ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಿಡ್ನಿ ಮಾರಲೂ ಸಿದ್ಧ ಎಂದ ಪಕ್ಷೇತರ ಅಭ್ಯರ್ಥಿ

ಧುಬ್ರಿ (ಅಸ್ಸಾಂ): ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅಗತ್ಯ ಹಣ ಹೊಂದಿಸಲು ವಿಫಲನಾದರೆ ನನ್ನ ಕಿಡ್ನಿಯನ್ನು ಮಾರಲೂ ನಾನು ಸಿದ್ಧ ಎಂದು ಅಸ್ಸಾಂನ ಪಕ್ಷೇತರ ಅಭ್ಯರ್ಥಿಯೊಬ್ಬರು ಹೇಳಿದ್ದಾರೆ.

ಅಸ್ಸಾಂನ ಕೋಕ್ರಜಾರ್​ ಜಿಲ್ಲೆಯ ಮೋದತಿ ಗ್ರಾಮದ 26 ವರ್ಷದ ಸುಕುರ್​ ಅಲಿ ಎಂಬಾತ ‘ರಾಜಕೀಯಕ್ಕೆ ಬರಬೇಕು ಎಂಬುದು ನನ್ನ ಬಾಲ್ಯದ ಕನಸು. ಜನರಿಗೆ ಸಹಾಯ ಮಾಡಲು ಯಾರೂ ಮುಂದೆ ಬರುವುದಿಲ್ಲ. ನಾನು ರಾಜಕೀಯಕ್ಕೆ ಸೇರುವ ಮೂಲಕ ಈ ಸಂಪ್ರದಾಯವನ್ನು ಮುರಿಯಬೇಕೆಂದಿದ್ದೇನೆ. ಅದಕ್ಕಾಗಿ ನಾನು ಕಿಡ್ನಿಯನ್ನು ಮಾರಲೂ ಹಿಂಜರಿಯುವುದಿಲ್ಲ ಎಂದು ತಿಳಿಸಿದ್ದಾರೆ.

ಸುಕುರ್​ ಅಲಿ ಕೆಲವು ವರ್ಷಗಳ ಹಿಂದೆ ತಮ್ಮ ಜಮೀನಿನ ಒಂದು ಭಾಗ ಮಾರಿ ಮತ್ತು ಕೂಲಿ ಕೆಲಸ ಮಾಡಿ ಸಂಗ್ರಹಿಸಿದ ಹಣದಿಂದ ತಮ್ಮ ಗ್ರಾಮದ ಸಮೀಪ ಹರಿಯುವ ಶಿಬಲಿ ನದಿಗೆ ಬಿದಿರಿನ ಸೇತುವೆ ನಿರ್ಮಿಸಿದ್ದರು.

ಪ್ರಸ್ತುತ ನಮ್ಮ ಭಾಗದಲ್ಲಿ ನೀರು ಮತ್ತು ಸಾರಿಗೆ ಸಂಪರ್ಕದ ಸಮಸ್ಯೆ ತೀವ್ರವಾಗಿದೆ. ಈ ಸಮಸ್ಯೆಗಳನ್ನು ಪರಿಹರಿಸುವವರು ಬೇಕಾಗಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಅಸ್ಸಾಂನಲ್ಲಿ ಏಪ್ರಿಲ್​ 11, 18 ಮತ್ತು 23 ರಂದು ಒಟ್ಟು 3 ಹಂತಗಳಲ್ಲಿ ಮತದಾನ ನಡೆಯಲಿದೆ. (ಏಜೆನ್ಸೀಸ್​)