ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾಗೆ 35 ರನ್​ ಗೆಲುವು

ವೆಲ್ಲಿಂಗ್ಟನ್: 5ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡದ ವಿರುದ್ಧ ಭಾರತ ತಂಡ 35 ರನ್​ಗಳಿಂದ ಜಯ ಗಳಿಸಿದ್ದು, 4-1 ಅಂತರದಿಂದ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ವೆಸ್ಟ್‌ಪ್ಯಾಕ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 253 ರನ್​ ಗುರಿ ಬೆನ್ನತ್ತಿದ ನ್ಯೂಜಿಲೆಂಡ್​ ತಂಡ 44.1 ಓವರ್​ಗಳಲ್ಲಿ 217 ರನ್​ ಗಳಿ ಆಲೌಟಾಯಿತು. ನ್ಯೂಜಿಲೆಂಡ್​ ತಂಡದ ಪರ ಜಿಮ್ಮಿ ನೀಶಾಮ್ (44), ವಿಲಿಯಮ್ಸ್​ನ್​ (39), ಟಾಮ್​ ಲಾಥಮ್​ (37) ರನ್​ ಗಳಿಸಿದರು. ಭಾರತದ ಪರ ಯಜುವೇಂದ್ರ ಚಹಾಲ್​ 41 ಕ್ಕೆ 3, ಮೊಹಮ್ಮದ್​ ಶಮಿ 35 ಕ್ಕೆ 2, ಹಾರ್ದಿಕ್​ ಪಾಂಡ್ಯ 50 ಕ್ಕೆ 2 ವಿಕೆಟ್​ ಪಡೆದರು.

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಭಾರತವು 49.5 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್‌ ಕಳೆದುಕೊಂಡು 252 ರನ್​ ಗಳಿಸಿತು. ಭಾರತದ ಪರ ಅಂಬಟಿ ರಾಯುಡು (90) ಮತ್ತು ವಿಜಯ್​ ಶಂಕರ್​ (45) ಆಸರೆಯಾದರು. ಕೊನೆಯಲ್ಲಿ ಹಾರ್ದಿಕ್​ ಪಾಂಡ್ಯ (45) ಮತ್ತು ಕೇದಾರ್​ ಜಾಧವ್​ (34) ಉಪಯುಕ್ತ ಕಾಣಿಕೆ ನೀಡಿದರು. (ಏಜೆನ್ಸೀಸ್​)