ಸಂಭ್ರಮದ ಜಲಜಾತ್ರಾ ಮಹೋತ್ಸವ

ಇಂಡಿ: ಪಟ್ಟಣದ ಭಗವಾನ ಆದಿನಾಥ ದಿಗಂಭರ ಜೈನ ಮಂದಿರಲ್ಲಿ ಷೋಡಸಕಾರ ಹಾಗೂ ದಶಲಕ್ಷ ಮಹಾಪರ್ವ ಮುಕ್ತಾಯದ ನಂತರ ಸೋಮವಾರ ನಗರದಲ್ಲಿ ವಿಜೃಂಭಣೆಯಿಂದ ಜಲಜಾತ್ರಾ ಮಹೋತ್ಸವ ನಡೆಯಿತು.
ಪಟ್ಟಣದ ಅಂಚೆ ಕಚೇರಿಯಿಂದ ಆರಂಭಗೊಂಡ ಭಗವಾನ ಆದಿನಾಥ ತೀರ್ಥಂಕರ ಹಾಗೂ ಚೋವಿಸ್ ತೀರ್ಥಂಕರ ಮೂರ್ತಿ ಹೊತ್ತ ಪಲ್ಲಕ್ಕಿ ಹಾಗೂ ಭಗವಾನ ಮಹಾವೀರ ಮತ್ತು 108 ಶಾಂತಿಸಾಗರ ಮುನಿ ಮಹಾರಾಜರ ಭಾವಚಿತ್ರ ಮೆರವಣಿಗೆಯು ಬಸವೇಶ್ವರ ವೃತ್ತದಲ್ಲಿ ಹಾಯ್ದು ಮಹಾವೀರ ನಗರಕ್ಕೆ ತೆರಳಿ ಸ್ವಾಮಿ ಕಟ್ಟಿ ಮಂದಿರಕ್ಕೆ ತಲುಪಿತು. ನಂತರ ಚೋವಿಸ್ ತೀರ್ಥಂಕರ ಮಹಾಭೀಷೇಕ ನಡೆಯಿತು. ನೂರಾರು ಸುಮಂಗಲಿಯರು ಕುಂಭ ಹೊತ್ತು ಪಾಲ್ಗೊಂಡಿದ್ದರು. ವಿವಿಧ ಜಯಘೋಷಗಳು ಮುಗಿಲು ಮುಟ್ಟಿದವು. ಮಹಿಳೆಯರು, ಯುವಕರು ಮತ್ತು ಮಕ್ಕಳು ಮಾನವ ಸರಪಳಿ ರಚಿಸಿ ಕುಣಿದು ಕುಪ್ಪಳಿಸಿದರು.
ದಶಲಕ್ಷಣ ಪರ್ವದ ನಿಮಿತ್ತ 16 ದಿನಗಳ ಕಾಲ ಶ್ರಾವಕ-ಶ್ರಾವಕಿಯರಿಂದ ನಸುಕಿನ ಜಾವ ವಿಶೇಷ ಪೂಜೆ ನಡೆಯಿತು. ನಿತ್ಯ ಚೋವಿಸ್ ತೀರ್ಥಂಕರಿಗೆ ಮಹಾಭಿಷೇಕ ನಡೆಯಿತು. ಅಲ್ಲದೆ, ಪ್ರತಿದಿನ ಹತ್ತು ವಿಷಯಗಳ ಮೇಲೆ ಆಚಾರ್ಯ ಕುದುಮನಂದಿ ಮಹಾರಾಜರು ಹಾಗೂ ಮುನಿಶ್ರಿ ಅರ್ಪಣಸಾಗರ ಮಹಾರಾಜರ ಹಾಗೂ ಪ್ರತಿಷ್ಠಾಚಾರ್ಯ ಚಂದ್ರಕಾಂತ ಪಂಡಿತ ಪ್ರವಚನ ನಡೆಸಿದರು. ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಸುನೀತಾ ದೀದೀ ಅವರು ಅಂದಾಜು 32 ದಿನಗಳವರೆಗೆ ಉಪವಾಸ ಮಾಡಿದರು. ಹತ್ತು ದಿನ ಉಪವಾಸ ಮಾಡಿದ್ದ ಮುರುದೇವಿ ಮತ್ತು ಕುಸುಮಾ ಕಿರಣಗಿ ಅವರನ್ನು ಸನ್ಮಾನಿಸಿ ರಥದಲ್ಲಿ ಮೆರವಣಿಗೆ ಮಾಡಲಾಯಿತು. ಸ್ವಾಮಿ ಕಟ್ಟಿಯಲ್ಲಿ ಶಾಸಕ ಯಶವಂತ್ರಾಯಗೌಡ ಪಾಟೀಲ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಆದಿನಾಥ ದಿಗಂಬರ ಜೈನ ಮಂದಿರ ಕಮಿಟಿ ಅಧ್ಯಕ್ಷ ಅಜಿತ ಧನಶೆಟ್ಟಿ, ಹಿರಿಯರಾದ ಡಿ.ಜೆ. ಧನಶೆಟ್ಟಿ, ಸುರೇಶ ಧನಪಾಲ, ಸುಕುಮಾಲ ಕಿರಣಗಿ, ಅನಂತ ಕೋಟಿ. ರಾಮಣ್ಣ ಕೋಟಿ, ರಾವಸಾಹೇಬ ಬೆಲಸೂರೆ, ಡಾ. ಸತೀಶ ಶಹಾ, ಸುಭಾಷ ಧನಶೆಟ್ಟಿ, ಸನತಕುಮಾರ ಹಳ್ಳಿ, ಸತೀಶ ಪಾಂಡ್ರೆ, ಸಂಜಯ ಧನಪಾಲ, ಪ್ರಕಾಶ ಧನಶೆಟ್ಟಿ, ಪ್ರಭಾಕರ ಪಂಡಿತ, ಶಾಂತು ಧನಶೆಟ್ಟಿ, ಸಂಜಯ ಧನಪಾಲ, ಚಂದನ ಧನಪಾಲ, ಡಿ.ಬಿ. ಧನಶೆಟ್ಟಿ, ವಿದ್ಯಾಧರ ಧನಶೆಟ್ಟಿ ಸೇರಿ ನೂರಾರು ಜೈನ ಬಾಂಧವರು ಇದ್ದರು.

Leave a Reply

Your email address will not be published. Required fields are marked *