ರೋಹಿತ್​, ಧವನ್​ ಆಕರ್ಷಕ ಶತಕ: ಪಾಕ್​ ವಿರುದ್ಧ 9 ವಿಕೆಟ್​ಗಳ ಭರ್ಜರಿ ಜಯ

ದುಬೈ: ಆರಂಭಿಕ ಆಟಗಾರರಾದ ರೋಹಿತ್​ ಶರ್ಮಾ (111*) ಮತ್ತು ಶಿಖರ್​ ಧವನ್​ (114) ಗಳಿಸಿದ ಆಕರ್ಷಕ ಶತಕಗಳ ನೆರವಿನಿಂದ ಭಾರತ ತಂಡ ಪಾಕಿಸ್ತಾನದ ವಿರುದ್ಧ 9 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿದೆ.

ಪಾಕಿಸ್ತಾನ ನೀಡಿದ 238 ರನ್​ ಗುರಿಯನ್ನು ಭಾರತ ತಂಡ 39.3 ಓವರ್​ಗಳಲ್ಲಿ 1 ವಿಕೆಟ್​ ಕಳೆದುಕೊಂಡು 238 ರನ್​ ಗಳಿಸುವ ಮೂಲಕ ತಲುಪಿತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್​ ಮತ್ತು ಧವನ್​ ಮೊದಲ ವಿಕೆಟ್​ಗೆ 210 ರನ್​ ಕಲೆ ಹಾಕಿದರು.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಪಾಕಿಸ್ತಾನ 50 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 237 ರನ್​ ಗಳಿಸಿತ್ತು. ಪಾಕಿಸ್ತಾನದ ಪರ ಶೋಯೆಬ್​ ಮಲಿಕ್​ 78, ಸರ್ಫರಾಜ್​ ಅಹಮದ್​ 44, ಫಖರ್​ ಜಮಾನ್​ 31 ಮತ್ತು ಆಸಿಫ್​ ಅಲಿ 30 ರನ್​ ಗಳಿಸಿ ತಂಡದ ಮೊತ್ತ 200 ರ ಗಡಿ ದಾಟಿಸಿದರು. ಭಾರತದ ಪರ ಬೂಮ್ರಾ, ಚಹಾಲ್​ ಮತ್ತು ಕುಲ್​ದೀಪ್​ ಯಾದವ್​ ತಲಾ 2 ವಿಕೆಟ್​ ಪಡೆದರು.

ಭಾರತ ತಂಡ ಸೆಪ್ಟೆಂಬರ್​ 25 ರಂದು ಆಫ್ಘಾನಿಸ್ತಾನ ತಂಡದ ವಿರುದ್ಧ ಮುಂದಿನ ಪಂದ್ಯವಾಡಲಿದೆ.