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಈವರೆಗೂ ದ್ವಿಪಕ್ಷೀಯ ಸರಣಿ ಸೋತಿಲ್ಲ. 21 ವರ್ಷದ ವೇಗಿ ಒಶಾನೆ ಥಾಮಸ್ ಚೇಸಿಂಗ್ ಆರಂಭದಲ್ಲಿ ಭಾರತಕ್ಕೆ ಕೆಲ ಆತಂಕ ನೀಡಿದರು. ಧವನ್ ವಿಕೆಟ್ ಉರುಳಿಸಿದ ಬಳಿಕ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮರ ವಿಕೆಟ್ ಕೀಳುವ ಪ್ರಯತ್ನ ಮಾಡಿದರಾದರೂ ಅದೃಷ್ಟದ ಬಲವಿರಲಿಲ್ಲ. ಕೊಹ್ಲಿ ಬ್ಯಾಟ್​ಗೆ ತಾಕಿದ ಚೆಂಡನ್ನು ಸ್ಲಿಪ್​ನಲ್ಲಿ ಕ್ಯಾಚ್ ಪಡೆಯಲು ಜೇಸನ್ ಹೋಲ್ಡರ್ ವಿಫಲರಾದರೆ, ರೋಹಿತ್ ಶರ್ಮ ವಿಕೆಟ್ಕೀಪರ್ ಶೈ ಹೋಪ್​ಗೆ ಕ್ಯಾಚ್ ನೀಡಿದ ಎಸೆತ ನೋಬಾಲ್ ಆಗಿತ್ತು. ಇವೆರಡು ಸಂಗತಿಗಳನ್ನು ಬಿಟ್ಟರೆ, ಭಾರತ ಬಿರುಸಿನ ಆಟದ ಮೂಲಕ ನಿರಾಯಾಸವಾಗಿ ಮೊತ್ತವನ್ನು ಬೆನ್ನಟ್ಟಿತು. ರೋಹಿತ್ ಏಕದಿನ ಕ್ರಿಕೆಟ್​ನಲ್ಲಿ 37ನೇ ಅರ್ಧಶತಕ ಪೂರೈಸಿದ್ದಲ್ಲದೆ, 200 ಸಿಕ್ಸರ್ ಬಾರಿಸಿದ ವಿಶ್ವದ 7ನೇ ಹಾಗೂ ಭಾರತದ 2ನೇ ಆಟಗಾರ ಎನಿಸಿದರು. ಇದರಿಂದಾಗಿ ಭಾರತ ಇನ್ನೂ 211 ಎಸೆತಗಳಿರುವಂತೆ ಗೆಲುವು ಸಾಧಿಸಿತು.

ಪಂತ್​ಗಾಗಿ ಸ್ವತಃ ಹೊರಗುಳಿದ ಧೋನಿ!

ಎಂಎಸ್ ಧೋನಿಯನ್ನು ಟಿ20 ತಂಡದಿಂದ ಕೈಬಿಟ್ಟಿದ್ದ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಆದರೆ, ಸ್ವತಃ ಧೋನಿಯೇ ಟಿ20ಯಲ್ಲಿ ರಿಷಭ್ ಪಂತ್​ಗೆ ದಾರಿ ಮಾಡಿಕೊಡುವ ಸಲುವಾಗಿ ವಿಂಡೀಸ್, ಆಸೀಸ್ ವಿರುದ್ಧ ಟಿ20 ಸರಣಿಯಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದರು ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ. ಆಯ್ಕೆ ಸಭೆಯಲ್ಲಿ ನಾನು ಇದ್ದಿರಲಿಲ್ಲ. ಬಹುಶಃ ಆಯ್ಕೆ ಸಮಿತಿ ಈ ಬಗ್ಗೆ ತಿಳಿಸಿರಬಹುದು. ಧೋನಿ ಈಗಲೂ ತಂಡದ ಅವಿಭಾಜ್ಯ ಅಂಗ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ಟಿ20 ಮಾದರಿಯಲ್ಲಿ ರಿಷಭ್ ಪಂತ್​ರಂಥ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ಸಿಗಬೇಕು ಎನ್ನುವ ಕಾರಣಕ್ಕೆ ಹೊರಗುಳಿದಿದ್ದಾರೆ. ಆದರೆ, ಏಕದಿನದಲ್ಲಿ ಅವರು ನಿರಂತರವಾಗಿ ಆಡುತ್ತಾರೆ ಎಂದು ಕೊಹ್ಲಿ ಪಂದ್ಯದ ಬಳಿಕ ತಿಳಿಸಿದರು.

ಜಡೇಜಾಗೆ 4 ವಿಕೆಟ್

ನಿಧಾನಗತಿಯ ಹಾಗೂ ಸ್ವಿಂಗ್ ಬೌಲಿಂಗ್​ಗೆ ನೆರವು ಕೊಡುತ್ತಿದ್ದ ಪಿಚ್​ನಲ್ಲಿ ವಿಂಡೀಸ್ ಆರಂಭದಿಂದಲೇ ಹಿನ್ನಡೆ ಕಂಡಿತು. ಇನಿಂಗ್ಸ್​ನ 10ನೇ ಎಸೆತದಲ್ಲಿ ಭುವನೇಶ್ವರ್, ಕೈರನ್ ಪೊವೆಲ್​ರನ್ನು ಹಾಗೂ ಜಸ್​ಪ್ರೀತ್ ಬುಮ್ರಾ ಪ್ರಮುಖ ಆಟಗಾರ ಶೈ ಹೋಪ್​ರನ್ನು ಶೂನ್ಯಕ್ಕೆ ಔಟ್ ಮಾಡಿದರು. ಬಳಿಕ ವಿಂಡೀಸ್ ಇನಿಂಗ್ಸ್ ಅತಿದೊಡ್ಡ ಜತೆಯಾಟ ರೋಮನ್ ಪೊವೆಲ್ (16) ಹಾಗೂ ಮರ್ಲಾನ್ ಸ್ಯಾಮ್ಯುಯೆಲ್ಸ್ (24) ನಡುವೆ ಏರ್ಪಟ್ಟಿತು. 12ನೇ ಓವರ್​ವರೆಗೆ ನಡೆದ 34 ರನ್​ಗಳ ಜತೆಯಾಟವನ್ನು ರವೀಂದ್ರ ಜಡೇಜಾ ಬೇರ್ಪಡಿಸಿದರು. ಜಡೇಜಾ ಎಸೆತಗಳನ್ನು ಎದುರಿಸಲು ಪರದಾಡುತ್ತಿದ್ದ ಸ್ಯಾಮ್ಯುಯೆಲ್ಸ್, ಕೊಹ್ಲಿಗೆ ಕ್ಯಾಚ್ ನೀಡಿ ಔಟಾದರು. ಈ ಜತೆಯಾಟ ಬೇರ್ಪಟ್ಟ ಬಳಿಕ ವಿಂಡೀಸ್ ನಿರಂತರವಾಗಿ ವಿಕೆಟ್ ಕಳೆದುಕೊಂಡಿತು. ಶಿಮ್ರೋನ್ ಹೆಟ್ಮೆಯರ್, ರೋಮನ್ ಹಾಗೂ ಫ್ಯಾಬಿಯನ್ ಅಲೆನ್ ಬೇಗನೆ ಪೆವಿಲಿಯನ್ ಸೇರಿದರು. ಹೋರಾಟದ 25 ರನ್ ಬಾರಿಸಿದ್ದ ಜೇಸನ್ ಹೋಲ್ಡರ್, ಖಲೀಲ್ ಅಹ್ಮದ್​ಗೆ ವಿಕೆಟ್ ಒಪ್ಪಿಸಿದಾಗ ವಿಂಡೀಸ್ 87 ರನ್ ಬಾರಿಸಿತ್ತು. ಆ ಬಳಿಕ ಬಾಲಂಗೋಚಿಗಳ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಸತತ ಎಂಟು ಓವರ್​ಗಳ ಸ್ಪೆಲ್ ಎಸೆದಿದ್ದ ಜಡೇಜಾ, ಐದು ಓವರ್​ಗಳ ವಿರಾಮದ ಬಳಿಕ 2ನೇ ಸ್ಪೆಲ್ ಆರಂಭಿಸಿದ್ದಲ್ಲದೆ, 34 ರನ್​ಗೆ 4 ವಿಕೆಟ್ ಉರುಳಿಸಿದರು. ಕಳೆದ ಸೆಪ್ಟೆಂಬರ್​ನಲ್ಲಿ ಏಷ್ಯಾಕಪ್ ಟೂರ್ನಿಯ ಮೂಲಕ ಏಕದಿನ ತಂಡಕ್ಕೆ ಮರಳಿದ ರವೀಂದ್ರ ಜಡೇಜಾ ಕಳೆದ 8 ಪಂದ್ಯಗಳಲ್ಲಿ ಸಂಪಾದಿಸಿದ 2ನೇ 4 ವಿಕೆಟ್ ಗೊಂಚಲು ಇದಾಗಿದೆ.

ರೋಹಿತ್ ಶರ್ಮ 200 ಸಿಕ್ಸರ್ ದಾಖಲೆ

ಪಂದ್ಯದಲ್ಲಿ 2ನೇ ಸಿಕ್ಸರ್ ಬಾರಿಸಿದ ವೇಳೆ ರೋಹಿತ್ ಶರ್ಮ (202 ಸಿಕ್ಸರ್) ಏಕದಿನದಲ್ಲಿ 200 ಸಿಕ್ಸರ್ ಸಿಡಿಸಿದ ಭಾರತದ 2ನೇ ಹಾಗೂ ವಿಶ್ವದ 7ನೇ ಬ್ಯಾಟ್ಸ್​ಮನ್ ಎನಿಸಿಕೊಂಡರು. ಏಕದಿನದಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಪಾಕಿಸ್ತಾನದ ಶಾಹಿದ್ ಅಫ್ರಿದಿ (351) ಅಗ್ರಸ್ಥಾನದಲ್ಲಿದ್ದರೆ, ವೆಸ್ಟ್ ಇಂಡೀಸ್​ನ ಕ್ರಿಸ್ ಗೇಲ್ (275), ಶ್ರೀಲಂಕಾದ ಸನತ್ ಜಯಸೂರ್ಯ (270), ಭಾರತದ ಎಂಎಸ್ ಧೋನಿ (218) ಹಾಗೂ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ (204) ರೋಹಿತ್​ಗಿಂತ ಮೇಲಿನ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್​ನ ಬ್ರೆಂಡನ್ ಮೆಕ್ಕಲಂ (200) ನಂತರದ ಸ್ಥಾನದಲ್ಲಿದ್ದಾರೆ. ಅಲ್ಲದೆ, ಕೇವಲ 187 ಇನಿಂಗ್ಸ್​ಗಳಲ್ಲಿಯೇ ಈ ಸಾಧನೆ ಮಾಡುವ ಮೂಲಕ ಅತಿವೇಗವಾಗಿ 200 ಸಿಕ್ಸರ್ ಸಿಡಿಸಿದ ಬ್ಯಾಟ್ಸ್ ಮನ್ ಎನಿಸಿದರು. ಶಾಹಿದ್ ಅಫ್ರಿದಿ 200 ಸಿಕ್ಸರ್​ಗಾಗಿ 195 ಇನಿಂಗ್ಸ್ ಆಡಿದ್ದರು. ಇನ್ನು ಅತೀ ಕಡಿಮೆ ಎಸೆತಗಳಲ್ಲಿ 200 ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ 3ನೇ ಸ್ಥಾನ ಪಡೆದುಕೊಂಡರು. ಶಾಹಿದ್ ಅಫ್ರಿದಿ 4203 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರೆ, ಬ್ರೆಂಡನ್ ಮೆಕ್ಕಲಂ 6203 ಎಸೆತದಲ್ಲಿ ಈ ವಿಕ್ರಮ ಪಡೆದಿದ್ದರು. ರೋಹಿತ್ 8387 ಎಸೆತದಲ್ಲಿ 200 ಸಿಕ್ಸರ್ ಸಿಡಿಸಿದ್ದಾರೆ.

ಸಸ್ಯಾಹಾರಕ್ಕೆ ಕೊಹ್ಲಿ ಪಡೆ ಆದ್ಯತೆ

ನವದೆಹಲಿ: ಮುಂಬರುವ ಸವಾಲಿನ ಆಸ್ಟ್ರೇಲಿಯಾ ಪ್ರವಾಸಕ್ಕೆ ಪೂರ್ವಭಾವಿಯಾಗಿ ಮೈದಾನದ ನಿರ್ವಹಣೆ ಜತೆಗೆ ಆಹಾರ ಕ್ರಮದ ಮೇಲೆಯೂ ಭಾರತ ತಂಡ ಗಮನ ಹರಿಸಿದೆ. ಪ್ರವಾಸದ ವೇಳೆ ಭಾರತ ತಂಡದ ಆಹಾರ ಪಟ್ಟಿಯಲ್ಲಿ ಸಸ್ಯಾಹಾರಕ್ಕೆ ಹೆಚ್ಚಿನ ಒತ್ತು ನೀಡಿ ಎಂದು ಆತಿಥೇಯ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ (ಸಿಎ) ಬಿಸಿಸಿಐ ಮನವಿ ಮಾಡಿಕೊಂಡಿದೆ. ಅಲ್ಲದೆ ಭಾರತ ತಂಡದ ಆಹಾರಗಳ ಪಟ್ಟಿಯಲ್ಲಿ ಗೋಮಾಂಸವನ್ನು ಸೇರಿಸದಿರುವಂತೆಯೂ ಸೂಚಿಸಿದೆ. ಕಳೆದ ಇಂಗ್ಲೆಂಡ್ ಪ್ರವಾಸದ ವೇಳೆ ಬಿಸಿಸಿಐ ಟ್ವೀಟಿಸಿದ್ದ ಟೀಮ್ ಇಂಡಿಯಾದ ಲಂಚ್ ಮೆನುನಲ್ಲಿ ಗೋಮಾಂಸದ ಖಾದ್ಯ ಇದ್ದುದು ಭಾರೀ ಟೀಕೆಗೆ ಗುರಿಯಾಗಿತ್ತು. ಇನ್ನು ಭಾರತ ತಂಡದ ಕೆಲ ಸಸ್ಯಾಹಾರಿ ಆಟಗಾರರು ಹಿಂದಿನ ಆಸೀಸ್ ಪ್ರವಾಸದ ವೇಳೆ ಪರದಾಡಿದ ಹಿನ್ನೆಲೆಯಲ್ಲೂ ಈ ಬಾರಿ ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ. ಮೆನುನಲ್ಲಿ ಫಲಾಹಾರ ಮತ್ತು ಭಾರತೀಯ ಆಹಾರಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆಯೂ ಬಿಸಿಸಿಐ, ಸಿಎಯನ್ನು ಕೇಳಿಕೊಂಡಿದೆ. ಆಸ್ಟ್ರೇಲಿಯಾದಲ್ಲಿನ ಭಾರತೀಯ ರೆಸ್ಟೋರೆಂಟ್ ಒಂದರಿಂದ ತಂಡಕ್ಕೆ ಆಹಾರದ ವ್ಯವಸ್ಥೆ ಮಾಡಿಕೊಡಲು ಕೇಳಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ನ.21ರಿಂದ ಜ.18ರವರೆಗೆ ನಡೆಯಲಿರುವ ಆಸೀಸ್ ಪ್ರವಾಸದಲ್ಲಿ ಭಾರತ ತಂಡ 3 ಟಿ20, 4 ಟೆಸ್ಟ್, 3 ಏಕದಿನ ಪಂದ್ಯಗಳನ್ನು ಆಡಲಿದೆ. -ಏಜೆನ್ಸೀಸ್