ಸರ್ಕಾರ ಚಿತ್ರಕಲೆ ಪ್ರೋತ್ಸಾಹಿಸಲಿ

ಸಿಂದಗಿ: ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಚಿತ್ರಕಲೆ ಅವಶ್ಯವಾಗಿದ್ದು ಪಠ್ಯಕ್ರಮಗಳಲ್ಲಿ ಇದು ಕಡ್ಡಾಯ ವಿಷಯವಾಗಬೇಕು ಎಂದು ಜಿಲ್ಲಾಮಟ್ಟದ 5ನೇ ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ ಸರ್ವಾಧ್ಯಕ್ಷ ಎಂ.ಆರ್. ಕಬಾಡೆ ಹೇಳಿದರು.

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಚಿತ್ರಕಲೆ ನಮ್ಮ ದೇಶದ ಪ್ರಾಚೀನ ಪರಂಪರೆ, ಸಂಸ್ಕೃತಿಯ ಅವಿಭಾಜ್ಯ ಭಾಗವಾಗಿದೆ. ಮಕ್ಕಳನ್ನು ಸನ್ಮಾರ್ಗದತ್ತ ಒಯ್ಯಲು ಇದು ಮುಖ್ಯ ಪ್ರೇರಣೆಯಾಗಿದೆ. ಸರ್ಕಾರ ನಿರ್ಲಕ್ಷೃ ಮಾಡದೆ ಚಿತ್ರಕಲೆಯನ್ನು ಪ್ರೋತ್ಸಾಹಿಸಬೇಕು. ಚಿತ್ರಕಲೆ ಶಿಕ್ಷಣ ಪಡೆದವರಿಗೆ ಉನ್ನತ ಶಿಕ್ಷಣ ಪಡೆಯಲು ಗ್ರೇಸ್ ಅಂಕಗಳನ್ನು ನೀಡಬೇಕು. ಪ್ರತಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರ ನೇಮಕಾತಿಯಾಗಬೇಕು ಎಂದು ಒತ್ತಾಯಿಸಿದರು.

ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಂಕರಗೌಡ ಬಗಲಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ರಾಜ್ಯಾಧ್ಯಕ್ಷ ಬಿ.ಜಿ. ಅವಟಿ, ಮಹಾಂತೇಶ ಕಂಠಿ, ಚಿತ್ರಕಲಾ ಶಿಕ್ಷಕರ ಸಂಘದ ವಿಭಾಗಮಟ್ಟದ ಅಧ್ಯಕ್ಷ ದೇವಋಷಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಸದಸ್ಯ ಡಾ. ಜಿ.ಎಸ್. ಭೂಸಗೊಂಡ, ರಾಜ್ಯ ಸಂಘದ ಮಹಿಳಾ ಸಂಘಟನಾ ಕಾರ್ಯದರ್ಶಿ ಸುಜಾತಾ ಮ್ಯಾಗಿನಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜೀವ ಬಡಿಗೇರ, ತಾಲೂಕು ಅಧ್ಯಕ್ಷ ಎಚ್.ಆರ್. ಘಂಟಿ ಮಾತನಾಡಿದರು.
ಉಪಾಧ್ಯಕ್ಷ ಎಸ್.ಎಸ್. ಕೇಸರಿ, ಕಾರ್ಯದರ್ಶಿ ಎಸ್.ಎಸ್. ಗುಣಾರಿ, ವಿಜಯಕುಮಾರ ಪೂಜಾರಿ, ಖಜಾಂಚಿ ಮೀನಾಕ್ಷಿ ವಾಗ್ಮೋರೆ, ಸಂಘಟನಾ ಕಾರ್ಯದರ್ಶಿ ಎಸ್.ಬಿ. ಬಡಿಗೇರ, ಎಸ್.ಎಸ್. ಕುರುಮಲ್, ಆರ್.ಎಸ್. ಮ್ಯಾಗೇರಿ, ಜಗದೀಶ ಹೊನ್ನಳ್ಳಿ, ಎನ್.ಎಸ್. ಢವಳಗಿ, ಕಮಲೇಶ ಭಜಂತ್ರಿ, ರಶೀದ ಖಾನ, ಪಿ.ಬಿ. ಪುಡಜಾಲಿ, ಎಸ್.ಎಸ್. ಗೌಡರ, ಎಂ.ಎಸ್. ಚಿಂಚೊಳ್ಳಿ, ಕೃಷ್ಣಾ ಬಡಿಗೇರ, ಆನಂದ ಝಂಡೆ ಮತ್ತಿತರಿದ್ದರು.

ವಿವಿಧ ಚಟುವಟಿಕೆಗಳು
ಚಿತ್ರಕಲಾ ಶಿಕ್ಷಕ ಸಂಜೀವ ಬಡಿಗೇರ ಮತ್ತು ರಂಗನಾಥರಾವ ಕುಲಕರ್ಣಿ ಅವರಿಂದ ಜಾದು ಪ್ರದರ್ಶನ ಮತ್ತು ಶಿಕ್ಷಕ ಶಿಕ್ಷಕಿಯರಿಂದ ಮನರಂಜನಾ ಕಾರ್ಯಕ್ರಮ ನಡೆಯಿತು. ಎರಡು ದಿನ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಶಾಲೆಗಳ ಚಿತ್ರಕಲಾ ಶಿಕ್ಷಕರು ಅನಿಸಿಕೆ ವ್ಯಕ್ತಪಡಿಸಿದರು. ಸಮ್ಮೇಳನದಲ್ಲಿ ಪ್ರದರ್ಶನಗೊಂಡ 500ಕ್ಕೂ ಹೆಚ್ಚು ಕಲಾಕೃತಿಗಳು ಸಾರ್ವಜನಿಕರಲ್ಲಿ ಪರಿಸರ, ಸಾಹಿತ್ಯ, ಕೃಷಿ ಮುಂತಾದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಿದವು.