ರೂಪಾಯಿಯಲ್ಲೇ ಇನ್ನು ತೈಲ ವಹಿವಾಟು

ನವದೆಹಲಿ: ಸಾರ್ವಕಾಲಿಕ ಪತನದ ನಂತರ ಸ್ಥಿರತೆಗಾಗಿ ಸರ್ಕಸ್ ನಡೆಸುತ್ತಿರುವ ರೂಪಾಯಿಗೆ ಮತ್ತೆ ಕಳೆ ಬರುವ ಸಾಧ್ಯತೆ ಗೋಚರಿಸಿದೆ. ಇರಾನ್​ನಿಂದ ಮಾಡಿಕೊಳ್ಳುವ ತೈಲ ಆಮದಿನ ಮೇಲೆ ಅಮೆರಿಕ ಹೇರಿರುವ ನಿರ್ಬಂಧ ಮತ್ತಿತರ ಕಾರಣದಿಂದಾಗಿ ಡಾಲರ್ ಎದುರು ನಿಲ್ಲಲು ರೂಪಾಯಿ ಪರದಾಡುತ್ತಿದೆ. ಹೀಗಾಗಿ ರೂಪಾಯಿಗೆ ಬಲ ತುಂಬಲು ಇನ್ಮುಂದೆ ಇರಾನ್ ಜತೆಗಿನ ತೈಲ ಖರೀದಿ ವ್ಯವಹಾರವನ್ನು ಯುರೋ ಬದಲು ಭಾರತೀಯ ಕರೆನ್ಸಿ ಮೂಲಕವೇ ನಡೆಸಲು ಸಿದ್ಧತೆ ನಡೆಯುತ್ತಿದೆ. ಇದು ಜಾರಿಯಾದಲ್ಲಿ ಯುಕೊ ಬ್ಯಾಂಕ್ ಮೂಲಕ ಭಾರತ ಇರಾನ್​ಗೆ ಹಣ ಪಾವತಿಸಲಿದೆ.

ದೀಪಾವಳಿ ಸಂಭ್ರಮಕ್ಕೆ ತೈಲ

ಅಮೆರಿಕದ ನಿರ್ಬಂಧ ಹೊರತಾಗಿಯೂ ಇರಾನ್​ನಿಂದ ತೈಲ ಆಮದು ಮಾಡಿಕೊಳ್ಳಲು ಅವಕಾಶ ಗಿಟ್ಟಿಸಿಕೊಂಡು ನಿರಾಳವಾಗಿರುವ ಭಾರತ ಮತ್ತೊಂದು ಮಹತ್ವದ ಕ್ರಮಕ್ಕೆ ಮುಂದಾಗಿದೆ. ಇರಾನ್ ಜತೆಗಿನ ತೈಲ ಖರೀದಿ ವ್ಯವಹಾರವನ್ನು ಅಮೆರಿಕ ಡಾಲರ್ ಅಥವಾ ಯುರೋ ಬದಲು ಸಂಪೂರ್ಣವಾಗಿ ಭಾರತೀಯ ಕರೆನ್ಸಿ ರೂಪಾಯಿ ಮೂಲಕ ನಡೆಸಲು ಎರಡೂ ರಾಷ್ಟ್ರಗಳು ನಿರ್ಧರಿಸಿವೆ. ಈ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಇದರಿಂದ ಕಡಿಮೆ ಬೆಲೆಗೆ ಕಚ್ಚಾತೈಲ ಆಮದಾಗುವ ಜತೆಗೆ ರೂಪಾಯಿ ಬಲವರ್ಧನೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಏನಿದು ಯೋಜನೆ?: ಇರಾನ್​ನಿಂದ ಖರೀದಿಸಲಾದ ತೈಲದ ಮೊತ್ತವನ್ನು ಭಾರತದ ಬ್ಯಾಂಕ್ ಮೂಲಕ ಪಾವತಿ ಮಾಡುವ ವ್ಯವಸ್ಥೆ ಜಾರಿಗೆ ತರಲು ಭಾರತ, ಇರಾನ್ ಅಧಿಕಾರಿಗಳು ನಿರ್ಧರಿಸಿದ್ದಾರೆ. ಇದುವರೆಗೂ ತೈಲ ಖರೀದಿ ವ್ಯವಹಾರವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿತ್ತು. ಪಾವತಿ ಮೊತ್ತದ ಶೇ. 45ನ್ನು ರೂಪಾಯಿಯಲ್ಲಿ ಯುಕೊ ಬ್ಯಾಂಕ್ ಮೂಲಕ ನೀಡಲಾಗುತ್ತಿತ್ತು. ಶೇ. 55 ಮೊತ್ತವನ್ನು ಯುರೋ ಕರೆನ್ಸಿಯಲ್ಲಿ ಪಾವತಿಸಲಾಗುತ್ತಿತ್ತು. ಇನ್ನು ತೈಲ ವ್ಯವಹಾರದ ಎಲ್ಲ ಪಾವತಿಗಳನ್ನು ರೂಪಾಯಿ ಮೂಲಕವೇ ಮಾಡಲಾಗುತ್ತದೆ. ಈ ಮೊತ್ತ ಬಳಸಿ ತನಗೆ ಅವಶ್ಯಕವಾದ ಉತ್ಪನ್ನಗಳನ್ನು ಇರಾನ್ ಭಾರತದಿಂದ ಆಮದು ಮಾಡಿಕೊಳ್ಳಲಿದೆ.

ಇಂದಿನಿಂದ ಜಾರಿ: ಇರಾನ್ ಮೇಲೆ ಅಮೆರಿಕ ಹೇರಿರುವ ನಿರ್ಬಂಧ ಸೋಮವಾರದಿಂದಲೆ ಜಾರಿಗೆ ಬರಲಿದೆ. ಆದರೆ ಭಾರತ ಸೇರಿದಂತೆ 8 ರಾಷ್ಟ್ರಗಳಿಗೆ 180 ದಿನಗಳವರೆಗೆ ತೈಲ ಆಮದಿಗೆ ವಿನಾಯಿತಿ ಸಿಕ್ಕಿದೆ. ಉಳಿದ ರಾಷ್ಟ್ರಗಳು ಇರಾನ್ ಜತೆ ಯಾವುದೇ ವ್ಯಾಪಾರಗಳನ್ನು ನಡೆಸುವಂತಿಲ್ಲ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.

ಯುಕೊ ಬ್ಯಾಂಕ್ ಏಕೆ?

ಸ್ವಿಫ್ಟ್ ಪಾವತಿ ವ್ಯವಸ್ಥೆ, ಜಾಗತಿಕ ಬ್ಯಾಂಕಿಂಗ್ ವ್ಯವಸ್ಥೆಯಿಂದ ಇರಾನ್​ನ್ನು ಹೊರಹಾಕುವುದಾಗಿ ಅಮೆರಿಕ ಎಚ್ಚರಿಸಿದೆ. ಇಂಥ ಸಂದರ್ಭದಲ್ಲೂ ಭಾರತ ಸರಾಗವಾಗಿ ಇರಾನ್​ನಿಂದ ತೈಲ ಆಮದು ಮಾಡಿಕೊಳ್ಳಬಹುದು. ಬ್ಯಾಂಕಿಂಗ್ ನಿರ್ಬಂಧ ಇರಾನ್ ಮೂಲದ ಬ್ಯಾಂಕ್​ಗಳಿಗೆ ಮಾತ್ರ ಅನ್ವಯವಾಗಲಿದೆ. ಹೀಗಾಗಿ ಯುಕೊ ಬ್ಯಾಂಕ್ ಮೂಲಕ ವಹಿವಾಟು ನಡೆಸಲು ನಿರ್ಧರಿಸಲಾಗಿದೆ.

ಎಸ್​ಕ್ರೋ ಖಾತೆ

ಅಮೆರಿಕದಿಂದ ವಿನಾಯಿತಿ ಪಡೆದು ಇರಾನ್​ನಿಂದ ತೈಲ ಆಮದು ಮುಂದುವರಿಸಲಿರುವ ರಾಷ್ಟ್ರಗಳಿಗೆ ಟ್ರಂಪ್ ಆಡಳಿತದ ಅಧಿಕಾರಿಗಳು ಎಸ್​ಕ್ರೋ ಖಾತೆ ರಚಿಸಲು ಸೂಚಿಸಿದ್ದಾರೆ. ಪ್ರತಿ ಬಾರಿ ಇರಾನ್ ತೈಲ ಮಾರಾಟ ಮಾಡಿದಾಗ, ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರದ ಬ್ಯಾಂಕ್​ನಲ್ಲಿನ ಎಸ್​ಕ್ರೋ ಖಾತೆಗೆ ಮೊತ್ತ ಜಮೆ ಮಾಡಲಾಗುತ್ತದೆ. ಈ ಮೂಲಕ ಇರಾನ್​ಗೆ ನೇರವಾಗಿ ತನ್ನ ಕರೆನ್ಸಿಯಲ್ಲಿಯೇ ಆದಾಯ ಸಿಗದಂತೆ ಮಾಡುವುದು ಅಮೆರಿಕದ ತಂತ್ರ. ಎಸ್​ಕ್ರೋ ಖಾತೆಯಲ್ಲಿನ ಮೊತ್ತವನ್ನು ಇರಾನ್ ಸರ್ಕಾರ ತನ್ನ ಪ್ರಜೆಗಳ ಅವಶ್ಯಕ ಉತ್ಪನ್ನಗಳಿಗೆ ಮಾತ್ರ ವೆಚ್ಚ ಮಾಡಬಹುದಾಗಿದೆ.

ಪ್ರಯೋಜನವೇನು?

  • ಅಮೆರಿಕ ಡಾಲರ್ ಎದುರು ರೂಪಾಯಿ ಬಲವರ್ಧನೆ
  • ಡಾಲರ್ ಮೌಲ್ಯ ಏರಿಕೆಯಾದರೂ ಭಾರತಕ್ಕೆ ಕಡಿಮೆ ದರದಲ್ಲಿ ತೈಲ ಲಭ್ಯ
  • ವಿತ್ತೀಯ ಕೊರತೆ, ಚಾಲ್ತಿ ಖಾತೆ ಕೊರತೆ ನಿವಾರಣೆಗೆ ಸಹಾಯಕ
  • ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ ಸಾಧ್ಯತೆ

ತೈಲ ಆದಾಯವನ್ನು ಇರಾನ್ ಸಂಪೂರ್ಣವಾಗಿ ಮಾನವೀಯತೆ ಆಧಾರದಲ್ಲಿ ತನ್ನ ಪ್ರಜೆಗಳಿಗೆ ಮಾತ್ರ ಬಳಸಲಿ ಎಂಬುದು ನಮ್ಮ ನಿರೀಕ್ಷೆ. ಎಸ್​ಕ್ರೋ ಖಾತೆಗಳ ಮೇಲೆ ಅಮೆರಿಕ ತೀವ್ರ ನಿಗಾ ಇರಿಸಲಿದೆ. ತೈಲ ಆಮದು ರಾಷ್ಟ್ರಗಳಿಗೂ ಎಸ್​ಕ್ರೋ ಖಾತೆಯಲ್ಲಿನ ಠೇವಣಿ ವಿವರ, ಅದನ್ನು ಬಳಸಿ ಇರಾನ್ ಆಮದು ಮಾಡಿಕೊಂಡ ಉತ್ಪನ್ನಗಳ ವಿವರ ನೀಡುವಂತೆ ಕೇಳುತ್ತೇವೆ.

| ಬ್ರಿಯಾನ್ ಹೂಕ್, ಅಮೆರಿಕದ ಸರ್ಕಾರ ಹಿರಿಯ ಅಧಿಕಾರಿ

 

ಪೆಟ್ರೋಲ್ 18 ದಿನದಲ್ಲಿ 4 ರೂ. ಇಳಿಕೆ

ಅ. 18ರಿಂದ ಸತತ ಇಳಿಕೆ ಕಾಣುತ್ತಿರುವ ಪೆಟ್ರೋಲ್ ದರ, 18 ದಿನಗಳಲ್ಲಿ 4 ರೂ. ಕಡಿಮೆಯಾಗಿದೆ. ಡೀಸೆಲ್ ಕೂಡ 2.33 ರೂ. ಇಳಿಕೆ ಕಂಡಿದೆ. ಭಾನುವಾರ ಪ್ರತಿ ಲೀ. ಪೆಟ್ರೋಲ್ ಬೆಲೆ 21 ಪೈಸೆ, ಡೀಸೆಲ್ 17 ಪೈಸೆ ಕಡಿಮೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಲೀ.ಗೆ 78.78 ರೂ. ಮತ್ತು ಡೀಸೆಲ್ ಲೀ.ಗೆ 73.36 ರೂ. ಆಗಿದೆ. ಬ್ರೆಂಟ್ ಕಚ್ಚಾ ತೈಲ ಬೆಲೆ ಬ್ಯಾರೆಲ್​ಗೆ 72.57 ಡಾಲರ್ ತಲುಪಿರುವುದು ಇಂಧನ ದರ ಇಳಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಆ. 16 ರಿಂದ ಅ.4ರ ನಡುವೆ ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿತ್ತು. ಹೀಗಾಗಿ ಪೆಟ್ರೋಲ್ ಲೀಟರ್​ಗೆ ಒಟ್ಟು 6.86 ರೂ. ಹೆಚ್ಚಾಗಿತ್ತು. ಡೀಸೆಲ್ ಕೂಡ ಲೀಟರ್​ಗೆ 6.73 ರೂ. ಏರಿಕೆ ದಾಖಲಿಸಿತ್ತು.

ಇರಾನ್​ಗೆ ಹಣ ನೀಡಲು ವಿಶೇಷ ವಿಧಾನ!

ಇರಾನ್ ಅಣು ಒಪ್ಪಂದದಿಂದ ಅಮೆರಿಕ ಹೊರನಡೆದಿದ್ದು, ಐರೋಪ್ಯ ಒಕ್ಕೂಟ ಮಾತ್ರ ಒಪ್ಪಂದದ ಪರವಾಗಿದೆ. ಹಾಗಾಗಿ ಇರಾನ್ ಜತೆಗಿನ ಹಣದ ವಹಿವಾಟಿಗಾಗಿ ವಿಶೇಷ ಮಾರ್ಗ (ಎಸ್​ಪಿವಿ) ಸಿದ್ಧಗೊಳಿಸಲಾಗುತ್ತಿದೆ. ಆದರೆ 2019ರವರೆಗೆ ಈ ವ್ಯವಸ್ಥೆ ಜಾರಿಗೆ ಬರುವುದು ಕಷ್ಟಸಾಧ್ಯ ಎಂದು ಅರಿತ ಭಾರತ , ಅಮೆರಿಕವನ್ನು ಎದುರು ಹಾಕಿಕೊಳ್ಳುವ ಬದಲು ತೈಲ ಆಮದು ಪ್ರಮಾಣ ಕಡಿಮೆ ಮಾಡಿ ನಿರ್ಬಂಧದಿಂದ ಪಾರಾಗಿದೆ. ವಿಶೇಷ ವಿಧಾನ ಸಿದ್ಧಗೊಂಡ ಬಳಿಕ ಅಮೆರಿಕದ ನಿರ್ಬಂಧಕ್ಕೆ ಆತಂಕಗೊಳ್ಳುವ ಪ್ರಮೇಯ ಭಾರತಕ್ಕೆ ಎದುರಾಗುವುದಿಲ್ಲ.