ವಿದೇಶಿ ವ್ಯಕ್ತಿಯ ಹೊಟ್ಟೆಯಲ್ಲಿದ್ದ 2 ಫುಟ್​ಬಾಲ್​ ಗಾತ್ರದ ಗಡ್ಡೆಯನ್ನು ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ಹೊರತೆಗೆದ ದೆಹಲಿ ವೈದ್ಯರು!

ನವದೆಹಲಿ: ವಿರಳಾತಿವಿರಳ ಶಸ್ತ್ರಚಿಕಿತ್ಸೆಯೊಂದರಲ್ಲಿ ಸುಮಾರು ಎರಡು ಫುಟ್​ಬಾಲ್​ ಗಾತ್ರದ ಗಡ್ಡೆಯನ್ನು ತಾಂಜೇನಿಯ ಮೂಲದ ವ್ಯಕ್ತಿಯೊಬ್ಬನ ಹೊಟ್ಟೆಯಿಂದ ಯಶಸ್ವಿಯಾಗಿ ತೆಗೆದಿರುವುದಾಗಿ ರಾಷ್ಟ್ರ ರಾಜಧಾನಿಯ ವೈದ್ಯರು ತಿಳಿಸಿದ್ದಾರೆ.

ಸೋಮವಾರ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ವೈದ್ಯರು, ತಾಂಜೇನಿಯದ ದರ್​​ ಇಸ್​ ಸಲಾಂ ನಿವಾಸಿಯಾಗಿರುವ ಅಲಾಯ್ಸ್ ಜಾನ್ ಜಾವೆ ಎಂಬಾತನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಡಿಸೆಂಬರ್​ 2017ರಿಂದಲೂ ಜಾವೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾಗಿ ತಿಳಿಸಿದ್ದು, ಕಳೆದ ವರ್ಷ ತನ್ನ ದೇಶದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ, ಆದರೆ, ಹೊಟ್ಟೆಯಲ್ಲಿದ್ದ ಗಡ್ಡೆಯನ್ನು ತೆಗೆಯುವಲ್ಲಿ ಯಶಸ್ವಿಯಾಗಿರಲಿಲ್ಲ ಎಂದು ಜಾವೆ ಹೇಳಿರುವುದಾಗಿ ಮಾಹಿತಿ ನೀಡಿದ್ದಾರೆ.

ಜಾವೆ ಆಸ್ಪತ್ರೆಗೆ ಬಂದಾಗ ತುಂಬಾ ಕಷ್ಟದ ಪರಿಸ್ಥಿತಿಯಲ್ಲಿದ್ದ. ಜೀವಕಾರವಾಗಿದ್ದ ಗಡ್ಡೆ ಆಗಲೇ ಸುಮಾರು 24 ಕೆ.ಜಿ. ತೂಗುವಷ್ಟು ದೊಡ್ಡದಾಗಿ ಬೆಳೆದಿತ್ತು. ಅದೊಂದು ನಾಳಗಳಿಂದ ರಚಿತವಾದ ಗಡ್ಡೆಯಾಗಿದ್ದು, ರಕ್ತ ಸಂಚರಿಸುವ ನಾಳದ ಸುತ್ತ ದಟ್ಟವಾಗಿ ಹರಡಿ, ಪ್ರಾಣಕ್ಕೆ ಕುತ್ತು ತರುವ ಹಂತಕ್ಕೆ ಹೋಗಿತ್ತು. ಕಳೆದ ಮೇ 31ರಂದು ನಾವು ಆತನಿಗೆ ಆಪರೇಷನ್​ ಮಾಡಿದ್ದೆವು. ಶಸ್ತ್ರಚಿಕಿತ್ಸೆಯ ನಂತರ ಆತನನ್ನು ನಾಲ್ಕು ದಿನಗಳ ಕಾಲ ವೆಂಟಿಲೇಟರ್​ನಲ್ಲಿ ಇಟ್ಟಿದೆವು ಎಂದು ಶಾಲಿಮಾರ್​ ಭಾಘ್​ನಲ್ಲಿರುವ ಫೋರ್ಟೀಸ್​ ಆಸ್ಪತ್ರೆಯ ನಿರ್ದೇಶಕ ಹಾಗೂ ಜಠರಗರುಳಿನ ಗ್ರಂಥಿ ವಿಜ್ಞಾನ ತಜ್ಞ ಪ್ರದೀಪ್​ ಜೈನ್​ ತಿಳಿಸಿದ್ದಾರೆ.

ಆಪರೇಷನ್​ ವೇಳೆ ರೋಗಿ ನಾಲ್ಕು ಲೀಟರ್​ನಷ್ಟು ರಕ್ತವನ್ನು ಕಳೆದುಕೊಂಡಿದ್ದರಿಂದ ಚಿಕಿತ್ಸೆ ಪ್ರಕ್ರಿಯೆ ಸುಮಾರು ಆರು ಗಂಟೆಗಳನ್ನು ತೆಗೆದುಕೊಂಡಿತು. ರಕ್ತನಷ್ಟದಿಂದ ಹೊರಬರಲು ವೈದ್ಯರ ತಂಡ ಸಾಕಷ್ಟು ರಕ್ತ, ಪ್ಲಾಸ್ಮ ಹಾಗೂ ಪ್ಲೇಟ್ಲೆಟ್ಸ್​ಗಳನ್ನು ತಯಾರು ಮಾಡಿಕೊಂಡಿತ್ತು ಎಂದು ವೈದ್ಯರು ಹೇಳಿದ್ದಾರೆ.

ಅತಿಯಾದ ರಕ್ತಸ್ರಾವವನ್ನು ನಿಲ್ಲಿಸುವ ಸಲುವಾಗಿ ನಾವು ಅಬ್ಡೋಮಿನಲ್​ ಸ್ಪಂಜ್​ ಅನ್ನು ಮೂತ್ರಪಿಂಡದ ಕುಳಿಯಲ್ಲಿದ್ದ ಗಡ್ಡೆಗೆ ಪ್ಯಾಕ್​ ಮಾಡಲಾಯಿತು. ಬಳಿಕ ನಿಧಾನವಾಗಿ ಗಡ್ಡೆಯನ್ನು ಕತ್ತರಿಸಿ ಹೊರಗೆ ತರಲಾಯಿತು. ಗಡ್ಡೆಯನ್ನು ಸಣ್ಣ ಕರುಳಿನ ಒಂದು ಭಾಗ ಮತ್ತು ಮೂತ್ರಕೋಶದ ಒಂದು ಭಾಗದೊಂದಿಗೆ ಹೊರತೆಗೆಯಲಾಗಿದೆ ಎಂದು ವೈದ್ಯ ಪ್ರದೀಪ್​ ಜೈನ್​ ಮಾಹಿತಿ ನೀಡಿದ್ದಾರೆ.

ಹೊಟ್ಟೆಯಲ್ಲಿ ಪ್ಯಾಕ್​ ಮಾಡಲಾಗಿದ್ದ ಸ್ಪಂಜನ್ನು 60 ಗಂಟೆಗಳ ಚಿಕಿತ್ಸಾ ವಿಧಾನದ ಬಳಿಕ ಹೊರತೆಗೆಯಲಾಗಿದೆ. ಶಸ್ತ್ರಚಿಕಿತ್ಸೆಯ ನಂತರ ನಾಲ್ಕು ದಿನಗಳ ವೆಂಟಿಲೇಟರ್​ ಸಹಾಯದಿಂದ ಜಾವೆ ಬದುಕುಳಿದಿರುವುದಾಗಿ ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.

ಶಸ್ತ್ರಚಿಕಿತ್ಸೆ ನಡೆದ ಎರಡು ವಾರಗಳ ಒಳಗೆ ಜಾವೆ ಗುಣಮುಖರಾಗಿದ್ದಾರೆ. ಮತ್ತೊಮ್ಮೆ ಗಡ್ಡೆ ಬರದಿರಲು ಹಾಗೂ ಸಂಪೂರ್ಣ ಗುಣಮುಖರಾಗಲು ಜಾವೆಗೆ ಒರಲ್​ ಕೀಮೋಥೆರಪಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಪ್ರದೀಪ್​ ಜೈನ್​​ ಮಾಹಿತಿ ನೀಡಿದ್ದಾರೆ.

ದಾರ್​ ಇಸ್​ ಸಲಾಂ ರಾಜ್ಯ ನಡೆಸುವ ಸರ್ಕಾರಿ ಸಂಸ್ಥೆಯಲ್ಲಿ ಜಾವೆ, ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದು, ಸಂಪೂರ್ಣ ಗುಣಮುಖರಾಗಿ ಆಫ್ರಿಕಾಕ್ಕೆ ತೆರಳಲು ತಯಾರಾಗಿದ್ದಾರೆ. ತಮ್ಮ ದೇಶದಲ್ಲಿ ಚಿಕಿತ್ಸೆಯಲ್ಲಿ ಗುಣವಾಗದೇ ಹತಾಶಾರಾಗಿದ್ದ ಜಾವೆ, ಅಂತರ್ಜಾಲವನ್ನು ಹುಡುಕಾಡಿದಾಗ, ಹಲವು ಆಫ್ರಿಕನ್ನರು ಭಾರತಕ್ಕೆ ಹೋಗಿ ಗುಣಮುಖರಾಗಿ ಬಂದಿರುವ ಉದಾಹರಣೆಯನ್ನು ನೋಡಿ ಭಾರತಕ್ಕೆ ಬಂದು ಚಿಕಿತ್ಸೆ ಪಡೆಯುವ ನಿರ್ಧಾರಕ್ಕೆ ಬಂದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದು, ವೈದ್ಯರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *