ಅಧಿಕ ಮತಗಳ ಅಂತರದಿಂದ ಜಿಗಜಿಣಗಿ ಗೆಲುವು ಖಚಿತ

ಇಂಡಿ: ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ ಅನುದಾನವನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಬಳಸಿಕೊಳ್ಳದೆ ವೃಥಾ ಕೇಂದ್ರದ ಮೇಲೆ ಗೂಬೆ ಕೂರಿಸುವ ಕಾರ್ಯ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಆರೋಪಿಸಿದರು.

ರಾಜ್ಯದ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರ ಎಷ್ಟು ಅನುದಾನ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ಎಷ್ಟು ಅನುದಾನ ವಿನಿಯೋಗಿಸಿದೆ ಎಂಬುದರ ಕುರಿತು ಶ್ವೇತ ಪತ್ರ ಹೊರಡಿಸಬೇಕು. 14ನೇ ಹಣಕಾಸು ಯೋಜನೆಯ ಎಲ್ಲ ಕಾಮಗಾರಿಗಳು ವಿಲವಾಗಲು ಹಾಲಿ ಮುಖ್ಯಮಂತ್ರಿಗಳೇ ಕಾರಣವೆಂದು ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಆರೋಪಿಸಿದರು.

ಜಿಲ್ಲೆಯಲ್ಲಿ ಭೀಕರ ಬರದಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದರೂ ರಾಜ್ಯ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಮಸ್ಯೆಗಳಿಗೆ ಕೇಂದ್ರದತ್ತ ಬೊಟ್ಟು ಮಾಡುತ್ತಿರುವುದು ಯಾವ ನ್ಯಾಯ ಎಂದರು.
ಪಕ್ಷದ ಅಭ್ಯರ್ಥಿ ರಮೇಶ ಜಿಗಜಿಣಗಿ ತಮ್ಮ ಅವಧಿಯಲ್ಲಿ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ, ರಾಜ್ಯ ಹೆದ್ದಾರಿ, ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಸೇರಿ ಹಲವಾರು ಕಾರ್ಯಗಳನ್ನು ಮಾಡಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಜಿಗಜಿಣಗಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದರು.

ಬಿಜೆಪಿ ಜಿಲ್ಲಾ ಮುಖಂಡರು, ತಾಲೂಕು ಮುಖಂಡರು, ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರು ತೆರೆದ ವಾಹನದಲ್ಲಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ರೋಡ್ ಶೋ ನಡೆಸಿದರು. ನೂರಾರು ಅಭಿಮಾನಿಗಳು, ಕಾರ್ಯಕರ್ತರು ಬೈಕ್ ರ‌್ಯಾಲಿ ನಡೆಸಿ ಮತಯಾಚಿಸಿದರು.

ರವಿಕಾಂತ ಬಗಲಿ, ಕಾಸುಗೌಡ ಬಿರಾದಾರ, ಶ್ರೀಶೈಲಗೌಡ ಬಿರಾದಾರ, ಅನೀಲ ಜಮಾದಾರ, ದಯಾಸಾಗರ ಪಾಟೀಲ, ಶೀಲವಂತ ಉಮರಾಣಿ, ಸಿದ್ದಲಿಂಗ ಹಂಜಗಿ, ಹಣಮಂತ್ರಾಯಗೌಡ ಪಾಟೀಲ, ಗಿರೀಶಗೌಡ ಪಾಟೀಲ, ವಿಜಯ ಜೋಶಿ, ಶರಣಗೌಡ ಬಂಡಿ, ಧರ್ಮು ಮದರಖಂಡಿ, ಗಣಪತಿ ಬಾಣಿಕೋಲ, ಲಾಯಪ್ಪ ದೊಡಮನಿ, ಪುಟ್ಟುಗೌಡ ಪಾಟೀಲ ಮತ್ತಿತರರಿದ್ದರು.