ಬಾಕ್ಸಿಂಗ್​ ಡೇ ಟೆಸ್ಟ್​: ಗೆಲುವಿನ ಹೊಸ್ತಿಲಲ್ಲಿ ಭಾರತ

ಮೆಲ್ಬೋರ್ನ್​: ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ 3ನೇ ಟೆಸ್ಟ್​ಪಂದ್ಯದಲ್ಲಿ ಭಾರತ ಗೆಲುವಿನ ಸನಿಹದಲ್ಲಿದ್ದು, ಆಸ್ಟ್ರೇಲಿಯಾದ ಇನ್ನೆರಡು ವಿಕೆಟ್​ ಪಡೆಯಬೇಕಿದೆ. ಭಾರತ ತಂಡ ಮೂರನೇ ಟೆಸ್ಟ್​ನಲ್ಲಿ ಗೆಲುವು ಸಾಧಿಸಿದರೆ ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಲಿದೆ.

399 ರನ್​ಗಳ ಗುರಿ ಪಡೆದ ಆಸ್ಟ್ರೇಲಿಯಾ ತಂಡ ನಾಲ್ಕನೇ ದಿನದಂತ್ಯಕ್ಕೆ 85 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 258 ರನ್​ ಗಳಿಸಿದ್ದು, ಪಂದ್ಯದಲ್ಲಿ ಗೆಲುವು ಸಾಧಿಸಲು ಇನ್ನೂ 141 ರನ್​ ಗಳಿಸಬೇಕಿದೆ. ಆಸ್ಟ್ರೇಲಿಯಾ ಪರ ಪಾಟ್​ ಕಮ್ಮಿನ್ಸ್​ 61* ರನ್​ ಗಳಿಸಿದ್ದು, ನಾಲ್ಕನೇ ದಿನವೇ ಗೆಲುವು ಸಾಧಿಸಬೇಕೆಂಬ ಭಾರತದ ಕನಸಿಗೆ ತಡೆಯಾಗಿದ್ದಾರೆ.

ಕಮ್ಮಿನ್ಸ್​ ಹೊರತುಪಡಿಸಿ ಶಾನ್​ ಮಾರ್ಷ್​ 44, ಟ್ರಾವಿಸ್​ ಹೆಡ್​ 34 ರನ್​ ಗಳಿಸಿದರು. ಭಾರತದ ಪರ ರವೀಂದ್ರ ಜಡೇಜಾ 82 ಕ್ಕೆ 3 ಮತ್ತು ಜಸ್​ಪ್ರೀತ್​ ಬುಮ್ರಾ 53 ಕ್ಕೆ 2, ಮೊಹಮ್ಮದ್​ ಶಮಿ 71 ಕ್ಕೆ 2 ವಿಕೆಟ್​ ಪಡೆದಿದ್ದಾರೆ.

ಮೂರನೇ ದಿನದಂತ್ಯಕ್ಕೆ 5 ವಿಕೆಟ್​ ನಷ್ಟಕ್ಕೆ 54 ರನ್​ ಗಳಿಸಿದ್ದ ಭಾರತ ತಂಡ ನಾಲ್ಕನೇ ದಿನದ ಮೊದಲ ಅವಧಿಯಲ್ಲಿ 8 ವಿಕೆಟ್​ ನಷ್ಟಕ್ಕೆ 106 ರನ್​ ಗಳಿಸಿ ಡಿಕ್ಲೇರ್​ ಮಾಡಿಕೊಂಡಿತು. ಭಾರತದ ಪರ ಮಯಾಂಕ್​ ಅಗರ್ವಾಲ್​ 42 ರನ್​ ಗಳಿಸಿರೆ, ಆಸ್ಟ್ರೇಲಿಯಾ ಪರ ಪ್ರಭಾವಿ ಬೌಲಿಂಗ್​ ದಾಳಿ ನಡೆಸಿದ ಕಮ್ಮಿನ್ಸ್​ 27 ರನ್​ ನೀಡಿ 6 ವಿಕೆಟ್​ ಪಡೆದರು. (ಏಜೆನ್ಸೀಸ್​)