More

    ಅಪಘಾತದಿಂದ ಹೆಚ್ಚುತ್ತಿದೆ ಮರಣ ಪ್ರಮಾಣ

    ಹಾಸನ: ರಸ್ತೆ ಅಪಘಾತದಿಂದ ಮರಣ ಹೊಂದುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಮಸ್ಯೆಗೆ ಮೂಲ ಕಾರಣ ಹಾಗೂ ಪರಿಹಾರ ಮಾರ್ಗ ಕಂಡುಕೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು.

    ಜಿಲ್ಲಾಡಳಿತ, ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಸಾರಿಗೆ ಸಂಸ್ಥೆ ಹಾಸನ ಘಟಕ 1ರ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.

    ರಸ್ತೆ ಸುರಕ್ಷತಾ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಪ್ರಯಾಣಿಕರ ಅಮೂಲ್ಯ ಜೀವ ವಾಹನ ಚಾಲಕರ ಕೈಯಲ್ಲಿರುತ್ತದೆ. ವಾರ್ಷಿಕ ಅಂಕಿ-ಅಂಶಗಳನ್ನು ಪರಿಶೀಲಿಸಿದಾಗ ಅಪಘಾತದಿಂದ ಮರಣ ಹೊಂದುವವರ ಪ್ರಮಾಣ ಹೆಚ್ಚಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

    ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಚಾಲಕರು ಕರ್ತವ್ಯ ನಿರ್ವಹಿಸಬೇಕು. ಇದರಿಂದ ಅಪಘಾತಗಳನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದರು.

    ನ್ಯಾಯಾಧೀಶ ಎಸ್.ಬಿ. ಕೆಂಬಾವಿ ಮಾತನಾಡಿ, ಬಹುತೇಕ ಅಪಘಾತಗಳು ಚಾಲಕರ ನಿರ್ಲಕ್ಷೃದಿಂದಲೇ ಆಗುತ್ತವೆ. ರಾತ್ರಿ ಹೊತ್ತು ವಾಹನ ಓಡಿಸುವುದು, ದುಶ್ಚಟಗಳ ಸಹವಾಸ, ವಾಹನ ಓಡಿಸುವಾಗ ಗಮನ ಬೇರೆಡೆ ಹರಿಸುವುದರಿಂದ ಅವಘಡ ಸಂಭವಿಸುತ್ತವೆ ಎಂದರು.

    ವಾಹನ ಚಾಲಕರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜತೆಗೆ ವೇಗದ ಪರಿಮಿತಿ ಮೀರಬಾರದು. ಚಾಲಕರು ನಿತ್ಯದ ಹಾಗೂ ಕೌಟುಂಬಿಕ ಒತ್ತಡಗಳನ್ನು ಸರಿದೂಗಿಸಿಕೊಂಡು ಕರ್ತವ್ಯ ಪಾಲಿಸಬೇಕು ಎಂದು ಸಲಹೆ ನೀಡಿದರು.

    ಪ್ರಾದೇಶಿಕ ಸಾರಿಗೆ ಅಧಿಕಾರಿ ಟಿ. ಅಶೋಕ್ ಕುಮಾರ್ ಮಾತನಾಡಿ, ರಸ್ತೆ ನಿಯಮಗಳ ಪಾಲನೆ ವಾಹನ ಚಾಲಕರದ್ದಾಗಿದೆ. ಅಲ್ಲದೆ, ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ. ಅತಿ ವೇಗದ ಚಾಲನೆಯಲ್ಲಿ ಯುವ ಜನರು ಹೆಚ್ಚಾಗಿ ಮರಣ ಹೊಂದುತ್ತಿದ್ದು ಮೃತರ ಕುಟುಂಬಕ್ಕೆ ಮಾತ್ರವಲ್ಲದೆ ದೇಶದ ಪ್ರಗತಿಗೂ ಅಪಾರ ನಷ್ಟವಾಗುತ್ತಿದೆ ಎಂದರು.

    ಡಿವೈಎಸ್‌ಪಿ ಪುಟ್ಟಸ್ವಾಮಿ ಗೌಡ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅನಿಲ್ ಕುಮಾರ್, ತಾಂತ್ರಿಕ ವಿಭಾಗ ಅಧಿಕಾರಿ ನಂದನ್ ಕುಮಾರ್ ಇತರರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts