ವಿಶ್ವಕಪ್​ನಲ್ಲಿ ಟೀಂ ಇಂಡಿಯಾನೇ ಫೇವರೆಟ್​ ಎಂದ ವಿಶ್ವಶ್ರೇಷ್ಠ ಸ್ಪಿನ್​ ಬೌಲರ್​ ಶೇನ್​ ವಾರ್ನ್​

ಮುಂಬೈ: ಇತ್ತೀಚಿನ ಆರು ತಿಂಗಳಲ್ಲಿ ಭಾರತ ಮತ್ತು ಇಂಗ್ಲೆಂಡ್​ ತಂಡಗಳ ಆಟವನ್ನು ಗಮನಿಸಿದರೆ ಈ ಬಾರಿಯ ವಿಶ್ವಕಪ್​ಗೆ ಈ ಎರಡು ತಂಡಗಳೇ ಫೇವರೆಟ್​ ಅನಿಸುತ್ತಿದೆ ಎಂದು ಮಾಜಿ ಕ್ರಿಕೆಟಿಗ ಶೇನ್​ ವಾರ್ನ್​ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಶ್ರೇಷ್ಠ ಲೆಗ್​ ಸ್ಪಿನ್ನರ್​ ಎನಿಸಿಕೊಂಡಿರುವ ವಾರ್ನ್​ ಮುಂಬೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

“ವಿಶ್ವಕಪ್​ ಸಮೀಪಿಸುತ್ತಿದೆ. ನನ್ನ ಪ್ರಕಾರ ಭಾರತ ಮತ್ತು ಇಂಗ್ಲೆಂಡ್​ ತಂಡಗಳು ಈ ಬಾರಿಯ ಫೇವರೆಟ್​ ಅನಿಸುತ್ತಿವೆ. ಯಾಕೆಂದರೆ ಈ 6 ರಿಂದ 12 ತಿಂಗಳ ಅವಧಿಯಲ್ಲಿ ಅವರ ಆಟ ಅಂಥ ಭರವಸೆ ಮೂಡಿದೆ. ಇದರ ಮಧ್ಯೆಯೂ ಆಸ್ಟ್ರೇಲಿಯಾ ಈ ಬಾರಿ ವಿಶ್ವಕಪ್​ ಗೆಲ್ಲಬಹುದು. ಆಸ್ಟ್ರೇಲಿಯಾ ಸರಿಯಾದ ಸಮಯಕ್ಕೆ ಫಾರ್ಮ್​ಗೆ ಬರುತ್ತಿದೆ,” ಎಂದು ಅವರು ಹೇಳಿದರು.

ಇದೇ ವೇಳೆ ಧೋನಿ ಮತ್ತು ವಿರಾಟ್​ ಕೊಹ್ಲಿ ಕುರಿತು ಮಾತನಾಡಿರುವ ಅವರು, “ವಿರಾಟ್​ ಕೊಹ್ಲಿ ಆಕ್ರಮಣಕಾರಿ ನಾಯಕ. ಆದರೆ, ಫೀಲ್ಡ್​ನಲ್ಲಿ ಹೆಚ್ಚು ಒತ್ತಡ ಉದ್ಭವಿಸಿದಾಗ ಅವರು ಧೋನಿಯ ಅನುಭವವನ್ನು ಪಡೆದುಕೊಳ್ಳಬಹುದು. ತಂಡದಲ್ಲಿ ಎಲ್ಲವೂ ಸರಿಯಾಗಿ ಹೋಗುತ್ತಿದ್ದಾಗ ಯಾವುದೇ ನಾಯಕನಿಗೆ ಏನೂ ಸಮಸ್ಯೆ ಇರದು. ಆದರೆ, ಸಂಕಷ್ಟದ ಸಮಯದಲ್ಲಿ ಧೋನಿಯ ಅನುಭವವನ್ನು ಬಳಸಿಕೊಳ್ಳಬೇಕು,” ಎಂದು ಅವರು ತಿಳಿಸಿದ್ದಾರೆ.

“ಧೋನಿ ಒಬ್ಬ ದೊಡ್ಡ ಆಟಗಾರ. ಅವರು ಯಾವುದೇ ಸಂದರ್ಭದಲ್ಲಿ ಯಾವುದೇ ಕ್ರಮಾಂಕದಲ್ಲಿ ಬ್ಯಾಟ್​ ಮಾಡಲು ಹಿಂಜರಿಯಲಾರರು. ಅವರು ಎಂಥದ್ದೇ ಸಂದರ್ಭಕ್ಕೆ ಹೊಂದಿಕೊಳ್ಳುತ್ತಾರೆ. ವಿಶ್ವಕಪ್​ನಲ್ಲಿ ಟೀಂ ಇಂಡಿಯಾಕ್ಕೆ ಮತ್ತು ಕೊಹ್ಲಿ ನಾಯಕತ್ವಕ್ಕೆ ನೆರವಾಗಲು ಧೋನಿ ಅತ್ಯಗತ್ಯ, ” ಎಂದು ವಾರ್ನ್​ ಅಭಿಪ್ರಾಯಪಟ್ಟರು.