Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಸ್ವಾತಂತ್ರ್ಯ ಸಂಭ್ರಮಕ್ಕೆ ಸೆಲೆಬ್ರಿಟಿ ಜೈಕಾರ

Wednesday, 15.08.2018, 3:01 AM       No Comments

ಭಾರತ ಸ್ವಾತಂತ್ರ್ಯಗೊಂಡು 7 ದಶಕಗಳು ಕಳೆದಿವೆ. ಇಡೀ ದೇಶವೇ ಇಂದು 72ನೇ ಸ್ವಾತಂತ್ರ್ಯ ದಿನ ಆಚರಿಸಿಕೊಳ್ಳುತ್ತಿದೆ. ಕಣ್ಣು ಹಾಯಿಸಿದಲ್ಲೆಲ್ಲ ತ್ರಿವರ್ಣ ಧ್ವಜವೇ ಕಂಗೊಳಿಸುತ್ತಿದೆ. ಕಿವಿಗೊಟ್ಟಲ್ಲೆಲ್ಲ ‘ವಂದೇ ಮಾತರಂ’, ‘ಭಾರತ್ ಮಾತಾಕಿ ಜೈ’ ಮುಂತಾದ ಘೋಷಣೆ ಕೇಳಿಸುತ್ತಿವೆ. ಈ ಮಹತ್ವದ ದಿನದ ಬಗ್ಗೆ ಪ್ರತಿಯೊಬ್ಬರಿಗೂ ಅವರದೇ ಆದ ಅಭಿಪ್ರಾಯಗಳಿವೆ. ಚಂದನವನದ ತಾರೆಯರು ಕೂಡ ಸ್ವಾತಂತ್ರ್ಯ ದಿನಾಚರಣೆ ಮತ್ತು ದೇಶಭಕ್ತಿ ಕುರಿತು ತಮ್ಮ ಮನದ ಮಾತುಗಳನ್ನು ‘ನಮಸ್ತೆ ಬೆಂಗಳೂರು’ ಜತೆ ಹಂಚಿಕೊಂಡಿದ್ದಾರೆ.

ಶಿವಾಜಿ, ಭಗತ್ ಸಿಂಗ್ ಪಾತ್ರ ಮಾಡುವಾಸೆ

ಅವರವರ ವೈಯಕ್ತಿಕ ಜೀವನಕ್ಕೆ ಬೇರೆಯವರು ಮಧ್ಯ ಪ್ರವೇಶಿಸದಿರುವುದೇ ಒಳಿತು. ಅದೇ ನನ್ನ ಪ್ರಕಾರ ಸ್ವಾತಂತ್ರ್ಯ. ಸೆಲೆಬ್ರಿಟಿಗಳೇ ಆಗಲಿ, ಸಾಮಾನ್ಯ ವ್ಯಕ್ತಿಯೇ ಆಗಲಿ ಅವರನ್ನು ಅವರಿಷ್ಟದಂತೆ ಇರಲು ಬಿಡಬೇಕು. ಹಾಗಾದಾಗ ಮಾತ್ರ ಸ್ವಾತಂತ್ರ್ಯ ಪದಕ್ಕೆ ಗೌರವ ಸಿಕ್ಕಂತಾಗುತ್ತದೆ. ಇನ್ನು, ದೇಶಭಕ್ತಿಯ ಸಿನಿಮಾಗಳಲ್ಲಿ ನಟಿಸುವುದೆಂದರೆ ನನಗೆ ಮೊದಲಿನಿಂದಲೂ ಇಷ್ಟ. ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ಕೇಳುವುದಕ್ಕಿಂತ ಬೆಳ್ಳಿಪರದೆ ಮೇಲೆ ನೋಡುವುದೇ ಒಂದು ಚೆಂದ. ಆಗ ನಮ್ಮ ದೇಶಾಭಿಮಾನ ದುಪ್ಪಟ್ಟಾಗುತ್ತದೆ. ಅದೇ ರೀತಿ ಭಗತ್ ಸಿಂಗ್ ಮತ್ತು ಶಿವಾಜಿ ಮಹಾರಾಜ್ ಅವರಂಥ ಸ್ವಾತಂತ್ರ್ಯ ಹೋರಾಟಗಾರರ ಪಾತ್ರವನ್ನು ಸಿನಿಮಾದಲ್ಲಿ ನಿಭಾಯಿಸಬೇಕೆಂಬ ಆಸೆ ಇದೆ. ಆ ರೀತಿಯ ಅವಕಾಶ ಸಿಕ್ಕರೆ ಖಂಡಿತ ನಟಿಸುತ್ತೇನೆ.

| ಕಾರ್ತಿಕ್ ಜಯರಾಂ ನಟ

ಮಹಿಳೆಯರಿಗೆ ಇನ್ನೂ ಸಿಗದ ಸ್ವಾತಂತ್ರ್ಯ

ಸ್ವಾತಂತ್ರ್ಯ ಬಂದು 72 ವರ್ಷ ಕಳೆದರೂ ಮಹಿಳೆಯರಿಗೆ ಮಾತ್ರ ಸ್ವಾತಂತ್ರ್ಯ ಸಿಕ್ಕಿಲ್ಲ ಎಂಬುದು ನನ್ನ ಭಾವನೆ. ಮಹಿಳೆ ಎಂದ ತಕ್ಷಣ ಎಲ್ಲ ಕಡೆಗಳಲ್ಲೂ ಆಕೆಗೆ ಕಟ್ಟುಪಾಡುಗಳಿರುತ್ತವೆ. ಹೆಣ್ಣು ಮನೆಗಷ್ಟೇ ಸೀಮಿತ ಎಂಬ ಮನಸ್ಥಿತಿ ಎಲ್ಲರಲ್ಲೂ ಬೇರೂರಿದೆ. ಹಾಗಾಗಿ ಸಮಾನತೆ ತರುವ ಕೆಲಸಕ್ಕೆ ಮುಂದಾಗಬೇಕು. ಅದೇ ರೀತಿ ಎಲ್ಲೆಡೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ತಕ್ಷಣ ಶಿಕ್ಷೆ ವಿಧಿಸಿದರೆ ಭಯ ಮೂಡುತ್ತದೆ. ಆದರೆ ಶಿಕ್ಷೆ ಪ್ರಕಟಿಸುವಲ್ಲಿ ವರ್ಷಾನುಗಟ್ಟಲೆ ವಿಳಂಬ ಆಗುತ್ತಿದೆ. ಆ.15 ಎಂದರೆ ಶಾಲಾ ದಿನಗಳಲ್ಲಿನ ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮಗಳೇ ನೆನಪಾಗುತ್ತವೆ. ಚಿಕ್ಕ ಚಿಕ್ಕ ಧ್ವಜಗಳನ್ನು ಹಿಡಿದು ಘೋಷಣೆ ಕೂಗಿದ್ದು ಉಂಟು. ಆದರೆ, ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಧ್ವಜಗಳದ್ದೇ ಕಾರುಬಾರು. ಪ್ಲಾಸ್ಟಿಕ್ ಮುಕ್ತ ಪರಿಸರ ಎಂದು ಹೇಳಿಕೊಳ್ಳುವುದೇ ಆಗಿದೆ ಹೊರತು, ಬಳಕೆಯಂತೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಪ್ಲಾಸ್ಟಿಕ್ ಧ್ವಜ ಬಳಸುವ ಬದಲು ಬಟ್ಟೆಯಿಂದ ಸಿದ್ಧಪಡಿಸಿದ ಧ್ವಜಗಳನ್ನು ಬಳಸುವುದರಿಂದ ಅದು ದೇಶಕ್ಕೆ ಮತ್ತು ಪರಿಸರಕ್ಕೆ ನಮ್ಮಿಂದಾಗುವ ಅಳಿಲು ಸೇವೆ. ಮರುವರ್ಷವೂ ನಾವು ಅದನ್ನು ಬಳಸಬಹುದು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಎಂದು ಪ್ರತಿಯೊಬ್ಬರೂ ಜಾಗೃತಿ ಮೂಡಿಸಬೇಕು.

| ಆಶಿಕಾ ರಂಗನಾಥ್ ನಟಿ

ಎಲ್ಲರ ಮನ-ಮನೆಗಳಲ್ಲೂ ಆಚರಣೆಯಾಗಲಿ

ಸ್ವಾತಂತ್ರ್ಯೋತ್ಸವ ಎಂದರೆ ನನಗೆ ಎಲ್ಲಿಲ್ಲದ ಸಂಭ್ರಮ. ನಾವು ಆಚರಿಸುವ ಎಲ್ಲ ಹಬ್ಬಗಳಿಗಿಂತ ದೊಡ್ಡ ಹಬ್ಬ ಇದು. ಶಾಲಾ-ಕಾಲೇಜು, ಕಚೇರಿಗಳಲ್ಲಿ ಆಚರಣೆ ಮಾಡುವುದು ಮಾತ್ರವಲ್ಲದೆ, ಎಲ್ಲರ ಮನ-ಮನೆಗಳಲ್ಲೂ ಸ್ವಾತಂತ್ರ್ಯ ದಿನದ ಆಚರಣೆ ಆಗಬೇಕು. ಆ.15 ಬಂತೆಂದರೆ ನನ್ನ ಶಾಲಾ ದಿನಗಳು ನೆನಪಾಗುತ್ತವೆ. ಅಂದು ನಾನು ದೇಶಭಕ್ತಿ ಗೀತೆಗಳನ್ನು ಹಾಡುತ್ತಿದ್ದೆ. ಧ್ವಜಾರೋಹಣ ನಂತರ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸುತ್ತಿದ್ದೆವು. ಈಗ ಆ ರೀತಿಯ ಆಚರಣೆ ಮಾಡಲಾಗುತ್ತಿಲ್ಲ. ಆದರೆ, ನನ್ನೊಳಗಿನ ದೇಶಾಭಿಮಾನ ಯಾವತ್ತೂ ಕಮ್ಮಿ ಆಗಿಲ್ಲ. ರಾಷ್ಟ್ರಗೀತೆ- ರಾಷ್ಟ್ರಧ್ವಜಕ್ಕೆ ಎಲ್ಲರೂ ಗೌರವ ನೀಡಬೇಕು. ಇತ್ತೀಚೆಗೆ ಪ್ಲಾಸ್ಟಿಕ್ ಧ್ವಜಗಳನ್ನು ಮಾರಾಟ ಮಾಡುವುದನ್ನು ನೋಡಿದ್ದೇನೆ. ಅದು ತಪು್ಪ ಎಂಬುದು ನನ್ನ ಅನಿಸಿಕೆ. ಏಕೆಂದರೆ, ಆಚರಣೆ ನಂತರ ಅವುಗಳನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತದೆ. ಅದರ ಬದಲು ಧ್ವಜದ ಬ್ಯಾಡ್ಜ್ ಹಾಕಿಕೊಳ್ಳುವುದು ಉತ್ತಮ.

| ಆರೋಹಿ ನಾರಾಯಣ್ ನಟಿ

 

ರಕ್ಷಣೆ, ಗೌರವ ಸಿಕ್ಕರೆ ಅದೇ ಸ್ವಾತಂತ್ರ್ಯ

ಮಧ್ಯರಾತ್ರಿಯಲ್ಲಿ ಹೆಣ್ಣುಮಕ್ಕಳು ನಿರ್ಭೀತಿಯಿಂದ ಸುರಕ್ಷಿತವಾಗಿ ಓಡಾಡಬಹುದು ಎಂದಾದರೆ ಅದೇ ನಿಜವಾದ ಸ್ವಾತಂತ್ರ್ಯ. ನಮ್ಮ ದೇಶದಲ್ಲಿ ಹಲವಾರು ಜಾತಿ, ಧರ್ಮದವರಿದ್ದಾರೆ. ಜನಸಂಖ್ಯೆ ಕೂಡ ಭಾರಿ ಪ್ರಮಾಣದಲ್ಲಿದೆ. ಇಷ್ಟಾಗಿಯೂ ವಿವಿಧತೆಯಲ್ಲಿ ಏಕತೆ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿದ್ದೇವೆ. ಸ್ವಾತಂತ್ರ್ಯ ಸಿಕ್ಕಮೇಲೆ ಹಲವಾರು ಬದಲಾವಣೆಗಳನ್ನು ದೇಶ ಕಂಡಿದೆ. ಸಕಾರಾತ್ಮಕ, ನಕಾರಾತ್ಮಕ ಅಂಶಗಳು ದೇಶದಲ್ಲಿವೆ. ಭ್ರಷ್ಟಾಚಾರ, ಹೆಣ್ಣುಮಕ್ಕಳ ಶೋಷಣೆ, ಮೂಢನಂಬಿಕೆಗಳು ಸಂಪೂರ್ಣ ನಿಮೂಲನೆಯಾಗಬೇಕು. ಇಂದು ಸಾಮಾಜಿಕ ಜಾಲತಾಣವನ್ನು ಯುವಜನರು ಹೆಚ್ಚು ಬಳಸುತ್ತಿದ್ದಾರೆ. ಸರ್ಕಾರ, ದೇಶದಲ್ಲಿ ನಡೆಯುವ ಘಟನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಮುಕ್ತವಾಗಿ ಚರ್ಚೆ ಮಾಡುತ್ತಿದ್ದಾರೆ. ಈ ವಾಕ್ ಸ್ವಾತಂತ್ರ್ಯ ನಮಗೆ ಸಿಕ್ಕಿದೆ. ಆದರೆ ಇದರ ದುರುಪಯೋಗ ಮಾಡಿಕೊಳ್ಳಬಾರದು. ಅಭಿವೃದ್ಧಿ ಹೊಂದಿದ ದೇಶವಾಗಬೇಕೆಂಬ ನೆಪವೊಡ್ಡಿ ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸುವುದನ್ನು ಬಿಡಬೇಕು. ಆಗ ನಮಗೆ ಸಿಕ್ಕ ಸ್ವಾತಂತ್ರ್ಯಕ್ಕೊಂದು ಅರ್ಥ ಬರುತ್ತದೆ.

| ವಿಜಯ್ ಸೂರ್ಯ ನಟ

 

ನಮಗೆ ಸಿಕ್ಕಿರುವ ಸ್ವಾತಂತ್ರ್ಯ ಸ್ವೇಚ್ಛಾಚಾರ ಆಗಬಾರದು

ದೇಶಕ್ಕೆ ಸ್ವಾತಂತ್ರ್ಯ ಎನ್ನುವುದು ಹೇಗೆ ಮುಖ್ಯವೋ ಹಾಗೆಯೇ ಪ್ರತಿ ವ್ಯಕ್ತಿಗೂ ಸ್ವಾತಂತ್ರ್ಯ ಬೇಕು. ಇಂದು ಎಲ್ಲರೂ ಸ್ವಾವಲಂಬಿ ಆಗಿ ಬದುಕಲು ಇಚ್ಛಿಸುತ್ತಾರೆ. ನಮ್ಮ ದೇಶದಲ್ಲಿ ಸ್ವಾತಂತ್ರ್ಯದ ವಿಚಾರದಲ್ಲಿ ಯಾವುದೇ ತಡೆಗೋಡೆಗಳಿಲ್ಲ. ಆದರೆ ಅದು ಸ್ವೇಚ್ಛಾಚಾರ ಆಗಬಾರದು ಎನ್ನುವುದು ನನ್ನ ಅಭಿಪ್ರಾಯ. ಇನ್ನು ಅನೇಕರಿಗೆ ನಮ್ಮ ದೇಶದ ಬಾವುಟದ ಬಗ್ಗೆ ಕಿಂಚಿತ್ತೂ ಗೌರವ ಇಲ್ಲ ಎಂಬುದು ಬೇಸರದ ಸಂಗತಿ. ಸ್ವಾತಂತ್ರೊ್ಯೕತ್ಸವದ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಾವುಟ ಖರೀದಿಸುತ್ತಾರೆ. ನಂತರ ಬಾವುಟವನ್ನು ಕಾರಿಗೆ ಸಿಕ್ಕಿಸಿಕೊಂಡು ಎರಡು ದಿನ ಓಡಾಡುತ್ತಾರೆ. ಕೊನೆಗೆ, ಬಾವುಟವನ್ನು ಯಾವುದೋ ಮೂಲೆಗೆ ಎಸೆಯುತ್ತಾರೆ. ಇದು ನಮ್ಮ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದಂತೆ. ಇನ್ನು, ಪ್ಲಾಸ್ಟಿಕ್ ಬಾವುಟಗಳ ಬಳಕೆ ಹೆಚ್ಚುತ್ತಿರುವ ಬಗ್ಗೆ ನನಗೆ ಬೇಸರ ಇದೆ. ಅದರಿಂದ ನೇರವಾಗಿ ಪರಿಸರಕ್ಕೆ ದುಷ್ಪಪರಿಣಾಮ ಉಂಟಾಗುತ್ತದೆ. ದೇಶಭಕ್ತಿ ಮೆರೆಯಲು ಹೋಗಿ ನಾವು ಪರಿಸರಕ್ಕೆ ಹಾನಿ ಮಾಡುತ್ತಿದ್ದೇವೆ. ಹಾಗಾಗಿ ಪ್ಲಾಸ್ಟಿಕ್ ಫ್ಲ್ಯಾಗ್ ಮಾರಾಟ ಮಾಡಬಾರದು ಎನ್ನುವುದು ನನ್ನ ಕಳಕಳಿಯ ಮನವಿ. ಸ್ವಾತಂತ್ರ್ಯೋತ್ಸವ ಬಂದಾಗ ನನಗೆ ಬಾಲ್ಯದ ನೆನಪಾಗುತ್ತದೆ. ನಾನು ಶಾಲೆಯ ಬ್ಯಾಂಡ್​ಸೆಟ್​ನಲ್ಲಿದ್ದೆ. ಹಾಗಾಗಿ ಬೆಳಗ್ಗೆ ಬೇಗ ಎದ್ದು ಶ್ವೇತವರ್ಣದ ಸಮವಸ್ತ್ರ ಧರಿಸಿ ಶಾಲೆಗೆ ತೆರಳುತ್ತಿದ್ದೆ.

| ತೇಜಸ್ವಿನಿ ಪ್ರಕಾಶ್ ನಟಿ

Leave a Reply

Your email address will not be published. Required fields are marked *

Back To Top