ಭಾರತದ ಬಡ, ಮಧ್ಯಮ ಹಾಗೂ ಶ್ರೀಮಂತ ವರ್ಗಗಳ ಬೆಳವಣಿಗೆ ಕುರಿತಂತೆ ಹಲವು ಕುತೂಹಲಕಾರಿ ಸಂಗತಿಗಳನ್ನು ಪ್ರೖೆಸ್ ಸಂಸ್ಥೆ ವರದಿ ತೆರೆದಿಟ್ಟಿದೆ. 2047ರ ಹೊತ್ತಿಗೆ ಭಾರತದ ಒಟ್ಟು ಜನಸಂಖ್ಯೆಯ ಶೇಕಡಾ 61ರಷ್ಟು ಜನರು ಮಧ್ಯಮ ವರ್ಗಕ್ಕೆ ಸೇರಿದವರಾಗಲಿದ್ದಾರೆ. ಭಾರತೀಯ ಕುಟುಂಬಗಳ ಸರಾಸರಿ ವಾರ್ಷಿಕ ಆದಾಯ ರೂ. 20 ಲಕ್ಷ ತಲುಪಲಿದೆ ಎಂದು ಅಂದಾಜಿಸಲಾಗಿದೆ.
2047ರ ವೇಳೆಗೆ, ಅಂದರೆ ಸ್ವಾತಂತ್ರ್ಯ ಶತಮಾನೋತ್ಸವದ ವೇಳೆ ಮಧ್ಯಮ ವರ್ಗವು ಭಾರತದ ಅತಿದೊಡ್ಡ ಗುಂಪಾಗಿ ಹೊರಹೊಮ್ಮಲಿದೆ. ಇದು ರಾಷ್ಟ್ರದ ಆದಾಯಕ್ಕೆ ಹೆಚ್ಚಿನ ಕೊಡುಗೆಯನ್ನು ಕೂಡ ನೀಡುತ್ತದೆ. ಪೀಪಲ್ಸ್ ರಿಸರ್ಚ್ ಆನ್ ಇಂಡಿಯಾಸ್ ಕನ್ಸೂ್ಯಮರ್ ಎಕಾನಮಿ (ಕ್ಕಐಇಉ ಪ್ರೖೆಸ್) ಈಚೆಗೆ ಪ್ರಕಟಿಸಿದ ‘ದಿ ರೈಸ್ ಆಫ್ ಇಂಡಿಯಾಸ್ ಮಿಡಲ್ ಕ್ಲಾಸ್’ (ಭಾರತದ ಮಧ್ಯಮ ವರ್ಗದ ಉದಯ) ಎಂಬ ಶೀರ್ಷಿಕೆಯುಳ್ಳ ವರದಿಯಲ್ಲಿ ಇಂತಹ ನಿರೀಕ್ಷೆ ಹಾಗೂ ಅಂದಾಜು ವ್ಯಕ್ತವಾಗಿದೆ. ಪ್ರಸ್ತುತ ವಿಶ್ವ ಬ್ಯಾಂಕ್ ಪ್ರಕಾರ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿರುವ ಭಾರತವು ಸರಾಸರಿ ವಾರ್ಷಿಕ ಆರ್ಥಿಕ ಬೆಳವಣಿಗೆ ದರ 6-7 ಶೇಕಡಾದೊಂದಿಗೆ ಈ ಸ್ಥಾನವನ್ನು 2047ರವರೆಗೂ ಉಳಿಸಿಕೊಳ್ಳುತ್ತದೆ ಎಂಬ ವಿಶ್ವಾಸವನ್ನು ಕೂಡ ವರದಿಯಲ್ಲಿ ವ್ಯಕ್ತಪಡಿಸಲಾಗಿದೆ. 2047ರ ಹೊತ್ತಿಗೆ ಭಾರತದ ಜನಸಂಖ್ಯೆಯು 166 ಕೋಟಿ ತಲುಪುವ ನಿರೀಕ್ಷೆ ಇದ್ದು, ಈ ಪೈಕಿ ಮಧ್ಯಮ ವರ್ಗದ ಜನಸಂಖ್ಯೆ 102 ಕೋಟಿ ಇರಬಹುದಾಗಿದೆ ಎಂದು ಅಂದಾಜಿಸಲಾಗಿದೆ, ಅಂದರೆ, ಜನಸಂಖ್ಯೆಯ 61 ಪ್ರತಿಶತ ಜನರು ಮಧ್ಯಮ ವರ್ಗದವರಾಗಲಿದ್ದಾರೆ ಎಂದು ವರದಿ ಭವಿಷ್ಯ ನುಡಿದಿದೆ. ಪ್ರಸ್ತುತ ಮಧ್ಯಮ ವರ್ಗದ ಜನಸಂಖ್ಯೆಯು 45 ಕೋಟಿ ಇದೆ ಎಂದು ಅಂದಾಜಿಸಲಾಗಿದೆ.
ಸರಾಸರಿ ವಾರ್ಷಿಕ ಆದಾಯ ರೂ. 20 ಲಕ್ಷಕ್ಕೆ ಏರಿಕೆ ಸಂಭವ
2047ರ ಹೊತ್ತಿಗೆ ರಾಜಕೀಯ ಮತ್ತು ಆರ್ಥಿಕ ಸುಧಾರಣೆಗಳು ತಮ್ಮ ಅಪೇಕ್ಷಿತ ಪರಿಣಾಮವನ್ನು ಬೀರಿದರೆ, ಭಾರತದ ಆದಾಯ ಪಿರಮಿಡ್ನಲ್ಲಿ ನಿರ್ಗತಿಕ ಮತ್ತು ಆಕಾಂಕ್ಷಿಗಳ ಗುಂಪು ಸಣ್ಣ ಪ್ರಮಾಣದಲ್ಲಿ ಉಳಿಯುತ್ತದೆ. ಮಧ್ಯಮ ವರ್ಗ ಹಾಗೂ ಕೆನೆ ಪದರ ಶ್ರೀಮಂತ ಗುಂಪು ದೊಡ್ಡ ಪ್ರಮಾಣದಲ್ಲಿ ಇರಲಿದೆ ಎಂದು ವರದಿ ಹೇಳುತ್ತದೆ. 2020-21 ಬೆಲೆಗಳ ಆಧಾರದಲ್ಲಿ 2047ರ ವೇಳೆಗೆ ಸರಾಸರಿ ವಾರ್ಷಿಕ ಗೃಹಬಳಕೆಯ ಆದಾಯವು ಅಂದಾಜು 20 ಲಕ್ಷ ರೂ.ಗೆ ಏರಲಿದೆ ಎಂದು ವರದಿ ಅಂದಾಜಿಸಿದೆ. ಕಡಿಮೆ ಆದಾಯ ವರ್ಗದವರಲ್ಲಿ ಬಹುತೇಕರು 2030ರ ಹೊತ್ತಿಗೆ ಮಧ್ಯಮ ವರ್ಗದವರಾಗಿ ಪರಿವರ್ತಿತವಾಗಲಿದ್ದಾರೆ. .
ಸಮೀಕ್ಷೆ ಲೆಕ್ಕಾಚಾರ
ಈ ಸಮೀಕ್ಷೆ ನಡೆಸಿದ ಪ್ರೖೆಸ್ ಸಂಸ್ಥೆಯು ಯಾವುದೇ ಲಾಭದ ಉದ್ದೇಶವಿಲ್ಲದ ಒಂದು ಸಂಘಟನೆಯಾಗಿದೆ. 2014, 2016 ಮತ್ತು 2021ನೇ ಸಾಲಿನಲ್ಲಿ ಮೂರು ಹಂತಗಳಲ್ಲಿ ನಡೆಸಲಾದ 2 ಲಕ್ಷ ಕುಟುಂಬಗಳ ಅಖಿಲ ಭಾರತ ಸಮೀಕ್ಷೆಗಳ ಮೂಲಕ ಸಂಗ್ರಹಿಸಲಾದ ಪ್ರಾಥಮಿಕ ದತ್ತಾಂಶದ ಅಂಕಿಅಂಶಗಳ ವಿಶ್ಲೇಷಣೆಯಿಂದ ಈ ಅಂದಾಜು, ನಿರೀಕ್ಷೆಗಳನ್ನು ಲೆಕ್ಕಹಾಕಲಾಗಿದೆ. ಪ್ರಸ್ತುತ ವರದಿ ಸಿದ್ಧಪಡಿಸಲು 2 ಲಕ್ಷ ಮಾದರಿಗಳ ಪೈಕಿ 40 ಸಾವಿರ ಕುಟುಂಬಗಳನ್ನು ಆಯ್ಕೆ ಮಾಡಲಾಗಿದೆ. ನಂತರ 2020-21 ಬೆಲೆಗಳಲ್ಲಿ ವಾರ್ಷಿಕ ಆದಾಯವನ್ನು ಆಧರಿಸಿ ಎಂಟು ಗುಂಪುಗಳಾಗಿ ವಿಂಗಡಿಸಲಾಗಿದೆ. 2030 ಮತ್ತು 2047ರ ಆದಾಯ ವಿತರಣೆಯನ್ನು ಅಂದಾಜಿಸುವುದಕ್ಕಾಗಿ ಜನಸಂಖ್ಯೆಯ ಬೆಳವಣಿಗೆ, ಕುಟುಂಬದ ಆದಾಯದ ಬೆಳವಣಿಗೆ ಮತ್ತು ನಗರೀಕರಣದ ದರವನ್ನು ವರದಿಯಲ್ಲಿ ಪರಿಗಣಿಸಲಾಗಿದೆ.
ಯಾರು ಧನಿಕರು, ಬಡವರು?
5 ಲಕ್ಷದಿಂದ 30 ಲಕ್ಷ ರೂಪಾಯಿಯವರೆಗೆ ವಾರ್ಷಿಕ ಆದಾಯವಿರುವ ಕುಟುಂಬಗಳನ್ನು ಮಧ್ಯಮ ವರ್ಗ ಎಂದು ಸಮೀಕ್ಷೆ ವ್ಯಾಖ್ಯಾನಿಸಿದೆ. ಈ ವರ್ಗವನ್ನು ಅನ್ವೇಷಕರು ಅಥವಾ ವಾರ್ಷಿಕವಾಗಿ ರೂ 5-15 ಲಕ್ಷದ ನಡುವೆ ಗಳಿಸುವವರು ಮತ್ತು ರೂ 15-30 ಲಕ್ಷ ಗಳಿಸುವ ಹೋರಾಟಗಾರರು ಎಂದು ವಿಂಗಡಿಸಲಾಗಿದೆ. ಅದೇ ರೀತಿ ವರದಿಯು ಶ್ರೀಮಂತರನ್ನು ಮೂರು ಆದಾಯ ಗುಂಪುಗಳಾಗಿ ವರ್ಗೀಕರಿಸಿದೆ. ಬಹುತೇಕ ಶ್ರೀಮಂತರು (ವರ್ಷಕ್ಕೆ ರೂ 30-50 ಲಕ್ಷ ವಾರ್ಷಿಕ ಆದಾಯ ಇರುವವರು); ಸಂಪೂರ್ಣ ಶ್ರೀಮಂತರು (ವರ್ಷಕ್ಕೆ ರೂ 1-2 ಕೋಟಿ ವಾರ್ಷಿಕ ಆದಾಯ ಇರುವವರು), ಮತ್ತು ಅತಿ ಶ್ರೀಮಂತರು (ರೂ. 2 ಕೋಟಿಗಿಂತ ಹೆಚ್ಚು ವಾರ್ಷಿಕ ಆದಾಯ ಇರುವವರು). ಕಡಿಮೆ ಆದಾಯದ ಮಟ್ಟವನ್ನು ಹೊಂದಿರುವ ಕುಟುಂಬಗಳನ್ನು ಎರಡು ರೀತಿಯಲ್ಲಿ ವರ್ಗೀಕರಿಸಲಾಗಿದೆ. ವರ್ಷಕ್ಕೆ ರೂ. 1.25 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಕುಟುಂಬದವರನ್ನು ನಿರ್ಗತಿಕರು ಎಂದು ವರ್ಗೀಕರಿಸಲಾಗಿದೆ. ವಾರ್ಷಿಕವಾಗಿ ರೂ 1.25 ಲಕ್ಷದಿಂದ 5 ಲಕ್ಷ ರೂ.ವರೆಗೆ ಆದಾಯ ಗಳಿಸುವ ಕುಟುಂಬಗಳನ್ನು ಆಕಾಂಕ್ಷಿಗಳು ಎಂದು ವ್ಯಾಖ್ಯಾನಿಸಲಾಗಿದೆ.
ಶ್ರೀಮಂತವಾಗುತ್ತಿದೆ ಗ್ರಾಮೀಣ ಭಾರತ
ಶ್ರೀಮಂತ ಮತ್ತು ಅತಿ ಶ್ರೀಮಂತ ಆದಾಯ ಗುಂಪುಗಳು 2016 ಮತ್ತು 2021ರ ನಡುವೆ ಶೇಕಡಾ 10ಕ್ಕಿಂತ ಹೆಚ್ಚಿನ ಬೆಳವಣಿಗೆಯ ದರಗಳನ್ನು ಕಂಡಿದ್ದರೆ, ಮಧ್ಯಮ ವರ್ಗವು ಶೇಕಡಾ 4 ರಿಂದ 7.5 ರಷ್ಟು ಬೆಳವಣಿಗೆಯ ದರಗಳನ್ನು ಕಂಡಿದೆ ಎಂದು ವರದಿಯು ಎತ್ತಿ ತೋರಿಸುತ್ತದೆ. ಇದೇ ವೇಳೆ ನಿರ್ಗತಿಕ (ಬಡ) ವರ್ಗದ ಪ್ರಮಾಣವು ಶೇಕಡಾ 0.6 ರಷ್ಟು ಕುಸಿತವನ್ನು ಕಂಡಿದೆ. ಇದು ಮೇಲ್ಮುಖ ಚಲನಶೀಲತೆಯನ್ನು ಸೂಚಿಸುತ್ತದೆ. ಆದರೆ, ಭಾರತದಲ್ಲಿ ಆದಾಯದ ಅಸಮಾನತೆಯು ಗಣನೀಯವಾಗಿ ಮುಂದುವರಿದಿದೆ ಎಂದು ವರದಿ ಸೂಚಿಸುತ್ತದೆ. 2016 ಮತ್ತು 2021ರ ನಡುವಿನ ಅವಧಿಯಲ್ಲಿ ಆಕಾಂಕ್ಷಿಗಳು ಮತ್ತು ಅದರ ಮೇಲ್ಪಟ್ಟ ವರ್ಗಗಳು ಸೇರಿದಂತೆ ಉನ್ನತ ಆದಾಯದ ವರ್ಗಗಳ ಬೆಳವಣಿಗೆಯ ದರಗಳು ನಗರಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಸೂಪರ್ ಶ್ರೀಮಂತ ಕುಟುಂಬಗಳು 2016 ಮತ್ತು 2021ರ ನಡುವೆ ಬಹುತೇಕವಾಗಿ ದ್ವಿಗುಣಗೊಂಡಿವೆ. ಇದಲ್ಲದೆ, ಇತರ ಉನ್ನತ ಆದಾಯದ ವರ್ಗಗಳು ಸಹ 6-10 ಪ್ರತಿಶತದಷ್ಟು ಗಣನೀಯ ಬೆಳವಣಿಗೆ ದರವನ್ನು ಕಂಡಿವೆ. ಇದೇ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ನಿರ್ಗತಿಕ ಕುಟುಂಬಗಳು ಶೇ.1.6ರಷ್ಟು ಕಡಿಮೆಯಾಗಿವೆ. ಏತನ್ಮಧ್ಯೆ, ನಗರ ಪ್ರದೇಶಗಳಲ್ಲಿ ನಿರ್ಗತಿಕ ವರ್ಗವು 2016 ಮತ್ತು 2021ರ ನಡುವೆ ಶೇಕಡಾ 7.6ರಷ್ಟು ಹೆಚ್ಚಳವನ್ನು ಕಂಡಿದೆ. ಮಧ್ಯಮ ವರ್ಗ ಮತ್ತು ಶ್ರೀಮಂತ ಕುಟುಂಬಗಳು ಸಹ ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಹೆಚ್ಚಿನ ಬೆಳವಣಿಗೆಯನ್ನು ಸಾಧಿಸಿಲ್ಲ. ಶ್ರೀಮಂತ ಕುಟುಂಬಗಳು ನಗರಗಳಲ್ಲಿ ಕೇಂದ್ರೀಕೃತವಾಗಿದ್ದರೆ, ಬಡವರು ಹಳ್ಳಿಗಳಲ್ಲಿ ನೆಲೆಸಿದ್ದಾರೆ ಎಂಬುದನ್ನು ವರದಿ ಎತ್ತಿ ತೋರಿಸುತ್ತದೆ. ಆದರೂ, ಅನ್ವೇಷಕರು, ಹೋರಾಟಗಾರರು ಮತ್ತು ಬಹುತೇಕ ಶ್ರೀಮಂತರು ರೀತಿಯ ಇತರ ಗುಂಪುಗಳು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸರಿಸಮಾನವಾಗಿ ವಿಂಗಡಣೆಯಾಗಿರುವುದು ಕಂಡುಬಂದಿದೆ.
ಆದಾಯದ ಅಸಮಾನತೆ ಹೆಚ್ಚಳ
ವಿವಿಧ ಆದಾಯ ಗುಂಪುಗಳಲ್ಲಿನ ಖರ್ಚು ಮಾದರಿ ಗಳು ಮತ್ತು ಪಡೆದುಕೊಂಡಿರುವ ಸೌಕರ್ಯಗಳನ್ನು ಗಮನಿಸಿದಾಗ ಸಂಪತ್ತಿನ ಅಸಮಾನತೆ ಇರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಬಡ ಮತ್ತು ಶ್ರೀಮಂತ ಕುಟುಂಬಗಳ ನಡುವೆ ಇರುವ ದೊಡ್ಡ ಅಸಮಾನತೆಯು ಅವರ ವಾರ್ಷಿಕ ಸರಾಸರಿ ಖರ್ಚಿನಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ ಎಂದು ವರದಿ ಹೇಳುತ್ತದೆ. 2021ರಲ್ಲಿ ಬಡ ಕುಟುಂಬಗಳು ವಾರ್ಷಿಕವಾಗಿ 82,300 ರೂಪಾಯಿಗಳನ್ನು ವ್ಯಯಿಸಿದ್ದರೆ ಶ್ರೀಮಂತ ಕುಟುಂಬಗಳು 20.47 ಲಕ್ಷ ರೂ. ಖರ್ಚು ಮಾಡಿವೆ ಅಂದರೆ ಸರಿಸುಮಾರು 25 ಪಟ್ಟು ಹೆಚ್ಚು ವ್ಯಯಿಸಿವೆ ಎಂಬ ಅಂಶಗಳು ವರದಿಯಲ್ಲಿ ಕಂಡುಬಂದಿವೆ.
ಅನಕ್ಷರತೆ ಇಳಿಮುಖ
ಶ್ರೀಮಂತ ಕುಟುಂಬಗಳು ಹೆಚ್ಚಿನ ಶೇಕಡಾವಾರು ಪದವೀಧರರನ್ನು ಹೊಂದಿದ್ದರೆ, ನಿರ್ಗತಿಕ ಕುಟುಂಬಗಳು ಹೆಚ್ಚಿನ ಶೇಕಡಾವಾರು ಅನಕ್ಷರಸ್ಥ ವ್ಯಕ್ತಿಗಳನ್ನು ಹೊಂದಿವೆ. ಆದರೂ ನಿರ್ಗತಿಕ ಕುಟುಂಬಗಳಲ್ಲಿ ಸಹ, ಕೇವಲ 15 ಪ್ರತಿಶತದಷ್ಟು ಜನರು ಅನಕ್ಷರಸ್ಥರಾಗಿದ್ದಾರೆ. 37 ಪ್ರತಿಶತದಷ್ಟು ಜನರು ಪ್ರಾಥಮಿಕ ಶಾಲಾ ಹಂತದವರೆಗೆ ಶಿಕ್ಷಣವನ್ನು ಪಡೆದಿದ್ದಾರೆ. ಶಿಕ್ಷಣ ಮತ್ತು ಆದಾಯದ ನಡುವಿನ ಸಂಬಂಧವು ತುಂಬಾ ಸ್ಪಷ್ಟವಾಗಿದೆ. ಕುಟುಂಬಗಳು ಆದಾಯದ ಮೆಟ್ಟಿಲು ಏರುತ್ತಿದ್ದಂತೆ, ಶಿಕ್ಷಣದ ಮಟ್ಟವೂ ಏರುತ್ತದೆ ಎಂದು ವರದಿ ಹೇಳುತ್ತದೆ. ದೇಶದಲ್ಲಿ ಖಾಸಗಿ ವಲಯದ ಹೆಚ್ಚುತ್ತಿರುವ ಉಪಸ್ಥಿತಿಯೊಂದಿಗೆ ಸಂಬಳದ ಖಾಸಗಿ ಉದ್ಯೋಗಗಳು ಮಧ್ಯಮ ವರ್ಗ ಮತ್ತು ಶ್ರೀಮಂತ ಕುಟುಂಬಗಳಿಗೆ ಅತಿದೊಡ್ಡ ಆದಾಯದ ಮೂಲವಾಗಿ ಹೊರಹೊಮ್ಮಿವೆ ಎಂದು ವರದಿ ಹೇಳುತ್ತದೆ. ಸಾರ್ವಜನಿಕ ವಲಯದ ಉದ್ಯೋಗಗಳು ಹೆಚ್ಚು ಹಿಂದುಳಿದಿಲ್ಲ. ಅಲ್ಲದೆ, ಸ್ವಯಂ ಉದ್ಯೋಗಳು, ವ್ಯವಹಾರಗಳು ಸಹ ಆದಾಯದ ಪ್ರಮುಖ ಭಾಗವನ್ನು ರೂಪಿಸುತ್ತವೆ ಎಂದು ವರದಿ ಹೇಳುತ್ತದೆ.
ನೀರು, ಶೌಚಾಲಯಕ್ಕೆ ಬರ ಮೊಬೈಲ್ಫೋನ್ ಅಬ್ಬರ
ನೀರು ಮತ್ತು ಶೌಚಾಲಯ ಸೌಲಭ್ಯಗಳಿಲ್ಲದಿದ್ದರೂ ಬಡವರ ಬಳಿ ಮೊಬೈಲ್ಫೋನ್ಗಳಿವೆ. ಸುರಕ್ಷಿತ ಕುಡಿಯುವ ನೀರಿನ ಲಭ್ಯತೆಯು ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗದವರಿಗೆ ಮಾತ್ರ ಐಷಾರಾಮಿ ವಸ್ತುವಾಗಿ ಉಳಿದಿದೆ ಎಂದು ವರದಿ ಹೇಳುತ್ತದೆ. 2021ರಲ್ಲಿ, ಕೇವಲ 30 ಪ್ರತಿಶತ ನಿರ್ಗತಿಕ ಕುಟುಂಬಗಳು ನಲ್ಲಿ ನೀರಿನ ಲಭ್ಯತೆ ಹೊಂದಿದ್ದವು. ಅಲ್ಲದೆ, 50 ಪ್ರತಿಶತದಷ್ಟು ಜನರು ಶೌಚಾಲಯಗಳ ಕೊರತೆ ಹೊಂದಿದ್ದಾರೆ ಅಥವಾ ಹರಿಯುವ ನೀರಿಲ್ಲದ ಶೌಚಾಲಯಗಳನ್ನು ಹೊಂದಿದ್ದಾರೆ ಎಂದು ವರದಿ ಹೇಳಿದೆ. ಆದರೆ, ಡಿಜಿಟಲ್ ಸಂಪರ್ಕಕ್ಕೆ ಬಂದಾಗ ಅಸಮಾನತೆಯು ಸ್ವಲ್ಪಮಟ್ಟಿಗೆ ನಿವಾರಣೆಯಾಗಿದೆ. 85 ಪ್ರತಿಶತ ನಿರ್ಗತಿಕ ಕುಟುಂಬಗಳು ಮೊಬೈಲ್ ಫೋನ್ಗಳನ್ನು ಹೊಂದಿದ್ದು, ಕನಿಷ್ಠ 39 ಪ್ರತಿಶತದಷ್ಟು ಜನರು ಇಂಟರ್ನೆಟ್ ಸೌಲಭ್ಯ ಪಡೆದಿದ್ದಾರೆ ಎಂದು ವರದಿ ಸೂಚಿಸುತ್ತದೆ. ವಿದ್ಯುತ್ ಸಂಪರ್ಕವು ಗಮನಾರ್ಹ ಬೆಳವಣಿಗೆ ದಾಖಲಿಸಿದೆ. ಹೆಚ್ಚಿನ ಜನರಿಗೆ ವಿದ್ಯುತ್ ಲಭ್ಯವಿದ್ದು, 90 ಪ್ರತಿಶತ ಬಡ ಕುಟುಂಬಗಳು ಸೀಲಿಂಗ್ ಫ್ಯಾನ್ಗಳನ್ನು ಹೊಂದಿವೆ ಎಂದು ವರದಿ ಹೇಳುತ್ತದೆ.
ಎಕ್ಸಾಂ ದಿನವೇ ವಿದ್ಯಾರ್ಥಿ ಸಾವು ಪ್ರಕರಣದ ಇನ್ನೊಂದು ಮುಖ: ಏಕೈಕ ಪುತ್ರನನ್ನು ಕಳೆದುಕೊಂಡ ತಾಯಿಯ ಪ್ರಶ್ನೆಗಳಿವು..
ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!