More

    ಇಂಡಿ ತಾಲೂಕಿಗೆ ಡಿಸಿಸಿ ಬ್ಯಾಂಕ್ ಕೊಡುಗೆ ಅಪಾರ

    ಇಂಡಿ: ತಾಲೂಕಿನ ರೈತರಿಗೆ ಡಿಸಿಸಿ ಬ್ಯಾಂಕಿನಲ್ಲಿ ಎರಡು ಬಾರಿ ಸಾಲಮನ್ನಾ ಆಗುವ ಮೂಲಕ ಒಟ್ಟು 300 ಕೋಟಿ ರೂ.ಗೂ ಹೆಚ್ಚು ಸಾಲಮನ್ನಾ ಮಾಡಲಾಗಿದೆ. ಇಂಡಿ ತಾಲೂಕಿಗೆ ಡಿಸಿಸಿ ಬ್ಯಾಂಕ್ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಹೇಳಿದರು.
    ಪಟ್ಟಣದಲ್ಲಿ 1949ರ ಜ.12 ರಂದು ಡಿಸಿಸಿ ಬ್ಯಾಂಕ್ ಪ್ರಾರಂಭವಾಯಿತು. ಆಗ ಅವಿಭಜಿತ ವಿಜಯಪುರ ಜಿಲ್ಲೆಯ 3ನೇ ಶಾಖೆ ಇದಾಗಿತ್ತು. ನಂತರ ಜಿಲ್ಲೆಯ ವಿಭಜನೆ ನಂತರ 7ನೇ ಶಾಖೆಯಾಯಿತು ಎಂದು ಬ್ಯಾಂಕ್‌ನ ನೂತನ ಕಟ್ಟಡದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
    ಸದ್ಯ ಶಾಖೆ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದ್ದು, ಇಷ್ಟು ವರ್ಷ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ಬ್ಯಾಂಕ್ ಇಂದು ಮೂರು ಎಕರೆ ಸ್ವಂತ ಜಮೀನು ಹೊಂದಿರುವುದರಿಂದ ಪಟ್ಟಣದಲ್ಲಿ ಕಟ್ಟಡಕ್ಕೆ ಬೇಕಾದ ನಿವೇಶನ ಉಪಯೋಗಿಸಿ ಇನ್ನುಳಿದ ಜಮೀನು ಆರ್‌ಬಿಐ ನಿಯಮದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
    ಬ್ಯಾಂಕಿನಲ್ಲಿ 85 ಕೋಟಿ ಠೇವು ಇದ್ದು, 112 ಕೋಟಿ ರೂ. ಸಾಲ ನೀಡಲಾಗಿದೆ. 196 ಕೋಟಿ ರೂ. ಗಿಂತ ಅಧಿಕ ವ್ಯವಹಾರವಿದೆ. ಬ್ಯಾಂಕ್‌ಗೆ ಸ್ವಂತ ಕಟ್ಟಡ ಮಾಡಬೇಕೆಂಬುದು ನಮ್ಮೆಲ್ಲರ ಸದಾಶಯವಾಗಿತ್ತು. ಜ.11ರಂದು ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಮಹಾಸ್ವಾಮಿಗಳ ಸಾನ್ನಿಧ್ಯ, ಗೋಳಸಾರದ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು, ಶಿರಶ್ಯಾಡ ಶ್ರಿಮಠದ ಮುರುೇಂದ್ರ ಶಿವಾಚಾರ್ಯರು ಸೇರಿ ವಿವಿಧ ಶ್ರೀಗಳ ಸಮ್ಮುಖದಲ್ಲಿ ಬ್ಯಾಂಕ್ ಕಟ್ಟಡ ಉದ್ಘಾಟನೆಗೊಳ್ಳಲಿದ್ದು, ಸಹಕಾರ ಸಚಿವ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು ಎಂದರು.
    ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಎಂ.ಸಿ. ಮನಗೂಳಿ, ಶಾಸಕ ಯಶವಂತರಾಯಗೌಡ ಪಾಟೀಲ, ನಾಗಠಾಣ ಶಾಸಕ ದೇವಾನಂದ ಚವಾಣ್ ಆಗಮಿಸುವರು. ರೈತರು, ವ್ಯಾಪಾರಸ್ಥರು, ತಾಲೂಕಿನ ಸಾರ್ವಜನಿಕರು, ಸಹಕಾರಿ ಹಿತೈಷಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು.
    ಡಿಸಿಸಿ ಬ್ಯಾಂಕ್ 2019ರಲ್ಲಿ 3.90 ಕೋಟಿ ರೂ. ಲಾಭಗಳಿಸಿದೆ. ಈ ಶಾಖೆ 33-34 ಕೋಟಿಗಿಂತ ಅಧಿಕ ಸಾಲ ನೀಡಿದೆ. ತಾಲೂಕಿನ ರೈತರಿಗೆ 156 ಕೋಟಿ ರೂ. ಸಾಲಮನ್ನಾಕ್ಕೆ ಸಹಕರಿಸಿದೆ. ಒಟ್ಟಾರೆ ತಾಲೂಕಿನ ರೈತರ ಸಾಲ 322 ಕೋಟಿ ರೂ. ಸಾಲ ಮನ್ನಾ ಮಾಡಿ ರೈತರ ಬಾಳಿಗೆ ಆತ್ಮಸ್ಥೆರ್ಯ ತುಂಬಿದ ಬ್ಯಾಂಕ್ ಇದಾಗಿದೆ ಎಂದರೆ ತಪ್ಪಾಗಲಾರದು ಎಂದರು.
    ತಾಲೂಕಿನ ಮರಗೂರದ ಭೀಮಾಶಂಕರ ಸಕ್ಕರೆ ಕಾರ್ಖಾನೆ ಬಹುದಿನಗಳಿಂದ ನನೆಗುದಿಗೆ ಬಿದ್ದಿತ್ತು. ಈ ಕಾರ್ಖಾನೆ ಪ್ರಥಮ ಹಂತದಿಂದ ಪ್ರಾರಂಭವಾಗುವವರೆಗೂ ಡಿಸಿಸಿ ಬ್ಯಾಂಕ್ ಸಹಾಯ ನೀಡುತ್ತ ಬಂದಿದೆ. ಅವಳಿ ಜಿಲ್ಲೆಯ ಅನೇಕ ಸಕ್ಕರೆ ಕಾರ್ಖಾನೆಗಳಿಗೂ ದೊಡ್ಡ ಪ್ರಮಾಣದಲ್ಲಿ ಬ್ಯಾಂಕ್ ಸಹಾಯ ಮಾಡಿದೆ ಎಂದು ತಿಳಿಸಿದರು.
    ನವೆಂಬರ್‌ನಲ್ಲಿ ಡಿಸಿಸಿ ಬ್ಯಾಂಕ್ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ಸಹಕಾರಿಗಳನ್ನು ಸೇರಿಸಿ ಸಹಕಾರಿ ಸಪ್ತಾಹವಾನ್ನಾಗಿ ಜಿಲ್ಲೆಯಲ್ಲಿ ಆಚರಿಸಲಾಗುವುದು. ರಾಷ್ಟ್ರಪತಿಗಳು, ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಂಸದರು ವಿರೋಧ ಪಕ್ಷದ ನಾಯಕರುಗಳು, ಶಾಸಕರು, ಸಚಿವರುಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಇಂದು ಡಿಸಿಸಿ ಬ್ಯಾಂಕ್ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. 3 ವರ್ಷದಿಂದ ‘ಎ’ ಗ್ರೇಡ್ ರ‌್ಯಾಂಕಿಗ್‌ನಲ್ಲಿದೆ. 99 ವರ್ಷಗಳಲ್ಲಿ ಅತೀ ಹೆಚ್ಚು ಲಾಭ ಗಳಿಸಿದ ಏಕೈಕ ಬ್ಯಾಂಕ್ ಇದಾಗಿದೆ. ಡಿಸಿಸಿ ಬ್ಯಾಂಕ್ 1948ರಲ್ಲಿ ರಜತ ಮಹೋತ್ಸವ, 1972ರಲ್ಲಿ ಸುವರ್ಣ ಮಹೋತ್ಸವ, 1982ರಲ್ಲಿ ವಜ್ರಮಹೋತ್ಸವ, 2020ರಲ್ಲಿ ಶತಮಾನೋತ್ಸವ ಸಂಭ್ರಮದಲ್ಲಿ ಸಾಗುತ್ತಿದೆ. ಈ ಬ್ಯಾಂಕಿಗೆ ಅಧ್ಯಕ್ಷರಾಗಿ ಸುಧಿರ್ಘ ಸೇವೆ ಸಲ್ಲಿಸಿದವರಲ್ಲಿ ಪಿ.ಎಂ. ನಾಡಗೌಡರು ಮೊದಲಿಗರು. ಯಾವುದೇ ಸಹಕಾರಿ ಸಂಸ್ಥೆ ಅಳಿವಿನ ಅಂಚಿನಲ್ಲಿದ್ದಾಗ ಡಿಸಿಸಿ ಬ್ಯಾಂಕ್ ಸಹಾಯ ಹಸ್ತ ನೀಡಿದೆ. ಅವಳಿ ಜಿಲ್ಲೆಯ ಕಾರ್ಖಾನೆಗಳಿಗೆ 700 ಕೋಟಿ ಸಹಾಯ ಮಾಡಿ ರೈತರು ಕಬ್ಬು ನುರಿಸಲು ಸಹಕಾರಿಯಾಗಿದೆ ಎಂದು ಹೇಳಿದರು.
    ಬ್ಯಾಂಕಿನಿಂದ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂ.ಗಳಂತೆ 2 ಲಕ್ಷ 8 ಸಾವಿರ ರೈತರಿಗೆ 850 ಕೋಟಿ ಸಾಲ ನೀಡಲಾಗಿದೆ. ಟ್ರಾೃಕ್ಟರ್, ಪೈಪ್‌ಲೈನ್ ಸಲುವಾಗಿ ರೈತರಿಗೆ 10 ಲಕ್ಷ ಕೇವಲ ಶೇ. 3ರ ಬಡ್ಡಿದರಲ್ಲಿ ಸಾಲ ಕೊಡಲಾಗಿದೆ ಎಂದು ತಿಳಿಸಿದರು.
    ಭೀಮಾಶಂಕರ ಸಕ್ಕರೆ ಕಾರ್ಖಾನೆ ನಿರ್ದೇಶಕ ಎಂ.ಆರ್. ಪಾಟೀಲ, ಕೆಎಂಎ್ ಅಧ್ಯಕ್ಷ ಸಾಂಬಾಜಿರಾವ ಮಿಸಾಳೆ, ಆಡಳಿತ ಮಂಡಳಿ ಸಲಹೆಗಾರ ಜಿ. ಕೋಟ್ರೇಶ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಬಿ. ರಾಜಣ್ಣ, ನಿವೃತ್ತ ಹಿರಿಯ ಬ್ಯಾಂಕ್ ನೌಕರ ಆರ್.ಎಂ. ಬಣಕಾರ, ಇಂಡಿ ಶಾಖೆ ಬ್ಯಾಂಕ್ ವ್ಯವಸ್ಥಾಪಕ ಎಂ.ಎಸ್. ದೇಸಾಯಿ, ಹಿರಿಯ ವ್ಯವಸ್ಥಾಪಕ ಈರಣ್ಣ ತೆಲ್ಲೂರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts