ಬಾಯ್ಲರ್ ಪ್ರದೀಪನಾ ಸಮಾರಂಭ

ಇಂಡಿ: ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಭೀಮಾಶಂಕರ ಕಾರ್ಖಾನೆ ಪ್ರಾರಂಭಿಸಲು ಶ್ರಮಿಸಿ ಕಾರ್ಖಾನೆಯನ್ನು ಇಂಡಿ-ಸಿಂದಗಿ ತಾಲೂಕಿನ ರೈತರ ಆಸ್ತಿಯನ್ನಾಗಿ ಮಾಡಿದ್ದೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಶುಕ್ರವಾರ ತಾಲೂಕಿನ ಮರಗೂರ ಗ್ರಾಮದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಬಾಯ್ಲರ್ ಪ್ರದೀಪನಾ ಸಮಾರಂಭದಲ್ಲಿ ವಿಶೇಷ ಹೋಮ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.

ಕಾರ್ಖಾನೆ ಹೊಸದಾಗಿ ಪ್ರಾರಂಭಿಸಿದರೂ ರೈತರ ಕಬ್ಬಿನ ಬೆಳೆಗೆ ಪ್ರತಿ ಟನ್​ಗೆ 2400ರೂ. ನೀಡಲಾಗಿದೆ. ಆದರೆ, 145 ಕೋಟಿ ರೂ. ಕಾರ್ಖಾನೆ ಸಾಲದ ಭಾರದಲ್ಲಿರುವುದರಿಂದ ಈ ಬಾರಿ ರೈತರು ಹಿಂದಿನಂತೆ ನಿರೀಕ್ಷೆ ಮಾಡುವುದು ಬೇಡ. ಕಾರ್ಖಾನೆ ಉಳಿಸುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದರು.

ಈ ಕಾರ್ಖಾನೆ ಒಟ್ಟು 181 ಎಕರೆ ಪ್ರದೇಶದಲ್ಲಿ ತಲೆ ಎತ್ತಿದ್ದು, 14 ಮೆಗಾವಾಟ್ ವಿದ್ಯುತ್ ತಯಾರಿಸಿ ಅದರಲ್ಲಿ 9 ಮೆಗಾವಾಟ್​ನ್ನು ಹೆಸ್ಕಾಂಗೆ, ಉಳಿದದ್ದನ್ನು ಕಾರ್ಖಾನೆಗೆ ಉಪಯೋಗಿಸುತ್ತಿದೆ. ಕಾರ್ಖಾನೆಯಿಂದ ಇನ್ನು ಅನೇಕ ಅಭಿವೃದ್ಧಿಪರ ಕಾರ್ಯಗಳು ಆಗಬೇಕಿದೆ ಎಂದರು.

ವಿಶೇಷ ಹೋಮ ಕಾರ್ಯಕ್ರಮದಲ್ಲಿ ವಿಶ್ವನಾಥ ಹಿರೇಮಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರ್ಖಾನೆ ವ್ಯವಸ್ಥಾಪಕ ಅಶೋಕ ಮುರಬ, ವಿಶೇಷ ಅಧಿಕಾರಿ ಎಂ.ಡಿ. ಮಲ್ಲೂರ, ಜಿಪಂ ಸದಸ್ಯ ಶಿವಯೋಗೇಪ್ಪ ನೇದಗಿ, ಶಿವಯೋಗೆಪ್ಪ ಚನಗೊಂಡ, ಶ್ರೀಕಾಂತ ಕುಡಿಗನೂರ, ರುಕ್ಮುದ್ದೀನ್ ತದೇವಾಡಿ, ಮಹಾದೇವ ಗಡ್ಡದ, ಜಗದೀಶ ಕ್ಷತ್ರಿ, ಬಿ.ಎಂ. ಕೋರೆ, ರಮೇಶ ಗುತ್ತೇದಾರ, ಅಯೂಬ ಬಾಗವಾನ್, ಇಲಿಯಾಸ್ ಬೋರಾಮಣಿ, ಧನರಾಜ ಮುಜಗೊಂಡ, ಸತಾರ್ ಬಾಗವಾನ್, ಭೀಮಣ್ಣ ಕೌಲಗಿ ಸೇರಿದಂತೆ ಮತ್ತಿತರರು ಇದ್ದರು.

ಭೀಮಾಶಂಕರ ಸಕ್ಕರೆ ಕಾರ್ಖಾನೆಯಲ್ಲಿ ಹುದ್ದೆಗಳನ್ನು ತುಂಬಲು ರಾಜಕೀಯ ಬೇಡ. ಯಾರಲ್ಲಿ ಅನುಭವವಿದೆ ಅಂಥವರಿಗೆ ಸ್ಥಾನ ನೀಡಲಾಗುವುದು. ವಿನಾಕಾರಣ ಬೇರೆಯವರ ಹಸ್ತಕ್ಷೇಪ ಬೇಡ. ಇದು ರೈತರ ಆಸ್ತಿ. ರಾಜಕೀಯ ಮಾಡಬೇಕಾಗಿರುವುದು ಗೇಟ್ ಹೊರಗಡೆ, ಒಳಗಡೆ ಬಂದಾಗ ಎಲ್ಲ ರಾಜಕೀಯ ನಾಯಕರ ಉದ್ದೇಶ ಕಾರ್ಖಾನೆ ಶ್ರೇಯೋಭಿವೃದ್ಧಿ ಆಗಿರಲಿ.

| ಯಶವಂತರಾಯಗೌಡ ಪಾಟೀಲ ಶಾಸಕ