2021ರ ಡಿಸೆಂಬರ್​ಗೆ ಮಾನವಸಹಿತ ಗಗನಯಾನ

ಬೆಂಗಳೂರು: ಮಾನವಸಹಿತ ಗಗನ್​ಯಾನ್ ಯೋಜನೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಸಿದ್ಧತೆ ಆರಂಭಿಸಿದೆ. 2021ರ ಡಿಸೆಂಬರ್​ನಲ್ಲಿ ಈ ಯೋಜನೆ ಕೈಗೊಳ್ಳಲು ಸ್ವಯಂ ಗಡುವು ವಿಧಿಸಿಕೊಂಡಿರುವ ಇಸ್ರೋ ಇದಕ್ಕೆ ಪೂರಕವಾಗಿ ಪ್ರತ್ಯೇಕ ಮಾನವ ಬಾಹ್ಯಾಕಾಶಯಾನ ಕೇಂದ್ರ ಸ್ಥಾಪಿಸಿದೆ.

ಬೆಂಗಳೂರಿನಲ್ಲಿರುವ ಇಸ್ರೋದ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಇಸ್ರೋ ಅಧ್ಯಕ್ಷ ಕೆ. ಶಿವನ್ ಗಗನ್​ಯಾನ್, ಚಂದ್ರ ಯಾನ-2 ಯೋಜನೆಗಳು ಸೇರಿ 2019ರ ಒಟ್ಟಾರೆ ಯೋಜನೆಗಳ ಮುನ್ನೋಟ ಒದಗಿಸಿದರು.

ಮಹಿಳಾ ಗಗನಯಾತ್ರಿ?: ಗಗನ್​ಯಾನ್ ಯೋಜನೆ ಯಲ್ಲಿ ಬಾಹ್ಯಾ ಕಾಶಯಾನ ಕೈಗೊಳ್ಳುವವರೆಲ್ಲರೂ ಭಾರತೀಯ ವಾಯುಪಡೆ ಅಧಿಕಾರಿ ಗಳು ಆಗಿರುತ್ತಾರೆ. ಮೊದಲ ಯೋಜನೆಯಲ್ಲಿ ಗಗನ ಯಾತ್ರಿಗಳು ಒಟ್ಟು 7 ದಿನ ಬಾಹ್ಯಾಕಾಶದಲ್ಲಿ ಇರುತ್ತಾರೆ. ಒಟ್ಟಾರೆ ಮೂವರು ಗಗನಯಾತ್ರಿಗಳನ್ನು ಕಳುಹಿಸಲು ನಿರ್ಧರಿಸಲಾಗಿದೆ. ಇವರಲ್ಲಿ ಒಬ್ಬ ಮಹಿಳೆಯೂ ಇರಲಿದ್ದಾರೆ ಎಂದು ಶಿವನ್ ತಿಳಿಸಿದರು.

ಪ್ರಧಾನಿ ಸೂಚನೆ: ಭಾರತದ 75ನೇ ಸ್ವಾತಂತ್ರ್ಯ ಸಂಭ್ರಮದ ಸಂದರ್ಭದಲ್ಲಿ ವಿಶ್ವಕ್ಕೆ ಭಾರತದ ಶಕ್ತಿ ತೋರ್ಪಡಿಸಬೇಕು ಎಂಬುದು ಇಸ್ರೋ ಉದ್ದೇಶ. ಪ್ರಧಾನಿ ನರೇಂದ್ರ ಮೋದಿ ಅವರ ಈ ಇಂಗಿತವನ್ನು ಅರ್ಥೈಸಿಕೊಂಡಿರುವ ಇಸ್ರೋ, 2022ರ ಆಗಸ್ಟ್ 15ರ ಭಾರತ 75ನೇ ಸ್ವಾತಂತ್ರ ದಿನಾಚರಣೆಗೂ 8 ತಿಂಗಳು ಮೊದಲೇ ಗಗನ್​ಯಾನ್ ಯೋಜನೆಯನ್ನು ಯಶಸ್ವಿಯಾಗಿ ಪೂರೈಸಲು ಗಡುವು ಹಾಕಿಕೊಂಡಿದೆ.

3 ಪ್ರಮುಖ ಯೋಜನೆಗೆ ಆದ್ಯತೆ: ಪ್ರಸಕ್ತ ವರ್ಷದಲ್ಲಿ ಇಸ್ರೋ 3 ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಿದೆ. 2019ರ ಜುಲೈನಲ್ಲಿ ಅತಿಕಡಿಮೆ ತೂಕದ, ಸಣ್ಣ ಉಪಗ್ರಹ ಕಳುಹಿಸುವ ರಾಕೆಟ್ ಉಡಾವಣೆ ಮಾಡಲಿದೆ. ಕೇವಲ 72 ಗಂಟೆಗಳ ಒಳಗೆ 100 ಟನ್ ತೂಕದ ಈ ಉಡಾಹಕ ಸಿದ್ಧಗೊಳ್ಳಲಿದೆ. 30 ಕೋಟಿ ರೂ. ವೆಚ್ಚದಲ್ಲಿ ತಯಾರಾಗಲಿದ್ದು, 6 ಜನರು ನಿಯಂತ್ರಿಸಲಿದ್ದಾರೆ. ಗರಿಷ್ಠ 500 ಕೆ.ಜಿ. ಭಾರದ ಉಪಗ್ರಹವನ್ನು ಇದು ಹೊತ್ತೊಯ್ಯಲಿದೆ. ದೇಶಕ್ಕೆ 100 ಜಿಬಿಪಿಎಸ್ ವೇಗದ ಇಂಟರ್​ನೆಟ್ ಸೌಲಭ್ಯ ಒದಗಿಸಲಿರುವ ಜಿಸ್ಯಾಟ್ 20 ಸೆಪ್ಟಂಬರ್/ ಅಕ್ಟೋಬರ್​ನಲ್ಲಿ ಉಡಾವಣೆಯಾಗಲಿದೆ. ಜತೆಗೆ ಮರುಬಳಸಬಹುದಾದ ಉಡಾಹಕದ ಪರೀಕ್ಷೆಗೂ ಇಸ್ರೋ ಸಜ್ಜಾಗುತ್ತಿದೆ. ಅಂದಾಜು 2-3 ಕಿ.ಮೀ. ಎತ್ತರಕ್ಕೆ ಹೆಲಿಕಾಪ್ಟರ್​ನಲ್ಲಿ ಈ ಉಡಾವಣಾ ವಾಹನವನ್ನು ಹೊತ್ತೊಯ್ದು ಉಡಾವಣೆ ಮಾಡಿ ಸುರಕ್ಷಿತವಾಗಿ ಭೂಮಿಗೆ ಇಳಿಸಲಾಗುವುದು.

ಎರಡು ಮಾನವ ರಹಿತ ನೌಕೆ

ಗಗನ್​ಯಾನ್​ನ ಅಂತಿಮ ಉಡಾವಣೆಗೂ ಮುನ್ನ 2 ಮಾನವರಹಿತ ನೌಕೆಗಳು ಪರೀಕ್ಷಾರ್ಥ ಹಾರಾಟ ಕೈಗೊಳ್ಳಲಿವೆ. ಜಿಎಸ್​ಎಲ್​ವಿ ಮಾರ್ಕ್ 3 ಉಡಾಹಕಗಳನ್ನು ಬಳಸಿ 2020ರ ಡಿಸೆಂಬರ್ ಹಾಗೂ 2021ರ ಜುಲೈನಲ್ಲಿ ಪರೀಕ್ಷಾರ್ಥ ಹಾರಾಟ ನಡೆಯಲಿದೆ. ಬಾಹ್ಯಾಕಾಶಯಾನಿಗಳ ಸುರಕ್ಷತೆ ಸೇರಿ ಹಲವು ಅಂಶಗಳನ್ನು ಗಮನಿಸಲಾಗುವುದು. ಲಭಿಸುವ ಮಾಹಿತಿ ಆಧರಿಸಿ, ಕೆಲ ಬದಲಾವಣೆ ಮಾಡಲಾಗುವುದು ಎಂದು ಶಿವನ್ ತಿಳಿಸಿದ್ದಾರೆ.

2019ರಲ್ಲಿ ಮಿಷನ್ 32!

ಇಸ್ರೋ 2018ರಲ್ಲಿ 17 ಯೋಜನೆ ಕೈಗೆತ್ತಿಕೊಂಡಿದ್ದು, 16 ಯೋಜನೆಗಳು ಯಶಸ್ವಿಯಾಗಿವೆ. 2019ರಲ್ಲಿ 32 ಯೋಜನೆ ಕೈಗೊಳ್ಳಲು ನಿರ್ಧರಿಸಿದೆ. 8 ಪಿಎಸ್​ಎಲ್​ವಿ, 2 ಜಿಎಸ್​ಎಲ್​ವಿ, 2 ಮಾರ್ಕ್ 3 ಹಾಗೂ 2 ಎಸ್​ಎಸ್​ಎಲ್​ವಿ ಸೇರಿ 14 ಉಡಾಹಕಗಳು, 18 ಉಪಗ್ರಹ ಉಡಾವಣೆಯಾಗಲಿವೆ.

ಚಂದ್ರನ ಮೇಲೂ ಭಾರತದ ಹೆಜ್ಜೆ ಗುರುತು!

ಪ್ರಸಕ್ತ ಸಾಲಿನಲ್ಲಿ ಗಗನ್​ಯಾನ್ ಯೋಜನೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಪ್ರಸ್ತುತ ಇಸ್ರೋದ ಚಟುವಟಿಕೆಗಳು ಉಡಾವಣಾ ವಾಹನ ನಿರ್ಮಾಣ ಮತ್ತು ಉಪಗ್ರಹಗಳ ಉಡಾವಣೆಗೆ ಸೀಮಿತವಾಗಿದೆ. ಆದರೆ, ಗಗನ್​ಯಾನ್ ಯೋಜನೆಯಿಂದ ಸಂಸ್ಥೆಯ ಕಾರ್ಯಚಟುವಟಿಕೆ ಮತ್ತಷ್ಟು ವಿಸ್ತಾರವಾಗಲಿದೆ. ಈ ಬಾರಿ ಉಡಾವಣೆಗೊಳ್ಳುವ ರಾಕೆಟ್​ನಲ್ಲಿ ಉಪಗ್ರಹದ ಬದಲು ಮಾನವರು ಇರಲಿದ್ದಾರೆ. ಇದಕ್ಕೆ ಪೂರಕವಾಗಿ ಇಸ್ರೋದ ಬೆಂಗಳೂರು ಕೇಂದ್ರದಲ್ಲಿ ಮೊದಲ ಬಾರಿಗೆ ಪ್ರತ್ಯೇಕ ಮಾನವ ಬಾಹ್ಯಾಕಾಶಯಾನ ಕೇಂದ್ರವನ್ನು (ಹ್ಯೂಮನ್ ಸ್ಪೇಸ್​ಫ್ಲೈಟ್ ಸೆಂಟರ್) ಸ್ಥಾಪಿಸಲಾಗುತ್ತಿದೆ ಎಂದು ಶಿವನ್ ತಿಳಿಸಿದರು. ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಸಮಾನವಾಗಿ ಭಾರತದ ಬಾಹ್ಯಾಕಾಶ ಕೇಂದ್ರ ಸ್ಥಾಪನೆಗೆ ಹಾಗೂ ಚಂದ್ರನ ಮೇಲೆ ಮಾನವರನ್ನು ಇಳಿಸುವ ಯೋಜನೆಗಳಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ನಿರ್ದೇಶಕರಾಗಿ ಉನ್ನಿಕೃಷ್ಣನ್ ನಾಯರ್

ಮಾನವ ಬಾಹ್ಯಾಕಾಶಯಾನ ಕೇಂದ್ರದ ನಿರ್ದೇಶಕರಾಗಿ ಹಿರಿಯ ವಿಜ್ಞಾನಿ ಡಾ. ಉನ್ನಿಕೃಷ್ಣನ್ ನಾಯರ್ ನೇಮಕಗೊಂಡಿದ್ದಾರೆ. ಇದಕ್ಕೂ ಮುನ್ನ ಇವರು ವಿಕ್ರಮ್ ಸಾರಾಬಾಯ್ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ಹಿಂದೆ ಪಿಎಸ್​ಎಲ್​ವಿ ಯೋಜನಾ ನಿರ್ದೇಶಕರಾಗಿದ್ದ ಆರ್. ಹಟ್ಟನ್ ಗಗನ್​ಯಾನ್ ಯೋಜನೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಏಪ್ರಿಲ್​ನಲ್ಲಿ ಚಂದ್ರಯಾನ-2

2008ರ ಚಂದ್ರಯಾನ 1ರ ಯಶಸ್ಸಿನಿಂದ ಉತ್ತೇಜನಗೊಂಡಿರುವ ಇಸ್ರೋ, 2019ರ ಏಪ್ರಿಲ್​ನಲ್ಲಿ ಚಂದ್ರಯಾನ 2ರ ಉಡಾವಣೆಗೆ ಸಜ್ಜಾಗಿದೆ. ಉಡಾವಣೆಗೊಂಡ ಬಳಿಕ ಉಪಗ್ರಹವು ಚಂದ್ರನ ಮೇಲೆ ಇಳಿಯಲು ಕನಿಷ್ಠ 35-45 ದಿನ ಬೇಕಾಗುತ್ತದೆ. ಉಪಗ್ರಹವು 6 ಹಂತಗಳಲ್ಲಿ ಚಂದ್ರನ ಕಕ್ಷೆ ಸೇರಲಿದೆ. ಬಳಿಕ ಇದರಲ್ಲಿರುವ ರೋವರ್ ವಾಹನ ಚಂದ್ರನ ಮೇಲೆ ಇಳಿಯಲಿದೆ. ಇದು ಅಂದಾಜು 500 ಮೀ. ಸಂಚರಿಸಿ ಚಂದ್ರನ ಮೇಲ್ಮೈ ಪರೀಕ್ಷಿಸಲಿದೆ. ಉಪಗ್ರಹ 1 ವರ್ಷ ಕಾರ್ಯನಿರ್ವಹಿಸಲಿದ್ದು, ರೋವರ್ ವಾಹನ 14 ದಿನ ಕಾರ್ಯನಿರ್ವಹಿಸಲಿದೆ.

ಬಾಹ್ಯಾಕಾಶಯಾನಿಗಳಿಗೆ ಪ್ರಾಥಮಿಕ ತರಬೇತಿಯನ್ನು ಭಾರತದಲ್ಲೇ ನೀಡಲಾಗುತ್ತದೆ. ಹೆಚ್ಚುವರಿ ತರಬೇತಿಯನ್ನು ಮಾತ್ರ ರಷ್ಯಾದಲ್ಲಿ ಕೊಡಿಸಲಾಗುವುದು.

| ಕೆ. ಶಿವನ್ ಇಸ್ರೋ ಅಧ್ಯಕ್ಷ