ಭಾರತಕ್ಕೆ ಸುಲಭ ತುತ್ತಾದ ವೆಸ್ಟ್ ಇಂಡೀಸ್

ಹೈದರಾಬಾದ್: ಭಾರತದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮತ್ತೊಂದು ಟೆಸ್ಟ್ ಮೂರೇ ದಿನಗಳಲ್ಲಿ ಮುಕ್ತಾಯ ಕಂಡಿತು. ರಾಜ್​ಕೋಟ್​ನಲ್ಲಿ ನಡೆದ ಮೊದಲ ಟೆಸ್ಟ್​ಗೆ ಹೋಲಿಸಿದಲ್ಲಿ, 2ನೇ ಟೆಸ್ಟ್​ನಲ್ಲಿ ಭಾರತ ತಂಡವನ್ನು ಒತ್ತಡಕ್ಕೆ ಸಿಲುಕಿಸುವಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ತಂಡ ಯಶಸ್ವಿಯಾದರೂ, 2ನೇ ಇನಿಂಗ್ಸ್​ನಲ್ಲಿ ಪ್ರವಾಸಿ ತಂಡದ ಬ್ಯಾಟಿಂಗ್ ವೈಫಲ್ಯ ಮೂರೇ ದಿನಕ್ಕೆ ಪಂದ್ಯ ಮುಕ್ತಾಯವಾಗುವಂತೆ ಮಾಡಿತು. ಉಮೇಶ್ ಯಾದವ್ ಟೆಸ್ಟ್ ಕ್ರಿಕೆಟ್​ನಲ್ಲಿ ಮೊಟ್ಟಮೊದಲ ಬಾರಿಗೆ ಪಂದ್ಯದಲ್ಲಿ 10 ವಿಕೆಟ್ ಸಾಧನೆ ಮಾಡಿದ ಸಾಹಸದೊಂದಿಗೆ ಭಾರತ ತಂಡ ಹೈದರಾಬಾದ್ ಟೆಸ್ಟ್​ನಲ್ಲಿ 10 ವಿಕೆಟ್ ಜಯ ಸಾಧಿಸಿ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 2-0ಯಿಂದ ಗೆದ್ದುಕೊಂಡಿತು.

ಮೊದಲ ಇನಿಂಗ್ಸ್​ನಲ್ಲಿ ದೊಡ್ಡ ಮೊತ್ತದ ಮುನ್ನಡೆ ಪಡೆಯುವ ವಿಶ್ವಾಸದಲ್ಲಿದ್ದ ಭಾರತ ತಂಡವನ್ನು ವೆಸ್ಟ್ ಇಂಡೀಸ್ ತಂಡದ ಬೌಲಿಂಗ್ ವಿಭಾಗ ಕಟ್ಟಿಹಾಕಿದ್ದರಿಂದ ಕೇವಲ 56 ರನ್​ಗಳ ಮುನ್ನಡೆಯನ್ನು ಕೊಹ್ಲಿ ಪಡೆ ಪಡೆದುಕೊಂಡಿತು. ಆದರೆ, ಉಮೇಶ್ ಯಾದವ್ (45ಕ್ಕೆ 4, ಪಂದ್ಯದಲ್ಲಿ 101ಕ್ಕೆ 10) ದಾಳಿಗೆ ಕಂಗಾಲಾದ ವಿಂಡೀಸ್ ಬ್ಯಾಟಿಂಗ್ ವೈಫಲ್ಯ ಎದುರಿಸಿತು. ಪಂದ್ಯದಲ್ಲಿ ಎರಡು ಬಾರಿ ಹ್ಯಾಟ್ರಿಕ್ ಅವಕಾಶ ಹೊಂದಿದ್ದ ಉಮೇಶ್ ಇದನ್ನು ಹಾಳು ಮಾಡಿಕೊಂಡರು. ಹಾಗಿದ್ದರೂ, ತವರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಉರುಳಿಸಿದ ಕೇವಲ 3 ವೇಗದ ಬೌಲರ್ ಎನ್ನುವ ಶ್ರೇಯ ಪಡೆದರು. ಅದಲ್ಲದೆ, ಹಾಲಿ ದಶಕದಲ್ಲಿ ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಕೇವಲ 4ನೇ ವೇಗದ ಬೌಲರ್ ಎನಿಸಿದರು. ಉಮೇಶ್ ಯಾದವ್​ರ ಜೀವನಶ್ರೇಷ್ಠ ನಿರ್ವಹಣೆ ಭಾರತ ತಂಡಕ್ಕೆ ತವರಿನಲ್ಲಿ ಸತತ 10ನೇ ಟೆಸ್ಟ್ ಸರಣಿ ಜಯಕ್ಕೆ ಕಾರಣವಾಯಿತು.

4 ವಿಕೆಟ್​ಗೆ 308 ರನ್​ಗಳಿಂದ 3ನೇ ದಿನವಾದ ಭಾನುವಾರ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ 106.4 ಓವರ್​ಗಳಲ್ಲಿ 367 ರನ್​ಗೆ ಆಲೌಟ್ ಆಯಿತು. ಜೇಸನ್ ಹೋಲ್ಡನ್ (56ಕ್ಕೆ 5) ಹಾಗೂ ಶಾನನ್ ಗ್ಯಾಬ್ರಿಯಲ್ (107ಕ್ಕೆ 3) ಆತಿಥೇಯ ತಂಡ ಮೊದಲ ಇನಿಂಗ್ಸ್​ನಲ್ಲಿ ದೊಡ್ಡ ಮೊತ್ತದ ಮುನ್ನಡೆಯನ್ನು ಕಾಣದಂತೆ ಮಾಡಿದರು. 56 ರನ್​ಗಳ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ 46.1 ಓವರ್​ಗಳಲ್ಲಿ ಕೇವಲ 127 ರನ್​ಗೆ ಆಲೌಟ್ ಆಯಿತು. ಉಮೇಶ್ ಯಾದವ್​ರೊಂದಿಗೆ ರವೀಂದ್ರ ಜಡೇಜಾ (12ಕ್ಕೆ 3), ಆರ್.ಅಶ್ವಿನ್ (24ಕ್ಕೆ 2) ವಿಂಡೀಸ್ ತಂಡದ ಕುಸಿತಕ್ಕೆ ಕಾರಣರಾದರು. ಇದರಿಂದಾಗಿ ಗೆಲುವಿಗೆ 72 ರನ್​ಗಳ ಸರಳ ಗುರಿ ಪಡೆದಿದ್ದ ಭಾರತ ತಂಡ 16.1 ಓವರ್​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 75 ರನ್ ಬಾರಿಸಿ ಜಯ ಕಂಡಿತು. ಸರಣಿಯಲ್ಲಿ ಎರಡಂಕಿ ಮೊತ್ತ ದಾಟಲು ಒದ್ದಾಟ ನಡೆಸಿದ್ದ ಕೆಎಲ್ ರಾಹುಲ್ (33*ರನ್, 53 ಎಸೆತ, 1 ಬೌಂಡರಿ, 1 ಸಿಕ್ಸರ್) ಕೆಲ ಕಾಲ ರಂಜಿಸಿದರೆ, ಯುವ ಆರಂಭಿಕ ಪೃಥ್ವಿ ಷಾ (33*ರನ್, 45 ಎಸೆತ, 4 ಬೌಂಡರಿ) ಭರ್ಜರಿ ಬೌಂಡರಿಗಳನ್ನು ಸಿಡಿಸಿ ಜಯಕ್ಕೆ ಕಾರಣರಾದರು.-ಏಜೆನ್ಸೀಸ್

59 ರನ್ ಕೂಡಿಸಿ ಭಾರತ ಆಲೌಟ್

ಭಾರತದಲ್ಲಿ ನಡೆದ ಟೆಸ್ಟ್​ನಲ್ಲಿ ಅರ್ಧಶತಕ ಹಾಗೂ ಐದು ವಿಕೆಟ್ ಉರುಳಿಸಿದ ಕೇವಲ 10ನೇ ಆಟಗಾರ ಎನಿಸಿಕೊಂಡ ಜೇಸನ್ ಹೋಲ್ಡರ್ ದಿನದ ಆರಂಭದಲ್ಲಿ ಮಿಂಚಿದರು. ಇದರಿಂದಾಗಿ ಟೀಮ್ ಇಂಡಿಯಾ ಕೊನೇ 6 ವಿಕೆಟ್​ಗಳನ್ನು ಕೇವಲ 59 ರನ್​ಗಳ ಅಂತರದಲ್ಲಿ ಕಳೆದುಕೊಂಡಿತು. ಶನಿವಾರದ ಮೊತ್ತಕ್ಕೆ 5 ರನ್ ಸೇರಿಸಿ ಅಜಿಂಕ್ಯ ರಹಾನೆ (80ರನ್, 183 ಎಸೆತ, 7 ಬೌಂಡರಿ) ಔಟಾಗುವುದರೊಂದಿಗೆ 5ನೇ ವಿಕೆಟ್​ನ 152 ರನ್​ಗಳ ಜತೆಯಾಟವೂ ಅಂತ್ಯ ಕಂಡಿತು. ರಹಾನೆ ವಿಕೆಟ್ ಉರುಳಿಸಿದ್ದ ಹೋಲ್ಡರ್ ಮರು ಎಸೆತದಲ್ಲಿಯೇ ರವೀಂದ್ರ ಜಡೇಜಾರನ್ನು ಶೂನ್ಯಕ್ಕೆ ಔಟ್ ಮಾಡಿದರು. ಈ ಮೊತ್ತಕ್ಕೆ 14 ರನ್ ಸೇರಿಸುವ ವೇಳೆಗೆ ರಿಷಭ್ ಪಂತ್ (92ರನ್, 134 ಎಸೆತ, 11 ಬೌಂಡರಿ, 2 ಸಿಕ್ಸರ್) ಕೂಡ ಔಟಾದರು. ಗ್ಯಾಬ್ರಿಯಲ್ ಎಸೆತದಲ್ಲಿ ಹೆಟ್ಮೆಯರ್​ಗೆ ವಿಕೆಟ್ ಒಪ್ಪಿಸಿದರು. ಆ ಮೂಲಕ ಸತತ 2ನೇ ಇನಿಂಗ್ಸ್​ನಲ್ಲಿ ನರ್ವಸ್ ನೈಂಟಿ ನಿರಾಸೆ ಕಂಡರು. ಕುಲದೀಪ್ ಹಾಗೂ ಉಮೇಶ್ ಯಾದವ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕುಲದೀಪ್, ಜೇಸನ್ ಹೋಲ್ಡರ್​ಗೆ 5ನೇ ಬಲಿಯಾದರು. ಕೊನೆಯ ವಿಕೆಟ್​ಗೆ ಆರ್.ಅಶ್ವಿನ್ (35ರನ್, 83 ಎಸೆತ, 4 ಬೌಂಡರಿ) ಹಾಗೂ ಶಾರ್ದೂಲ್ ಠಾಕೂರ್ 28 ರನ್ ಜತೆಯಾಟವಾಡಿದ್ದರಿಂದ ಭಾರತದ ಮುನ್ನಡೆ 50 ರನ್​ಗಳ ಗಡಿ ದಾಟಿತು.

ವಿಂಡೀಸ್ ಬ್ಯಾಟ್ಸ್​ಮನ್​ಗಳ ಪರೇಡ್

ಪಂದ್ಯದಲ್ಲಿ ಇನ್ನಷ್ಟು ಹೋರಾಟ ತೋರುವ ಅವಕಾಶವಿದ್ದರೂ, ವಿಂಡೀಸ್​ನ ಬ್ಯಾಟಿಂಗ್ ವಿಭಾಗದ ದಯನೀಯ ವೈಫಲ್ಯ ಕಂಡಿತು. 6 ರನ್ ಆಗುವ ಮುನ್ನವೇ ಆರಂಭಿಕರಾದ ಕ್ರೇಗ್ ಬ್ರಾಥ್​ವೇಟ್ ಹಾಗೂ ಕೈರಾನ್ ಪಾವೆಲ್ ಶೂನ್ಯಕ್ಕೆ ಪೆವಿಲಿಯನ್ ಸೇರಿದ್ದರು. ಈ ವೇಳೆ ಶೈ ಹೋಪ್ (28) ಹಾಗೂ ಶಿಮ್ರೋನ್ ಹೆಟ್ಮೆಯರ್ (17) ಚೇತರಿಕೆ ನೀಡುವ ಪ್ರಯತ್ನ ಮಾಡಿದರೂ, ಭಾರತದ ಸ್ಪಿನ್ನರ್​ಗಳು ಅವಕಾಶ ನೀಡಲಿಲ್ಲ. ಇವರಿಬ್ಬರ ವಿಕೆಟ್​ಗಳನ್ನು 45 ರನ್ ಆಗುವ ವೇಳೆ ಕಳೆದುಕೊಂಡ ವಿಂಡೀಸ್​ಗೆ ಸೋಲು ಖಚಿತಗೊಂಡಿತು. ಮೊದಲ ಇನಿಂಗ್ಸ್​ನ ಶತಕವೀರ ರೋಸ್ಟನ್ ಚೇಸ್ (6) ಹಾಗೂ ಶೇನ್ ಡೋವ್ರಿಚ್ (0) ತಂಡ ಮುನ್ನಡೆ ಕಾಣುವವರೆಗೂ ಕ್ರೀಸ್​ನಲ್ಲಿದ್ದರು. ಉಮೇಶ್ ಯಾದವ್ ಇವರಿಬ್ಬರ ವಿಕೆಟ್​ಗಳನ್ನು ಉರುಳಿಸಿದರು. 2ನೇ ಇನಿಂಗ್ಸ್​ನಲ್ಲಿ ಗರಿಷ್ಠ ರನ್ ಬಾರಿಸಿದ ಸುನೀಲ್ ಆಂಬ್ರಿಸ್ (38ರನ್, 95 ಎಸೆತ, 4 ಬೌಂಡರಿ) ಹಾಗೂ ನಾಯಕ ಜೇಸನ್ ಹೋಲ್ಡರ್ (19) ತಂಡದ ಮೊತ್ತವನ್ನು ಶತಕದ ಗಡಿ ದಾಟಿಸಿದರು. ಇವರಿಬ್ಬರ ವಿಕೆಟ್ ಉರುಳಿಸಿ ರವೀಂದ್ರ ಜಡೇಜಾ ಮತ್ತೊಂದು ಆಘಾತ ನೀಡಿದರು. ಕೊನೆಯಲ್ಲಿ ದೇವೇಂದ್ರ ಬಿಶೂ (10) ರನ್​ಗಳಿಂದ ಪ್ರವಾಸಿ ತಂಡ, ಹಿನ್ನಡೆಯನ್ನು ತೀರಿಸಿಕೊಂಡು 71 ರನ್ ಬಾರಿಸಲು ಯಶ ಕಂಡಿತ್ತು.