ಟಿ20 ವಿಶ್ವಕಪ್​ ಸೆಮಿ ಫೈನಲ್​ನಲ್ಲಿ ಮುಗ್ಗರಿಸಿದ ಭಾರತದ ವನಿತೆಯರು, ಫೈನಲ್​ ಪ್ರವೇಶಿಸಿದ ಇಂಗ್ಲೆಂಡ್

ನಾರ್ತ್​ಸೌಂಡ್​: ಮಹಿಳೆಯರ ಆರನೇ ಆವೃತ್ತಿಯ ಟಿ20 ವಿಶ್ವಕಪ್​ನ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ, ಭಾರತದ ವಿರುದ್ಧ 8 ವಿಕೆಟ್​ಗಳ ಗೆಲುವು ಸಾಧಿಸಿದ್ದಾರೆ.

ಆಂಟಿಗುವಾದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ, 112 ರನ್​ಗೆ ತನ್ನೆಲ್ಲ ವಿಕೆಟ್​ ಒಪ್ಪಿಸಿತ್ತು. ಭಾರತ ನೀಡಿದ್ದ 112 ರನ್​ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್​ 17.1 ಓವರ್‌ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 116 ರನ್​ ಗಳಿಸಿ ಗೆಲುವಿನ ದಡ ಸೇರಿತು.

ಇಂಗ್ಲೆಂಡ್​ ಆರಂಭಿಕ ಆಟಗಾರ್ತಿ ಡೇನಿಯಲ್​ ವ್ಯಾಟ್(8), ಟಾಮಿ ಬ್ಯುಮೌಂಟ್​ ಒಂದು ರನ್​ ಗಳಿಸಿ ಆರಂಭದಲ್ಲೇ ಪೆವಿಲಿಯನ್​ ಕಡೆ ಮುಖ ಮಾಡಿದ್ದರು. ನಂತರ ಬಂದ ಆ್ಯಮಿ ಎಲೆನ್​ ಜೋನ್ಸ್ 51 ರನ್​ ಮತ್ತು ಸ್ಕೇವಿಯರ್ 54 ರನ್​ಗಳ ಜತೆಯಾಟದೊಂದಿಗೆ ತಂಡಕ್ಕೆ ಭರ್ಜರಿ ಗೆಲುವು ತಂದು ಕೊಟ್ಟು ಫೈನಲ್​ ಪ್ರವೇಶಿಸಿದ್ದಾರೆ.

ಭಾರತದ ದೀಪ್ತಿ ಶರ್ಮಾ, ಯಾದವ್​ ತಲಾ ಒಂದೊಂದು ವಿಕೆಟ್​ ಪಡೆದರು.

ಮೊದಲು ಬ್ಯಾಟಿಂಗ್​ ಮಾಡಿದ್ದ ಭಾರತ ತಂಡದ ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂದಾನಾ 34 ಮತ್ತು ತಾನಿಯಾ ಭಾಟಿಯಾ 11 ರನ್​ಗಳ ಜತೆಯಾಟ ಆಡಿದ್ದರು. ನಂತರ ಬಂದ ಜೆಮಿಮಾ 26 ರನ್​ ಗಳಿಸಿ ರನ್​ ಔಟ್​ ಆದರೆ ತಂಡದ ನಾಯಕ ಹರ್ಮನ್​ ಪ್ರೀತ್​ ಕೌರ್​ 16, ವೇದ ಕೃಷ್ಣಮೂರ್ತಿ 2, ದೀಪ್ತಿ ಶರ್ಮಾ 7, ಹೇಮಲತಾ 1 ಗಳಿಸಿದ್ದರೆ ಅನುಜಾ ಪಾಟೀಲ್​ ಶೂನ್ಯಕ್ಕೆ ನಿರ್ಗಮಿಸಿದರು. ನಂತರ ಬಂದ ರಾಧಾ ಯಾದವ್​ 4, ಅರುಂದತಿ ರೆಡ್ಡಿ 6 ರನ್​ ಗಳಿಸಿ 19.3 ಓವರ್​ಗಳಿಗೆ ಆಲ್​ ಔಟ್​ ಆದರು. (ಏಜೆನ್ಸೀಸ್)

ಭಾರತ-ಇಂಗ್ಲೆಂಡ್ ಸೆಮೀಸ್ ಸೆಣಸಾಟಕ್ಕೆ ವೇದಿಕೆ ಸಜ್ಜು