ಆಸೀಸ್ ನೆಲದಲ್ಲಿ ಹೊಸ ಇತಿಹಾಸದ ತವಕ

ಅಡಿಲೇಡ್: ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಸಾಧನೆ ಮಾಡುವ ತವಕದಲ್ಲಿರುವ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಸವಾಲಿಗೆ ಸಜ್ಜಾಗಿದೆ. 4 ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಗುರುವಾರದಿಂದ ಅಡಿಲೇಡ್ ಓವಲ್​ನಲ್ಲಿ ನಡೆಯಲಿದೆ. 70 ವರ್ಷಗಳ ಆಸೀಸ್ ಪ್ರವಾಸದ ಇತಿಹಾಸದಲ್ಲಿ ಭಾರತ ಹಿಂದೆಂದೂ ಇಷ್ಟೊಂದು ನಿರೀಕ್ಷೆಗಳೊಂದಿಗೆ ಟೆಸ್ಟ್ ಸರಣಿ ಆರಂಭಿಸಿರಲಿಲ್ಲ. ಆದರೆ, ಸ್ಟೀವನ್ ಸ್ಮಿತ್-ಡೇವಿಡ್ ವಾರ್ನರ್ ಗೈರಿನಲ್ಲೂ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಕಡೆಗಣಿಸುವಂತಿಲ್ಲ. ಹೀಗಾಗಿ ಯಾವ ತಂಡವೂ ಫೇವರಿಟ್ ಹಣೆಪಟ್ಟಿ ಪಡೆದಿಲ್ಲ.

ಕಳೆದ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಪ್ರವಾಸದ ಸವಾಲಿನಲ್ಲಿ ಭಾರತ ನಿಕಟ ಪೈಪೋಟಿ ನೀಡಿದ್ದರೂ, ತಲಾ 1 ಟೆಸ್ಟ್ ಗೆಲುವಿಗೆ ಸಮಾಧಾನ ಪಟ್ಟಿತ್ತು ಮತ್ತು ಸರಣಿಯನ್ನು ಆತಿಥೇಯರಿಗೆ ಬಿಟ್ಟುಕೊಟ್ಟಿತ್ತು. ವಿರಾಟ್ ಕೊಹ್ಲಿ ಟೀಮ್ ಈ ತಪ್ಪಿನಿಂದ ಪಾಠ ಕಲಿತರೆ ಆಸ್ಟ್ರೇಲಿಯಾದಲ್ಲಿ ಚೊಚ್ಚಲ ಸರಣಿ ಗೆಲುವಿನೊಂದಿಗೆ ಹೊಸ ಇತಿಹಾಸ ಸೃಷ್ಟಿಯಾಗಲಿದೆ.

ಆಫ್ರಿಕಾ ಮತ್ತು ಆಂಗ್ಲರೆದುರಿನ ಸವಾಲು ಎದುರಿಸಲು ಭಾರತದ ಸಿದ್ಧತೆಯೇ ಸಮರ್ಪಕವಾಗಿರಲಿಲ್ಲ ಮತ್ತು ತಂಡದ ಆಯ್ಕೆಯಲ್ಲೂ ಎಡವಟ್ಟಾಗಿತ್ತು. ಹಾಲಿ ಸರಣಿಗೆ ಉತ್ತಮ ಸಿದ್ಧತೆ ನಡೆಸುವ ದೃಷ್ಟಿಯಿಂದ ಭಾರತ ಚತುರ್ದಿನ ಅಭ್ಯಾಸ ಪಂದ್ಯ ಆಡಿದರೂ ಅದರ ನಿರ್ವಹಣೆ ಸ್ಪೂರ್ತಿದಾಯಕವಾಗಿಲ್ಲ. ಎದುರಾಳಿಗೆ 544 ರನ್​ಗಳ ಬೃಹತ್ ಮೊತ್ತ ಬಿಟ್ಟುಕೊಟ್ಟಿದ್ದು ಬೌಲಿಂಗ್ ವಿಭಾಗಕ್ಕೆ ಹಿನ್ನಡೆಯಾಗಿದೆ. ಆದರೆ ಬ್ಯಾಟಿಂಗ್ ವಿಭಾಗದಲ್ಲಿ ಸಂಘಟಿತ ನಿರ್ವಹಣೆ ಕಾಣಿಸಿದ್ದು ಸಮಾಧಾನಕರ. ಆಫ್ರಿಕಾ, ಇಂಗ್ಲೆಂಡ್​ನಲ್ಲಿ ಹೆಚ್ಚಿನ ಇನಿಂಗ್ಸ್​ಗಳಲ್ಲಿ ನಾಯಕ ಕೊಹ್ಲಿ ಏಕಾಂಗಿ ಹೋರಾಟ ನಡೆಸಿದರೆ, ಇತರ ಬ್ಯಾಟ್ಸ್​ಮನ್​ಗಳ ನಿರ್ವಹಣೆ ನೀರಸವಾಗಿತ್ತು. ಆಸೀಸ್​ನಲ್ಲಿ ಇತರ ಬ್ಯಾಟ್ಸ್​ಮನ್​ಗಳು ಕೊಹ್ಲಿಗೆ ಸಮರ್ಥ ಬೆಂಬಲ ಒದಗಿಸುವ ನಿರೀಕ್ಷೆ ಇದೆ.

ಚೆಂಡು ವಿರೂಪ ಪ್ರಕರಣದಿಂದ ದೊಡ್ಡ ಹೊಡೆತ ತಿಂದಿರುವ ಆಸೀಸ್, ಇತ್ತೀಚೆಗೆ ಟಿ20 ಸರಣಿಯಲ್ಲಿ ಭಾರತಕ್ಕೆ ನಿಕಟ ಪೈಪೋಟಿಯನ್ನೇ ನೀಡಿತ್ತು. ಬೌಲಿಂಗ್ ವಿಭಾಗದಲ್ಲಿ ಭಾರತಕ್ಕಿಂತ ಬಲಿಷ್ಠವಾಗಿಯೇ ಕಾಣಿಸುತ್ತಿರುವ ಆಸೀಸ್, ಬ್ಯಾಟಿಂಗ್ ವಿಭಾಗದಲ್ಲೂ ಮಿಂಚಿದರೆ ಭಾರತಕ್ಕೆ ಸೆಡ್ಡು ಹೊಡೆಯುವುದು ನಿಶ್ಚಿತ.

ಆಸ್ಟ್ರೇಲಿಯಾದಲ್ಲಿ ಸಾಮಾನ್ಯವಾಗಿ ಸ್ಲೆಡ್ಜಿಂಗ್ ಕೂಡ ಪ್ರವಾಸಿ ಆಟಗಾರರಿಗೆ ಕಠಿಣ ಸವಾಲಾಗಿರುತ್ತದೆ. ಆದರೆ ಚೆಂಡು ವಿರೂಪ ವಿವಾದದ ಬಳಿಕ ಆಸೀಸ್ ತಂಡ ‘ನೋ ಸ್ಲೆಡ್ಜಿಂಗ್’ ಪಾಲಿಸಿ ಅಳವಡಿಸಿಕೊಂಡಿದ್ದರೂ, ಅದು ಎಷ್ಟರ ಮಟ್ಟಿಗೆ ಜಾರಿಗೆ ಬರಲಿದೆ ಎಂಬ ಕುತೂಹಲವಿದೆ. ಇನ್ನು ಕಾಂಗರೂ ನೆಲದಲ್ಲಿ ಮಾಧ್ಯಮಗಳೂ 12ನೇ ಆಟಗಾರನ ಪಾತ್ರ ನಿರ್ವಹಿಸುತ್ತವೆ. ಹೀಗಾಗಿ ಸರಣಿ ನಡುವೆ ವಿವಾದಗಳಿಂದ ದೂರವಿರಲು ಕೂಡ ಭಾರತದ ಆಟಗಾರರು ಎಚ್ಚರಿಕೆ ವಹಿಸಬೇಕಾಗಿದೆ. -ಏಜೆನ್ಸೀಸ್

ವಿಜಯ್-ರಾಹುಲ್ ಆರಂಭಿಕ ಜೋಡಿ

ಯುವ ಬ್ಯಾಟ್ಸ್​ಮನ್ ಪೃಥ್ವಿ ಷಾ ಗಾಯದಿಂದ ಅಲಭ್ಯರಾಗಿರುವ ಕಾರಣ ಭಾರತ ನಿರೀಕ್ಷೆಯಂತೆಯೇ ಮುರಳಿ ವಿಜಯ್-ಕೆಎಲ್ ರಾಹುಲ್ ಹೊಸ ಆರಂಭಿಕ ಜೋಡಿಯಾಗಿದ್ದಾರೆ. ಆಫ್ರಿಕಾ, ಇಂಗ್ಲೆಂಡ್ ಪ್ರವಾಸದಲ್ಲಿ ಭಾರತಕ್ಕೆ ಆರಂಭಿಕ ಜೋಡಿಯ ವೈಫಲ್ಯವೇ ದೊಡ್ಡ ಹೊಡೆತ ನೀಡಿತ್ತು. ಆಫ್ರಿಕಾದ 3 ಟೆಸ್ಟ್​ಗಳಲ್ಲಿ ಮೊದಲ ವಿಕೆಟ್​ಗೆ 18.16ರ ಸರಾಸರಿ ಮತ್ತು ಇಂಗ್ಲೆಂಡ್​ನ 5 ಟೆಸ್ಟ್​ಗಳಲ್ಲಿ 23.70ರ ಸರಾಸರಿಯಲ್ಲಿ ರನ್ ಸೇರಿಸಲ್ಪಟ್ಟಿತ್ತು. ಆಸೀಸ್ ನೆಲದಲ್ಲಿ ಭಾರತ ಉತ್ತಮ ಆರಂಭ ಕಾಣಬೇಕಿದ್ದು, ಮಧ್ಯಮ ಕ್ರಮಾಂಕದಲ್ಲೂ ಪೂಜಾರ, ರಹಾನೆಯಿಂದ ಕೊಹ್ಲಿಗೆ ಉತ್ತಮ ಬೆಂಬಲ ಸಿಗಬೇಕಾಗಿದೆ. ವೇಗಿಗಳಾದ ಸ್ಟಾರ್ಕ್, ಕಮ್ಮಿನ್ಸ್, ಹ್ಯಾಸಲ್​ವುಡ್​ರನ್ನು ಸಮರ್ಥವಾಗಿ ಎದುರಿಸಿ ನಿಂತರೆ ಆಸೀಸ್ ನೆಲದಲ್ಲಿ ದಿಗ್ವಿಜಯ ಕಷ್ಟವಲ್ಲ.

393 ವಿರಾಟ್ ಕೊಹ್ಲಿ ಸರಣಿಯ ಮೊದಲ 3 ಟೆಸ್ಟ್​ಗಳಲ್ಲಿ 393 ರನ್ ಗಳಿಸಿದರೆ ಕ್ಯಾಲೆಂಡರ್ ವರ್ಷವೊಂದರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಸರ್ವಾಧಿಕ ರನ್ ಗಳಿಸಿದ ಕುಮಾರ ಸಂಗಕ್ಕರ (2,868) ದಾಖಲೆ ಮುರಿಯಲಿದ್ದಾರೆ. ಕೊಹ್ಲಿ 2018ರಲ್ಲಿ ಸದ್ಯ (2,476) ರನ್ ಗಳಿಸಿದ್ದಾರೆ.

ಪಿಚ್ ರಿಪೋರ್ಟ್

ಅಡಿಲೇಡ್ ಓವಲ್​ನಲ್ಲಿ ನಡೆದ ಕೊನೇ 3 ಟೆಸ್ಟ್ ಅಹರ್ನಿಶಿ ಆಗಿದ್ದವು. 2014ರ ನಂತರ ಮೊದಲ ಬಾರಿ ಇಲ್ಲಿ ಹಗಲು ಟೆಸ್ಟ್ ನಡೆಯಲಿದ್ದು, ಹಸಿರು ಹುಲ್ಲಿರುವ ಪಿಚ್ ಸಿದ್ಧವಾಗಿದೆ. ಪಂದ್ಯಕ್ಕೆ ಮುನ್ನಾದಿನ ಪಿಚ್ ತೇವರಹಿತವಾಗಿ ಕಾಣಿಸಿದೆ. ಮೊದಲ ದಿನದಾಟದಲ್ಲಿ ಹೆಚ್ಚಿನ ಬಿಸಿಲು ಇರಬಹುದು. ನಂತರವೂ ಬೆಚ್ಚಗಿನ ವಾತಾವರಣ ಇರಲಿರುವ ಕಾರಣ, ಸ್ಪಿನ್ ಕೂಡ ಸ್ವಲ್ಪಮಟ್ಟಿಗೆ ಪರಿಣಾಮ ಬೀರಬಹುದೆನಿಸಿದೆ.

ಟೀಮ್ ನ್ಯೂಸ್

ಭಾರತ

ಪಂದ್ಯಕ್ಕೆ 12ರ ಬಳಗ ಪ್ರಕಟಿಸಿರುವ ಭಾರತ, ಐವರು ಬೌಲರ್​ಗಳನ್ನು ಆಡಿಸುವ ಹಿಂದಿನ ರಣತಂತ್ರ ಕೈಬಿಟ್ಟಿದೆ. ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ತಂಡದಲ್ಲಿದ್ದು, ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಆಡಿಸುವ ನಿರೀಕ್ಷೆ ಹುಸಿಯಾಗಿದೆ. ಶಮಿ, ಇಶಾಂತ್, ಬುಮ್ರಾ ಮೂವರು ವೇಗಿಗಳಾಗಿದ್ದು, ಭುವನೇಶ್ವರ್ ಹೊರಗುಳಿದಿದ್ದಾರೆ. 6ನೇ ಕ್ರಮಾಂಕದಲ್ಲಿ ಆಡಲು ಹನುಮ ವಿಹಾರಿ, ರೋಹಿತ್ ಶರ್ಮ ಅವರಲ್ಲಿ ಒಬ್ಬರಿಗೆ ಅವಕಾಶ ಸಿಗಲಿದೆ.

# ಸಂಭಾವ್ಯ ತಂಡ: ಕೆಎಲ್ ರಾಹುಲ್, ಮುರಳಿ ವಿಜಯ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರೋಹಿತ್ ಶರ್ಮ/ಹನುಮ ವಿಹಾರಿ, ರಿಷಭ್ ಪಂತ್ (ವಿ.ಕೀ), ಆರ್. ಅಶ್ವಿನ್, ಮೊಹಮದ್ ಶಮಿ, ಇಶಾಂತ್ ಶರ್ಮ, ಜಸ್​ಪ್ರೀತ್ ಬುಮ್ರಾ.

ಆಸ್ಟ್ರೇಲಿಯಾ

ಪಂದ್ಯಕ್ಕೆ ಮುನ್ನಾದಿನವೇ ಆತಿಥೇಯರು ಆಡುವ ಹನ್ನೊಂದರ ಬಳಗ ಪ್ರಕಟಿಸಿದ್ದಾರೆ. ಭಾರತದಂತೆ ಆಸೀಸ್ ಕೂಡ ನಾಲ್ವರು ಬೌಲರ್​ಗಳನ್ನು ಆಡಿಸುವ ಮೂಲಕ ಬ್ಯಾಟಿಂಗ್ ವಿಭಾಗ ಬಲಪಡಿಸಲು ಒತ್ತು ನೀಡಿದೆ. ಆಲ್ರೌಂಡರ್ ಮಿಚೆಲ್ ಮಾರ್ಷ್ ಹೊರಗಿಟ್ಟಿರುವುದು ಅಚ್ಚರಿಯ ನಡೆ. ಆಸೀಸ್ ದೇಶೀಯ ಕ್ರಿಕೆಟ್​ನ ಗರಿಷ್ಠ ರನ್ ಸಾಧಕ 26 ವರ್ಷದ ಎಡಗೈ ಆರಂಭಿಕ ಮಾರ್ಕಸ್ ಹ್ಯಾರಿಸ್​ಗೆ ಪದಾರ್ಪಣೆ ಅವಕಾಶ ನೀಡಲಾಗಿದೆ.

# ತಂಡ: ಆರನ್ ಫಿಂಚ್, ಮಾರ್ಕಸ್ ಹ್ಯಾರಿಸ್, ಉಸ್ಮಾನ್ ಖವಾಜ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್​ಕೊಂಬ್, ಟ್ರಾವಿಸ್ ಹೆಡ್, ಟಿಮ್ ಪೇನ್ (ನಾಯಕ, ವಿ.ಕೀ), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್, ನಾಥನ್ ಲ್ಯಾನ್, ಜೋಶ್ ಹ್ಯಾಸಲ್​ವುಡ್.