ದೇಶ ಕಟ್ಟಿದ್ದು ಶ್ರೀಸಾಮಾನ್ಯರೇ ಹೊರತು ನಾಯಕರಲ್ಲ

ಶಿವಮೊಗ್ಗ: ಈ ದೇಶ ಕಟ್ಟಿದವರು ಶ್ರೀಸಾಮಾನ್ಯರೇ ಹೊರತು ಆಳುವ ಯಾವ ನಾಯಕರೂ ಅಲ್ಲ. ದೇಶ ನಿರ್ಮಾಣ ಮಾಡಿದವರು ಶ್ರಮ ಜೀವಿಗಳು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತದಿಂದ ಡಿಎಆರ್ ಮೈದಾನದಲ್ಲಿ ಏರ್ಪಡಿಸಿದ್ದ 72ನೇ ಸ್ವಾತಂತ್ರ್ಯೊತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಬಿತ್ತಿದವರು, ಬೆಳೆದವರು, ಹೊಲಿದವರು, ಸ್ವಚ್ಛ ಮಾಡಿದವರು ಈ ದೇಶದ ನಿಜವಾದ ಕನಸುಗಾರರು ಎಂದು ಹೇಳಿದರು.

ರಾಷ್ಟ್ರೀಯ ಹಬ್ಬ ಎನ್ನುವುದು ಧರ್ಮ, ಜಾತಿ, ಪ್ರದೇಶಗಳನ್ನು ಮೀರಿದ್ದು. ಪ್ರತಿಯೊಬ್ಬರೂ ತಾನು ಎನ್ನುವುದು ಸತ್ಯವಲ್ಲ. ನಾವು ಎನ್ನುವುದೇ ನಿತ್ಯ ಎಂದು ದೇಶದ ಉದ್ದಗಲಕ್ಕೂ ಏಕತೆಯ ಮಂತ್ರ ಪಠಿಸಬಹುದಾದ ಬೆಚ್ಚನೆಯ ಭಾವಕ್ಕೆ ಸ್ವರಗಳೆಲ್ಲಾ ಸೇರಿ ಒಂದೇ ರಾಗವಾದ ಹಾಡು ‘ಜನ..ಗಣ..ಮನ..’ ಎಂದೆಂದಿಗೂ ಈ ಗೀತೆಗೆ ಹಳೆತನವಿಲ್ಲ ಎಂದರು.

ಆಗಸ್ಟ್ 15 ಎಂಬುದು ದಿನಚರಿ ನೋಡಿ ಆಚರಿಸುವುಂತಾಗಬಾರದು. ಅದು ಒಳಗಿನಿಂದಲೇ ಅಭಿಮಾನದ ದಿನವಾಗಿಬಿಡಬೇಕು. ಉಳಿದ ರಜೆಗಳಂತೆ ಇಂದೊಂದು ರಜೆಯ ದಿನವಾಗಬಾರದು. ಬದಲಿಗೆ ಅವಲೋಕನವಾಗಬೇಕು. ದೇಶ, ಭಾಷೆ, ಸಮಾಜ ಎಂಬುದರ ಆತ್ಮಾವಲೋಕನವಾಗಬೇಕು ಎಂದು ಹೇಳಿದರು.

ಸಾಧನೆ ಅವಲೋಕನಕ್ಕೆ ಸಿಗದ ಅವಕಾಶರಾಜ್ಯ ಸರ್ಕಾರದ ಸಾಧನೆಗಳನ್ನು ಸ್ವಾತಂತ್ರ್ಯೊತ್ಸವ ಭಾಷಣದಲ್ಲಿ ಹೇಳಿಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಯಿತು. ಶಿವಮೊಗ್ಗದಲ್ಲಿ ನಗರ ಪಾಲಿಕೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕೇವಲ ದೇಶ, ನಾಡು, ನುಡಿಯ ಬಣ್ಣನೆಗೆ ಭಾಷಣ ಸೀಮಿತಗೊಳಿಸಬೇಕಾದ ಅನಿವಾರ್ಯತೆ ಉಂಟಾಯಿತು. ಆದರೆ 8 ಪುಟಗಳ ಜಿಲ್ಲಾ ಉಸ್ತುವಾರಿ ಸಚಿವರ ಭಾಷಣದಲ್ಲಿ ಡಿವಿಜಿಯವರ ಕಗ್ಗ, ಕುವೆಂಪು ಕವಿತೆಯ ಸಾಲುಗಳು, ಮಲೆನಾಡಿನ ಬಣ್ಣನೆ, ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಗಮನಸೆಳೆಯಿತು.

ಬಿಡುವು ನೀಡಿದ ಮಳೆರಾಯಸ್ವಾತಂತ್ರ್ಯೊತ್ಸವದ ಸಂಭ್ರಮಕ್ಕೆ ಬಿಡುವು ನೀಡಿದ ಮಳೆರಾಯ ಕಾರ್ಯಕ್ರಮ ಚೆಂದಗಾಣಿಸಲು ಕಾರಣನಾದ. ಆರಂಭದಲ್ಲಿ ತುಂತುರು ಮಳೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತುಸು ಆತಂಕ ಎದುರಾದರು. ಬಳಿಕ ಒಂದು ತಾಸಿನ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿತು.