ಯಾರೇನೇ ಅಂದ್ರೂ ತಲೆಕೆಡಿಸಿಕೊಳ್ಳದೆ ಮುನ್ನುಗ್ಗಿ: ಕೊಹ್ಲಿ ಬೆನ್ನಿಗೆ ನಿಂತ ಜಹೀರ್​, ಪ್ರವೀಣ್​

ನವದೆಹಲಿ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಮೊದಲ ಎರಡು ಟೆಸ್ಟ್​ ಪಂದ್ಯಗಳಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ತೋರಿದ ಆಕ್ರಮಣಕಾರಿ​ ಪ್ರವೃತ್ತಿಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗಿದೆ.

ಅಲಾನ್​ ಬಾರ್ಡರ್​, ಮೈಕ್​ ಹಸ್ಸಿ ಹಾಗೂ ಮಿಚೆಲ್​ ಜಾನ್ಸನ್​ರಂತಹ ಆಸಿಸ್​​ ಆಟಗಾರರು ಕೊಹ್ಲಿ ವರ್ತನೆಗೆ ಅಸಮಾಧಾನ ಹೊರಹಾಕಿದ್ದಾರೆ. ಇದೇ ವೇಳೆ ತಂಡದ ಸದಸ್ಯರಾದ ಜಹೀರ್​ ಖಾನ್​ ಹಾಗೂ ಪ್ರವೀಣ್​ ಕುಮಾರ್​ ಅವರು ಕೊಹ್ಲಿ ಬೆನ್ನಿಗೆ ನಿಂತಿದ್ದು, ಈಗಿರುವ ರೀತಿಯಲ್ಲೇ ಇರಬೇಕು ಎಂದು ಸಲಹೆ ನೀಡಿದ್ದಾರೆ.

ಕೊಹ್ಲಿಗೆ ಹೇಳಲು ಬಯಸುವುದೇನೆಂದರೆ ನಿಮಗೆ ಏನು ಉತ್ತಮ ಅನಿಸುತ್ತದೆಯೋ ಅದಕ್ಕೆ ಅಂಟಿಕೊಳ್ಳಿ. ನಿಮ್ಮ ಯಶಸ್ಸಿನ ಹಾದಿಯ ಸೂತ್ರದಿಂದ ದೂರ ಸರಿಯಬಾರದು. ಇತರರು ಏನೆ ಹೇಳಿದರೂ ಅದನ್ನು ತಲೆಗೆ ಹಾಕಿಕೊಳ್ಳಬೇಡಿ. ಆಸ್ಟ್ರೇಲಿಯಾ ಸರಣಿಯಲ್ಲಿ ಈ ವರ್ತನೆ ಯಾವಾಗಲೂ ಇಷ್ಟವಾಗುತ್ತದೆ ಎಂದು ಮಾಜಿ ಆಟಗಾರ ಜಹೀರ್​ ಖಾನ್​ ತಿಳಿಸಿದ್ದಾರೆ.

ಅಂಡರ್​ 16, ಅಂಡರ್​ 19 ಹಾಗೂ ರಣಜಿ ಟ್ರೋಫಿಗಳಲ್ಲೂ ಕೊಹ್ಲಿ ಆಕ್ರಮಣಕಾರಿ ವರ್ತನೆಯಿಂದಲೇ ಆಡಿದ್ದಾರೆ. ಟೀಂ ಇಂಡಿಯಾ ಪರ ಆಡುವಾಗ ಅದೇ ರೀತಿಯ ವರ್ತನೆ ತೋರಿದರೆ ಏನು ತೊಂದರೆ? ಕೊಹ್ಲಿಯೊಂದಿಗೆ ಹೆಚ್ಚು ಪಂದ್ಯಗಳಲ್ಲಿ ನಾನು ಭಾಗಿಯಾಗಿದ್ದೇನೆ. ಆಕ್ರಮಣಕಾರಿ ವರ್ತನೆಯಿಲ್ಲದೆ ತನ್ನ ಅತ್ಯುತ್ತಮ ಕ್ರಿಕೆಟ್ ಅನ್ನು ಕೊಹ್ಲಿ ಆಡಲಾರರು ಎಂದು ಮಾಜಿ ಆಟಗಾರ ಪ್ರವೀಣ್​ ಕುಮಾರ್​ ಹೇಳಿದ್ದಾರೆ.

ವಿಶೇಷ ಅಂದರೆ ಆಸ್ಟ್ರೇಲಿಯಾದ ಮುಖ್ಯ ತರಬೇತುದಾರ ಜಸ್ಟಿನ್​ ಲ್ಯಾಂಗರ್​ ಕೂಡ ಪ್ರವಾಸಿ ಭಾರತೀಯ ಮೈದಾನದಲ್ಲಿ ತೋರುವ ಆಕ್ರಮಣಕಾರಿ ವರ್ತನೆಯನ್ನು ಇಷ್ಟಪಟ್ಟಿದ್ದಾರೆ. (ಏಜೆನ್ಸೀಸ್​)