ಸ್ವಾತಂತ್ರ್ಯೊತ್ಸವದಲ್ಲಿ ಹಸಿರು ಕರ್ನಾಟಕ ನಿರ್ಮಾಣ ಪ್ರತಿಜ್ಞೆ

ಹುಬ್ಬಳ್ಳಿ: ಇಲ್ಲಿಯ ತಾಲೂಕು ಆಡಳಿತ ಹಾಗೂ ತಾಲೂಕು ಸ್ವಾತಂತ್ರ್ಯೊತ್ಸವ ಸಮಿತಿ ವತಿಯಿಂದ ನೆಹರು ಮೈದಾನದಲ್ಲಿ ಬುಧವಾರ ಹಸಿರು ಕರ್ನಾಟಕ ನಿರ್ವಣಕ್ಕಾಗಿ ಪ್ರತಿಜ್ಞಾವಿಧಿ ಸ್ವೀಕಾರದೊಂದಿಗೆ ಸ್ವಾತಂತ್ರ್ಯೊತ್ಸವ ಆಚರಿಸಲಾಯಿತು.

ತಹಸೀಲ್ದಾರ್ ಶಶಿಧರ ಮಾಡ್ಯಾಳ ಧ್ವಜಾರೋಹಣ ನೆರವೇರಿಸಿದರು. ಪೊಲೀಸ್ ಇಲಾಖೆ, ಎನ್​ಸಿಸಿ, ಸ್ಕೌಟ್ಸ್ ಆಂಡ್ ಗೈಡ್ಸ್, ಸೇವಾ ದಳ ಹಾಗೂ ವಿವಿಧ ಶಾಲೆಗಳ ಬಾಲಕ-ಬಾಲಕಿಯರಿಂದ ಆಕರ್ಷಕ ಪಥ ಸಂಚಲನ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಿಎಂ ಜಗದೀಶ ಶೆಟ್ಟರ್ ಹಸಿರು ಕರ್ನಾಟಕ ನಿರ್ವಣಕ್ಕಾಗಿ ಪ್ರತಿಜ್ಞಾವಿಧಿ ಬೋಧಿಸಿದರು. ಬಳಿಕ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಉಡಾನ್ ಯೋಜನೆ ಫಲವಾಗಿ ಹುಬ್ಬಳ್ಳಿ ಸುತ್ತಮುತ್ತಲಿನ ಜನತೆಗೆ ಅಗ್ಗದ ಬೆಲೆಯಲ್ಲಿ ವಿಮಾನ ಸೇವೆ ದೊರೆಯುತ್ತಿದೆ ಎಂದರು.

ಸತತ 4 ವರ್ಷದಿಂದ ಬರಗಾಲ ಎದುರಿಸಿದ ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿದೆ. ಆದರೆ, ಕೆಲವೆಡೆ ಮಳೆಯಿಂದ ನೆರೆಹಾವಳಿ ಸಂಭವಿಸಿದ್ದರೆ, ಮತ್ತೊಂದೆಡೆ ಬರಗಾಲ ಎದುರಾಗುವಂತೆ ಮಾಡಿದೆ. ಸಿಎಂ ಕುಮಾರಸ್ವಾಮಿ ಎರಡು ಕಡೆ ಪ್ರವಾಸ ಮಾಡಿ, ಸೂಕ್ತ ಪರಿಹಾರ ನೀಡುವ ಕಾರ್ಯಕ್ಕೆ ಮುಂದಾಗಬೇಕು ಎಂದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ನಗರದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಶ್ರಮಿಸಿದಾಗ ಸುಂದರವಾಗಿ ಕಾಣಲು ಸಾಧ್ಯ. ಈಗಾಗಲೇ ಜನತಾ ಬಜಾರ್, ದುರ್ಗದ್ ಬೈಲ್ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದರು.

ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್ ವಿತರಿಸಲಾಯಿತು. ಶಾಲಾ ಮಕ್ಕಳಿಂದ ಪ್ರದರ್ಶನಗೊಂಡ ಭರತನಾಟ್ಯ, ದೇಶಭಕ್ತಿ ಹಾಗೂ ಸಾಂಸ್ಕೃತಿಕ ನೃತ್ಯ ಮನಸೂರೆಗೊಂಡವು.

ವಿಪ ಸದಸ್ಯ ಪ್ರದೀಪ ಶೆಟ್ಟರ್, ಎಸಿಪಿ ಎನ್.ಬಿ. ಸಕ್ರಿ, ಕಸಾಪ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ, ಉಪ ತಹಸೀಲ್ದಾರ್ ಪ್ರಕಾಶ ನಾಶಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಶಾಲಾ-ಕಾಲೇಜ್ ಶಿಕ್ಷಕರು ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.

ಸಾಧಕರಿಗೆ ಸನ್ಮಾನ: ಸ್ವಾತಂತ್ರ್ಯ ಹೋರಾಟಗಾರ ಬೆಂಗೇರಿಯ ಕೃಷ್ಣಾಜಿ ಕುಲಕರ್ಣಿ, ಉಣಕಲ್ಲನ ಶ್ರೀರಾಮ ತೇಂಬೆ, ಮೇಜರ್ ಸ್ವಾತಿ ಧಾರವಾಡಕರ, ಉಜ್ಜೇಕಿಸ್ತಾನದಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ 2ನೇ ಸ್ಥಾನ ಪಡೆದ ಅಭಿಷೇಕ ಗೌಡರ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ಘಂಟಿಕೇರಿ ಬಾಲಮಂದಿರದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಮೈದಾನದಲ್ಲೆಲ್ಲ ಕೆಸರೋ, ಕೆಸರು…!: ಮೈದಾನದಲ್ಲಿ ನೀರು ಹರಿದು ಹೋಗಲು ದಾರಿಯಿಲ್ಲದ ಕಾರಣ ಎಲ್ಲೆಡೆ ನಿಂತು ಕೆಸರು ಗದ್ದೆಯಂತಾಗಿತ್ತು. ಮೈದಾನವನ್ನು ಸೂಕ್ತ ರೀತಿಯಲ್ಲಿ ಸಿದ್ಧಪಡಿಸಬೇಕಾದ ಅಧಿಕಾರಿಗಳು ತಾವು ನಿಲ್ಲುವ ಸ್ಥಳವನ್ನು ಮಾತ್ರ ಸ್ವಚ್ಛಗೊಳಿಸಿಕೊಂಡಿದ್ದರು. ಹೀಗಾಗಿ ವಿದ್ಯಾರ್ಥಿಗಳು ನಿಂತುಕೊಳ್ಳಲೂ ಆಗದಂಥ ಸ್ಥಿತಿ ನಿರ್ವಣವಾಗಿತ್ತು. ಮೈದಾನಕ್ಕೆ ಇಳಿಯಲು ಹಿಂದು-ಮುಂದು ನೋಡಿದ ವಿದ್ಯಾರ್ಥಿಗಳು ಸ್ಟೇಡಿಯಂ ಗ್ಯಾಲರಿ ಬಿಟ್ಟು ಕೆಳಗಿಳಿಯಲಿಲ್ಲ. ಪಥ ಸಂಚಲನದಲ್ಲಿ ಪಾಲ್ಗೊಂಡವರು ಅನಿವಾರ್ಯ ಎಂಬಂತೆ ಹೆಜ್ಜೆಯ ಮೇಲೊಂದು ಹೆಜ್ಜೆ ಹಾಕುತ್ತ ಗುರಿ ಮುಟ್ಟಿ ನಿಟ್ಟುಸಿರು ಬಿಟ್ಟರು. ಕಾರ್ಯಕ್ರಮಕ್ಕೆ ಬಂದವರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತ ಹೊರ ನಡೆದರು. ಜಿಟಿಜಿಟಿ ಮಳೆಯಿಂದಾಗಿ ಹೇಳಿಕೊಳ್ಳುವಷ್ಟು ಜನ ಪಾಲ್ಗೊಂಡಿರಲಿಲ್ಲ. ಹೀಗಾಗಿ ಸಮಾರಂಭ ಕಳೆಗುಂದಿತ್ತು.