ಮೈತ್ರಿ ಅಭ್ಯರ್ಥಿ ಬೆಂಬಲಿಸಿ

ಇಂಡಿ: ಈ ಬಾರಿಯ ಲೋಕಸಭೆ ಚುನಾವಣೆ ಅತ್ಯಂತ ನಿರ್ಣಾಯಕವಾಗಿದ್ದು, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗೆ ಮತಹಾಕಿ ಸಹೋದರಿ ಸುನೀತಾ ಚವಾಣ್ ಅವರನ್ನು ಗೆಲ್ಲಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಪಟ್ಟಣದ ಬಸವರಾಜೇಂದ್ರ ಮಂಗಲ ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ತನ್ನದೇಯಾದ ತತ್ತ್ವ ಸಿದ್ಧಾಂತ ಹೊಂದಿದೆ. ಕಾಂಗ್ರೆಸ್ ಬಡವರು, ದೀನ ದಲಿತರನ್ನು ಸಮಾನವಾಗಿ ಗೌರವಿಸಿ ಸಮಾನತೆ ಕೊಡುಗೆ ನೀಡಿದೆ ಎಂದರು.

ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರು ಜಿಲ್ಲೆಯಲ್ಲಿ ಯಾವುದೇ ಕೆಲಸ ಮಾಡದೆ 40 ವರ್ಷಗಳಿಂದ ಈ ಭಾಗವನ್ನು ಅಭಿವೃದ್ಧಿಯಿಂದ ವಂಚಿತರಾಗಿಸಿದ್ದಾರೆ. ಕೇಂದ್ರ ಸಚಿವರಾಗಿ ಈ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಒಂದು ಬಾರಿಯೂ ಪ್ರಶ್ನೆ ಎತ್ತಿಲ್ಲ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಶೋಕಿಲಾಲ ಆಗಿದ್ದು, ಕೇವಲ ವಿದೇಶ ಪ್ರಯಾಣ ಮಾಡುವುದರಲ್ಲಿಯೇ ದಿನ ಕಳೆದಿದ್ದಾರೆ ಎಂದು ದೂರಿದರು.

ಮುಖಂಡರಾದ ಶ್ರೀಕಾಂತ ಕುಡಿಗನೂರ, ತಾಪಂ ಅಧ್ಯಕ್ಷ ಶೇಖರ ನಾಯಕ, ಸಂಭಾಜಿರಾವ ಮಿಸಾಳೆ, ಭೀಮಣ್ಣಾ ಕೌಲಗಿ, ರಶೀದ ಅರಬ, ಕಲ್ಲನಗೌಡ ಬಿರಾದಾರ, ಇಲಿಯಾಸ ಬೋರಾಮಣಿ, ಜಟ್ಟೆಪ್ಪ ರವಳಿ, ಎಸ್.ಎಸ್. ಚನಗೊಂಡ, ವಕ್ಫ್ ಬೋರ್ಡ್ ಅಧ್ಯಕ್ಷ ಉಸ್ಮಾನ ಪಟೇಲ ವೇದಿಕೆಯಲ್ಲಿದ್ದರು.

ಜಾವೀಮ ಮೋಮಿನ, ಧರ್ಮು ವಾಲೀಕಾರ, ಮಹೇಶ ಹೊನ್ನಬಿಂದಗಿ, ಧರ್ಮು ರಾಠೋಡ, ಅವಿನಾಶ ಬಗಲಿ, ಶಿವಾನಂದ ಬಡಿಗೇರ, ಸಿದ್ದು ಬೇಲ್ಯಾಳ ಇತರರು ಇದ್ದರು.

ಮೈತ್ರಿ ಅಭ್ಯರ್ಥಿ ಸುನೀತಾ ಚವಾಣ್ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಏನೂ ಅರಿಯದ ತಾಯಿ ಎಂದು ಜಿಗಜಿಣಗಿ ಹೇಳಿರುವುದು ಹಾಸ್ಯಾಸ್ಪದ. ಹೆಣ್ಣು ದೇವತೆ ಸ್ವರೂಪ, ಹೆಣ್ಣಿನಿಂದಲೇ ಮರ್ಧನ ಆಗುವ ಸಮಯ ಬಂದಿದೆ.
– ಕಾಂತಾ ನಾಯಕ ಕೆಪಿಸಿಸಿ ಮಹಿಳಾ ಪ್ರಧಾನ ಕಾರ್ಯದರ್ಶಿ

Leave a Reply

Your email address will not be published. Required fields are marked *