ಅಡಿಲೇಡ್​ನಲ್ಲಿ ಭಾರತ ಐತಿಹಾಸಿಕ ವಿಜಯ

ಅಡಿಲೇಡ್: ಬರೋಬ್ಬರಿ 70 ವರ್ಷ, 11 ಸರಣಿಗಳ ಬಳಿಕ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸೋಲಿಸಿದ ಐತಿಹಾಸಿಕ ಸಾಧನೆ ಮಾಡಿದೆ. ಆತಿಥೇಯ ಆಸ್ಟ್ರೇಲಿಯಾದ ಬಾಲಂಗೋಚಿ ಆಟಗಾರರ ತೀವ್ರ ಪ್ರತಿರೋಧದ ನಡುವೆಯೂ ಸ್ಪೂರ್ತಿದಾಯಕ ನಿರ್ವಹಣೆ ನೀಡಿದ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಥ್ರಿಲ್ಲರ್ ಆಗಿ ಮುಕ್ತಾಯವಾದ ಅಡಿಲೇಡ್ ಟೆಸ್ಟ್​ನಲ್ಲಿ 31 ರನ್​ಗಳ ಸ್ಮರಣೀಯ ವಿಜಯ ದಾಖಲಿಸಿದೆ. 4 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಕೊಹ್ಲಿ ಪಡೆಗೆ ಈಗ ಸರಣಿ ಗೆಲುವು ಕೂಡ ಸುಲಭಸಾಧ್ಯದಂತೆ ಗೋಚರಿಸಿದೆ.

ಗೆಲುವಿಗೆ 323 ರನ್​ಗಳ ಸವಾಲು ಪಡೆದುಕೊಂಡಿದ್ದ ಆಸ್ಟ್ರೇಲಿಯಾ, 4 ವಿಕೆಟ್​ಗೆ 104 ರನ್​ಗಳಿಂದ ಅಂತಿಮ ದಿನದಾಟ ಆರಂಭಿಸಿತ್ತು. ನಿರೀಕ್ಷೆಗೂ ಮೀರಿ ಪ್ರತಿ ಹೋರಾಟ ತೋರಿದ ಆಸ್ಟ್ರೇಲಿಯಾ, ಗೆಲುವಿಗೆ ಪ್ರಯತ್ನ ಆರಂಭಿಸಿದ ಹೊತ್ತಿನಲ್ಲಿ ಬಿಗಿ ದಾಳಿ ನಡೆಸಿದ ಟೀಮ್ ಇಂಡಿಯಾ, 119.5 ಓವರ್​ಗಳಲ್ಲಿ 291 ರನ್​ಗೆ ಎದುರಾಳಿ ತಂಡವನ್ನು ಆಲೌಟ್ ಮಾಡಿ ವಿಜಯ ದಾಖಲಿಸಿತು. ಇದು 2008ರ ಪರ್ತ್ ಟೆಸ್ಟ್ ಬಳಿಕ ಆಸೀಸ್ ನೆಲದಲ್ಲಿ ಭಾರತದ ಮೊದಲ ಗೆಲುವಾಗಿದ್ದು, ಒಟ್ಟಾರೆ ಆಸ್ಟ್ರೇಲಿಯಾದ ನೆಲದ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಮೊದಲು ಮುನ್ನಡೆ ಪಡೆದಿದ್ದು ಇದು ಕೇವಲ 2ನೇ ಬಾರಿ. ಕೆಳಕ್ರಮಾಂಕದಲ್ಲಿ 41, 31, 41, 31 ಹಾಗೂ 32ರನ್​ಗಳ ಉಪಯುಕ್ತ ಜತೆಯಾಟವಾಡುವ ಮೂಲಕ ಆಸೀಸ್ ಗೆಲುವಿಗಾಗಿ ಭಾರತ ಬೆವರಿಳಿಸುವಂತೆ ಮಾಡಿತು. ಈ ಐದು ಜತೆಯಾಟಗಳ ಪೈಕಿ 3 ಜತೆಯಾಟಗಳನ್ನು ಬೇರ್ಪಡಿಸಿದ ಜಸ್​ಪ್ರೀತ್ ಬುಮ್ರಾ (62ಕ್ಕೆ 3) ಗೆಲುವಿನ ರೂವಾರಿ ಎನಿಸಿದರು. 2ನೇ ಇನಿಂಗ್ಸ್ ನಲ್ಲಿ ಶಾನ್ ಮಾರ್ಷ್ (60 ರನ್, 166 ಎಸೆತ, 5 ಬೌಂಡರಿ) ಆಸೀಸ್ ಪರ ಗರಿಷ್ಠ ರನ್ ಬಾರಿಸಿ ಹೋರಾಟಕ್ಕೆ ಶಕ್ತಿ ತುಂಬಿದ್ದರು.

ಅಶ್ವಿನ್​ರ ಸ್ಪಿನ್ ಬತ್ತಳಿಕೆಯಲ್ಲಿದ್ದ ಎಲ್ಲ ಅಸ್ತ್ರಗಳಿಗೂ ಆಸೀಸ್ ಬ್ಯಾಟ್ಸ್​ಮನ್​ಗಳು ಉತ್ತರ ನೀಡಲು ಆರಂಭಿಸಿದಾಗ, ವೇಗದ ಬೌಲರ್​ಗಳು ತಂಡದ ನೆರವಿಗೆ ಬಂದರು. ಪ್ರತಿ ಬಾರಿ ಜತೆಯಾಟ ವೃದ್ಧಿಯಾಗುವ ಲಕ್ಷಣ ತೋರಿದಾಗಲೆಲ್ಲ ಜಸ್​ಪ್ರೀತ್ ಬುಮ್ರಾ ಅಡ್ಡಿಯಾದರು. -ಪಿಟಿಐ/ಏಜೆನ್ಸೀಸ್

2003ರ ವಿಜಯ ನೆನಪಿಸಿದ ಅಡಿಲೇಡ್

ಭಾರತದ ಗೆಲುವು 2003ರ ಅಡಿಲೇಡ್ ಟೆಸ್ಟ್​ನ ಗೆಲುವನ್ನು ನೆನಪಿಸಿದೆ. 2003ರ ಟೆಸ್ಟ್​ನಲ್ಲೂ ಭಾರತದ 3ನೇ ಕ್ರಮಾಂಕದ ಬ್ಯಾಟ್ಸ್​ಮನ್ ರಾಹುಲ್ ದ್ರಾವಿಡ್ ಮೊದಲ ಇನಿಂಗ್ಸ್​ನಲ್ಲಿ ಶತಕ ಹಾಗೂ 2ನೇ ಇನಿಂಗ್ಸ್ ನಲ್ಲಿ ಅರ್ಧಶತಕ ಬಾರಿಸಿ ಭಾರತದ ಜಯಕ್ಕೆ ಕಾರಣರಾಗಿದ್ದರು. ಅಲ್ಲದೆ, ಆ ಪಂದ್ಯದ ಪಂದ್ಯಶ್ರೇಷ್ಠ ಎನಿಸಿಕೊಂಡಿದ್ದರು. 2018ರ ಟೆಸ್ಟ್​ನಲ್ಲೂ 3ನೇ ಕ್ರಮಾಂಕದ ಚೇತೇಶ್ವರ ಪೂಜಾರ ಇದೇ ಸಾಧನೆ ಮಾಡುವುದರೊಂದಿಗೆ ಪಂದ್ಯಶ್ರೇಷ್ಠ ಎನಿಸಿದ್ದಾರೆ. ಅಲ್ಲದೆ, ಏಷ್ಯಾದ ಹೊರಗಡೆ ನಡೆದ ಟೆಸ್ಟ್​ನಲ್ಲಿ ಪೂಜಾರರ ಮೊದಲ ಪಂದ್ಯಶ್ರೇಷ್ಠ ಪ್ರಶಸ್ತಿ ಇದು. ವಿಶೇಷವೆಂದರೆ ಈ ಟೆಸ್ಟ್​ನಲ್ಲಿ ಉಭಯ ಆಟಗಾರರು ತಮ್ಮ 16ನೇ ಟೆಸ್ಟ್ ಶತಕ ಬಾರಿಸಿದ್ದರು. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡ, ತಮ್ಮ ಟ್ವೀಟ್​ನಲ್ಲಿ ಪೂಜಾರ, ಅಜಿಂಕ್ಯ ರಹಾನೆ ಹಾಗೂ ಬೌಲರ್​ಗಳ ಶ್ರಮವನ್ನು ಶ್ಲಾಘಿಸಿದ್ದು, 2003ರ ಅಡಿಲೇಡ್ ವಿಜಯವನ್ನು ನೆನಪಿಸಿದ್ದಾರೆ.

ವಿಶ್ವದಾಖಲೆ ಸರಿಗಟ್ಟಿದ ಪಂತ್

ಟೆಸ್ಟ್ ಪಂದ್ಯವೊಂದರಲ್ಲಿ ಗರಿಷ್ಠ ಕ್ಯಾಚ್ ಪಡೆದ ವಿಶ್ವದಾಖಲೆಯನ್ನು ಟೀಮ್ ಇಂಡಿಯಾ ವಿಕೆಟ್ಕೀಪರ್ ರಿಷಭ್ ಪಂತ್ ಸರಿಗಟ್ಟಿದರು. ಪಂದ್ಯದಲ್ಲಿ ಒಟ್ಟು 11 ಕ್ಯಾಚ್ ಪಡೆದುಕೊಂಡ 21 ವರ್ಷದ ಪಂತ್, 1995ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜೊಹಾನ್ಸ್​ಬರ್ಗ್ ಟೆಸ್ಟ್​ನಲ್ಲಿ ಇಂಗ್ಲೆಂಡ್​ನ ಜಾಕ್ ರಸೆಲ್ ಹಾಗೂ 2013ರಲ್ಲಿ ಪಾಕಿಸ್ತಾನ ವಿರುದ್ಧ ಜೊಹಾನ್ಸ್​ಬರ್ಗ್ ಟೆಸ್ಟ್​ನಲ್ಲಿ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ನಿರ್ವಿುಸಿದ್ದ ವಿಶ್ವದಾಖಲೆಯನ್ನು ಸರಿಗಟ್ಟಿದರು. ಇದಕ್ಕೂ ಮುನ್ನ ಭಾರತದ ದಾಖಲೆ ವೃದ್ಧಿಮಾನ್ ಸಾಹ ಹೆಸರಲ್ಲಿತ್ತು. ಸಾಹ ಪಂದ್ಯವೊಂದರಲ್ಲಿ 10 ಕ್ಯಾಚ್ ಪಡೆದಿದ್ದರು. ಮೊಹಮದ್ ಶಮಿ ಎಸೆತದಲ್ಲಿ ಮಿಚೆಲ್ ಸ್ಟಾರ್ಕ್​ರ ಕ್ಯಾಚ್ ಪಡೆಯುವ ಮೂಲಕ ಈ ದಾಖಲೆ ಮಾಡಿದರು. ಮೊದಲ ಇನಿಂಗ್ಸ್​ನಲ್ಲಿ 6 ಕ್ಯಾಚ್ ಪಡೆದಿದ್ದ ಪಂತ್, 2ನೇ ಇನಿಂಗ್ಸ್​ನಲ್ಲಿ 5 ಕ್ಯಾಚ್ ಪಡೆದರು. ಮೊದಲ ಇನಿಂಗ್ಸ್​ನಲ್ಲಿ 6 ಕ್ಯಾಚ್ ಪಡೆಯುವ ಮೂಲಕ, ಎಂಎಸ್ ಧೋನಿ ಹೆಸರಲ್ಲಿದ್ದ ಇನಿಂಗ್ಸ್​ನಲ್ಲಿ ಗರಿಷ್ಠ ಕ್ಯಾಚ್ ದಾಖಲೆಯನ್ನು ಸರಿಗಟ್ಟಿದ್ದರು.

ಅಶ್ವಿನ್​ಗೆ ಒಲಿದ ಗೆಲುವಿನ ವಿಕೆಟ್

ಕೊನೆಯ ವಿಕೆಟ್​ಗೆ ನಾಥನ್ ಲ್ಯಾನ್ (38*) ಹಾಗೂ ಜೋಸ್ ಹ್ಯಾಸಲ್​ವುಡ್ (13) ಆಡಿದ 32 ರನ್​ಗಳ ಜತೆಯಾಟದ ಮೂಲಕ ರೋಚಕ ಗೆಲುವಿನಿಂದ ಆಸ್ಟ್ರೇಲಿಯಾ 32 ರನ್ ದೂರವಿದ್ದ ವೇಳೆ ಆರ್.ಅಶ್ವಿನ್​ರ ಎಸೆತವನ್ನು ಡ್ರೖೆವ್ ಮಾಡುವ ಯತ್ನದಲ್ಲಿ ಎಡವಿದ ಹ್ಯಾಸಲ್​ವುಡ್ 2ನೇ ಸ್ಲಿಪ್​ನಲ್ಲಿ ಕ್ಯಾಚ್ ನೀಡಿದರು. ಕೆಳಮಟ್ಟದಲ್ಲಿ ಬಂದ ಕ್ಯಾಚ್​ಅನ್ನು ರಾಹುಲ್ ಯಶಸ್ವಿಯಾಗಿ ಪಡೆದ ಬೆನ್ನಲ್ಲಿಯೇ ಭಾರತ ತಂಡದ ಸಂಭ್ರಮ ಮುಗಿಲು ಮುಟ್ಟಿತು. ವಿರಾಟ್ ಕೊಹ್ಲಿ ಅಂಪೈರ್​ಗೆ ಅಪೀಲ್ ಮಾಡುತ್ತಲೇ, ಮುಷ್ಠಿಯನ್ನು ಗಾಳಿಗೆ ಗುದ್ದಿ ಸಂಭ್ರಮಿಸಿದರೆ, ನಾಥನ್ ಲ್ಯಾನ್ ತಲೆತಗ್ಗಿಸಿ ಕುಳಿತರು.

35- ಉಭಯ ತಂಡಗಳ ದ್ವಿತೀಯ ಇನಿಂಗ್ಸ್​ನಲ್ಲಿ ಎಲ್ಲರೂ ಕ್ಯಾಚ್ ಔಟಾಗಿದ್ದು ಸೇರಿದಂತೆ ಪಂದ್ಯದಲ್ಲಿ ಒಟ್ಟು 35 ಬಾರಿ ಬ್ಯಾಟ್ಸ್ ಮನ್​ಗಳು ಕ್ಯಾಚ್ ಕೊಟ್ಟು ಔಟಾದರು. ಇದು ಕೂಡ ವಿಶ್ವದಾಖಲೆ ಸರಿಗಟ್ಟಿದ ನಿರ್ವಹಣೆ ಎನಿಸಿದೆ. ಇದಕ್ಕೂ ಮುನ್ನ 1992ರಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪರ್ತ್ ಟೆಸ್ಟ್ ಹಾಗೂ 2018ರಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಕೇಪ್​ಟೌನ್ ಟೆಸ್ಟ್​ನಲ್ಲೂ 35 ಬಾರಿ ಬ್ಯಾಟ್ಸ್​ಮನ್​ಗಳು ಕ್ಯಾಚ್ ಕೊಟ್ಟು ಔಟಾಗಿದ್ದರು.

ಇಡೀ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಆಡಿದ ಎರಡು ಇನಿಂಗ್ಸ್​ಗಳು ಫಲಿತಾಂಶ ಬದಲಿಸಲು ಕಾರಣವಾಯಿತು. ಸೋಲಿನಿಂದ ಬೇಸರವಾಗಿದೆ. ಆದರೆ, ಕೆಳ ಕ್ರಮಾಂಕದ ಬ್ಯಾಟಿಂಗ್ ಬಗ್ಗೆ ಹೆಮ್ಮೆ ಇದೆ. ಗೆಲುವಿನ ಅವಕಾಶ ನಮಗೂ ಇತ್ತು. ಆದರೆ ಅಗ್ರ ಬ್ಯಾಟ್ಸ್​ಮನ್​ಗಳು, ಬಾಲಂಗೋಚಿ ಆಟಗಾರರ ಜತೆ ಆಟವಾಡುವಲ್ಲಿ ವಿಫಲರಾದರು.

| ಟಿಮ್ ಪೇನ್, ಆಸ್ಟ್ರೇಲಿಯಾ ತಂಡದ ನಾಯಕ

ಒಂದೇ ವಿಜಯಕ್ಕೆ ತೃಪ್ತರಾಗುವುದಿಲ್ಲ

ಮೊದಲ ಟೆಸ್ಟ್​ನಲ್ಲಿ ಗೆಲುವು ಬಂದಿದ್ದಾಗಿದೆ. ಆದರೆ, ಒಂದೇ ವಿಜಯಕ್ಕೆ ತಂಡ ತೃಪ್ತಿಯಾಗಿಲ್ಲ. ಗೆಲುವಿನ ಬಗ್ಗೆ ಖುಷಿ ಇದೆ. ಆದರೆ, ಇದು ಮುಂದಿನ ಗೆಲುವುಗಳಿಗೆ ವೇದಿಕೆಯಾಗಬೇಕು. ಈ ಸರಣಿಯಲ್ಲಿ ನಾವು ಕಳೆದುಕೊಳ್ಳುವಂಥದ್ದೇನೂ ಇಲ್ಲ ಎನ್ನುವ ಮೂಲಕ ವಿರಾಟ್ ಕೊಹ್ಲಿ 2ನೇ ಟೆಸ್ಟ್​ಗೂ ಮುನ್ನ ಆಸೀಸ್​ಗೆ ಎಚ್ಚರಿಕೆ ನೀಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ, ಇಲ್ಲಿ 48 ರನ್​ಗಳಿಂದ ನಾವು ಸೋತಿದ್ದೆವು. ಆದರೆ, ಈ ಬಾರಿ ನಮ್ಮ ಪರವಾಗಿ 31 ರನ್ ಗೆಲುವು ಬಂದಿದೆ. ಆಸ್ಟ್ರೇಲಿಯಾದಲ್ಲಿ ಹಿಂದೆಂದೂ ನಾವು ಸರಣಿಯಲ್ಲಿ ಮುನ್ನಡೆ ಪಡೆದಿರಲಿಲ್ಲ ಎಂದು ಪಂದ್ಯದ ಬಳಿಕ ಹೇಳಿದರು. ಐದು ದಿನಗಳ ಅಭ್ಯಾಸ ಹಾಗೂ ಆಟ, ಮಾನಸಿಕ ಹಾಗೂ ದೈಹಿಕ ಪರಿಶ್ರಮ, ಭಾವನೆಗಳು, ಇವೆಲ್ಲ ಸೇರಿ ಈ ಫಲಿತಾಂಶ ವಾಗಿರುವುದರಿಂದ ಜಯ ಬಹಳ ಸ್ಪೆಷಲ್. ಹಿಂದೆಂದೂ ಆಸೀಸ್​ನಲ್ಲಿ ಈ ಸಾಧನೆ ಮಾಡಿರಲಿಲ್ಲ ಎಂದರು. ಇದೇ ವೇಳೆ ಬೌಲರ್​ಗಳ ಶ್ರಮವನ್ನು ಕೊಹ್ಲಿ ಪ್ರಮುಖವಾಗಿ ಶ್ಲಾಘಿಸಿದರು. ‘ಮೊದಲ ದಿನ ನಮ್ಮ ವಿರುದ್ಧವಾಗಿ ಪಂದ್ಯ ಸಾಗಿತು. ಆದರೆ, ಚೇತೇಶ್ವರ ಪೂಜಾರ ಪಂದ್ಯವನ್ನು ಮತ್ತೆ ಹಿಡಿತಕ್ಕೆ ತಂದುಕೊಟ್ಟ ಬಳಿಕ, ನಂತರದ ನಾಲ್ಕೂ ದಿನವೂ ಆಸೀಸ್​ಗೆ ಒತ್ತಡ ಹೇರಿದೆವು. ನಮ್ಮ ತಪು್ಪಗಳಿಂದ ಬಹಳ ಶೀಘ್ರವಾಗಿ ಪಾಠ ಕಲಿಯಬೇಕಿದೆ’ ಎಂದರು.

31 – ಟೆಸ್ಟ್​ನಲ್ಲಿ ಇದು ಭಾರತದ 3ನೇ ಅಲ್ಪ ಅಂತರದ ಗೆಲುವು. 2004ರಲ್ಲಿ ಮುಂಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ 13 ರನ್ ಜಯ ಸಾಧಿಸಿರುವುದು ದಾಖಲೆಯಾಗಿದ್ದರೆ, 1972-73ರಲ್ಲಿ ಕೋಲ್ಕತದಲ್ಲಿ ಇಂಗ್ಲೆಂಡ್ ವಿರುದ್ಧ 28 ರನ್ ಜಯ ಕಂಡಿತ್ತು. ವಿದೇಶದ ಟೆಸ್ಟ್​ನಲ್ಲಿ ಭಾರತದ ಅಲ್ಪ ಅಂತರದ ಗೆಲುವು ಎನ್ನುವ ದಾಖಲೆ ಅಡಿಲೇಡ್ ಪಂದ್ಯಕ್ಕೆ ಒಲಿದಿದೆ.

02 – ಸತತ 2ನೇ ವರ್ಷ ಆಸ್ಟ್ರೇಲಿಯಾ ತಂಡ ತವರಿನ ಟೆಸ್ಟ್ ಋತುವಿನ ಮೊದಲ ಪಂದ್ಯವನ್ನು ಸೋಲಿನೊಂದಿಗೆ ಆರಂಭಿಸಿತು. 2016-17ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪರ್ತ್​ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಸೋಲು ಕಂಡಿತ್ತು. ಇದಕ್ಕೂ ಮುನ್ನ 1988-99ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಬ್ರಿಸ್ಬೇನ್​ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಆಸೀಸ್ ಸೋಲು ಕಂಡಿತ್ತು.

02 – ಭಾರತ ತಂಡ ಏಷ್ಯಾದ ಹೊರಗಡೆ ನಡೆದ ಟೆಸ್ಟ್​ನಲ್ಲಿ ಕ್ಯಾಲೆಂಡರ್ ವರ್ಷವೊಂದರಲ್ಲಿ ಮೂರು ಗೆಲುವು ದಾಖಲಿಸಿದ್ದು, 2ನೇ ಬಾರಿ. ಇದಕ್ಕೂ ಮುನ್ನ 1968ರಲ್ಲಿ ನ್ಯೂಜಿಲೆಂಡ್ ವಿರುದ್ಧ 3 ಗೆಲುವು ಕಂಡಿತ್ತು.

1 – ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಗೆದ್ದ ಮೊದಲ ಭಾರತೀಯ ನಾಯಕ ವಿರಾಟ್ ಕೊಹ್ಲಿ. ರಾಹುಲ್ ದ್ರಾವಿಡ್ ಹಾಗೂ ಎಂಎಸ್ ಧೋನಿ, ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಜಯಿಸುವಲ್ಲಿ ಯಶ ಕಂಡಿದ್ದರೂ, ಆಸ್ಟ್ರೇಲಿಯಾದಲ್ಲಿ ಈ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ.

3 – 2018ರಲ್ಲಿ ಭಾರತದ ಮೂರು ವಿದೇಶದ ಪ್ರಮುಖ ಟೆಸ್ಟ್ ಗೆಲುವಿನಲ್ಲಿ ಅರ್ಧಶತಕಕ್ಕಿಂತ ಹೆಚ್ಚಿನ ರನ್ ಬಾರಿಸಿದ ಏಕೈಕ ಆಟಗಾರ ಚೇತೇಶ್ವರ ಪೂಜಾರ. ಜೊಹಾನ್ಸ್​ಬರ್ಗ್ ಟೆಸ್ಟ್​ನ ಮೊದಲ ಇನಿಂಗ್ಸ್​ನಲ್ಲಿ 50 ರನ್ ಬಾರಿಸಿದ್ದ ಪೂಜಾರ, ಇಂಗ್ಲೆಂಡ್ ವಿರುದ್ಧದ ಟ್ರೆಂಟ್​ಬ್ರಿಜ್ ಟೆಸ್ಟ್​ನಲ್ಲಿ 72 ರನ್ ಬಾರಿಸಿದ್ದರು. ಅಡಿಲೇಡ್ ಟೆಸ್ಟ್​ನಲ್ಲಿ 123 ಹಾಗೂ 71 ರನ್ ಬಾರಿಸಿದ್ದಾರೆ.

ಕೋಚ್ ರವಿಶಾಸ್ತ್ರಿಗೆ ಟ್ರೋಲ್

ಪಂದ್ಯ ಗೆದ್ದ ಬಳಿಕ ನೇರಪ್ರಸಾರ ವಾಹಿನಿಯ ಜತೆ ಮಾತನಾಡುತ್ತಿದ್ದ ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ನೀಡಿರುವ ಹೇಳಿಕೆ ಈಗ ಟ್ರೋಲ್ ಪೇಜ್​ಗಳ ಆಹಾರವಾಗಿದೆ. ಸರಣಿಗಾಗಿ ವಾಹಿನಿ ವಿಶೇಷ ಟ್ಯಾಗಲ್​ಲೈನ್ ‘ಚೋಡ್ನಾ ಮತ್’ ಅನ್ನು ನೀಡಿದೆ ಎಂದು ಸುನೀಲ್ ಗಾವಸ್ಕರ್ ಹೇಳಿದಾಗ, ಪ್ರತಿಕ್ರಿಯೆ ನೀಡಿದ ರವಿಶಾಸ್ತ್ರಿ, ‘ಬಿಲ್​ಕುಲ್ ಚೋಡೆಂಗೆ ನಹೀ (ಖಂಡಿತಾ ಅವರನ್ನು ಬಿಡುವುದಿಲ್ಲ), ಲೇಕಿನ್, ಥೋಡಿ ದೇರ್ ಕೆ ಲಿಯೇ ಗೋ* ಮೂಹ್ ಮೇ ಥಾ (ಆದರೆ, ಕೆಲ ಸಮಯದವರೆಗೆ ** ಬಾಯಿಗೆ ಬಂದಿತ್ತು) ಎಂದು ಹೇಳಿದರು.

ಕೊನೇ 3 ವಿಕೆಟ್​ಗೆ 104 ರನ್ ಪ್ರತಿರೋಧ

ಭಾನುವಾರದ ಆಟದ ಅಂತ್ಯದ ವೇಳೆ ಆಸ್ಟ್ರೇಲಿಯಾ ತಂಡ ಅಂತಿಮ ದಿನ ತನ್ನಲ್ಲಿರುವ 6 ವಿಕೆಟ್​ಗಳಿಂದ 219 ರನ್ ಬಾರಿಸುವುದು ಅಸಾಧ್ಯ ಎನ್ನಲಾಗಿತ್ತು. ಆದರೆ, ಆಸೀಸ್​ನ ಕೊನೆಯ 3 ವಿಕೆಟ್​ಗಳ ಜತೆಯಾಟದಿಂದ 104 ರನ್ ಕೂಡಿಸಿದಾಗ ದಾಖಲೆಯ ಗೆಲುವಿನತ್ತ ತಂಡ ಹೆಜ್ಜೆ ಹಾಕಿತ್ತು. ಸಾಲು ಸಾಲು ಒಂದಂಕಿ ಮೊತ್ತಕ್ಕೆ ಔಟಾಗಿದ್ದ ಶಾನ್ ಮಾರ್ಷ್ ಏಕಾಗ್ರತೆಯಿಂದ ಆಡಿ ಅರ್ಧಶತಕ ಬಾರಿಸಿದರೆ, ನಾಯಕ ಟಿಮ್ ಪೇನ್ (41ರನ್, 73 ಎಸೆತ, 4 ಬೌಂಡರಿ) ಕೂಡ ಅನುಭವಿ ಆಟಗಾರನಿಗೆ ಕೆಲ ಹೊತ್ತು ಸಾಥ್ ನೀಡಿದರು. ಇವರಿಬ್ಬರ ವಿಕೆಟ್​ಗಳನ್ನು ಉರುಳಿಸಿದ ಬಳಿಕ ಪ್ಯಾಟ್ ಕಮ್ಮಿನ್ಸ್ (28 ರನ್, 121 ಎಸೆತ, 3 ಬೌಂಡರಿ) ಕ್ರೀಸ್ ಕಚ್ಚಿಕೊಂಡು ನಿಂತಿದ್ದರಿಂದ ಭಾರತ ಇನ್ನಷ್ಟು ಪ್ರಯಾಸ ಎದುರಿಸಿತು. ವಿಶ್ವದಾಖಲೆ ಸರಿಗಟ್ಟಿದ 11 ಕ್ಯಾಚ್​ಗಳನ್ನು ಪಂದ್ಯದಲ್ಲಿ ಪಡೆದ ರಿಷಭ್ ಪಂತ್, ನಾಥನ್ ಲ್ಯಾನ್ 7 ರನ್ ಬಾರಿಸಿದ್ದಾಗ ಜೀವದಾನ ನೀಡಿದ್ದರು. ಆ ಬಳಿಕ ವೃತ್ತಿಜೀವನದ ಅತ್ಯುತ್ತಮ ಟೆಸ್ಟ್ ಇನಿಂಗ್ಸ್ ಆಡಿದ ಆಫ್ ಸ್ಪಿನ್ನರ್ ಭಾರತದ ಗೆಲುವನ್ನು ಕಸಿಯುವ ಪ್ರಯತ್ನ ಮಾಡಿದರು. 2ನೇ ಇನಿಂಗ್ಸ್​ನಲ್ಲಿ ದಾಖಲೆಯ 53 ಓವರ್​ಗಳನ್ನು ಎಸೆದ ಅಶ್ವಿನ್, 53ನೇ ಓವರ್​ನ 5ನೇ ಎಸೆತದಲ್ಲಿ ದಿನದ ಮೊದಲ ವಿಕೆಟ್ ಹಾಗೂ ಆಸೀಸ್​ನ ಕೊನೆಯ ವಿಕೆಟ್ ಪಡೆದರು. ಈವರೆಗೂ ನಾಲ್ಕನೇ ಇನಿಂಗ್ಸ್​ನಲ್ಲಿ ಭಾರತದ ಯಾವೊಬ್ಬ ಬೌಲರ್ ಕೂಡ 53 ಓವರ್​ಗಳನ್ನು ಎಸೆದಿರಲಿಲ್ಲ.

ಇಶಾಂತ್​ಗೆ ದಿನದ ಮೊದಲ ವಿಕೆಟ್

ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ, ಭಾನುವಾರದ ಮೊತ್ತಕ್ಕೆ 11 ರನ್ ಸೇರಿಸಿದ್ದ ವೇಳೆ ಇಶಾಂತ್ ಶರ್ಮ, ಟ್ರಾವಿಸ್ ಹೆಡ್​ರ ವಿಕೆಟ್ ಪಡೆದರು. ಆ ಬಳಿಕ ಆಸೀಸ್​ನ ಸಣ್ಣ ಜತೆಯಾಟಗಳ ಇನಿಂಗ್ಸ್ ಆರಂಭವಾಯಿತು, ಮಾರ್ಷ್ ಹಾಗೂ ಪೇನ್ ಭಾರತದ ಶಿಸ್ತಿನ ದಾಳಿಗೆ ಪ್ರತ್ಯುತ್ತರ ನೀಡಿದರು. ಮಾರ್ಷ್ 146 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಬಳಿಕ, ಬುಮ್ರಾ ಎಸೆತದಲ್ಲಿ ಪಂತ್​ಗೆ ಕ್ಯಾಚ್ ನೀಡಿದರು. ಪಂತ್​ರ ಜೀವನಶ್ರೇಷ್ಠ ವಿಕೆಟ್ ಕೀಪಿಂಗ್ ನಿರ್ವಹಣೆಯ ಹೊರತಾಗಿಯೂ 7 ರನ್ ಬಾರಿಸಿದ್ದ ವೇಳೆ ಪೇನ್​ಗೆ ಜೀವದಾನ ನೀಡಿದ್ದರು. ಭೋಜನ ವಿರಾಮದ ಬಳಿಕ ಬುಮ್ರಾ ಎಸೆತದಲ್ಲಿ ಪೇನ್ ಔಟ್ ಆದರು. ಈ ವೇಳೆ ಆಸೀಸ್ ಜಯಕ್ಕೆ 136 ರನ್ ಅಗತ್ಯವಿತ್ತು. ಕಮ್ಮಿನ್ಸ್ ಹಾಗೂ ಸ್ಟಾರ್ಕ್ ಗುರಿಯನ್ನು ಎರಡಂಕಿಗೆ ಇಳಿಸಿ ಬೇರ್ಪಟ್ಟರು. ಈ ವೇಳೆ ಸ್ಟಾರ್ಕ್, ಶಮಿ ಎಸೆತದಲ್ಲಿ ಪಂತ್​ಗೆ ಕ್ಯಾಚ್ ನೀಡಿ ಔಟಾದರು. ಹಾಗಿದ್ದರೂ ಆಸ್ಟ್ರೇಲಿಯಾ ಹಿನ್ನಡೆ ಕಾಣಲಿಲ್ಲ. ಕಮ್ಮಿನ್ಸ್ ಹಾಗೂ ಲ್ಯಾನ್ ಹೋರಾಟ ನೀಡಲು ಆರಂಭಿಸಿದರು. 100 ಎಸೆತಗಳನ್ನು ಎದುರಿಸಿದ ಬಳಿಕ ಕಮ್ಮಿನ್ಸ್ ಬಿರುಸಾಗಿ ಆಡಲು ಆರಂಭಿಸಿದರು. ಈ ಹಂತದಲ್ಲಿ ಕೊಹ್ಲಿಗೆ ಸ್ಲಿಪ್​ನಲ್ಲಿ ಕ್ಯಾಚ್ ನೀಡಿದರು. ಗೆಲುವಿನಿಂದ ಭಾರತ 1 ವಿಕೆಟ್ ದೂರವಿದ್ದರೆ, ಆಸೀಸ್​ಗೆ 64 ರನ್ ಬೇಕಿದ್ದವು. 32 ರನ್ ಗಳಿಸಿದ್ದಾಗ ಇಶಾಂತ್​ರ ನೋಬಾಲ್​ನಿಂದ ಎಲ್​ಬಿ ಆಗುವ ಅಪಾಯದಿಂದ ಪಾರಾಗಿದ್ದ ಲ್ಯಾನ್, ಭಾರತವನ್ನು ಕಾಡಿದರು. ಕೊನೆಗೆ ಇನಿಂಗ್ಸ್​ಗ 719ನೇ ಎಸೆತದಲ್ಲಿ ಆಸೀಸ್ ಆಲೌಟ್ ಆಗುವುದರೊಂದಿಗೆ ಭಾರತ ಕಾಂಗರೂ ನೆಲದಲ್ಲಿ 6ನೇ ಜಯ ಕಂಡಿತು.

Leave a Reply

Your email address will not be published. Required fields are marked *