ಕಿವೀಸ್​ನಲ್ಲೂ ಭಾರತ ಕನಸಿನ ಓಟ

ನೇಪಿಯರ್: ‘ಕುಲ್​ಚಾ’ ಖ್ಯಾತಿಯ ರಿಸ್ಟ್ ಸ್ಪಿನ್ ಜೋಡಿ ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಚಾಹಲ್​ರ ಅಮೋಘ ನಿರ್ವಹಣೆಯೊಂದಿಗೆ ವೇಗಿ ಮೊಹಮದ್ ಶಮಿ ಮಾರಕ ದಾಳಿಯ ಬಲ ಪಡೆದ ಭಾರತ ತಂಡ ಆತಿಥೇಯ ನ್ಯೂಜಿಲೆಂಡ್ ತಂಡವನ್ನು ಮೊದಲ ಏಕದಿನ ಪಂದ್ಯದಲ್ಲಿ ಡಿಎಲ್​ಎಸ್ ನಿಯಮದ ಅನ್ವಯ 8 ವಿಕೆಟ್​ಗಳಿಂದ ಮಣಿಸಿದೆ. ನ್ಯೂಜಿಲೆಂಡ್ ತಂಡದ ಅಗ್ರ ಕ್ರಮಾಂಕದ ಆಟಗಾರರನ್ನು ಶಮಿ ಪೆವಿಲಿಯನ್​ಗೆ ಅಟ್ಟಿದರೆ, ಚಾಹಲ್ ಮಧ್ಯಮ ಕ್ರಮಾಂಕದ 2 ಪ್ರಮುಖ ವಿಕೆಟ್ ಉರುಳಿಸಿದರು. ಬಾಲಂಗೋಚಿಗಳನ್ನು ಕುಲದೀಪ್ ಕಟ್ಟಿಹಾಕುವ ಮೂಲಕ ಭಾರತ ತಂಡದ ಶಿಸ್ತಿನ ಗೆಲುವಿಗೆ ಕಾರಣರಾದರು. ಈ ಮೂಲಕ ಆಸ್ಟ್ರೇಲಿಯಾ ಪ್ರವಾಸದ ಕನಸಿನ ಓಟವನ್ನು ಭಾರತ, ಕಿವೀಸ್ ನೆಲದಲ್ಲೂ ಮುಂದುವರಿಸುವ ನಿಟ್ಟಿನಲ್ಲಿ ಶುಭಾರಂಭ ಕಂಡಿದೆ.

ಮೆಕ್​ಲೀನ್ ಪಾರ್ಕ್ ಮೈದಾನದಲ್ಲಿ ಬುಧವಾರ ನಡೆದ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿತು. ಭಾರತದ ಬಿಗಿದಾಳಿಗೆ ಮಂಡಿಯೂರಿದ ಆತಿಥೇಯ ತಂಡ 157 ರನ್​ಗೆ ಆಲೌಟ್ ಆಯಿತು. ಪ್ರತಿಯಾಗಿ ಶಿಖರ್ ಧವನ್ (75*ರನ್, 103 ಎಸೆತ, 6 ಬೌಂಡರಿ) ಅರ್ಧಶತಕದ ನೆರವಿನಿಂದ ಭಾರತ ತಂಡ 35 ಓವರ್​ಗಳಲ್ಲಿಯೇ 2 ವಿಕೆಟ್​ಗೆ 156 ರನ್ ಬಾರಿಸಿ ಗೆಲುವು ಸಾಧಿಸಿತು. ಭಾರತದ ಚೇಸಿಂಗ್​ನ 10ನೇ ಓವರ್​ನ ವೇಳೆ ಸೂರ್ಯನ ಅಡ್ಡಿಯಿಂದಾಗಿ ಪಂದ್ಯ ಅರ್ಧಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡಿತು. ಆ ನಂತರ ಭಾರತ ತಂಡಕ್ಕೆ 49 ಓವರ್​ಗಳಲ್ಲಿ 156 ರನ್ ಬಾರಿಸುವ ಪರಿಷ್ಕೃತ ಸವಾಲು ನೀಡಲಾಗಿತ್ತು.

ಕಿವೀಸ್​ಗೆ ಕಡಿವಾಣ: 4ನೇ ಓವರ್ ವೇಳೆಗಾಗಲೆ ನ್ಯೂಜಿಲೆಂಡ್ ತಂಡದ ಅನುಭವಿ ಆರಂಭಿಕರಾದ ಮಾರ್ಟಿನ್ ಗುಪ್ಟಿಲ್ (5) ಹಾಗೂ ಕಾಲಿನ್ ಮುನ್ರೊ (8) ವಿಕೆಟ್ ಉರುಳಿಸುವ ಮೂಲಕ ಶಮಿ ಉತ್ತಮ ಆರಂಭ ದೊರಕಿಸಿಕೊಟ್ಟಿದ್ದರು. ಬಳಿಕ ತಂಡವನ್ನು ಆಧರಿಸಿದ ನಾಯಕ ಕೇನ್ ವಿಲಿಯಮ್ಸನ್ (64ರನ್, 81 ಎಸೆತ, 7 ಬೌಂಡರಿ) ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ನೆರವಾದರು. ಬಳಿಕ, ಲಂಕಾ ವಿರುದ್ಧ ಸತತ 3 ಪಂದ್ಯಗಳಲ್ಲಿ 300ಕ್ಕೂ ಅಧಿಕ ಮೊತ್ತ ದಾಖಲಿಸಿದ್ದ ಕಿವೀಸ್​ಗೆ ಕುಲದೀಪ್-ಚಾಹಲ್ ಜೋಡಿಗೆ ನಿರೀಕ್ಷೆಗೂ ಮೀರಿದಂಥ ಸವಾಲು ಒಡ್ಡಿದರು. ಕಳೆದ ಆರು ಇನಿಂಗ್ಸ್​ಗಳಲ್ಲಿ 6 ಅರ್ಧಶತಕ ಬಾರಿಸಿದ್ದ ರಾಸ್ ಟೇಲರ್​ರನ್ನು (24) ಚಾಹಲ್ ತಾವೆಸೆದ ಮೊದಲ ಓವರ್​ನಲ್ಲಿಯೇ ಬಲಿ ಪಡೆದರು. ಬೆನ್ನಲ್ಲಿಯೇ ಟಾಮ್ ಲಾಥಮ್ ಕೂಡ ನಿರ್ಗಮಿಸಿದರು. ಕೊನೇ ನಾಲ್ಕೂ ವಿಕೆಟ್ ಉರುಳಿಸುವ ಮೂಲಕ 157 ರನ್​ಗೆ ಕಿವೀಸ್ ತಂಡವನ್ನು ಕಟ್ಟಿಹಾಕಲು ಕುಲದೀಪ್ ನೆರವಾದರು.

ಟೀಮ್ ಇಂಡಿಯಾ ಎಚ್ಚರಿಕೆಯ ಚೇಸಿಂಗ್

ಭೋಜನ ವಿರಾಮಕ್ಕೂ ಮುನ್ನ 9 ಓವರ್ ಆಟವಾಡಿದ ಭಾರತಕ್ಕೆ ಶಿಖರ್ ಧವನ್ ಹಾಗೂ ರೋಹಿತ್ ಶರ್ಮ (11) ಎಚ್ಚರಿಕೆಯ ಆರಂಭ ನೀಡಿದರು. ಅಗ್ರ ವೇಗಿಗಳಾದ ಟ್ರೆಂಟ್ ಬೌಲ್ಟ್ ಹಾಗೂ ಟಿಮ್ ಸೌಥಿ ಎಸೆತಗಳು ಸ್ವಿಂಗ್ ಆಗುತ್ತಿದ್ದ ಕಾರಣ ಭಾರತ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿತು. ವಿರಾಮದ ಬಳಿಕ ರೋಹಿತ್ ಶರ್ಮ, ಡಗ್ ಬ್ರೇಸ್​ವೆಲ್ ಎಸೆತದಲ್ಲಿ ಮೊದಲ ಸ್ಲಿಪ್​ನಲ್ಲಿ ಕ್ಯಾಚ್ ನೀಡಿದರು. ಬಳಿಕ ಸೂರ್ಯನ ಅಡ್ಡಿಯಿಂದಾಗಿ ಒಂದು ಓವರ್ ಹಾಗೂ ಚೇಸಿಂಗ್​ನ ಒಂದು ರನ್ ಕಡಿತಗೊಂಡಿತು. ನಾಯಕ ವಿರಾಟ್ ಕೊಹ್ಲಿ (45 ರನ್, 59 ಎಸೆತ, 3 ಬೌಂಡರಿ) 2ನೇ ವಿಕೆಟ್​ಗೆ 91 ರನ್ ಜತೆಯಾಟವಾಡಿದ ಶಿಖರ್ ಧವನ್, ಏಕದಿನ ಕ್ರಿಕೆಟ್​ನಲ್ಲಿ 5 ಸಾವಿರ ರನ್​ಅನ್ನೂ ಪೂರೈಸಿದರು. ಅರ್ಧಶತಕದಿಂದ ಐದು ರನ್ ಹಾಗೂ ಗೆಲುವಿನಿಂದ 24 ರನ್ ದೂರವಿದ್ದಾಗ ವಿರಾಟ್ ಕೊಹ್ಲಿ, ಫರ್ಗ್ಯೂಸನ್ ಎಸೆತದಲ್ಲಿ ಔಟ್ ಆದರು. ಬಳಿಕ ಧವನ್​ಗೆ ಜತೆಯಾದ ಅಂಬಟಿ ರಾಯುಡು (13) ಜಯದ ಔಪಚಾರಿಕತೆಯನ್ನು ಪೂರ್ಣಗೊಳಿಸಿದರು. 69 ಎಸೆತಗಳಲ್ಲಿ 26ನೇ ಅರ್ಧಶತಕ ಪೂರೈಸಿದ ಧವನ್, 103 ನಿಮಿಷಗಳ ಕಾಲ ಕ್ರೀಸ್​ನಲ್ಲಿದ್ದು ಚೇಸಿಂಗ್ ಸುಗಮವಾಗಿಸಿದರು.

ಪಂದ್ಯಕ್ಕೆ ಅಡಚಣೆ ತಂದ ಸೂರ್ಯ!

ಮಳೆ, ಮಂದಬೆಳಕು, ಇಬ್ಬನಿಯಿಂದಾಗಿ ಕ್ರಿಕೆಟ್ ಪಂದ್ಯಕ್ಕೆ ಅಡ್ಡಿಯಾಗುವುದು ಸಾಮಾನ್ಯ. ಆದರೆ, ನೇಪಿಯರ್ ಏಕದಿನ ಪಂದ್ಯಕ್ಕೆ ಸೂರ್ಯನಿಂದ ಅಡ್ಡಿಯಾಯಿತು. ಭಾರತದ ಚೇಸಿಂಗ್​ನ ವೇಳೆ 10 ಓವರ್ ಆಗಿದ್ದಾಗ ಸೂರ್ಯನ ಕಿರಣ ಬ್ಯಾಟಿಂಗ್​ಗೆ ಅಡ್ಡಿಪಡಿಸಿತು. ಮೆಕ್​ಲೀನ್ ಪಾರ್ಕ್​ನಲ್ಲಿ ಸೂರ್ಯ ಮುಳುಗುವ ವೇಳೆ, ಸೂರ್ಯನ ಕಿರಣಗಳು ನೇರವಾಗಿ ಬ್ಯಾಟ್ಸ್​ಮನ್ ಕಣ್ಣಿಗೆ ಬೀಳುತ್ತವೆ. ಇದರಿಂದ ಬ್ಯಾಟಿಂಗ್ ಮಾಡಲು ಕಷ್ಟವಾಗುವ ಕಾರಣ ಅರ್ಧಗಂಟೆ ಕಾಲ ಆಟ ಸ್ಥಗಿತಗೊಂಡಿತ್ತು. ವಿಶ್ವದ ಎಲ್ಲ ಕ್ರಿಕೆಟ್ ಮೈದಾನಗಳಲ್ಲಿ ಉತ್ತರದಿಂದ ದಕ್ಷಿಣಕ್ಕೆ ಕ್ರಿಕೆಟ್ ಪಿಚ್ ಇದ್ದರೆ, ಮೆಕ್​ಲೀನ್ ಪಾರ್ಕ್​ನಲ್ಲಿ ಮಾತ್ರ ಪೂರ್ವದಿಂದ ಪಶ್ಚಿಮಕ್ಕೆ ಪಿಚ್ ನಿರ್ವಣವಾಗಿದೆ. ಇದು ಸಮಸ್ಯೆಗೆ ಕಾರಣವಾಗಿದೆ.

ಶಮಿ ಅತಿವೇಗದ 100 ವಿಕೆಟ್

ವೇಗಿ ಮೊಹಮದ್ ಶಮಿ ಏಕದಿನ ಕ್ರಿಕೆಟ್ ನಲ್ಲಿ ಅತಿವೇಗವಾಗಿ 100 ವಿಕೆಟ್ ಗಡಿ ಮುಟ್ಟಿದ ಭಾರತದ ಬೌಲರ್ ಎನಿಸಿದರು. ಶಮಿ 56 ಪಂದ್ಯಗಳಲ್ಲಿ ಈ ಸಾಧನೆ ಮಾಡುವ ಮೂಲಕ 59ನೇ ಪಂದ್ಯದಲ್ಲಿ 100 ವಿಕೆಟ್ ಸಾಧನೆ ಮಾಡಿದ್ದ ಇರ್ಫಾನ್ ಪಠಾಣ್ ದಾಖಲೆ ಮುರಿದರು. ವಿಶ್ವದಲ್ಲಿ ಅತಿವೇಗವಾಗಿ 100 ವಿಕೆಟ್ ಉರುಳಿಸಿದ ಜಂಟಿ 6ನೇ ಬೌಲರ್ ಶಮಿ. ಕಿವೀಸ್​ನ ಟ್ರೆಂಟ್ ಬೌಲ್ಟ್ ಕೂಡ 56ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು. ರಶೀದ್ ಖಾನ್ (44 ಪಂದ್ಯ), ಮಿಚೆಲ್ ಸ್ಟಾರ್ಕ್ (52), ಸಕ್ಲೇನ್ ಮುಷ್ತಾಕ್ (53), ಶೇನ್ ಬಾಂಡ್ (54) ಹಾಗೂ ಬ್ರೆಟ್ ಲೀ (55) ಮೇಲಿನ ಸ್ಥಾನದಲ್ಲಿದ್ದಾರೆ.