ಪ್ರಧಾನಿ ಅರುಣಾಚಲಪ್ರದೇಶ ಭೇಟಿಗೆ ಚೀನಾ ವಿರೋಧ: ಕ್ಯಾರೇ ಎನ್ನದ ಕೇಂದ್ರ ಸರ್ಕಾರ

ನವದೆಹಲಿ: ಚೀನಾದ ವಿರೋಧದ ನಡುವೆಯೂ ಇಂದು ಅರುಣಾಚಲಪ್ರದೇಶಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಅಭಿವೃದ್ಧಿ ಕಾರ್ಯಗಳಿಗೆ ಶಿಲಾನ್ಯಾಸ ನೆರವೇರಿಸಿದ್ದಾರೆ.

ಗಡಿ ರಾಜ್ಯ ಅರುಣಾಚಲಪ್ರದೇಶ ಭೇಟಿ ವಿರೋಧಿಸಿದ್ದ ಚೀನಾಕ್ಕೆ ಕ್ಯಾರೇ ಎನ್ನದ ಕೇಂದ್ರ ಸರ್ಕಾರ, ” ಅರುಣಾಚಲಪ್ರದೇಶವು ಭಾರತದ ಅವಿಭಾಜ್ಯ ಭಾಗ ಹಾಗೂ ಯಾರಿಂದಲೂ ಕಸಿಯಲಾಗದ ಪ್ರದೇಶ. ನಮ್ಮ ಈ ದೃಢ ನಿಲುವನ್ನು ಹಲವು ಸಂದರ್ಭಗಳಲ್ಲಿ ಚೀನಾಕ್ಕೆ ತಿಳಿಸಲಾಗಿದೆ. ಭಾರತದ ನಾಯಕರು ದೇಶದ ಇತರೆ ಪ್ರದೇಶಗಳಿಗೆ ಭೇಟಿ ನೀಡುವಂತೆಯೇ ಅರುಣಾಚಲ ಪ್ರದೇಶಕ್ಕೂ ನಿಯಮಿತವಾಗಿ ಭೇಟಿ ನೀಡುತ್ತಾರೆ,” ಎಂದು ತಿರುಗೇಟು ನೀಡಿದೆ.

ಅರುಣಾಚಲಪ್ರದೇಶಕ್ಕೆ ಭೇಟಿ ನೀಡಿದ್ದ ಮೋದಿ ಅವರು, 4,000 ಕೋಟಿ ರೂಪಾಯಿಗಳ ಯೋಜನೆಗಳಿಗೆ ಅಡಿಗಲ್ಲು ಹಾಕಿದರು. ಇದೇ ವೇಳೆ ಮಾತನಾಡಿದ ಅವರು, ” ರಾಜ್ಯದ ಸಂಪರ್ಕ ವೃದ್ಧಿ ಮಾಡಲು ಕೇಂದ್ರ ಸರ್ಕಾರ ಪ್ರಾಮುಖ್ಯತೆ ನೀಡುತ್ತದೆ,” ಎಂದು ಹೇಳಿದರು.

ಇನ್ನು ಮೋದಿ ಭೇಟಿಯ ಹಿನ್ನೆಲೆಯಲ್ಲಿಯೇ ಪ್ರತಿಕ್ರಿಯೆ ನೀಡಿರುವ ಚೀನಾ , ” ಗಡಿ ರಾಜ್ಯದ ಸೂಕ್ಷ್ಮತೆಯನ್ನು ಭಾರತ ಪರಿಗಣಿಸಿಯೇ ಇಲ್ಲ. ಗಡಿ ಪ್ರಶ್ನೆ ಉದ್ಭವಿಸುವಂಥ ಯಾವುದೇ ಚಟುವಟಿಕೆಗಳನ್ನು ಭಾರತ ಪ್ರೋತ್ಸಾಹಿಸಬಾರದು. ಸಿನೊ-ಭಾರತ ಗಡಿ ವಿಚಾರದಲ್ಲಿ ನಮ್ಮ ನಿಲುವು ಈಗಾಗಲೇ ಸ್ಪಷ್ಟವಾಗಿದೆ. ಆ ಪ್ರದೇಶವನ್ನು ಅರುಣಾಚಲಪ್ರದೇಶ ಎಂದು ಕರೆಯುವುದನ್ನು ನಾವು ಯಾವತ್ತೂ ಒಪ್ಪವುದಿಲ್ಲ. ಸಿನೊ-ಭಾರತ ಗಡಿ ಪ್ರದೇಶದ ಪೂರ್ವ ಭಾಗದಲ್ಲಿ ಭಾರತದ ನಾಯಕರ ಚಟುವಟಿಕೆಗಳನ್ನು ನಾವು ಸಹಿಸುವುದಿಲ್ಲ ,” ಎಂದು ಚೀನಾ ವಿದೇಶಾಂಗ ಇಲಾಖೆ ತಿಳಿಸಿದೆ.

ಭಾರತದ ಯಾವುದೇ ನಾಯಕರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವುದನ್ನು ನಿರಂತರವಾಗಿ ವಿರೋಧಿಸುತ್ತಲೇ ಬಂದಿರುವ ಚೀನಾ, ಗಡಿ ರಾಜ್ಯವನ್ನು ದಕ್ಷಿಣ ಟಿಬೆಟ್​ನ ಭಾಗ ಎಂದು ಹೇಳಿಕೊಂಡಿದೆ. ಅಲ್ಲದೆ, ಈ ರಾಜ್ಯದ ಭೂ ಪ್ರದೇಶ ತನ್ನದೆಂದು ವಾದಿಸುತ್ತಿದೆ.