3ನೇ ಏಕದಿನ: ವಿಂಡೀಸ್‌ ವಿರುದ್ಧ ಟೀಂ ಇಂಡಿಯಾಗೆ ಸೋಲು, ಕೊಹ್ಲಿ ಶತಕ ವ್ಯರ್ಥ

ಪುಣೆ: ಭಾರತ ಮತ್ತು ವೆಸ್ಟ್‌ ಇಂಡೀಸ್‌ ನಡುವಿನ 3 ನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ವೆಸ್ಟ್‌ ಇಂಡೀಸ್‌ ತಂಡ 43 ರನ್‌ಗಳ ಜಯ ಸಾಧಿಸಿದೆ.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ ಮಾಡಿದ್ದ ಇಂಡೀಸ್ ಭಾರತಕ್ಕೆ 284ರನ್‌ಗಳ ಗುರಿ ನೀಡಿತ್ತು. ಗುರಿಯ ಬೆನ್ನತ್ತಿದ ಭಾರತ 47.4 ಓವರ್‌ಗಳಲ್ಲಿಯೇ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 240 ರನ್‌ ಗಳಿಸಿದೆ.

ರೋಹಿತ್‌ ಶರ್ಮಾ 8 ರನ್‌, ಶಿಖರ್‌ ಧವನ್‌ 35, ವಿರಾಟ್‌ ಕೊಹ್ಲಿ 107, ಅಂಬಟಿ ರಾಯುಡು 22, ರಿಶಬ್‌ ಪಂತ್‌ 24, ಧೋನಿ 7, ಭುವನೇಶ್ವರ್‌ ಕುಮಾರ್ 10, ಚಾಹಲ್‌ 3 ಮತ್ತು ಜಸ್ಪ್ರೀತ್‌ ಬುಮ್ರಾ ಶೂನ್ಯಕ್ಕೆ ನಿರ್ಗಮಿಸಿದರು. ಕುಲದೀಪ್‌ ಯಾದವ್‌ ಅಜೇಯ 15 ರನ್‌ ಗಳಿಸಿದರು.

ವಿಂಡೀಸ್‌ ಪರ ಸಾಮ್ಯುಯೆಲ್ಸ್ 3 ವಿಕೆಟ್‌, ಹೋಲ್ಡರ್‌, ನರ್ಸ್‌ ಮತ್ತು ಒಬೆಡ್ ತಲಾ ಎರಡು ವಿಕೆಟ್‌, ರೋಚ್‌ 1 ವಿಕೆಟ್‌ ಕಬಳಿಸಿದ್ದಾರೆ.

ಟೀಂ ಇಂಡಿಯಾ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರ ಶತಕದ ನೆರವಿದ್ದರೂ ಕೂಡ ಭಾರತ ಸೋಲು ಕಂಡಿದ್ದು, 5 ಏಕದಿನ ಪಂದ್ಯಗಳ ಸರಣಿ 1-1 ರಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿವೆ. (ಏಜೆನ್ಸೀಸ್)