ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹಿಂದೇಟು

ಮೈಸೂರು: ಈ ಹಿಂದೆ ಇದ್ದ ಯಶಸ್ವಿನಿ, ವಾಜಪೇಯಿ ಆರೋಗ್ಯಶ್ರೀ, ರಾಜೀವ್ ಆರೋಗ್ಯ ಭಾಗ್ಯ ಸೇರಿದಂತೆ ಇನ್ನಿತರೆ ಆರೋಗ್ಯ ಯೋಜನೆಗಳನ್ನು ಒಟ್ಟು ಸೇರಿಸಿ ‘ಆರೋಗ್ಯ ಕರ್ನಾಟಕ’ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಆದ್ದರಿಂದ ಕೆ.ಆರ್.ಆಸ್ಪತ್ರೆಗೆ ಬರುವರೋಗಿಗಳ ಸಂಖ್ಯೆ ಈಗ ಹೆಚ್ಚಾಗಿದೆ.

ವಿಧಾನ ಸಭಾಧ್ಯಕ್ಷ ರಮೇಶ್‌ಕುಮಾರ್ ಅವರು ಆರೋಗ್ಯ ಸಚಿವರಾಗಿದ್ದಾಗ , ಈ ಯೋಜನೆಯನ್ನು ಜಾರಿಗೊಳಿಸಿದ್ದರು. ಇದರ ಅಡಿ ಚಿಕಿತ್ಸೆ ಪಡೆಯಲು ಮೊದಲು ಸರ್ಕಾರಿ ಆಸ್ಪತ್ರೆಗಳಲ್ಲಿ ತಪಾಸಣೆಗೆ ಒಳಪಡುವುದು ಅನಿವಾರ್ಯ. ಬಳಿಕ ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯ, ಚಿಕಿತ್ಸೆಗೆ ಬೇಕಾದ ಅನುಕೂಲ ಇಲ್ಲದಿದ್ದರೆ ಖಾಸಗಿ ಆಸ್ಪತ್ರೆಗೆ ಶಿಫಾರಸ್ಸು ಮಾಡಬಹುದು.

ಹೀಗಾಗಿ ಮೊದಲೇ ಒತ್ತಡದಲ್ಲಿದ್ದ ಕೆ.ಆರ್.ಆಸ್ಪತ್ರೆಯಲ್ಲಿ ಈಗ ರೋಗಿಗಳು ಹಾಗೂ ಖಾಸಗಿ ಆಸ್ಪತ್ರೆಗೆ ಶಿಫಾರಸ್ಸು ಮಾಡುವಂತೆ ಕೋರುವ ರೋಗಿಗಳ ಸಂಬಂಧಿಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.
ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು ಜಿಲ್ಲೆಯ ಹಲವು ಗ್ರಾಮಗಳಿಂದ ನಿತ್ಯ ನೂರಾರು ರೋಗಿಗಳು ಈಗ ಕೆ.ಆರ್.ಆಸ್ಪತ್ರೆಗೆ ಬರುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಅಲ್ಲಿ ಚಿಕಿತ್ಸೆ ಪಡೆಯುವುದಕ್ಕಿಂತ ಖಾಸಗಿ ಆಸ್ಪತ್ರೆಗೆ ಶಿಫಾರಸ್ಸು ಮಾಡುವಂತೆ ಕೋರುವವರ ಸಂಖ್ಯೆಯೇ ಹೆಚ್ಚಾಗುತ್ತಿದೆ.

ಇದರಿಂದ ಕೆ.ಆರ್.ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಿಂತ ಖಾಸಗಿ ಆಸ್ಪತ್ರೆಗೆ ಶಿಫಾರಸ್ಸು ಪತ್ರ ಬರೆದುಕೊಡುವುದೇ ವೈದ್ಯರ ಕೆಲಸ ಎನ್ನುವಂತಾಗಿ ಬಿಟ್ಟಿದೆ. ಹೀಗಾಗಿ ಆಸ್ಪತ್ರೆಯಲ್ಲೀಗ ಸದಾ ಜನ ತುಂಬಿರುತ್ತಿದ್ದು, ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲು ವೈದ್ಯರಿಗೆ ಸಮಯವಿಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ.

ಈ ಮೊದಲು ಯಶಸ್ವಿನಿ ಯೋಜನೆ ಜಾರಿಯಲ್ಲಿದ್ದಾಗ ಖಾಸಗಿ ಆಸ್ಪತ್ರೆಯಲ್ಲಿ ನೇರವಾಗಿ ಚಿಕಿತ್ಸೆ ಪಡೆಯಲು ಅವಕಾಶವಿದ್ದುದರಿಂದ ರೋಗಿಗಳು ನೇರವಾಗಿ ತಮಗೆ ಬೇಕಾದ ಆಸ್ಪತ್ರೆಗಳಿಗೆ ತೆರಳುತ್ತಿದ್ದರು. ಆರೋಗ್ಯ ಕರ್ನಾಟಕ ಜಾರಿಯಾದ ಬಳಿಕ ಮೊದಲು ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಅಲ್ಲಿ ಹೆಚ್ಚಿನ ಚಿಕಿತ್ಸೆ ಅಗತ್ಯ ಎಂದು ವೈದ್ಯರಿಗೆ ಮನವರಿಕೆಯಾಗಿ, ಚಿಕಿತ್ಸೆ ನೀಡಲು ಸೂಕ್ತ ಸೌಲಭ್ಯ ಇಲ್ಲದಿದ್ದರೆ ಸರ್ಕಾರಿ ವೈದ್ಯರ ದೃಢೀಕರಣ ಪತ್ರದೊಂದಿಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಬಹುದು ಎನ್ನುವ ಷರತ್ತು ವಿಧಿಸಲಾಗಿದೆ. ಇದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಒತ್ತಡ ಹೆಚ್ಚಾಗುತ್ತಿದ್ದು, ಚಿಕಿತ್ಸೆ ನೀಡುವುದಕ್ಕಿಂತ ಶಿಫಾರಸ್ಸು ಪತ್ರಕ್ಕೆ ಸಹಿ ಮಾಡಬೇಕಾಗಿ ಬಂದಿದೆ.

ಕೆಆರ್ ಆಸ್ಪತ್ರೆಗೆ 3ನೇ ಸ್ಥಾನ
ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ ಯೋಜನೆಯನ್ನು ಒಳಗೊಂಡಿರುವ ‘ಆರೋಗ್ಯ ಕರ್ನಾಟಕ’ ಯೋಜನೆ ಜಾರಿಯಲ್ಲಿ ನಗರದ ಕೆ.ಆರ್.ಆಸ್ಪತ್ರೆ ಮೂರನೇ ಸ್ಥಾನದಲ್ಲಿದೆ. ಜಯದೇವ ಆಸ್ಪತ್ರೆ ಮೊದಲ ಸ್ಥಾನದಲ್ಲಿದ್ದರೆ, ಕಿದ್ವಾಯಿ ಆಸ್ಪತ್ರೆ ಎರಡನೇ ಸ್ಥಾನದಲ್ಲಿದೆ. ಯೋಜನೆಯಡಿ ಶಿಫಾರಸ್ಸು ಮಾಡುವಂತೆ ಹೆಚ್ಚಿನ ರೋಗಿಗಳು ಹಾಗೂ ಅವರ ಕಡೆಯವರು ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಮಾನವೀಯತೆ ದೃಷ್ಠಿಯಿಂದ ಅವರಿಗೆ ಇಚ್ಚೆ ಬಂದ ಕಡೆ ಚಿಕಿತ್ಸೆ ಪಡೆಯಲು ಶಿಫಾರಸ್ಸು ಮಾಡಬೇಕಾದ ಅನಿವಾರ್ಯ ಸ್ಥಿತಿ ಉಂಟಾಗಿದೆ. ಇದರಿಂದ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಮೇಲೆ ಒತ್ತಡ ಉಂಟಾಗುತ್ತಿದೆ.
ಡಾ. ನಂಜುಂಡಸ್ವಾಮಿ, ಅಧೀಕ್ಷಕರು, ಕೆ. ಆರ್.ಆಸ್ಪತ್ರೆ

Leave a Reply

Your email address will not be published. Required fields are marked *