ಭಾರತ ಎ ಹಾಗೂ ಶ್ರೀಲಂಕಾ ಎ ನಡುವಿನ 4ನೇ ಏಕದಿನ ಪಂದ್ಯ ಮಳೆಯಿಂದಾಗಿ ರದ್ದು

ಹುಬ್ಬಳ್ಳಿ: ಇಲ್ಲಿನ ರಾಜನಗರ ಕೆಎಸ್​ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಎ ಹಾಗೂ ಶ್ರೀಲಂಕಾ ಎ ನಡುವಿನ 4ನೇ ಏಕದಿನ ಪಂದ್ಯ ಮಳೆಯಿಂದಾಗಿ ಮತ್ತೊಮ್ಮೆ ರದ್ದಾಗಿದೆ.

ಗುರುವಾರ ಮಳೆಯಿಂದಾಗಿ 50 ಓವರ್​​​ಗಳ ಪಂದ್ಯವನ್ನು 22 ಓವರ್​ಗಳಿಗೆ ನಿಗದಿಪಡಿಸಲಾಗಿತ್ತು. ನಂತರ ಬ್ಯಾಟಿಂಗ್​ ಮಾಡಿದ ಭಾರತ 22 ಓವರ್​ಗಳಲ್ಲಿ ನಾಲ್ಕು ವಿಕೆಟ್​​ ನಷ್ಟಕ್ಕೆ 208 ರನ್​ ಗಳಿಸಿತ್ತು. ಶ್ರೀಲಂಕಾ ಬ್ಯಾಟಿಂಗ್​ ನಡೆಸುವ ವೇಳೆ ಮತ್ತೆ ಮಳೆ ಬಂದಿದ್ದರಿಂದ ಪಂದ್ಯವನ್ನು ರದ್ದು ಪಡಿಸಲಾಗಿತ್ತು.

ಶುಕ್ರವಾರ ಮತ್ತೆ 4ನೇ ಪಂದ್ಯಕ್ಕೆ ಚಾಲನೆ ನೀಡಿ ತಲಾ 36 ಓವರ್​ಗಳಿಗೆ ನಿಗದಿ ಪಡಿಸಲಾಗಿತ್ತು. ಟಾಸ್ ಗೆದ್ದ ಭಾರತ ಎ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಶ್ರೀಲಂಕಾ ಎ 3.3 ಓವರ್‌ಗಳಲ್ಲಿ 1 ವಿಕೆಟ್​ಗೆ 22 ರನ್ ಗಳಿಸಿದ್ದ ವೇಳೆ ಸುರಿದ ಧಾರಾಕಾರ ಮಳೆಯಿಂದಾಗಿ ಪಿಚ್ ಹಾಗೂ ಮೈದಾನ ಒದ್ದೆಯಾದ ಕಾರಣ ಪಂದ್ಯವನ್ನು ರದ್ದು ಪಡಿಸಲಾಯಿತು.

5 ಪಂದ್ಯಗಳ ಸರಣಿಯಲ್ಲಿ ಭಾರತ ಎ 2-1 ಅಂಕಗಳಿಂದ ಮುನ್ನಡೆ ಹೊಂದಿದೆ. ಶನಿವಾರ ಇದೇ ಕ್ರೀಡಾಂಗಣದಲ್ಲಿ 5ನೇ ಪಂದ್ಯ ನಡೆಯಲಿದೆ.