ತೈಲಾಘಾತದಿಂದ ಮುಕ್ತಿ?

ನವದೆಹಲಿ: ಇರಾನ್ ತೈಲ ಆಮದು ನಿರ್ಬಂಧದಿಂದ ವಿನಾಯಿತಿ ಸಿಕ್ಕಿರುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಸರ್ಕಾರಕ್ಕೆ 2019ರ ಲೋಕಸಭಾ ಚುನಾವಣೆ ವರೆಗೂ ನಿರಾಳವಾಗಿರಲಿದೆ. ನವೆಂಬರ್​ನಿಂದ 2019ರ ಮೇ ಮೊದಲ ವಾರದವರೆಗೂ ಭಾರತಕ್ಕೆ ವಿನಾಯಿತಿ ಸಿಕ್ಕಿದೆ. ಮಾರ್ಚ್ ಬಳಿಕ ಲೋಕಸಭಾ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದೆ. ಹೀಗಾಗಿ ಅಲ್ಲಿಯ ವರೆಗೆ ತೈಲ ಆಮದು ಸುಗಮವಾಗಲಿದೆ. ಇರಾನ್ ಜತೆ ರೂಪಾಯಿಯಲ್ಲೇ ವ್ಯವಹಾರ ನಡೆಸಲು ಉದ್ದೇಶಿಸಿರುವ ಕಾರಣ, ಅಮೆರಿಕ ಡಾಲರ್​ನಲ್ಲಿ ಏರಿಕೆಯಾದರೂ ಇಂಧನ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸ ಉಂಟಾಗುವುದಿಲ್ಲ.

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಸತತ ಏರಿಕೆಯಾದ ಕಾರಣ ಪ್ರತಿಪಕ್ಷಗಳು ಎನ್​ಡಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಮೋದಿ ಸರ್ಕಾರಕ್ಕೆ ಇದು ಬಿಸಿತುಪ್ಪವಾಗಿ ಪರಿಣಮಿಸಿತ್ತು. ಬೆಲೆ ಏರಿಕೆ ಇನ್ನೂ ಕೆಲ ತಿಂಗಳು ಮುಂದುವರಿದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಎನ್​ಡಿಎಗೆ ಭಾರಿ ಹಿನ್ನಡೆ ಉಂಟಾಗುವ ಸಾಧ್ಯತೆಯಿತ್ತು. ಆದರೆ ಇರಾನ್ ತೈಲ ಆಮದಿನಿಂದಾಗಿ ಇನ್ನು ತೈಲ ಬೆಲೆಯಲ್ಲಿ ಏರಿಕೆ ಸಾಧ್ಯತೆ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ತಿಂಗಳು ಪೆಟ್ರೋಲ್ ಬೆಲೆ ಪ್ರತಿ ಲೀಟರ್​ಗೆಒಟ್ಟಾರೆ 6.86 ರೂ. ಏರಿಕೆಯಾಗಿತ್ತು. ಪಂಚರಾಜ್ಯ ವಿಧಾನಸಭೆ ಚುನಾವಣೆ ಸಜ್ಜಾಗುತ್ತಿರುವ ಬಿಜೆಪಿಗೆ ಇದು ಸಂಕಷ್ಟ ತಂದಿತ್ತು. ಜನಾಕ್ರೋಶದಿಂದ ಪಾರಾಗಲು ಕೇಂದ್ರ ಸರ್ಕಾರ 2.5 ರೂ. ಸುಂಕ ಕಡಿತ ಮಾಡಿತ್ತು.

ಯುಕೊ-ಪಸಾರ್​ಗಾಡ್ ವಹಿವಾಟು

ರೂಪಾಯಿ ಆಧಾರಿತ ವಹಿವಾಟು ನಡೆಸಲು ಇರಾನ್ ಮೂಲದ ಪಸಾರ್​ಗಾಡ್ ಮತ್ತು ಭಾರತದ ಯುಕೊ ಬ್ಯಾಂಕ್ ಒಪ್ಪಂದ ಮಾಡಿಕೊಂಡು ವಹಿವಾಟಿಗೆ ಪ್ರತ್ಯೇಕ ವ್ಯವಸ್ಥೆ ರಚಿಸಿಕೊಂಡಿವೆ. ಮಾರ್ಚ್​ವರೆಗೆ ಒಟ್ಟು 12.5 ಕೋಟಿ ಟನ್ ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ತೈಲ ಮಾರಾಟ ಕಂಪನಿಗಳು ಇರಾನ್​ನ ಪಸಾರ್​ಗಾಡ್ ಬ್ಯಾಂಕ್ ಭಾರತದಲ್ಲಿ ತೆರೆದಿರುವ ಸ್ಥಳೀಯ ಶಾಖೆಯಲ್ಲಿಯೇ ಪಾವತಿ ಮಾಡಲಿವೆ. ಈ ಹಣದ ಬದಲಿಗೆ ಇರಾನ್ , ಆಹಾರ ಉತ್ಪನ್ನಗಳು, ಔಷಧಗಳು , ಆಟೋಮೊಬೈಲ್ ಉತ್ಪನ್ನಗಳನ್ನು ಭಾರತದಿಂದ ಆಮದು ಮಾಡಿಕೊಳ್ಳಲಿದೆ. ಇದರಿಂದಾಗಿ ಭಾರತದಲ್ಲಿ ಈ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳಿಗೂ ಆದಾಯ ಹೆಚ್ಚಲಿದೆ.

ಅಧಿಕೃತವಾಗಿ ಜಾರಿ

ಭಾರತ, ಚೀನಾ, ಜಪಾನ್ ಸೇರಿ 8 ರಾಷ್ಟ್ರಗಳಿಗೆ ಇರಾನ್​ನಿಂದ ತೈಲ ಆಮದಿಗೆ ತಾತ್ಕಾಲಿಕ ಅವಕಾಶ ನೀಡಲಾಗಿದೆ ಎಂದು ಅಮೆರಿಕ ಸ್ಟೇಟ್ ಸೆಕ್ರೆಟರಿ ಮೈಕ್ ಪಾಂಪಿಯೊ ಘೋಷಿಸಿದ್ದಾರೆ. ಇಟಲಿ, ಗ್ರೀಸ್, ದಕ್ಷಿಣ ಕೊರಿಯಾ, ತೈವಾನ್ ಮತ್ತು ಟರ್ಕಿ, ತೈಲ ಆಮದಿಗೆ ವಿನಾಯಿತಿ ಪಡೆದಿರುವ ಇತರ ರಾಷ್ಟ್ರಗಳು. ಸೋಮವಾರದಿಂದ ನಿರ್ಬಂಧ ಅಧಿಕೃತವಾಗಿ ಜಾರಿಗೆ ಬಂದಿವೆ.