ಸರಣಿ ಗೆದ್ದ ಭಾರತ ಎ

ಮೈಸೂರು: ಮಯಾಂಕ್ ಮಾರ್ಕಂಡೆ (31ಕ್ಕೆ 5) ಮಾರಕ ಸ್ಪಿನ್ ದಾಳಿ ನೆರವಿನಿಂದ ಭಾರತ ಎ ತಂಡ ಪ್ರವಾಸಿ ಇಂಗ್ಲೆಂಡ್ ಲಯನ್ಸ್ ವಿರುದ್ಧದ 2ನೇ ಹಾಗೂ ಅಂತಿಮ ಚತುರ್ದಿನ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 68 ರನ್​ಗಳಿಂದ ಜಯ ದಾಖಲಿಸಿತು. ಈ ಮೂಲಕ ಕನ್ನಡಿಗ ಕೆಎಲ್ ರಾಹುಲ್ ಪಡೆ 1-0ಯಿಂದ ಸರಣಿ ವಶಪಡಿಸಿಕೊಂಡಿತು.

ಕೇರಳದ ವಯನಾಡ್​ನಲ್ಲಿ ನಡೆದ ಮೊದಲ ಪಂದ್ಯ ಡ್ರಾಗೊಂಡಿತ್ತು. ಕನ್ನಡಿಗ ರಾಹುಲ್ ದ್ರಾವಿಡ್ ಮಾರ್ಗದರ್ಶನದ ಭಾರತ ಎ ತಂಡ ಇದಕ್ಕೂ ಮೊದಲು ಏಕದಿನ ಸರಣಿಯನ್ನು 4-1ರಿಂದ ಗೆದ್ದುಕೊಂಡಿತ್ತು. ಒಡೆಯರ್ ಮೈದಾನದಲ್ಲಿ ಶುಕ್ರವಾರ ಮುಕ್ತಾಯಗೊಂಡ ಪಂದ್ಯದಲ್ಲಿ ವಿಕೆಟ್ ನಷ್ಟವಿಲ್ಲದೆ 24 ರನ್​ಗಳಿಂದ 3ನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ಲಯನ್ಸ್ ತಂಡ 180 ರನ್​ಗಳಿಗೆ ಸರ್ವಪತನ ಕಂಡಿತು. ಚಹಾ ವಿರಾಮಕ್ಕೂ ಮೊದಲೇ ಇಂಗ್ಲೆಂಡ್ ತಂಡಕ್ಕೆ ಕಡಿವಾಣ ಹಾಕಿದ ಭಾರತ ಕೇವಲ ಎರಡೂವರೆ ದಿನಗಳಲ್ಲೇ ಪಂದ್ಯ ಗೆದ್ದುಕೊಂಡಿತು. 252 ರನ್ ಮುನ್ನಡೆ ಸಾಧಿಸಿದ್ದ ಭಾರತ ಎದುರಾಳಿಗೆ ಫಾಲೋಆನ್ ಹೇರಿತ್ತು.

ಭಾರತ ಎ : 392, ಇಂಗ್ಲೆಂಡ್ ಲಯನ್ಸ್: 144 ಮತ್ತು 53.3 ಓವರ್​ಗಳಲ್ಲಿ 180 (ಡಕೆಟ್ 50, ಲೆವಿಸ್ ಗ್ರೇಗೊರಿ 44, ಬಿಲ್ಲಿಂಗ್ಸ್ 20, ಮಾರ್ಕಂಡೆ 31ಕ್ಕೆ 5, ಜಲಜ್ ಸಕ್ಸೆನಾ 40ಕ್ಕೆ 2, ನವದೀಪ್ ಸೈನಿ 25ಕ್ಕೆ 1, ನದೀಂ 25ಕ್ಕೆ 1, ವರುಣ್ ಆರನ್ 39ಕ್ಕೆ 1).