Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ಎರಡೇ ದಿನದಲ್ಲಿ ದಾಖಲೆ ಜಯ ಕಂಡ ಭಾರತ

Saturday, 16.06.2018, 3:02 AM       No Comments

| ಸಂತೋಷ್ ನಾಯ್ಕ್​

ಬೆಂಗಳೂರು: ವಿಶ್ವ ನಂ. 1 ಟೆಸ್ಟ್ ತಂಡವನ್ನು ಅವರದೇ ನೆಲದಲ್ಲಿ ಎದುರಿಸುವ ಕಷ್ಟ ಹೇಗಿರುತ್ತದೆ ಎನ್ನುವುದನ್ನು ಪದಾರ್ಪಣೆಯ ಟೆಸ್ಟ್ ಪಂದ್ಯದಲ್ಲಿಯೇ ಅರಿತುಕೊಂಡ ಅಫ್ಘಾನಿಸ್ತಾನ, ಕ್ರಿಕೆಟ್​ನ ಸಾಂಪ್ರದಾಯಿಕ ಮಾದರಿಗೆ ಇನಿಂಗ್ಸ್ ಸೋಲಿನ ಸ್ವಾಗತ ಪಡೆದಿದೆ. ದಾಖಲೆಗಳ ವಿಚಾರದಲ್ಲಿ ಭಾರತದ ಪಾಲಿಗೂ ಐತಿಹಾಸಿಕವಾದ ಈ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಸಾರಥ್ಯದ ಟೀಮ್ ಇಂಡಿಯಾ ಇನಿಂಗ್ಸ್ ಮತ್ತು 262 ರನ್ ವಿಜಯ ದಾಖಲಿಸಿದೆ. ವಿಶ್ವ ಕ್ರಿಕೆಟ್​ನಲ್ಲಿ ಎರಡೇ ದಿನಕ್ಕೆ ಮುಕ್ತಾಯವಾದ 21ನೇ ಟೆಸ್ಟ್ ಪಂದ್ಯ ಇದಾಗಿದ್ದು, ಭಾರತದಲ್ಲಿ ಹಾಗೂ ಭಾರತ ತಂಡಕ್ಕೆ ಇಂಥ ಮೊದಲ ಗೆಲುವು ಇದಾಗಿದೆ. ಅದಲ್ಲದೆ, ಭಾರತದ ಈವರೆಗಿನ ಅತಿದೊಡ್ಡ ಅಂತರದ ಗೆಲುವು ಇದೆನಿಸಿದೆ.

ಚಿನ್ನಸ್ವಾಮಿ ಮೈದಾನ ದಲ್ಲಿ ಶುಕ್ರವಾರ ಮುಕ್ತಾಯಗೊಂಡ ಐತಿಹಾಸಿಕ ಟೆಸ್ಟ್ ಪಂದ್ಯ, ಅಫ್ಘಾನಿಸ್ತಾನ ಪಾಲಿಗೆ ಕ್ರಿಕೆಟ್ ಪಾಠವಾಗಿದ್ದರೆ, ಭಾರತಕ್ಕೆ ನಿರೀಕ್ಷೆಗೂ ಮೀರಿದ ಸುಲಭ ಜಯವೆನಿಸಿತು. 2ನೇ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರಿಸಿದ ಭಾರತ 104.5 ಓವರ್​ಗಳಲ್ಲಿ 474 ರನ್ ಬಾರಿಸಿತು. ಪ್ರತಿಯಾಗಿ ಅಫ್ಘಾನಿಸ್ತಾನ ತಂಡ ಮೊದಲ ಇನಿಂಗ್ಸ್​ನಲ್ಲಿ 27.5 ಓವರ್​ಗಳಲ್ಲಿ 109 ರನ್​ಗೆ ಆಲೌಟ್ ಆಯಿತು. 365 ರನ್ ಹಿನ್ನಡೆಯೊಂದಿಗೆ ಫಾಲೋಆನ್ ಕಂಡ ಅಫ್ಘಾನಿಸ್ತಾನ 2ನೇ ಇನಿಂಗ್ಸ್​ನಲ್ಲಿ 38.4 ಓವರ್​ಗಳಲ್ಲಿ 103 ರನ್​ಗೆ ಸರ್ವಪತನ ಕಂಡಿತು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ದಿನ ಎರಡು ಬಾರಿ ಆಲೌಟ್ ಆದ ಕೇವಲ 4ನೇ ದೃಷ್ಟಾಂತ ಇದು.

ಹಾರ್ದಿಕ್ ಪಾಂಡ್ಯ ಅರ್ಧಶತಕ

ದಿನದ ಆರಂಭದಲ್ಲಿ ಮೊದಲ ಇನಿಂಗ್ಸ್ ಬ್ಯಾಟಿಂಗ್ ಮುಂದುವರಿಸಿದ ಭಾರತ ತಂಡ ಹಾರ್ದಿಕ್ ಪಾಂಡ್ಯ (71 ರನ್, 94 ಎಸೆತ, 10 ಬೌಂಡರಿ) ಅರ್ಧಶತಕ ಹಾಗೂ ಕೆಳ ಕ್ರಮಾಂಕದ ಬ್ಯಾಟ್ಸ್​ಮನ್​ಗಳ ಜವಾಬ್ದಾರಿಯುತ ಕೊಡುಗೆಯಿಂದ 474 ರನ್ ದಾಖಲಿಸಲು ಯಶ ಕಂಡಿತು. 6 ವಿಕೆಟ್​ಗೆ 347 ರನ್​ಗಳಿಂದ ಇನಿಂಗ್ಸ್ ಮುಂದುವರಿಸಿದ ಭಾರತ ಭೋಜನ ವಿರಾಮಕ್ಕೆ ಸರಿಯಾಗಿ ಆಲೌಟ್ ಆಯಿತು. ಹಾರ್ದಿಕ್ ಪಾಂಡ್ಯ ಹಾಗೂ ಆರ್ ಅಶ್ವಿನ್ (18) ಕೆಲ ಓವರ್​ಗಳನ್ನು ಎಚ್ಚರಿಕೆಯಿಂದ ಎದುರಿಸಿದರೂ, ದಿನದ 9ನೇ ಓವರ್​ನಲ್ಲಿ ಬೇರ್ಪಟ್ಟರು. ಅಹ್ಮದ್​ಜಾಯ್ಗೆ 3ನೇ ವಿಕೆಟ್ ರೂಪದಲ್ಲಿ ಅಶ್ವಿನ್ ಹೊರನಡೆದರು. ಬಳಿಕ ಹಾರ್ದಿಕ್​ಗೆ ಜತೆಯಾದ ರವೀಂದ್ರ ಜಡೇಜಾ (20) 8ನೇ ವಿಕೆಟ್​ಗೆ ಬಿರುಸಿನ 68 ರನ್ ಜತೆಯಾಟವಾಡಿ ತಂಡದ ಮೊತ್ತವನ್ನು 400ರ ಗಡಿ ದಾಟಿಸಿದರು. ಆರಂಭದಲ್ಲಿ ರನ್ ಗಳಿಸಲು ಒದ್ದಾಡಿದ ಪಾಂಡ್ಯ, ಸೂರ್ಯ ಮೇಲೇ ಏರುತ್ತಿದ್ದಂತೆ ಬ್ಯಾಟಿಂಗ್​ನಲ್ಲೂ ವೇಗ ಕಂಡುಕೊಂಡರು. ರಶೀದ್ ಖಾನ್​ರ ಒಂದೇ ಓವರ್​ನಲ್ಲಿ ಮೂರು ಬೌಂಡರಿಗಳನ್ನು ಸಿಡಿಸಿ ಗಮನಸೆಳೆದರು. ದೊಡ್ಡ ಮೊತ್ತದತ್ತ ತಂಡ ಮುಖ ಮಾಡಿದ ಸಮಯದಲ್ಲಿ ತಾಳ್ಮೆ ಕಳೆದುಕೊಂಡ ರವೀಂದ್ರ ಜಡೇಜಾ, ಮೊಹಮದ್ ನಬಿ ಎಸೆತದಲ್ಲಿ ಲಾಂಗ್ ಆಫ್​ನಲ್ಲಿ ಕ್ಯಾಚ್ ನೀಡಿ ಹೊರನಡೆದರು. ಅವರ ಹಿಂದೆಯೇ ಪಾಂಡ್ಯ ಕೂಡ ಔಟಾಗಿ ಪೆವಿಲಿಯನ್ ಸೇರಿದರು. 9 ವಿಕೆಟ್ ಕಳೆದುಕೊಂಡಿದ್ದರೂ ಡಿಕ್ಲೇರ್ ಮಾಡಿಕೊಳ್ಳಲು ರಹಾನೆ ಮುಂದಾಗಲಿಲ್ಲ. ಇದರಿಂದಾಗಿ ಉಮೇಶ್ ಯಾದವ್ ಕೆಲ ರಂಜನೀಯ ಶಾಟ್​ಗಳನ್ನು ಬಾರಿಸಲು ಯಶ ಕಂಡರು. ವಫಾದಾರ್ ಓವರ್​ನ್ಲಲಿ 2 ಸಿಕ್ಸರ್ ಹಾಗೂ 1 ಬೌಂಡರಿಯೊಂದಿಗೆ 21 ರನ್ ಸಿಡಿಸಿದರು. ಕೊನೆಗೆ ರಶೀದ್ ಖಾನ್, ತಮ್ಮ 2ನೇ ವಿಕೆಟ್ ರೂಪದಲ್ಲಿ ಇಶಾಂತ್ ಶರ್ಮರನ್ನು ಬಲಿ ಪಡೆಯುವ ಮೂಲಕ 34 ರನ್​ಗಳ ಜತೆಯಾಟಕ್ಕೆ ತೆರೆ ಎಳೆದರು.

ಕ್ರೀಡಾಸ್ಪೂರ್ತಿ ಮೆರೆದ ಟೀಮ್ ಇಂಡಿಯಾ

ಭಾರತ ತಂಡ ಸರಣಿಯ ಟ್ರೋಫಿ ಸಂಭ್ರಮ ವನ್ನು ಅಫ್ಘಾನಿಸ್ತಾನ ತಂಡದೊಂದಿಗೆ ಆಚರಿಸಿತು. ಎರಡೂ ತಂಡಗಳ ಆಟಗಾರರು ಟ್ರೋಫಿಗೆ ಜತೆಯಾಗಿಯೇ ಪೋಸ್ ನೀಡಿದರು. ಆ ಮೂಲಕ ಭಾರತ ತಂಡ, ಕ್ರೀಡಾಸ್ಪೂರ್ತಿ ಮೆರೆದು ಎಲ್ಲರ ಹೃದಯವನ್ನೂ ಗೆದ್ದಿತು.

ಭಾರತದ ದೊಡ್ಡ ಅಂತರದ ಗೆಲುವು

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ದೊಡ್ಡ ಅಂತರದ ಗೆಲುವು ಇದಾಗಿದೆ. ಇದಕ್ಕೂ ಮುನ್ನ 207ರಲ್ಲಿ ಬಾಂಗ್ಲಾದೇಶ ವಿರುದ್ಧ ಢಾಕಾ ಟೆಸ್ಟ್​ನಲ್ಲಿ ಹಾಗೂ 2017ರಲ್ಲಿ ಶ್ರೀಲಂಕಾ ವಿರುದ್ಧ ನಾಗ್ಪುರ ಟೆಸ್ಟ್​ನಲ್ಲಿ ಇನಿಂಗ್ಸ್ ಮತ್ತು 239 ರನ್​ಗಳಿಂದ ಗೆಲುವು ಸಾಧಿಸಿದ್ದು ದೊಡ್ಡ ಅಂತರದ ಗೆಲುವೆನಿಸಿತ್ತು.

24- ಶುಕ್ರವಾರ ಒಟ್ಟು 24 ವಿಕೆಟ್ ಉರುಳಿತು. ಇದು ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯದ ಒಂದೇ ದಿನ ಉರುಳಿದ ಗರಿಷ್ಠ ವಿಕೆಟ್ ಎನಿಸಿದೆ. ಇದಕ್ಕೂ ಮುನ್ನ 2004ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಂಬೈನಲ್ಲಿ ನಡೆದ ಟೆಸ್ಟ್​ನ 3ನೇ ದಿನ ಹಾಗೂ 2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಾಗ್ಪುರದಲ್ಲಿ ನಡೆದ ಟೆಸ್ಟ್​ನ 2ನೇ ದಿನ ತಲಾ 20 ವಿಕಟ್ ಉರುಳಿ ರುವುದು ದಾಖಲೆ ಯಾಗಿತ್ತು. ಇನ್ನು ಚಿನ್ನಸ್ವಾಮಿ ಯಲ್ಲಿ ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್​ನ 4ನೇ ದಿನ 16 ವಿಕೆಟ್ ಉರುಳಿದ್ದು ದಾಖಲೆ ಎನಿಸಿತ್ತು.

ಬಲಿಷ್ಠ ಬೌಲಿಂಗ್​ಗೆ ದಿಕ್ಕುತಪ್ಪಿದ ಆಫ್ಘನ್ ಬ್ಯಾಟಿಂಗ್

ಇಡೀ ಪಂದ್ಯದಲ್ಲಿ ವಿಶ್ವ ನಂ.1 ತಂಡವನ್ನು ತವರಿನ ಟೆಸ್ಟ್​ನಲ್ಲಿ ಮೊದಲ ಇನಿಂಗ್ಸ್​ನಲ್ಲಿ ಆಲೌಟ್ ಮಾಡಿದ್ದೇ ಅಫ್ಘಾನಿಸ್ತಾನ ತಂಡದ ಶ್ರೇಷ್ಠ ಸಾಧನೆ. ಆರ್. ಅಶ್ವಿನ್ (ಪಂದ್ಯದಲ್ಲಿ 59ಕ್ಕೆ 5), ರವೀಂದ್ರ ಜಡೇಜಾ (ಪಂದ್ಯದಲ್ಲಿ 35ಕ್ಕೆ 6), ಉಮೇಶ್ ಯಾದವ್ (ಪಂದ್ಯದಲ್ಲಿ 4ಕ್ಕೆ 4) ಹಾಗೂ ಇಶಾಂತ್ ಶರ್ಮ (ಪಂದ್ಯದಲ್ಲಿ 45ಕ್ಕೆ 4) ದಾಳಿಗೆ ಎದುರಾಡುವ ಛಾತಿಯನ್ನೇ ಅಫ್ಘಾನಿಸ್ತಾನ ತಂಡ ತೋರಲಿಲ್ಲ. ಮೊದಲ ಇನಿಂಗ್ಸ್​ನಲ್ಲಿ ಬೆನ್ನುಬೆನ್ನಿಗೆ ವಿಕೆಟ್ ಕಳೆದುಕೊಂಡ ಅಫ್ಘಾನಿಸ್ತಾನ ತಂಡದ ಬ್ಯಾಟ್ಸ್ ಮನ್​ಗಳು 2ನೇ ಇನಿಂಗ್ಸ್​ನಲ್ಲಿ ಕ್ರೀಸ್​ನಲ್ಲಿ ಕೆಲ ಹೊತ್ತು ಸಮಯ ಕಳೆಯುವ ಪ್ರಯತ್ನ ಮಾಡಿದರು. ಮೊದಲ ಇನಿಂಗ್ಸ್​ನಲ್ಲಿ ಮೊಹಮದ್ ನಬಿ ಬಾರಿಸಿದ 24 ರನ್​ಗಳೇ ತಂಡದ ಗರಿಷ್ಠವಾಗಿದ್ದರೆ, 2ನೇ ಇನಿಂಗ್ಸ್​ನಲ್ಲಿ ಹಸಮತುಲ್ಲಾ ಶಾಹಿದಿ 88 ಎಸೆತ ಆಟವಾಡಿ ಅಜೇಯ 36 ರನ್ ಬಾರಿಸಿದ್ದು ಗರಿಷ್ಠ ಮೊತ್ತವಾಗಿತ್ತು. ವಿಶೇಷವೆಂದರೆ ಅಫ್ಘಾನಿಸ್ತಾನ ತಂಡ ಮೊದಲ ಇನಿಂಗ್ಸ್​ನಲ್ಲಿ ನಿಗದಿತ ಚಹಾ ವಿರಾಮಕ್ಕೂ ಮುನ್ನವೇ ಆಲೌಟ್ ಆದರೆ, 2ನೇ ಇನಿಂಗ್ಸ್ ನಲ್ಲಿ ದಿನದಾಟ ಮುಗಿಯಲು ಇನ್ನೂ 4 ಓವರ್ ಇರುವಾಗ ಆಲೌಟ್ ಆಯಿತು. 39ನೇ ಓವರ್​ನ ನಾಲ್ಕನೇ ಎಸೆತದಲ್ಲಿ ವಫಾದಾರ್ ಬೌಲ್ಡ್ ಆಗುವುದರೊಂದಿಗೆ ಭಾರತ ತಂಡ ಎರಡೇ ದಿನದಲ್ಲಿ ಟೆಸ್ಟ್ ಗೆದ್ದ ಏಷ್ಯಾದ ಮೊದಲ ತಂಡ ಎನಿಸಿತು. ಧವನ್ ಹಾಗೂ ವಿಜಯ್ ಮೊದಲ ಇನಿಂಗ್ಸ್ ನಲ್ಲಿ 41.3 ಓವರ್​ಗಳಿಂದ 212 ರನ್ ಪೇರಿಸಿದರೆ, ಇಡೀ ಅಫ್ಘಾನಿಸ್ತಾನ ತಂಡ ಎರಡೂ ಇನಿಂಗ್ಸ್​ಗಳಿಂದ 66.3 ಓವರ್​ಗಳಲ್ಲಿ 212 ರನ್ ಕಲೆಹಾಕಿದ್ದು ವಿಶೇಷ.

4 – ಟೆಸ್ಟ್​ನಲ್ಲಿ ಒಂದೇ ದಿನದಲ್ಲಿ ಎರಡು ಬಾರಿ ಆಲೌಟ್ ಆದ 3ನೇ ತಂಡ ಹಾಗೂ ನಾಲ್ಕನೇ ದೃಷ್ಟಾಂತ ಇದಾಗಿದೆ. 1952ರಲ್ಲಿ ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್ ಟೆಸ್ಟ್​ನಲ್ಲಿ ಭಾರತ 58 ಹಾಗೂ 82 ರನ್ ಪೇರಿಸಿ ಒಂದೇ ದಿನ ಆಲೌಟ್ ಆಗಿತ್ತು. ಇನ್ನು ಜಿಂಬಾಬ್ವೆ ತಂಡ 2005 ಹಾಗೂ 2012ರಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಈ ಅವಮಾನ ಎದುರಿಸಿದೆ.

22 – ಮೊದಲ ಇನಿಂಗ್ಸ್​ನಲ್ಲಿ ಉಮೇಶ್ ಯಾದವ್ ರೆಹಮತ್ ಷಾ ವಿಕೆಟ್ ಉರುಳಿಸುವ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ 100 ವಿಕೆಟ್ ಸಾಧನೆ ಮಾಡಿದರು. ಟೆಸ್ಟ್ ನಲ್ಲಿ 100 ವಿಕೆಟ್ ಉರುಳಿಸಿದ ಭಾರತದ 22ನೇ ಬೌಲರ್ ಉಮೇಶ್ ಯಾದವ್.

3 – ಟೆಸ್ಟ್ ಕ್ರಿಕೆಟ್​ನ ಪದಾರ್ಪಣಾ ಪಂದ್ಯದಲ್ಲಿಯೇ ಫಾಲೋಆನ್ ಅವಮಾನ ಎದುರಿಸಿದ ನಾಲ್ಕನೇ ತಂಡ ಅಫ್ಘಾನಿಸ್ತಾನ. ವೆಸ್ಟ್ ಇಂಡೀಸ್, ಪಾಕಿಸ್ತಾನ ಹಾಗೂ ಐರ್ಲೆಂಡ್ ಇತರ ತಂಡಗಳು.

2 – ಪದಾರ್ಪಣಾ ಟೆಸ್ಟ್ ಪಂದ್ಯದಲ್ಲಿ ಎರಡೇ ದಿನದಲ್ಲಿ ಸೋಲು ಕಂಡ 2ನೇ ತಂಡ ಅಫ್ಘಾನಿಸ್ತಾನ. 1889ರಲ್ಲಿ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್ ವಿರುದ್ಧ ಪೋರ್ಟ್ ಎಲಿಜಬೆತ್​ನಲ್ಲಿ ಆಡಿದ ಪದಾರ್ಪಣಾ ಪಂದ್ಯದಲ್ಲಿ ಎರಡೇ ದಿನದಲ್ಲಿ ಸೋಲು ಕಂಡಿತ್ತು.

3 ದಿನದಾಟದ ಟಿಕೆಟ್ ಹಣ ವಾಪಸ್

ಭಾರತ-ಆಫ್ಘನ್ ಟೆಸ್ಟ್ ಕೇವಲ 2 ದಿನಗಳಿಗೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ಉಳಿದ ಮೂರು ದಿನಗಳ ಟಿಕೆಟ್ ಹಣವನ್ನು ವಾಪಸ್ ನೀಡಲು ಕೆಎಸ್​ಸಿಎ ನಿರ್ಧರಿಸಿದೆ. ಜೂ.16, 17, 18ರ 3 ದಿನದಾಟಗಳ ಟಿಕೆಟ್ ಖರೀದಿಸಿರುವ ಪ್ರೇಕ್ಷಕರು ಚಿನ್ನಸ್ವಾಮಿ ಸ್ಟೇಡಿಯಂನ ಕಬ್ಬನ್ ರೋಡ್​ನಲ್ಲಿರುವ ಗೇಟ್-2ರಲ್ಲಿ ಜೂ. 20ರಂದು ಟಿಕೆಟ್ ನೀಡಿ ಹಣ ವಾಪಸ್ ಪಡೆಯಬಹುದಾಗಿದೆ.

 

Leave a Reply

Your email address will not be published. Required fields are marked *

Back To Top