ಹೂಗಾರ ಸಮಾಜದ ಅಭಿವೃದ್ಧಿಗೆ ಸರ್ಕಾರ ಬದ್ಧ

ಇಂಡಿ: ಹೂಗಾರ ಸಮಾಜ ಹಿಂದುಳಿದ ಸಮಾಜ. ಸಮಾಜದ ಅಭಿವೃದ್ಧಿಗೆ ಸರ್ಕಾರ ಸದಾ ಸಿದ್ಧವಿದೆ ಎಂದು ಜಿಪಂ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಹೇಳಿದರು.

ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ತಾಲೂಕು ಹೂಗಾರ ಸಮಾಜದ ಸೇವಾ ಸಂಸ್ಥೆ ವತಿಯಿಂದ ಭಾನುವಾರ ನಡೆದ ಹೂಗಾರ ಸಮಾಜದ ತಾಲೂಕು ಮಟ್ಟದ ಪ್ರಥಮ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಕ್ಷೇತ್ರ ಶಾಸಕ ಯಶವಂತರಾಯಗೌಡ ಪಾಟೀಲರ ಬೆಂಬಲದಿಂದಾಗಿ ನಾನು ಅಧ್ಯಕ್ಷನಾದೆ. ಕ್ಷೇತ್ರದಲ್ಲಿ ಜನಪರ ಕೆಲಸ ಕಾರ್ಯಗಳನ್ನು ಕೈಗೊಂಡ ಶಾಸಕರು ಹೂಗಾರ ಸಮಾಜದ ಬೇಡಿಕೆಗೆ ಸ್ಪಂದಿಸಿದ್ದಾರೆ. ಈ ಸಮಾಜದ ಜನರು ಶಿಕ್ಷಣವಂತರಾಗಿ ಸಮಾಜದಲ್ಲಿ ಮುಂದೆ ಬರಬೇಕು ಎಂದರು.

ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ ಮಾತನಾಡಿ, ಗ್ರಾಮ ಗ್ರಾಮಗಳಲ್ಲಿ ಹೂಗಾರ ಸಮಾಜದ ಜನರು ಇದ್ದಾರೆ. ಒಡೆದು ಹೋದ ಈ ಸಮಾಜ ಜಾಗೃತರಾಗಿ ಬೃಹತ್ ಸಮಾವೇಶ ನಡೆಸುವ ಮೂಲಕ ಶಕ್ತಿ ಪ್ರದರ್ಶಿಸಿದೆ. ಎಲೆ ಮರೆಯ ಕಾಯಿಯಂತೆ ಹಿಂದುಳಿದ ಜನರು ಶಿಕ್ಷಣವಂತರಾಗಿ ಸಮಾಜದಲ್ಲಿ ಮುಂದೆ ಬರಬೇಕು ಎಂದರು.

ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಮಾತನಾಡಿ, ಹೂ ಕಟ್ಟುವ ಕಾಯಕದ ಮೂಲಕ ಜೀವನ ನಡೆಸುತ್ತಿರುವ ಈ ಜನರು ಸಮಾವೇಶ ನಡೆಸಿದ್ದು ಸಾಧನೆಯೇ ಸರಿ. ಎಲ್ಲ ಸಮಾಜಕ್ಕೆ ಆಧಾರ ಸ್ತಂಭದಂತಿರುವ ಈ ಸಮಾಜದ ಜನರು ಮುಂಬರುವ ದಿನಗಳಲ್ಲಿ ಮುಖ್ಯ ವಾಹಿನಿಗೆ ಬರಬೇಕು ಎಂದು ಹೇಳಿದರು.

ಬಿಜೆಪಿ ಇಂಡಿ ತಾಲೂಕು ಘಟಕದ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ, ಹಿಂದುಳಿದ ಈ ಸಮಾಜಕ್ಕೆ ಪಟ್ಟಣದಲ್ಲಿ ಸಮುದಾಯ ಭವನದ ಭೂಮಿಪೂಜೆಯನ್ನು ಶಾಸಕರು ಶೀಘ್ರ ನೆರವೇರಿಸಬೇಕು. ಕೇಂದ್ರ ಸರ್ಕಾರದಿಂದಲೂ ಸೌಲಭ್ಯ ಕಲ್ಪಿಸಲು ಶ್ರಮಿಸಲಾಗುವುದು ಎಂದರು.

ಚಿಂಚೋಳಿಯ ಆನಂದ ಆಶ್ರಮದ ಶರಣಬಸವ ಶರಣರು ಹಾಗೂ ಕೆಂಭಾವಿಯ ನಾಗರಾಜ ಶಾಸ್ತ್ರಿ ಸಾನ್ನಿಧ್ಯ ವಹಿಸಿದ್ದರು. ಜಿಪಂ ಮಾಜಿ ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ, ನಾಗಠಾಣ ಶಾಸಕ ದೇವಾನಂದ ಚವಾಣ್ ಪತ್ನಿ ಡಾ. ಸುನಿತಾ ದೇವಾನಂದ ಚವಾಣ್, ಪುರಸಭೆ ಅಧ್ಯಕ್ಷ ಶ್ರೀಕಾಂತ ಕೂಡಿಗನೂರ, ತಾಪಂ ಅಧ್ಯಕ್ಷ ಶೇಖರ ನಾಯಕ, ಕಾಂಗ್ರೆಸ್ ಮುಖಂಡ ಇಲಿಯಾಸ ಬೋರಾಮಣಿ, ತಹಸೀಲ್ದಾರ್ ಚಿದಾನಂದ ಗುರುಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಭೀಮನಗೌಡ ಪಾಟೀಲ, ಅರಣ್ಯ ಇಲಾಖೆಯ ಡಿ.ಎ. ಮುಜಗೊಂಡ, ಜಿಪಂ ಸದಸ್ಯ ಮಹದೇವ ಪೂಜಾರಿ, ಸಾಹಿತಿ ಹ.ಮ. ಪೂಜಾರ, ಬಿ.ಬಿ. ಪೂಜಾರಿ, ಹೂಗಾರ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಸೋಮನಾಥ ಹೂಗಾರ, ಗೌರವ ಅಧ್ಯಕ್ಷ ಗಂಗಾಧರ ಪೂಜಾರಿ, ಸಿದ್ದು ಪೂಜಾರಿ ಇತರರಿದ್ದರು.

ಭವ್ಯ ಮೆರವಣಿಗೆ: ಗಣ್ಯರು ಹೂ ಪೋಣಿಸುವ ಶರಣ ಮಾದಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನಿಸಲಾಯಿತು. ಪಟ್ಟಣದ ಶಾಂತೇಶ್ವರ ದೇವಸ್ಥಾನದಿಂದ ಪೊಲೀಸ್ ಪರೇಡ್ ಮೈದಾನದ ವರೆಗೆ 1001 ಪೂರ್ಣ ಕುಂಭ, ಸಕಲ ವಾದ್ಯ ಮೇಳದೊಂದಿಗೆ ಅಂಬಾರಿಯ ಮೇಲೆ ಹೂಗಾರ ಮಾದಯ್ಯನವರ ಭಾವಚಿತ್ರವಿಟ್ಟು ಮೆರವಣಿಗೆ ನಡೆಸಲಾಯಿತು.