ಚಿಕ್ಕಮಗಳೂರು: ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿಯನ್ನು ಶೇ.50ಕ್ಕೆ ಹೆಚ್ಚಿಸಬೇಕು ಎಂದು ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಒತ್ತಾಯಿಸಿದರು.
ರಾಮನಹಳ್ಳಿಯಲ್ಲಿ ಬುಧವಾರ ಗೌರಿ ಸೇವಾ ಟ್ರಸ್ಟ್ ಉದ್ಘಾಟಿಸಿ ಮಾತನಾಡಿ, ಮಹಿಳಾ ಮೀಸಲಾತಿ ಹೆಚ್ಚಿಸಲು ಈ ಹಿಂದೆ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಮುಂದಾಗಿದ್ದರು. ಆ ವೇಳೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಅಂದು ಮಹಿಳಾ ಮೀಸಲಾತಿ ನನೆಗುದಿಗೆ ಬಿದ್ದಿತ್ತು ಎಂದರು.
ಸದ್ಯ ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಶೇ.33ಕ್ಕೆ ಹೆಚ್ಚಿಸಲು ಮುಂದಾಗಿದೆ. ಮಸೂದೆ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆದಿದೆ. ಮಹಿಳೆಯರು ಪುರುಷರಿಗೆ ಸಮಾನರಾಗಿ ಎಲ್ಲ ಕ್ಷೇತ್ರಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಮಹಿಳಾ ಮೀಸಲಾತಿ ಶೇ.50ಕ್ಕೆ ನಿಗದಿಪಡಿಸುವಂತೆ ಮಹಿಳೆಯರು ಹೋರಾಟ ಆರಂಭಿಸಬೇಕು ಎಂದರು.
ಸರ್ಕಾರ ಮತ್ತು ಸಂಘ ಸಂಸ್ಥೆಗಳಿಂದ ದೊರೆಯುವ ಅವಕಾಶ ಮತ್ತು ಸವಲತ್ತುಗಳನ್ನು ಮಹಿಳೆಯರು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು.
ಗಿರಿ ಗಂಗೋತ್ರಿ ಶಾಲೆ ಮುಖ್ಯಶಿಕ್ಷಕ ಎಲ್.ಜಿ.ಪರಮೇಶ್ವರಪ್ಪ ಮಾತನಾಡಿ, ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿರುವ ಗಿರಿ ಗಂಗೋತ್ರಿ ಶಾಲೆ ದುಸ್ಥಿತಿಯಲ್ಲಿದ್ದು ಅದಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ನೂತನ ಕಟ್ಟಡ ನಿರ್ಮಿಸಬೇಕು ಎಂದು ವೇದಿಕೆಯಲ್ಲಿದ್ದ ನಗರಸಭಾ ಸದಸ್ಯರಿಗೆ ಮನವಿ ಮಾಡಿದರು.
ಗಿರಿ ಗಂಗೋತ್ರಿ ಶಾಲೆ ವಿದ್ಯಾರ್ಥಿಗಳಿಗೆ ಗೌರಿ ಸೇವಾ ಟ್ರಸ್ಟ್‌ನಿಂದ ಪಠ್ಯ ಪರಿಕರಗಳನ್ನು ವಿತರಿಸಲಾಯಿತು. ಉಚಿತ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ನೀಡಲಾಯಿತು.
ನಗರಸಭಾ ಸದಸ್ಯ ಲಕ್ಷ್ಮಣ್, ಮಹಮ್ಮದೀಯ ಅಂಜುಮನ್ ಕಮಿಟಿ ಅಧ್ಯಕ್ಷ ಸೈಯದ್ ಗೌಸ್, ಗ್ರಾಪಂ ಮಾಜಿ ಅಧ್ಯಕ್ಷ ಮುಳ್ಳಯ್ಯ, ಪ್ರದೀಪ್, ಗೌರಿ ಟ್ರಸ್ಟ್ ಮುಖ್ಯಸ್ಥರಾದ ರವಿಕುಮಾರ್, ಲತಾ ರವಿಕುಮಾರ್, ಸೌಜನ್ಯಾ ಇದ್ದರು.