ಕಂಟ್ರೋಲ್ ರೂಂಗೆ ಕರೆಗಳ ಮಹಾಪೂರ

ಅವಿನ್ ಶೆಟ್ಟಿ, ಉಡುಪಿ

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ, ಮತದಾರರ ಪಟ್ಟಿ ಸೇರ್ಪಡೆ, ತಿದ್ದುಪಡಿ, ಚುನಾವಣೆ ಸಂಬಂಧಿಸಿ ಮಾಹಿತಿ, ಸಲಹೆ, ದೂರಿಗಾಗಿ ಆರಂಭಿಸಿದ ಜಿಲ್ಲಾ ಎಲೆಕ್ಷನ್ ಕಂಟ್ರೋಲ್ ರೂಂಗೆ ಪ್ರತಿದಿನ ಸಾರ್ವಜನಿಕರಿಂದ ನಿರಂತರ ಕರೆಗಳು ಬರುತ್ತಿವೆ. ಜಿಲ್ಲಾಧಿಕಾರಿ ಕಚೇರಿ ಚುನಾವಣಾ ವಿಭಾಗ ಕಚೇರಿಯಲ್ಲಿ ಕಂಟ್ರೋಲ್ ರೂಂ ಆರಂಭಿಸಲಾಗಿದ್ದು, 24 ಗಂಟೆ ಕಂಟ್ರೋಲ್ ರೂಂ ಕಾರ್ಯನಿರ್ವಹಿಸುತ್ತಿದೆ. ಕಂಟ್ರೋಲ್ ರೂಂನಲ್ಲಿ 4 ಮಂದಿ ಸಿಬ್ಬಂದಿ ಇದ್ದು ಹಗಲು, ರಾತ್ರಿ ಕರೆಗಳನ್ನು ಸ್ವೀಕರಿಸುತ್ತಾರೆ. ಇಬ್ಬರು ಹಗಲು, ಇಬ್ಬರು ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ.

30ರಿಂದ 35 ಕರೆಗಳು: ಪ್ರತಿನಿತ್ಯ 1950-ಕಂಟ್ರೋಲ್ ರೂಂಗೆ 30 ರಿಂದ 35 ಕರೆಗಳು ಬರುತ್ತಿವೆ. ಮತದಾರರ ಗುರುತಿನ ಚೀಟಿ ಬಗ್ಗೆ ಮಾಹಿತಿ ಕೇಳುವ ಕರೆಗಳು ಹೆಚ್ಚಾಗಿವೆ. ಹೆಸರು ಸೇರ್ಪಡೆ, ತಿದ್ದುಪಡಿ, ಬಿಎಲ್‌ಒ ಮಾಹಿತಿ, ಪೊಲೀಂಗ್ ಬೂತ್ ಬಗ್ಗೆ ವಿವರ ಪಡೆದುಕೊಳ್ಳುತ್ತಾರೆ. ಅನುಮತಿ ಇಲ್ಲದೆ ಬ್ಯಾನರ್ ಅಳವಡಿಕೆ, ಅಕ್ರಮ ಚಟುವಟಿಕೆ ಬಗ್ಗೆ ದೂರುಗಳು ಬಂದಿವೆ. ದೂರುಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಂಟ್ರೋಲ್ ರೂಂನಿಂದ ಮಾಹಿತಿ ರವಾನೆಯಾಗುತ್ತದೆ. ಕಂಟ್ರೋಲ್ ರೂಂನಲ್ಲಿ 4 ಫೋನ್‌ಗಳಿದ್ದು, ಸಿಬ್ಬಂದಿಗೆ ಸಾರ್ವಜನಿಕರಿಗೆ ನೀಡಬೇಕಾದ ಸಲಹೆ, ಮಾಹಿತಿಗಳನ್ನು ಒಳಗೊಂಡ ಇಂಟರ್‌ನೆಟ್ ಕನೆಕ್ಷನ್, ಡಾಟ ಸಂಗ್ರಹವಿರುವ ಕಂಪ್ಯೂಟರ್ ಒದಗಿಸಲಾಗಿದೆ.

781 ಬ್ಯಾನರ್ ತೆರವು: ಜಿಲ್ಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇಲ್ಲಿವರೆಗೆ 781 ಬ್ಯಾನರ್‌ಗಳನ್ನು ತೆರವು ಮಾಡಲಾಗಿದೆ. ಮತದಾರರ ಮೇಲೆ ಪ್ರಭಾವ ಬೀರುವ 1971 ವಸ್ತು, 1230 ಇತರೆ ಪರಿಕರಗಳನ್ನು, 92 ಗೋಡೆ ಬರಹಗಳನ್ನು ತೆರವು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಸಿವಿಜಿಲ್‌ನಲ್ಲಿ 29 ದೂರು: ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಸಾರ್ವಜನಿಕರು ನೇರವಾಗಿ ದೂರು ದಾಖಲಿಸಬಹುದಾದ ಸಿ.ವಿಜಿಲ್ ಆ್ಯಪ್‌ಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇಲ್ಲಿವರೆಗೆ 29 ದೂರುಗಳು ದಾಖಲಾಗಿದ್ದು, ಈ ಪೈಕಿ 28 ದೂರುಗಳು ಕ್ಲಿಯರ್ ಆಗಿವೆ ಎಂದು ನೋಡಲ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಕುಂದಾಪುರ, ಬೈಂದೂರು ಭಾಗಗಳಿಂದ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಮಾಹಿತಿ, ದೂರು ನೀಡುವ ವ್ಯಕ್ತಿ ತನ್ನ ವೈಯ್ಯಕ್ತಿಕ ಮಾಹಿತಿ ದಾಖಲಿಸಬಹುದು ಅಥವಾ ಗೌಪ್ಯವಾಗಿಡುವ ವ್ಯವಸ್ಥೆ ಆ್ಯಪ್‌ನಲ್ಲಿರುವುದು ಸಾರ್ವಜನಿಕರಿಗೆ ಅನುಕೂಲವಾಗಿದೆ.

5 ಸಾವಿರ ಲೀಟರ್ ಮದ್ಯ ವಶ: ಮಾರ್ಚ್ 18ರಿಂದ ಇಲ್ಲಿವರೆಗೆ ಅಬಕಾರಿ ಇಲಾಖೆ ವ್ಯಾಪ್ತಿಯಲ್ಲಿ 17.81 ಲಕ್ಷ ರೂ. ಮೌಲ್ಯದ 5429 ಲೀಟರ್ ಅಕ್ರಮ ಮದ್ಯ, 1 ಟ್ರಕ್, 2 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮಾಹಿತಿ ನೀಡಿದ್ದಾರೆ.

ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ 30 ಟನ್ ಅಕ್ಕಿ, 3 ಲಾರಿ, 1 ಬೊಲೇರೊ, 3 ದ್ವಿಚಕ್ರ ವಾಹನ, 2.5 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ನೀತಿ ಸಂಹಿತೆ ಜಾರಿಯಾದ ಬಳಿಕ ಒಟ್ಟು 42 ಪ್ರಕರಣ ದಾಖಲಾಗಿದ್ದು, ಅಬಕಾರಿಯಲ್ಲಿ 39, ಪೊಲೀಸ್‌ನಲ್ಲಿ 3 ಪ್ರಕರಣ ದಾಖಲುಗೊಂಡಿದೆ. ಕಾರ್ಕಳ ಮಾಳ ಚೆಕ್‌ಪೋಸ್ಟ್ 1.50 ಲಕ್ಷ ರೂ. ದಾಖಲೆ ರಹಿತ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿ ಹೇಳಿದ್ದಾರೆ.

ಮಾದರಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅಕ್ರಮ ಮದ್ಯ, ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸಿ.ವಿಜಿಲ್ ಆ್ಯಪ್‌ಗೆ ಸ್ಪಂದನೆ ಉತ್ತಮವಾಗಿದ್ದು, ಸಾರ್ವಜನಿಕರಿಂದ 29 ದೂರು ದಾಖಲಾಗಿದೆ. ಚುನಾವಣೆಗೆ ಸಂಬಂಧಿಸಿದ ಮಾಹಿತಿ, ಸಲಹೆ, ದೂರಿಗೆ 1950ಗೆ ಸಾರ್ವಜನಿಕರು ಕರೆ ಮಾಡಬಹುದು.
| ಹೆಪ್ಸಿಬಾ ರಾಣಿ ಕೊರ್ಲಪಾಟಿ,
ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಚುನಾವಣಾಧಿಕಾರಿ