ಬೈದಾಟದ ನಡುವೆ ಮರೆತರು ಹೋರಾಟ!

ಪರ್ತ್: ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನೇ ಗೆದ್ದ ಸಾಧನೆಯೊಂದಿಗೆ ಬೀಗಿದ್ದ ಭಾರತ ತಂಡ, 2ನೇ ಟೆಸ್ಟ್​ನಲ್ಲಿ ಲಯ ತಪ್ಪಿದೆ. ಉಭಯ ತಂಡಗಳ ಆಟಗಾರರ ‘ಸ್ಲೆಡ್ಜಿಂಗ್ ಬಿಸಿ’ ತಾರಕಕ್ಕೇರಿದ ದ್ವಿತೀಯ ಇನಿಂಗ್ಸ್​ನಲ್ಲಿ ವೇಗಿ ಮೊಹಮದ್ ಶಮಿ(56ಕ್ಕೆ 6) ಜೀವನಶ್ರೇಷ್ಠ ದಾಳಿಗೆ ಆಸ್ಟ್ರೇಲಿಯಾ ತಂಡ ಕುಸಿದರೂ, ಸ್ಪರ್ಧಾತ್ಮಕ ಮೊತ್ತದ ಚೇಸಿಂಗ್​ನಲ್ಲಿ ಅಗ್ರ ಬ್ಯಾಟ್ಸ್​ಮನ್​ಗಳು ಕಂಡ ವೈಫಲ್ಯದಿಂದಾಗಿ ಭಾರತ ಸೋಲಿನ ಹಾದಿಯಲ್ಲಿದೆ. ಈ ಮೂಲಕ ಆತಿಥೇಯ ಆಸ್ಟ್ರೇಲಿಯಾ, ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ ಸಮಬಲ ಸಾಧಿಸುವತ್ತ ಮುನ್ನಡೆದಿದೆ.

ಸೋಮವಾರ 4 ವಿಕೆಟ್​ಗೆ 132 ರನ್​ಗಳಿಂದ 4ನೇ ದಿನದಾಟ ಮುಂದುವರಿಸಿದ ಆಸೀಸ್, ಎಡಗೈ ಬ್ಯಾಟ್ಸ್​ಮನ್ ಉಸ್ಮಾನ್ ಖವಾಜ (72 ರನ್, 213 ಎಸೆತ, 5 ಬೌಂಡರಿ) ಅತ್ಯಮೂಲ್ಯ ಅರ್ಧಶತಕದಿಂದ ಮುನ್ನಡೆ ಹೆಚ್ಚಿಸಿಕೊಂಡರೂ, ಶಮಿ ನಡೆಸಿದ ದಾಳಿ ಎದುರು 243 ರನ್​ಗೆ ದ್ವಿತೀಯ ಇನಿಂಗ್ಸ್ ಮುಗಿಸಿತು. ಇದರಿಂದ ಗೆಲುವಿಗೆ 287 ರನ್ ಗುರಿ ಪಡೆದಿರುವ ಭಾರತ ತಂಡ, ಸ್ಪಿನ್ನರ್ ನಾಥನ್ ಲ್ಯಾನ್(30ಕ್ಕೆ 2) ಹಾಗೂ ವೇಗಿ ಜಾಸ್ ಹ್ಯಾಸಲ್​ವುಡ್(24ಕ್ಕೆ 2) ಸಂಘಟಿತ ದಾಳಿಗೆ ಪ್ರಮುಖ ಬ್ಯಾಟ್ಸ್​ಮನ್​ಗಳ ವಿಕೆಟ್ ಪತನ ಕಂಡಿರುವುದರಿಂದ ದಿನದಂತ್ಯಕ್ಕೆ 5 ವಿಕೆಟ್​ಗೆ 112 ರನ್ ಗಳಿಸಿ ಸೋಲಿನತ್ತ ಮುಖ ಮಾಡಿದೆ. ಕ್ರೀಸಿನಲ್ಲಿ ಉಳಿದಿರುವ ನಿರ್ಣಾಯಕ ಬ್ಯಾಟ್ಸ್​ಮನ್​ಗಳಾದ ಹನುಮ ವಿಹಾರಿ(24*ರನ್, 58ಎಸೆತ, 4ಬೌಂಡರಿ) ಹಾಗೂ ರಿಷಭ್ ಪಂತ್(9*) ಜೋಡಿ, ಈಗಾಗಲೆ ಭಾರಿ ಬಿರುಕು ಬಿಟ್ಟಿರುವ ಪಿಚ್​ನಲ್ಲಿ ಇನ್ನೂ 175 ರನ್ ಗಳಿಸಬೇಕಾದ ಕಠಿಣ ಸವಾಲು ಎದುರಿಸುತ್ತಿದೆ. ಪ್ರಮುಖ ಆಧಾರಸ್ತಂಭವಾಗಬೇಕಿದ್ದ ಕಿಂಗ್ ಕೊಹ್ಲಿ(17), ಚೇತೇಶ್ವರ ಪೂಜಾರ(4) ಹಾಗೂ ಉಪನಾಯಕ ಅಜಿಂಕ್ಯ ರಹಾನೆಯನ್ನು(30) ಈಗಾಗಲೆ ಕಳೆದುಕೊಂಡಿರುವ ಭಾರತಕ್ಕೆ ಗೆಲುವು ಅಥವಾ ಕನಿಷ್ಠ ಡ್ರಾ ಸಾಧಿಸುವ ಅವಕಾಶವೂ ಕ್ಷೀಣವಾಗಿದೆ. -ಪಿಟಿಐ/ಏಜೆನ್ಸೀಸ್

ಆಸೀಸ್​ಗೆ ಶಮಿ ಕಡಿವಾಣ

ದಿನದ ಮೊದಲ ಅವಧಿ ಪೂರ್ತಿ ಭಾರತೀಯ ಬೌಲರ್​ಗಳ ಎಲ್ಲ ರಣತಂತ್ರಗಳನ್ನು ದಿಟ್ಟವಾಗಿ ಎದುರಿಸಿದ ಉಸ್ಮಾನ್ ಖವಾಜ ಹಾಗೂ ನಾಯಕ ಟಿಮ್ ಪೇನ್(37 ರನ್, 116 ಎಸೆತ, 4 ಬೌಂಡರಿ) ಮುನ್ನಡೆಯನ್ನು ನಿಧಾನವಾಗಿ ಹೆಚ್ಚಿಸತೊಡಗಿದರು. ಆದರೆ ಹೊಸ ಚೆಂಡು ಬರಲು ಕೆಲವೇ ಓವರ್​ಗಳು ಬಾಕಿ ಇದ್ದಾಗ ಮೊಹಮದ್ ಶಮಿ ನಡೆಸಿದ ಸತತ ಶಾರ್ಟ್ ಬಾಲ್ ದಾಳಿಗೆ ಆಸೀಸ್ ದಿಢೀರ್ ಕುಸಿತ ಕಂಡಿತು. 4 ವಿಕೆಟ್​ಗೆ 192 ರನ್​ಗಳಿಂದ ಉತ್ತಮ ಸ್ಥಿತಿಯಲ್ಲಿದ್ದ ಆಸೀಸ್ ನಂತರ ಕೇವಲ 15 ರನ್ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡಿತು. ಪೇನ್ ಮತ್ತು ಕೈಬೆರಳು ಗಾಯದಿಂದ ಚೇತರಿಸಿಕೊಂಡು ಮತ್ತೆ ಕ್ರೀಸಿಗಿಳಿದ ಆರನ್ ಫಿಂಚ್, ಶಮಿಯ ಸತತ 2 ಎಸೆತಗಳಲ್ಲಿ ಔಟಾದರೆ, ಖವಾಜ ಹೊಸ ಚೆಂಡಿನಲ್ಲಿ ವಿಕೆಟ್ ಒಪ್ಪಿಸಿದರು. ಶಮಿಯ ಮಾರಕ ಬೌನ್ಸರ್​ಗೆ ಹೆಲ್ಮೆಟ್​ಗೆ ಏಟು ತಿಂದ ಲ್ಯಾನ್ ನಂತರದ ಎಸೆತದಲ್ಲಿ ಕ್ಯಾಚ್ ಕೊಟ್ಟರು. ಕೊನೇ ವಿಕೆಟ್​ಗೆ ಮಿಚೆಲ್ ಸ್ಟಾರ್ಕ್(14), ಹ್ಯಾಸಲ್​ವುಡ್(17) ಜತೆ ಅಮೂಲ್ಯ 36 ರನ್ ಸೇರಿಸಿ ಔಟಾದರು.

ಪೃಥ್ವಿ ಷಾ ಸರಣಿಯಿಂದ ಔಟ್

ಭಾರತದ ಆರಂಭಿಕ ಜೋಡಿ ರಾಹುಲ್ ಹಾಗೂ ವಿಜಯ್ ಸತತ ವೈಫಲ್ಯ ಕಂಡಿರುವ ಬೆನ್ನಲ್ಲೇ ಕೊನೇ 2 ಪಂದ್ಯಕ್ಕೆ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ. ಗಾಯಾಳು ಪೃಥ್ವಿ ಷಾ ಇನ್ನೂ ಸಂಪೂರ್ಣ ಚೇತರಿಸದಿರುವ ಕಾರಣ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಪ್ರಮುಖ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್​ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಬರೋಡದ ಹಾರ್ದಿಕ್ ಪಾಂಡ್ಯ ಮುಂಬೈ ತಂಡದ ಎದುರಿನ ರಣಜಿ ಪಂದ್ಯದಲ್ಲಿ 7 ವಿಕೆಟ್ ಹಾಗೂ 73 ರನ್ ಸಿಡಿಸಿ ಫಿಟ್ನೆಸ್ ಹಾಗೂ ಫಾಮ್ರ್ ನಿರೂಪಿಸಿದ್ದರೆ, ದೇಶೀಯ ಕ್ರಿಕೆಟ್​ನಲ್ಲಿ ಸ್ಥಿರ ಫಾಮ್ರ್ ಮುಂದುವರಿಸಿರುವ ಮಯಾಂಕ್ ಅಗರ್ವಾಲ್ ಈ ಹಿಂದೆ ವಿಂಡೀಸ್ ವಿರುದ್ಧದ ತವರಿನ ಟೆಸ್ಟ್ ಸರಣಿಗೆ ಸ್ಥಾನ ಪಡೆದಿದ್ದರೂ, ಆಡುವ ಅವಕಾಶ ಪಡೆದಿರಲಿಲ್ಲ.

ಕೊಹ್ಲಿಗೆ ಲ್ಯಾನ್ ಬ್ರೇಕ್

ಮೊದಲ ಇನಿಂಗ್ಸ್ ಶತಕ ಸಾಧಕ ಕೊಹ್ಲಿಯ ಅಮೂಲ್ಯ ವಿಕೆಟ್ ಕಬಳಿಸಿರುವ ಆಸೀಸ್ ಪಂದ್ಯದಲ್ಲಿ ಪೂರ್ಣ ಮೇಲುಗೈ ಸಾಧಿಸಿದೆ. 2ನೇ ಇನಿಂಗ್ಸ್​ನಲ್ಲಾದರೂ ಕೆಟ್ಟ ಫಾಮರ್್​ನಿಂದ ಹೊರಬರುವರೆಂಬ ನಿರೀಕ್ಷೆ ಮೂಡಿಸಿದ್ದ ಕನ್ನಡಿಗ ಕೆಎಲ್ ರಾಹುಲ್​ರದ್ದು ಇಲ್ಲೂ ಅದೇ ರಾಗ, ಅದೇ ತಾಳವಾಗಿತ್ತು. ತಂಡ ಇನ್ನೂ ಖಾತೆ ತೆರೆಯುವ ಮುನ್ನವೇ ಎಡಗೈ ವೇಗಿ ಸ್ಟಾರ್ಕ್ ಅವರ ಎಸೆತದಲ್ಲಿ ಇನ್​ಸೈಡ್ ಎಡ್ಜ್ ಬೌಲ್ಡಾಗಿ ರಾಹುಲ್ ನಿರ್ಗಮಿಸಿದರು. ಪೂಜಾರ ಕೂಡ ಹ್ಯಾಸಲ್​ವುಡ್ ದಾಳಿಯಲ್ಲಿ ನಿರಾಸೆ ಮೂಡಿಸಿದ್ದರಿಂದ ದೊಡ್ಡ ಹೊಡೆತ ಬಿತ್ತು. ನಂತರ ಕೊಹ್ಲಿ-ವಿಜಯ್ ನಿಧಾನವಾಗಿ ತಂಡ ಮೊತ್ತವನ್ನು 50ರ ಸನಿಹ ತಂದಾಗ ಆಸೀಸ್ ಲ್ಯಾನ್​ರನ್ನು ದಾಳಿಗಿಳಿಸಿತು. ಲ್ಯಾನ್​ರ ಸಾಧಾರಣ ಎಸೆತವನ್ನು ಸಮರ್ಥವಾಗಿ ಡಿಫೆಂಡ್ ಮಾಡಲು ವಿಫಲಗೊಂಡ ಕೊಹ್ಲಿ ಸ್ಲಿಪ್​ನಲ್ಲಿ ಖವಾಜಗೆ ಕ್ಯಾಚ್ ನೀಡುತ್ತಿದ್ದಂತೆ ಆಸೀಸ್ ಪಡೆ ಸಂಭ್ರಮದಲ್ಲಿ ತೇಲಾಡಿತು. ಅದೇ ಹೊತ್ತಿನಲ್ಲಿ ಮುರಳಿ ವಿಜಯ್(20) ಕೂಡ ಲ್ಯಾನ್ ದಾಳಿಗೆ ಎಡವಿದರು. ಬಳಿಕ ಹನುಮ ವಿಹಾರಿ ಜತೆ ರಹಾನೆ ಆಕ್ರಮಣಕಾರಿ ಆಟ ಮುಂದುವರಿಸಿದರೂ ದಿನದಂತ್ಯದ ವೇಳೆ ಹ್ಯಾಸಲ್​ವುಡ್ ಎಸೆತದಲ್ಲಿ ಅನಗತ್ಯ ಹೊಡೆತಕ್ಕೆ ಕೈ ಹಾಕಿ ತಂಡಕ್ಕಿದ್ದ ಏಕೈಕ ಭರವಸೆಯನ್ನೂ ಕಳೆದುಕೊಳ್ಳುವಂತೆ ಮಾಡಿದರು.

ಪರ್ತ್ ಪಂದ್ಯಕ್ಕೆ ನಮಗೆ ಒಬ್ಬ ಪ್ರಮುಖ ಸ್ಪಿನ್ನರ್ ಬೇಕಿತ್ತು. ಆದರೆ ತಂಡದ ಆಯ್ಕೆ ಟೀಮ್ ಮ್ಯಾನೇಜ್​ವೆುಂಟ್ ಕೈಯಲ್ಲಿರುತ್ತದೆ. ಈ ವಿಚಾರದಲ್ಲಿ ನಾವು ಅಸಹಾಯಕರು. ಉತ್ತಮ ಲೈನ್ ಹಾಗೂ ಲೆಂತ್ ನನ್ನ ಬೌಲಿಂಗ್ ಶಕ್ತಿ.

| ಮೊಹಮದ್ ಶಮಿ