ವಿದ್ಯಾರ್ಥಿಗಳಲ್ಲಿ ಅನ್ವೇಷಣಾ ಮನೋಭಾವ ಹೆಚ್ಚಳ

ಇಂಡಿ: ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಹೊರತರಲು ವಿಜ್ಞಾನ ವಸ್ತು ಪ್ರದರ್ಶನ ಉತ್ತಮ ವೇದಿಕೆಯಾಗಿದ್ದು, ವಿದ್ಯಾರ್ಥಿಗಳಲ್ಲಿ ಅನ್ವೇಷಣಾ ಮನೋಭಾವನೆ ಹೆಚ್ಚಿಸುತ್ತದೆ ಎಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ.ಎಸ್.ಬಿ. ಮಾಡಗಿ ಅಭಿಪ್ರಾಯಪಟ್ಟರು.

ಪಟ್ಟಣದ ಆರ್.ಎಂ. ಶಹಾ ಪಬ್ಲಿಕ್ ಶಾಲೆಯಲ್ಲಿ ಉತ್ಥಾನ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಚಿತ್ರಕಲೆ, ಕರಕುಶಲ ಕಲೆ ಪ್ರದರ್ಶನದಲ್ಲಿ ಅವರು ಮಾತನಾಡಿದರು.

ವಿಜ್ಞಾನ ಮತ್ತು ಗಣಿತ ವಿಷಯಗಳು ನಿಜ ಜೀವನದಲ್ಲಿ ಅತ್ಯವಶ್ಯವಾಗಿದ್ದು, ಶಿಕ್ಷಕರಿಗೆ ಹೆಚ್ಚು ಹೆಚ್ಚು ಪ್ರಶ್ನೆಗಳನ್ನು ಕೇಳುವುದರಿಂದ ಹೊಸದನ್ನು ಕಲಿಯಲು ಮತ್ತು ಸೃಷ್ಟಿಸಲು ಅನುಕೂಲವಾಗುತ್ತದೆ ಎಂದರು.

ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಿ.ಆರ್. ಶಹಾ ಮಾತನಾಡಿ, ಮಕ್ಕಳು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರಾಮಾಣಿಕವಾಗಿ ಭಾಗವಹಿಸಿದಾಗ ಮಾತ್ರ ಅವರ ಅನುಭವ ಹೆಚ್ಚುವುದು ಎಂದರು.

ಕರ್ನಾಟಕ ಕೈಗಾರಿಕೆ ಮಾಲೀಕರ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ, ಸಂಸ್ಥೆ ಕಾರ್ಯದರ್ಶಿ ಮಹೇಶ ಆರ್.ಶಹಾ, ಆಡಳಿತಾಧಿಕಾರಿ ಕಲ್ಪನಾ ಶಹಾ, ಸದಸ್ಯರಾದ ಸಿ ಆರ್. ಶಹಾ, ನಿರಂಜನ ಶಹಾ, ರಾಜಶೇಖರ ದೋಶಿ, ಎಂ.ಆರ್. ಶಹಾ, ಸುನೀಲ ಕುಲಕರ್ಣಿ, ಶೈಕ್ಷಣಿಕ ಮಾರ್ಗದರ್ಶಕಿ ನೀರಜಾಕ್ಷಿ, ಪ್ರಾಚಾರ್ಯು ಸುಧಾ ಅರಕೇರಿ, ಉಪ ಪ್ರಾಚಾರ್ಯ ಎಸ್.ಎಸ್. ರಾವೂರ, ಸಚಿನ್ ಶಹಾ ಇತರರು ಇದ್ದರು. ಸಂಜನಾ ಕಡಣಿ ಹಾಗೂ ಸಂಜನಾ ವಾಗ್ಮೋಡೆ ನಿರೂಪಿಸಿದರು. ಯಶಸ್ವಿನಿ ಅಳ್ಳಗಿ ವಂದಿಸಿದರು. ಮುಖ್ಯ ನಿರ್ಣಾಯಕರಾಗಿ ಇಂಡಿ ಶಾಂತೇಶ್ವರ ಪಪೂ ಮಹಾವಿದ್ಯಾಲದ ಪ್ರೊ.ಎನ್.ಎಸ್. ಚಿತ್ತವಾಡಗಿ ಹಾಗೂ ಪ್ರೊ.ಎಂ.ಜಿ. ಹಿರೇಮಠ ಆಗಮಿಸಿದ್ದರು. ವಿವಿಧ ಮಾದರಿಗಳನ್ನು ಪ್ರಸ್ತುತ ಪಡಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.