ಧೋನಿ ಅಚ್ಚರಿಯ ಸಾರಥ್ಯಕ್ಕೆ ಟೈ ನಿರಾಸೆ

ದುಬೈ: ಭರ್ತಿ ಎರಡು ವರ್ಷಗಳ ನಂತರ ಎಂಎಸ್ ಧೋನಿಗೆ ನೀಡಿದ ಅಚ್ಚರಿಯ ನಾಯಕತ್ವ ಜವಾಬ್ದಾರಿ ಮತ್ತು 5 ಬದಲಾವಣೆಯೊಂದಿಗೆ ಕಣಕ್ಕಿಳಿದ ಟೀಮ್ ಇಂಡಿಯಾ, ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯ ಸೂಪರ್-4 ಹಂತದ ಕೊನೇ ಪಂದ್ಯದಲ್ಲಿ ಆಫ್ಘಾನಿಸ್ತಾನ ವಿರುದ್ಧ ಟೈ ಫಲಿತಾಂಶಕ್ಕೆ ಸಮಾಧಾನ ಪಟ್ಟಿದೆ. ಈ ಮೂಲಕ ಭಾರತ ಟೂರ್ನಿಯಲ್ಲಿ ಅಜೇಯವಾಗಿ ಪ್ರಶಸ್ತಿ ಹೋರಾಟಕ್ಕೆ ಸಜ್ಜಾದರೆ, ಆಫ್ಘನ್ ಸಮಬಲದ ಗೌರವದೊಂದಿಗೆ ಬೀಗಿತು.

ಮಂಗಳವಾರ ನಡೆದ ಔಪಚಾರಿಕ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದ ಆಫ್ಘನ್ 8 ವಿಕೆಟ್​ಗೆ 252 ರನ್ ಪೇರಿಸಿತು. ಟೂರ್ನಿಯಲ್ಲಿ ಭಾರತದ ಬೌಲಿಂಗ್ ವಿಭಾಗವನ್ನು ಎದುರಿಸಲು ಅನುಭವಿ ಬ್ಯಾಟ್ಸ್ ಮನ್​ಗಳು ಪರದಾಡಿದ್ದರೂ, ಇದರ ಯಾವ ಸೂಚನೆಯನ್ನೂ ನೀಡದೇ ಬ್ಯಾಟಿಂಗ್ ಮಾಡಿದ ವಿಕೆಟ್ ಕೀಪರ್-ಬ್ಯಾಟ್ಸ್​ಮನ್ ಮೊಹಮದ್ ಶೆಹಜಾದ್ (124 ರನ್, 116 ಎಸೆತ, 11 ಬೌಂಡರಿ, 7 ಸಿಕ್ಸರ್) ಅಬ್ಬರದ ಶತಕ ಸಿಡಿಸುವ ಮೂಲಕ ಆಫ್ಘನ್ ಉತ್ತಮ ಮೊತ್ತ ಪೇರಿಸಲು ನೆರವಾದರು. ಪ್ರತಿಯಾಗಿ ಕೆಎಲ್ ರಾಹುಲ್ (60 ರನ್, 66 ಎಸೆತ, 5 ಬೌಂಡರಿ, 1 ಸಿಕ್ಸರ್) ಮತ್ತು ಅಂಬಟಿ ರಾಯುಡು (57 ರನ್, 49 ಎಸೆತ, 4 ಬೌಂಡರಿ, 4 ಸಿಕ್ಸರ್) ಉತ್ತಮ ಬುನಾದಿ ಹಾಕಿಕೊಟ್ಟ ಬಳಿಕ ಕುಸಿತ ಕಂಡ ಭಾರತ ತಂಡ 49.5 ಓವರ್​ಗಳಲ್ಲಿ 252 ರನ್ ಗಳಿಗೆ ಆಲೌಟ್ ಆಗಿ ಟೈ ನಿರಾಸೆ ಅನುಭವಿಸಿತು. ಈ ಮೂಲಕ, ಭಾರತ ಕಂಡ ಅತ್ಯಂತ ಯಶಸ್ವಿ ನಾಯಕರೆನಿಸಿದ ಧೋನಿ ‘ನಾಯಕತ್ವ ಅಧ್ಯಾಯ’ಕ್ಕೆ ಟೈ ಫಲಿತಾಂಶದ ತೆರೆ ಬಿದ್ದಂತಾಗಿದೆ.

ಶೆಹಜಾದ್ ಶತಕದಬ್ಬರ: ಭಾರತದ ಬೌಲಿಂಗ್ ವಿಭಾಗದಲ್ಲಿ ಪ್ರಮುಖ ವೇಗಿಗಳಾದ ಬುಮ್ರಾ ಮತ್ತು ಭುವನೇಶ್ವರ್ ಇಲ್ಲದಿದ್ದರಿಂದ ಪೂರ್ಣ ಸ್ವಾತಂತ್ರ್ಯದೊಂದಿಗೆ ಶೆಹಜಾದ್ ಅಬ್ಬರಿಸಿದರು. ಸ್ಪಿನ್ನರ್ ಕುಲದೀಪ್ ಮತ್ತು ಜಡೇಜಾರ ನಿಯಂತ್ರಿತ ದಾಳಿ ಹೊರತುಪಡಿಸಿ ಉಳಿದೆಲ್ಲಾ ಬೌಲರ್​ಗಳ ಓವರ್​ಗಳಲ್ಲಿ ಎರಾ›ಬಿರ್ರಿಯಾಗಿ ಚಚ್ಚಿದ ಶೆಹಜಾದ್ ತಂಡದ ಮುಕ್ಕಾಲು ಪಾಲು ರನ್ ಬಾರಿಸಿದರು. ಅದರಲ್ಲೂ ಶೆಹಜಾದ್ 49 ರನ್ ಗಳಿಸಿದ್ದಾಗ ಜೀವದಾನ ನೀಡಿದ್ದು ಭಾರತಕ್ಕೆ ದೊಡ್ಡ ಹಿನ್ನಡೆಯಾಯಿತು. ಅರ್ಧಶತಕ ಬಾರಿಸಿದ ಬಳಿಕ ಇನ್ನಷ್ಟು ಅಬ್ಬರಿಸಿದ ಶೆಹಜಾಬ್, ಸತತ ಬೌಂಡರಿ, ಸಿಕ್ಸರ್ ಬಾರಿಸಿದರು. ಆರಂಭಿಕ ಜಾವೇದ್ ಅಹ್ಮದಿ(5) ಮತ್ತು ರೆಹಮತ್ ಷಾರನ್ನು(3) ಜಡೇಜಾ ಪೆವಿಲಿಯನ್ ಸೇರಿಸಿದರೆ, ಹಸ್ಮತ್​ಉಲ್ಲಾ ಶಾಹಿದಿ(0), ಆಸ್ಗರ್ ಆಫ್ಘನ್​ರನ್ನು(0) ಕುಲದೀಪ್ ಔಟ್ ಮಾಡಿದರು. ದುಬಾರಿಯಾದ ಚಹರ್, ಗುಲ್ಬಾದಿನ್ ನೈಬ್(15) ವಿಕೆಟ್ ಕಬಳಿಸಿದೊಡನೆ ಆಫ್ಘನ್ 132 ರನ್​ಗೆ 5 ವಿಕೆಟ್ ಕಳೆದುಕೊಂಡು 200ರ ಗಡಿ ದಾಟುವುದು ಕಷ್ಟ ಸಾಧ್ಯವಾಗಿತ್ತು. ಆದರೆ ಶೆಹಜಾದ್​ಗೆ ಮಧ್ಯಮ ಕ್ರಮಾಂಕದಲ್ಲಿ ಆಲ್ರೌಂಡರ್ ಮೊಹಮದ್ ನಬಿ (64) ನೀಡಿದ ಉತ್ತಮ ಸಾಥ್​ನಿಂದ ತಂಡದ ಮೊತ್ತ 250 ಗಡಿ ದಾಟಿಸುವುದು ಸುಲಭವಾಯಿತು.

ಟೀಮ್ ಇಂಡಿಯಾದಲ್ಲಿ ಐದು ಬದಲಾವಣೆ!

ಟೀಮ್ ಇಂಡಿಯಾ ಪಂದ್ಯದಲ್ಲಿ ಬರೋಬ್ಬರಿ 5 ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ರೋಹಿತ್ ಶರ್ಮ, ಶಿಖರ್ ಧವನ್, ಜಸ್​ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಾಹಲ್ ವಿಶ್ರಾಂತಿ ಪಡೆದರು. ಕನ್ನಡಿಗ ಕೆಎಲ್ ರಾಹುಲ್, ಮನೀಷ್ ಪಾಂಡೆ, ಖಲೀಲ್ ಅಹ್ಮದ್, ಸಿದ್ಧಾರ್ಥ್ ಕೌಲ್ ಹಾಗೂ ದೀಪಕ್ ಚಹರ್ ಕಣಕ್ಕಿಳಿದರು. ದೀಪಕ್ ಚಹರ್​ಗೆ ಇದು ಪದಾರ್ಪಣೆಯ ಪಂದ್ಯವಾಗಿದೆ. ಅಲ್ಲದೆ ಈ ತಂಡದಲ್ಲಿ ನಾಯಕನ ಸಹಿತ 5 ಆಟಗಾರರು ಚೆನ್ನೈ ಸೂಪರ್ ಕಿಂಗ್ಸ್ ತಂಡದವರು ಅನ್ನುವುದು ವಿಶೇಷ. ಧೋನಿ, ರಾಯುಡು, ಜಡೇಜಾ, ಜಾಧವ್ ಮತ್ತು ದೀಪಕ್ ಚಹರ್ ಸಿಎಸ್​ಕೆ ಆಟಗಾರರು.

ರಾಯುಡು, ರಾಹುಲ್ ಅರ್ಧಶತಕದಾಟ

ವಿಶ್ರಾಂತಿ ಪಡೆದ ಸ್ಟಾರ್ ಆರಂಭಿಕರಾದ ಶಿಖರ್ ಧವನ್-ರೋಹಿತ್ ಶರ್ಮರ ಜವಾಬ್ದಾರಿಯನ್ನು ಕನ್ನಡಿಗ ಕೆಎಲ್ ರಾಹುಲ್ ಮತ್ತು ಅಂಬಟಿ ರಾಯುಡು ಉತ್ತಮವಾಗಿ ನಿಭಾಯಿಸಿದರು. ಅವರಿಬ್ಬರು ಮೊದಲ ವಿಕೆಟ್​ಗೆ 110 ರನ್​ಗಳ ಜತೆಯಾಟವಾಡಿದರು. ಆಫ್ಘನ್ ದಾಳಿಗಿಳಿಸಿದ ಮುಜೀಬ್ ಮತ್ತು ರಶೀದ್ ಖಾನ್​ರ ಸ್ಪಿನ್ ಸವಾಲನ್ನು ಎದುರಿಸಲು ಇಬ್ಬರೂ ಸ್ವಲ್ಪ ಕಷ್ಟ ಪಟ್ಟರು. ಅಂಬಟಿ ರಾಯುಡು ಬಿರುಸಿನ ಬೌಂಡರಿ-ಸಿಕ್ಸರ್ ಸಿಡಿಸಿ ಸುಲಭವಾಗಿ ಅರ್ಧಶತಕ ಪೂರೈಸಿ ಇನಿಂಗ್ಸ್ ವಿಸ್ತರಿಸುವ ಅವಕಾಶ ಹೊಂದಿದ್ದರು. ಆದರೆ ಅಗತ್ಯವಿಲ್ಲದ ಸಂದರ್ಭದಲ್ಲಿ ಸ್ಪಿನ್ನರ್ ನಬಿ ಓವರ್​ನಲ್ಲಿ ಸಿಕ್ಸರ್​ಗೆ ಪ್ರಯತ್ನಿಸಿ ಲಾಂಗ್ ಆನ್​ನಲ್ಲಿ ಕ್ಯಾಚ್ ಕೊಟ್ಟರು. ಟೂರ್ನಿಯಲ್ಲಿ ಮೊದಲ ಅವಕಾಶ ಪಡೆದ ರಾಹುಲ್ ಅರ್ಧಶತಕ ಬಾರಿಸಿದರೂ ಅಳುಕಿನಿಂದಲೇ ಆಡಿದರು. ರಶೀದ್ ಖಾನ್ ಓವರ್​ನಲ್ಲಿ ಕೆಟ್ಟ ಶಾಟ್​ಗೆ ವಿಕೆಟ್ ಒಪ್ಪಿಸಿ ನಿರಾಸೆಗೊಂಡರು. ಬಳಿಕ ಎಂಎಸ್ ಧೋನಿ(8) ಬಂದು ಸ್ಪಿನ್ ದಾಳಿ ಎದುರಿಸಲು ಪರದಾಡಿ ಜಾವೆದ್ ಅಹ್ಮದಿಗೆ ಎಲ್​ಬಿಯಾದರು. ಟೂರ್ನಿಯಲ್ಲಿ ಮೊದಲ ಅವಕಾಶ ಪಡೆದ ಕನ್ನಡಿಗ ಮನೀಷ್ ಪಾಂಡೆ (8) ಕೂಡ ನಿಯಂತ್ರಣವಿಲ್ಲದ ಹೊಡೆತಕ್ಕೆ ಪ್ರಯತ್ನಿಸಿ ಕೀಪರ್​ಗೆ ಕ್ಯಾಚ್ ಕೊಟ್ಟರು. ಆಗ ಭಾರತದ 166ರನ್​ಗೆ 4 ವಿಕೆಟ್ ಕಬಳಿಸಿದ ಆಫ್ಘನ್ ಮೇಲುಗೈ ಸಾಧಿಸಿತ್ತು. ಬಳಿಕ ದಿನೇಶ್ ಕಾರ್ತಿಕ್(44ರನ್, 66ಎಸೆತ, 4ಬೌಂಡರಿ) ಮತ್ತು ಕೇದಾರ್ ಜಾಧವ್(19) ಜೋಡಿ ಎಚ್ಚರಿಕೆಯಿಂದ ಮೊತ್ತವನ್ನು 200ರ ಗಡಿ ದಾಟಿಸಿ ಗೆಲುವಿನ ಸನಿಹ ತಂದರು. ಆದರೆ ಇವರಿಬ್ಬರೂ 6 ಎಸೆತಗಳೊಳಗೆ ಔಟಾಗುತ್ತಿದ್ದಂತೆ ಭಾರತ ಮತ್ತೆ ಲಯ ತಪ್ಪಿತು. ಅಂತಿಮವಾಗಿ ಗೆಲುವಿಗೆ 62 ಎಸೆತಗಳಲ್ಲಿ 48 ರನ್​ಗಳ ಸವಾಲು ಎದುರಾಯಿತು. ಆಗ ರವೀಂದ್ರ ಜಡೇಜಾ (25) ತಂಡಕ್ಕೆ ಆಸರೆಯಾಗಿ ನಿಂತರೂ, ಅಂತಿಮ ಓವರ್​ನಲ್ಲಿ 7 ರನ್ ಕಸಿಯಲು ವಿಫಲರಾದರು.

ಮತ್ತೆ ನಾಯಕನಾದ ಧೋನಿ!

ಸತತ ಪಂದ್ಯಗಳನ್ನಾಡಿದ ಉಪನಾಯಕ ಶಿಖರ್ ಧವನ್ ವಿಶ್ರಾಂತಿ ಪಡೆಯಬಹುದೆಂಬ ನಿರೀಕ್ಷೆಯಿತ್ತು. ಆದರೆ ಹಂಗಾಮಿ ನಾಯಕ ರೋಹಿತ್ ಶರ್ಮಗೂ ರೆಸ್ಟ್ ನೀಡಿ ಟಾಸ್ ಪ್ರಕ್ರಿಯೆಗೆ ಮಾಜಿ ನಾಯಕ ಎಂಎಸ್ ಧೋನಿ ಆಗಮಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಧೋನಿ 696 ದಿನ ಅಂದರೆ, ಭರ್ತಿ 2 ವರ್ಷದ ನಂತರ ಮೊದಲ ಬಾರಿ ಮತ್ತು ಒಟ್ಟಾರೆ 200ನೇ ಏಕದಿನ ಪಂದ್ಯದಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ ಮೈಲಿಗಲ್ಲು ಸ್ಥಾಪಿಸಿದರು. ಧೋನಿ 200 ಏಕದಿನ ಪಂದ್ಯಗಳಲ್ಲಿ ತಂಡ ಮುನ್ನಡೆಸಿದ 3ನೇ ನಾಯಕ ಎನಿಸಿಕೊಂಡರು. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್(230 ಪಂದ್ಯ) ಮತ್ತು ನ್ಯೂಜಿಲೆಂಡ್​ನ ಸ್ಟೀಫನ್ ಫ್ಲೆಮಿಂಗ್(218) ಅಗ್ರಸ್ಥಾನದಲ್ಲಿದ್ದಾರೆ. ‘ನಾನು 199 ಏಕದಿನಕ್ಕೆ ನಾಯಕನಾಗಿದ್ದು, ಇದು 200 ಪಂದ್ಯ ಭರ್ತಿ ಮಾಡಲು ಸಿಕ್ಕಿದ ಅವಕಾಶವಷ್ಟೆ. ನಾನು ಈಗಾಗಲೆ ನಾಯಕತ್ವದಿಂದ ಕೆಳಗಿಳಿದಿರುವುದರಿಂದ ಅದು ನನ್ನ ನಿಯಂತ್ರಣದಲ್ಲಿ ಇಲ್ಲ. ಇಷ್ಟು ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದು ದೊಡ್ಡ ವಿಶೇಷತೆಯೇನೂ ಅಲ್ಲ’ ಎಂದು ಧೋನಿ ಟಾಸ್ ಪ್ರಕ್ರಿಯೆಯ ವೇಳೆ ಹೇಳಿದರು.

5 – ಶೆಹಜಾದ್ ಏಕದಿನ ಕ್ರಿಕೆಟ್​ನಲ್ಲಿ 5ನೇ ಶತಕ ಬಾರಿಸಿದರು. ಜಿಂಬಾಬ್ವೆ ಹೊರತಾಗಿ ಟೆಸ್ಟ್ ಮಾನ್ಯತೆಯ ಬಲಿಷ್ಠ ತಂಡವೊಂದರ ವಿರುದ್ಧ ಇದು ಅವರ ಮೊದಲ ಶತಕವಾಗಿದೆ.

ಇಂದು ಪಾಕ್-ಬಾಂಗ್ಲಾ ಸೆಮಿಫೈನಲ್

ಅಬುಧಾಬಿ: ಕಳೆದ ವರ್ಷ ಚಾಂಪಿಯನ್ಸ್ ಟ್ರೋಫಿಯಲ್ಲಿ ಚಾಂಪಿಯನ್ ಆದ ಬಳಿಕ ಏಷ್ಯಾಕಪ್ ಟೂರ್ನಿಯಲ್ಲೂ ಅಂಥದ್ದೇ ಸಾಧನೆ ಪುನರಾವರ್ತಿಸುವ ಹಂಬಲದಲ್ಲಿದ್ದ ಪಾಕಿಸ್ತಾನ ತಂಡ ಈಗ ಪ್ರಶಸ್ತಿ ಹಂತಕ್ಕೇರಲು ಮಾಡು ಇಲ್ಲವೆ ಮಡಿ ಹೋರಾಟ ನಡೆಸುವ ಒತ್ತಡದಲ್ಲಿದೆ. ದಿಗ್ಗಜ ವಾಸಿಂ ಅಕ್ರಂ ಸೇರಿದಂತೆ ಮಾಜಿ ಆಟಗಾರರಿಂದ ಈಗಾಗಲೆ ಟೀಕೆಗೂ ಗುರಿಯಾಗಿರುವ ಪಾಕ್, ಬುಧವಾರ ನಡೆಯಲಿರುವ ಸೆಮಿಫೈನಲ್ ಮಾದರಿಯ ಪಂದ್ಯದಲ್ಲಿ ಹಾಲಿ ರನ್ನರ್​ಅಪ್ ಬಾಂಗ್ಲಾದೇಶವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಶುಕ್ರವಾರ ಫೈನಲ್​ನಲ್ಲಿ ಟೀಮ್ ಇಂಡಿಯಾವನ್ನು ಎದುರಿಸಲಿದೆ.

ಭಾರತ ವಿರುದ್ಧದ 2 ಅವಮಾನಕರ ಸೋಲು ಪಾಕ್ ತಂಡದ ಆಟಗಾರರನ್ನು ಮಾನಸಿಕವಾಗಿ ಕುಸಿಯುವಂತೆ ಮಾಡಿದ್ದು, ಬಾಂಗ್ಲಾಗೆ ಮೇಲುಗೈ ಸಾಧಿಸಲು ಉತ್ತಮ ಅವಕಾಶ ಎದುರಾಗಿದೆ. ಶೋಯಿಬ್ ಮಲಿಕ್, ಇಮಾಮ್ ಉಲ್ ಹಕ್ ಹೊರತುಪಡಿಸಿ ಬಾಬರ್ ಅಜಮ್ ಫಖರ್ ಜಮಾನ್ ಬ್ಯಾಟ್​ನಿಂದ ನಿರೀಕ್ಷೆಗೆ ತಕ್ಕ ಆಟ ಮೂಡಿಬಂದಿಲ್ಲ. ಬೌಲಿಂಗ್​ನಲ್ಲೂ ಅಷ್ಟೆ. ಭಾರಿ ನಿರೀಕ್ಷೆ ಮೂಡಿಸಿದ್ದ ಅಪಾಯಕಾರಿ ವೇಗಿ ಮೊಹಮದ್ ಆಮೀರ್, ಹಸನ್ ಅಲಿ ಒಂದು ವಿಕೆಟ್ ಪಡೆಯಲೇ ಪರದಾಡುತ್ತಿದ್ದು, ಲಯಕ್ಕೆ ಮರಳುವ ಅನಿವಾರ್ಯವಿದೆ.

ಹಿಂದಿನ ಪಂದ್ಯದಲ್ಲಿ ಆಫ್ಘನ್ ತಂಡವನ್ನು ರೋಚಕವಾಗಿ ಮಣಿಸಿದ ಬಾಂಗ್ಲಾ ಏಷ್ಯಾಕಪ್​ನಲ್ಲಿ ಸತತ 2ನೇ ಬಾರಿ ಫೈನಲ್​ಗೇರುವ ಹುಮ್ಮಸ್ಸಿನಲ್ಲಿದೆ. ಬಾಂಗ್ಲಾ ಕೂಡ ಟೂರ್ನಿಯಲ್ಲಿ ಪಾಕ್​ನಂತೆ ಅಸ್ಥಿರ ನಿರ್ವಹಣೆ ತೋರಿರುವ ತಂಡ. ಪದೇಪದೇ ವಿಫಲಗೊಳ್ಳುತ್ತಿರುವ ಅನುಭವಿ ಮುಶ್ಪೀಕರ್ ರಹೀಂ ಮತ್ತು ಶಕೀಬ್ ಅಲ್ ಹಸನ್ ಜವಾಬ್ದಾರಿಯುತವಾಗಿ ಆಡಬೇಕಾಗಿದೆ.