ಭಾರತ ಮೂಲದ ಅಕ್ಷಯ್​ ವೆಂಕಟೇಶ್​ಗೆ ಫೀಲ್ಡ್ಸ್ ಪದಕದ ಗೌರವ

ನವದೆಹಲಿ: ಭಾರತ ಮೂಲದ ಅಕ್ಷಯ್ ವೆಂಕಟೇಶ್​ ಗಣಿತ ಕ್ಷೇತ್ರದ ಸಾಧನೆಗಾಗಿ ತಮ್ಮ 36ನೇ ವಯಸ್ಸಿನಲ್ಲಿ ಫೀಲ್ಡ್ಸ್ ಪದಕ ಪುರಸ್ಕೃತರಾಗಿದ್ದಾರೆ. ಈ ಪದಕವನ್ನು ಗಣಿತ ಕ್ಷೇತ್ರದ ನೊಬೆಲ್​ ಪ್ರಶಸ್ತಿ ಎಂದೇ ಪರಿಗಣಿಸಲಾಗುತ್ತದೆ. ಗಣಿತದಲ್ಲಿ ಅಮೋಘ ಸಾಧನೆ ಮಾಡುವವರಿಗೆ ಕೊಡುವ ಈ ಪ್ರಶಸ್ತಿಗೆ ಅಕ್ಷಯ್​ ಅವರೂ ಸೇರಿದಂತೆ ನಾಲ್ವರನ್ನು ಆಯ್ಕೆ ಮಾಡಲಾಗಿದೆ.

ಅಕ್ಷಯ್​ ಆಸ್ಟ್ರೇಲಿಯಾ ನಿವಾಸಿಯಾಗಿದ್ದು, ಚಿಕ್ಕಂದಿನಿಂದಲೂ ಅಗಾಧ ಬುದ್ಧಿ ಶಕ್ತಿ ಹೊಂದಿದ್ದವರು. ತಮ್ಮ 13ನೇ ವಯಸ್ಸಿನಿಂದಲೇ ಪಶ್ಚಿಮ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪ್ರಾರಂಭ ಮಾಡಿದರು. 16ನೇ ವರ್ಷದಲ್ಲಿ ಗಣಿತದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ನಂತರ ಪ್ರಿನ್ಸನ್​ ಯೂನಿವರ್ಸಿಟಿ ಸೇರಿದರು.

ಅಕ್ಷಯ್​ ಅವರು ಸಂಖ್ಯಾ ಸಿದ್ಧಾಂತ, ಅಂಕಗಣಿತ, ರೇಖಾಗಣಿತ, ಟೋಪೋಲೊಜಿ, ಆಟೋಮಾರ್ಫಿಕ್ ರೂಪಗಳು ಮತ್ತು ಎರ್ಗೊಡಿಕ್ ಸಿದ್ಧಾಂತಗಳ ಬಗ್ಗೆ ಉನ್ನತ ಮಟ್ಟದ ಸಂಶೋಧನೆ ಮಾಡಿದವರು. ಅವರ ಅಧ್ಯಯನಕ್ಕೆ ಈಗಾಗಲೇ ಓಸ್ಟ್ರೋಸ್ಕಿ ಪ್ರಶಸ್ತಿ, ಇನ್ಫೋಸಿಸ್​ ಪ್ರಶಸ್ತಿ, ಸೇಲಂ ಪ್ರಶಸ್ತಿ ಮತ್ತು ರಾಮಾನುಜನ್ ಪ್ರಶಸ್ತಿಗಳು ಸಂದಿವೆ.

ವೆಂಕಟೇಶ್​ ಮೂಲತಃ ದೆಹಲಿಯವರು. ತಮ್ಮ ಎರಡನೇ ವಯಸ್ಸಿನಲ್ಲಿ ಪಾಲಕರ ಜತೆ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. 20ನೇ ವಯಸ್ಸಿನಲ್ಲಿ ಪಿಎಚ್​ಡಿ ಪಡೆದಿದ್ದಾರೆ. ಎಂಐಟಿಯಲ್ಲಿ ಡಾಕ್ಟರಲ್ ನಂತರದ ಸ್ಥಾನಕ್ಕೇರಲು ಕ್ಲೇ ರಿಸರ್ಚ್​ನಲ್ಲಿ ತೊಡಗಿದರು. ಈಗ ಸ್ಟಾನ್​ಫೋರ್ಡ್​ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್​ ಆಗಿದ್ದಾರೆ. (ಏಜೆನ್ಸೀಸ್​)