ಸ್ವಾತಂತ್ರ್ಯ್ಕೆ ಕೋಟೆನಾಡಿನ ಕೊಡುಗೆ ಅಪಾರ

ಬಾಗಲಕೋಟೆ: ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡಿಗರ ಪಾಲು ಬಹು ದೊಡ್ಡದಾಗಿದೆ. ಅದರಲ್ಲೂ ಬಾಗಲಕೋಟೆ ಜಿಲ್ಲೆಯ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ ಆಯೋಜಿಸಿದ್ದ 72ನೇ ಸ್ವಾತಂತ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಧ್ವಜವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಜಮಖಂಡಿ ಸಂಸ್ಥಾನದ ವೀರ ಸೇನಾನಿ ಛಟ್ಟು ಸಿಂಗ್, ವೀರ ಸಿಂಧೂರ ಲಕ್ಷ್ಮಣ, ಸುರಪುರದ ವೆಂಕಟಪ್ಪ ನಾಯಕ, ನರಗುಂದದ ಬಾಬಾಸಾಹೇಬ, ದೊಂಡಿಯ ವಾಘ, ಹಲಗಲಿಯ ಬೇಡರು ಹಾಗೂ ಮೈಸೂರಿನ ಹುಲಿ ಟಿಪ್ಪು ಸುಲ್ತಾನರು ನಡೆಸಿದ ಅಪ್ರತಿಮ ಹೋರಾಟದ ಕತೆ ದೇಶವಾಸಿಗಳ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ ಎಂದರು.

ಸ್ವಾತಂತ್ರ್ಯ್ಕಾಗಿ ಬಾಗಲಕೋಟೆ ಜಿಲ್ಲೆಯಲ್ಲಿನ ಸೇನಾನಿಗಳೂ ಶ್ರಮಿಸಿದ ಫಲವನ್ನು ಇಂದು ನಾವೆಲ್ಲ ಅನುಭವಿಸುತ್ತಿದ್ದೇವೆ. ನಾ.ಸಾ. ಹರ್ಡೆಕರ್ ಬಾಗಲಕೋಟೆಯಲ್ಲಿ ಹಿಂದೂಸ್ತಾನಿ ಸೇವಾದಳ ಶಾಖೆ ಆರಂಭಿಸಿ ಅದನ್ನು ಉತ್ತರ ಕರ್ನಾಟಕದ ಕೇಂದ್ರ ಸ್ಥಾನವನ್ನಾಗಿ ಮಾಡಿದರು. ಹರ್ಡೆಕರ ಮಂಜಪ್ಪನವರು ಆಲಮಟ್ಟಿಯಲ್ಲಿ ಆಶ್ರಮ ಸ್ಥಾಪಿಸಿದರು. ಇವೆಲ್ಲ ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿಯ ಸೆಲೆಯಾಗಿದ್ದವು ಎಂದು ತಿಳಿಸಿದರು.

ಸತ್ಯ, ಅಹಿಂಸೆ ಸತ್ಯಾಗ್ರಹ ತತ್ವಗಳ ತಳಹದಿ ಮೇಲೆ ಅಸಹಕಾರ ಚಳವಳಿ ಆರಂಭದಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹೋರಾಟ ಇಡೀ ಜಗತ್ತಿಗೆ ಮಾದರಿಯಾಯಿತು. ಅಲ್ಲದೆ, ಅಸ್ಪೃಶ್ಯತೆ, ಮದ್ಯಪಾನ ನಿಷೇಧ, ಖಾದಿ ಪ್ರಚಾರ ಮುಂತಾದ ರಚನಾತ್ಮಕ ಕಾರ್ಯಗಳಿಗೆ ಇಂಬು ನೀಡಿದರು. ಕರ್ನಾಟಕದಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಗಾಂಧೀಜಿ ಪ್ರವಾಸ ಕೈಗೊಂಡಾಗ ಬಾಗಲಕೋಟೆ ಜಿಲ್ಲೆಗೂ ಆಗಮಿಸಿದ್ದರು. ಅಂದು ಕೆಳ ಸಮುದಾಯಗಳ ಜನರ ಅಭಿವೃದ್ಧಿಗಾಗಿ ಮತ್ತು ಊರು ಕೇರಿಗಳಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದ್ದರು ಎಂದರು.

ಹಸಿರೆ ಉಸಿರು ಎಂಬುದು ದೈವದತ್ತ ಸತ್ಯವಾಗಿದೆ. ನಿಸರ್ಗ ಪ್ರತಿ ಮನುಷ್ಯನಿಗೆ ಆಸರೆಯಾಗಿದ್ದು, ಆ.15ರಿಂದ 18ರವರೆಗೆ ರಾಜ್ಯಾದ್ಯಂತ ಹಸಿರು ಕರ್ನಾಟಕ ಆಂದೋಲನ ಆರಂಭಿಸಲಾಗಿದೆ. ಜಿಲ್ಲೆಯ ಪ್ರತಿಯೊಬ್ಬ ಪ್ರಜೆ ಗಿಡಮರ ನೆಡಬೇಕು. ದೇಶದ ಐಕ್ಯತೆ, ಸಮಗ್ರತೆ ಕಾಪಾಡಲು ಸರ್ವ ತ್ಯಾಗಗಳನ್ನು ಮಾಡಲು ಎಲ್ಲರೂ ಸಿದ್ಧರಾಗೋಣ. ನಮ್ಮ ತ್ರಿವರ್ಣ ಧ್ವಜ ಬಾನೆತ್ತರದಲ್ಲಿ ಹಾರಾಡಲು ಒಂದಾಗಿ ದುಡಿಯೋಣ. ಮೃಗಗಳಂತೆ ವರ್ತಿಸಿ ಇನ್ನೊಬ್ಬರ ಭಾವನೆಗಳನ್ನು ಘಾಸಿಗೊಳಿಸಬಾರದು. ಕನಸುಗಳನ್ನು ಭಗ್ನಗೊಳಿಸಬಾರದು ಎಂದು ತಿಳಿಸಿದರು.

ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ, ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಡಾ. ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯರಾದ ಎಸ್.ಆರ್. ಪಾಟೀಲ, ಹನುಮಂತ ನಿರಾಣಿ, ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ತಾಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ, ಜಿಲ್ಲಾಧಿಕಾರಿ ಶಾಂತಾರಾಮ ಕೆ.ಜಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ, ಜಿಪಂ ಸಿಇಒ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಇದ್ದರು.

ಪಾಟೀಲರ ಬಾಯಲ್ಲಿ ಕನ್ನಡ ವಿಲವಿಲ: ಬಾಗಲಕೋಟೆ: ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡ ಸ್ವಾತಂತ್ರ್ಯೊತ್ಸವದಲ್ಲಿ ಸಂದೇಶ ಓದುವಾಗ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಬಾಯಲ್ಲಿ ಕನ್ನಡ ವಿಲವಿಲ ಎಂದಿತು. ವೀರ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನು ತಪ್ಪು ತಪ್ಪಾಗಿ ಓದುವ ಮೂಲಕ ನೆರೆದವರನ್ನು ಮುಜುಗರಕ್ಕೀಡು ಮಾಡಿದರು. ಮೊದಲೇ ಸಿದ್ಧಪಡಿಸಿದ ಮೂರೂವರೆ ಪುಟಗಳ ಭಾಷಣವನ್ನು ಕೆಲವೆಡೆ ತಪ್ಪು ತಪ್ಪಾಗಿ ಓದಿದರು. ಅನೇಕ ಕನ್ನಡ ಪದಗಳನ್ನು ಅಪಭ್ರಂಶಗೊಳಿಸಿದರು. ‘ಮನುಷ್ಯ ಜಾತಿ ತಾನೊಂದೇ ವಲಂ’ ಎನ್ನುವ ಬದಲು ‘ವಲ್ಲಂ’ ಎಂದರು. ಇನ್ನು ಒಂದು ಹೆಜ್ಜೆ ಮುಂದು ಹೋಗಿ ‘ದಾದಾಬಾಯಿ ನವರೋಜಿ’ ಎನ್ನುವ ಬದಲು ‘ಬಾದಾಮಿ ನವರೋಜಿ’ ಎಂದರು. ‘ಲಾಲಾ ಲಜಪತರಾಯ’ ಬದಲಾಗಿ ‘ಲಾಲ ಪತ್ರರಾಜರಾಯ್’ ಎಂದು ತಪ್ಪಾಗಿ ಉಚ್ಛರಿಸಿದರು. ದೇಶಕ್ಕೆ ಹೋರಾಡಿದ ಹೋರಾಟಗಾರರ ಹೆಸರುಗಳನ್ನು ಸಚಿವರು ತಪ್ಪು ತಪ್ಪಾಗಿ ಓದಿದ್ದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.

ಬರಿಗೈಯಲ್ಲಿ ಮರಳಿದ ಸಾಧಕರು: ಸ್ವಾತಂತ್ರ್ಯೊತ್ಸವ ಅಂಗವಾಗಿ ಬಾಗಲಕೋಟೆ ಜಿಲ್ಲಾಡಳಿತದಿಂದ ಸನ್ಮಾನಿಸಲು ವಿವಿಧ ಕ್ಷೇತ್ರಗಳ ಏಳು ಸಾಧಕರನ್ನು ಆಹ್ವಾನಿಸಲಾಗಿತ್ತು. ಎಲ್ಲ ಸಾಧಕರು ಆಗಮಿಸಿದ್ದರು. ಆದರೆ, ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಸನ್ಮಾನ ರದ್ದುಗೊಳಿಸಲಾಯಿತು. ಇದರಿಂದ ಸಾಧಕರು ಬರಿಗೈಯಲ್ಲಿ ಮನೆಗೆ ತೆರಳುವಂತಾಯಿತು.